Wednesday, July 24, 2024

ತಂದೆಯ ಕನಸು ನನಸಾಗಿಸಿದ ತೇಜಸ್ವಿನಿ ಉದಯ್‌

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಡೆಸುವ 19 ವರ್ಷ ವಯೋಮಿತಿಯ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉಡುಪಿ ಜಿಲ್ಲೆಯ ಕಟಪಾಡಿಯ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿಯ KRS Cricket Academy ತೇಜಸ್ವಿನಿ ಉದಯ್‌ ಆಯ್ಕೆಯಾಗಿರುವುದು ಕರಾವಳಿಗರ ಹೆಮ್ಮೆ. ಮಾಜಿ ಕ್ರಿಕೆಟಿಗ, ತರಬೇತುದಾರ ಉದಯ್‌ ಕುಮಾರ್ ಕಟಪಾಡಿ ಅವರ ಮಗಳು ತೇಜಸ್ವಿನಿಗೆ ತಂದೆಯ ಕನಸನ್ನು ನನಸಾಗಿಸಿದ ಸಂಭ್ರಮ ಒಂದೆಡೆಯಾದರೆ ತನ್ನಿಂದಾಗದ ಸಾಧನೆಯನ್ನು ತನ್ನ ಮಗಳು ಮಾಡಿದ್ದಾಳೆಂಬ ಖುಷಿ ಉದಯ್‌ ಕಟಪಾಡಿ ಅವರಿಗೆ.

ಶ್ರೀಶೈಲ ಹಾಗೂ ಉದಯ್‌ ಕುಮಾರ್‌ ಅವರ ಮುದ್ದಿನ ಮಗಳು ತೇಜಸ್ವಿನಿ ಆರಂಭಿಕ ಆಟಗಾರ್ತಿ ಮತ್ತು ಮಧ್ಯಮವೇಗಿ ಬೌಲರ್‌. ಶತಕ ಸಿಡಿಸುವ ಮೂಲಕ ಕರ್ನಾಟಕ ತಂಡಕ್ಕೆ ಪ್ರವೇಶ ಕೊಟ್ಟ ತೇಜಸ್ವಿನಿ ಕ್ರಿಕೆಟ್‌ ಬದುಕು ಆರಂಭವಾದದ್ದು ಕಟಪಾಡಿಯ ಪಳ್ಳಿಗುಡ್ಡೆ ನೆಹರು ಮೈದಾನದಲ್ಲಿ. 5ನೇ ವಯಸ್ಸಿನಲ್ಲೇ ಬಿಳಿ ಜೆರ್ಸಿ ತೊಟ್ಟು ಕ್ರಿಕೆಟ್‌ ಆಡಬೇಕೆಂದು ಹಠಹಿಡಿದ ತೇಜಸ್ವಿನಿಗೆ ಬ್ಯಾಟ್‌ ಹಿಡಿಯಲು ಹೇಳಿಕೊಟ್ಟು ಶುಭ ಹಾರೈಸಿದ್ದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಯ್ಯದ್‌ ಕಿರ್ಮಾನಿ ಅವರು. ಅಂಥ ಶ್ರೇಷ್ಠ ಕ್ರಿಕೆಟಿಗರಿಂದ ಆಶೀರ್ವಾದ ಪಡೆದ ತೇಜಸ್ವಿನಿ ತಂದೆಯ ಶಿಸ್ತಿನ ತರಬೇತಿಯಲ್ಲಿ ಪಳಗಿ ಅಬ್ಬರದ ಆಟ ಪ್ರದರ್ಶಿಸಿದಳು. ತಂದೆಯ ಕ್ರಿಕೆಟ್‌ ಚಟುವಟಿಕೆ ಹಾಗೂ ಶಿಸ್ತಿನ ಬದುಕನ್ನು ಆಪ್ತವಾಗಿ ಗಮನಿಸಿದ ತೇಜಸ್ವಿನಿ ಯಾವಾಗಲೂ ತರಬೇತಿಯಲ್ಲೇ ಇರುತ್ತಿದ್ದಳು. ಕಳೆದ ವರ್ಷ ರಾಜ್ಯ ತಂಡದ ಸಂಭಾವ್ಯರ ಪಟ್ಟಿಯಲ್ಲಿದ್ದ ತೇಜಸ್ವಿನಿಯನ್ನು ಆಯ್ಕೆ ಮಾಡದಿರುವುದು ನಿರಾಸೆಯಾಗಿತ್ತು. ಆದರೆ ಈ ವರ್ಷ ಸಿಕ್ಕ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡು ತನಗೆ ಕೊಟ್ಟ ಜವಾಬ್ದಾರಿಗಳನ್ನು ಶಿಸ್ತಿನಿಂದ ನಿಭಾಯಿಸಿದಳು. ಜೊತೆಯಲ್ಲಿ ತಂದೆ ಉದಯ್‌ ಕುಮಾರ್‌ ಅವರ ಶಿಸ್ತಿನ ತರಬೇತಿ ಕೂಡ ಆಕೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಕಾರಣವಾಯಿತು.

ಹುಡುಗರ ಜೊತೆಯಲ್ಲೇ ಪಂದ್ಯಗಳನ್ನು ಆಡುತ್ತಿರುವುದರಿಂದ ತೇಜಸ್ವಿನಿಗೆ ಉತ್ತಮ ರೀತಿಯಲ್ಲಿ ಬ್ಯಾಟಿಂಗ್‌ ಮಾಡುವ ಅವಕಾಶ ಸಿಗುತ್ತಿತ್ತು. ಇದರಿಂದಾಗಿ ಮಹಿಳಾ ತಂಡದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಆಡಲು ಸಾಧ್ಯವಾಯಿತು. ಇತ್ತೀಚಿಗೆ ಶೈನ್‌ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ 90 ಎಸೆತಗಳನ್ನೆದುರಿಸಿದ ತೇಜಸ್ವಿನಿ ಶತಕ ಸಿಡಿಸಿ ಸಂಭ್ರಮಿಸಿದರು. ಶತಕದ ಆಟದಲ್ಲಿ 20 ಬೌಂಂಡರಿ ಸೇರಿತ್ತು.‌ ವಿವಿಧ ಪಂದ್ಯಗಳಲ್ಲಿ ತೇಜಸ್ವಿನಿ 350ಕ್ಕೂ ಹೆಚ್ಚು ರನ್‌ ಗಳಿಸಿ  ತಾನು ರಾಜ್ಯವನ್ನು ಪ್ರತಿನಿಧಿಸಲು ಸಮರ್ಥ ಎಂಬುದನ್ನು ಸಾಬೀತುಪಡಿಸಿದ್ದರು. ತೇಜಸ್ವಿನಿಯ ಆಯ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡದ ಯುವ ಮಹಿಳಾ ಕ್ರಿಕೆಟಿಗರಲ್ಲಿ ಹೊಸ ಹುಮ್ಮಸ್ಸು ಮೂಡುವಂತೆ ಮಾಡಿದೆ. ಸಾಮಾನ್ಯವಾಗಿ ರಾಜ್ಯ ತಂಡಕ್ಕೆ ಬೆಂಗಳೂರು ವಲಯದ ಆಟಗಾರರು ಆಯ್ಕೆಯಾಗುವುದೇ ಹೆಚ್ಚು, ಆದರೆ ಈ ಬಾರಿ ಪ್ರತಿಭೆಗೆ ಸೂಕ್ತ ಗೌರವ ನೀಡಲಾಗಿದೆ. ಉಡುಪಿ ಜಿಲ್ಲೆಯಿಂದ ಮಹಿಳಾ ಕ್ರಿಕೆಟಿಗರೊಬ್ಬರು ರಾಜ್ಯವನ್ನು ಪ್ರತಿನಿಧಿಸುತಿರುವುದು ಹೆಮ್ಮೆಯ ಸಂಗತಿ. ತೇಜಸ್ವಿನಿ ಸದ್ಯ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ತೇಜಸ್ವಿನಿಯ ಆಟದ ಬಗ್ಗೆ ಕರಾವಳಿಯ ಇನ್ನೋರ್ವ ಹಿರಿಯ ಕ್ರಿಕೆಟಿಗ, ಬೆಳ್ಳಿಪ್ಪಾಡಿ ಕ್ರಿಕೆಟ್‌ ಅಕಾಡೆಮಿಯ ವಿಜಯ್‌ ಆಳ್ವಾ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, “ತೇಜಸ್ವಿನಿ ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯ ಇರುವ ಆಟಗಾರ್ತಿ. ಕೆಲ ದಿನಗಳ ಹಿಂದೆ ಆಕೆಯನ್ನು ಅಕಾಡೆಮಿಗೆ ಬರಮಾಡಿಕೊಂಡು 60 ಎಸೆತಗಳನ್ನು ಎದುರಿಸಲು ಹೇಳಿದೆ. ಅತ್ಯಂತ ಅನುಭವಿ ಆಟಗಾರರು ಆಡುವ ರೀತಿಯಲ್ಲಿ ಆಡಿ ತಾನೊಬ್ಬ ಸಮರ್ಥ ಆಟಗಾರ್ತಿ ಎಂಬುದನ್ನು ತೋರಿಸಿಕೊಟ್ಟಳು. ನಿರಂತರ ಅಭ್ಯಾಸ ಮತ್ತು ಸ್ಥಿರತೆಯನ್ನು ಕಾಯ್ದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಆಕೆಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು,” ಎಂದಿದ್ದಾರೆ. ಉದಯ್‌ ಕುಮಾರ್‌ ಅವರಿಗೆ ಅಕಾಡೆಮಿಯಲ್ಲಿ ಸಹಾಯಕ ಕೋಚ್‌ ಪ್ರದೀಪ್‌ ಕೂಡ ಸಹಾಯ ಮಾಡುತ್ತಿದ್ದಾರೆ.

ಕರಾವಳಿಯಲ್ಲಿ ಕ್ರಿಕೆಟ್‌ ಬೆಳಗಿದ ಉದಯ್‌ ಕುಮಾರ್:‌ ತೇಜಸ್ವಿನಿಯ ಬಗ್ಗೆ ಹೇಳುತ್ತ ಅವರ ತಂದೆಯ ಬಗ್ಗೆ ತಿಳಿಸದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ಕಟಪಾಡಿಯ ಉದಯ್‌ ಕುಮಾರ್‌ ಈ ಹೆಸರು ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯ ಕ್ರಿಕೆಟ್‌ನಲ್ಲೂ ಚಿರಪರಿಚಿತ. ಕೆಆರ್‌ಎಸ್‌ ಕ್ರಿಕೆಟ್‌ ಅಕಾಡೆಮಿ ಮೂಲಕ ಸಹಸ್ರಾರು ಕ್ರಿಕೆಟಿಗರಿಗೆ ತರಬೇತಿ ನೀಡಿದ ಹಿರಿಮೆ ಉದಯ್‌ ಕುಮಾರ್‌ ಅವರಿಗೆ ಸಲ್ಲುತ್ತದೆ. 1986ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಉದಯ್‌ ಕುಮಾರ್‌ ಈ ಗೌರವಕ್ಕೆ ಪಾತ್ರರಾದ ಉಡುಪಿ ಜಿಲ್ಲೆಯ ಮೊದಲ ಆಟಗಾರ ಎನಿಸಿದ್ದಾರೆ. ದಕ್ಷಿಣ ವಲಯದಲ್ಲಿ ಹಲವಾರು ಪಂದ್ಯಗಳನ್ನು ಆಡಿ, ಕೇರಳ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಬಂದರೂ ಅದನ್ನು ಲೆಕ್ಕಿಸಿದೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗಬಹುದೆಂಬ ಹಂಬದಲ್ಲೇ ದಿನಗಳನ್ನು ಕಳೆದರು. ಆದರೆ ಆ ಆಸೆ ಈಡೇರಲಿಲ್ಲ. 3 ವರ್ಷ ಮಂಗಳೂರು ವಿಶ್ವವಿದ್ಯಾನಿಲಯ, 3 ವರ್ಷ ದಕ್ಷಿಣ ವಲಯ ಪಂದ್ಯಗಳು, ಮಂಗಳೂರಿನಲ್ಲಿ ಮಂಗಳೂರು ಸ್ಪೋರ್ಟ್ಸ್‌ ಕ್ಲಬ್‌ ಪರ ಆಡಿದರು ಮತ್ತು ಎಂಎಸ್‌ ಶ್ರೀನಿವಾಸ್‌ ಟ್ರೋಫಿ ಇಷ್ಟಕ್ಕೇ ಅವರ ಕ್ರಿಕೆಟ್‌ ಆಡುವ ಬದುಕು ಕೊನೆಗೊಂಡಿತು.

ಆದರೆ ಉದಯ್‌ ಕುಮಾರ್‌ ಒಬ್ಬ ಆದರ್ಶ ಕ್ರಿಕೆಟಿಗ. ತನಗೆ ಸಿಗದ ಅವಕಾಶ ಬೇರೆ ಯಾರಿಗಾದರೂ ಸಿಕ್ಕರೆ ಅದರಲ್ಲೇ ಸಂಭ್ರಮಪಡುವ ಹೃದಯವೈಶಾಲ್ಯತೆ ಹೊಂದಿರುವ ಆಟಗಾರ. ಅದಕ್ಕಾಗಿಯೇ 2009 ರಲ್ಲಿ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿದರು. ಕಳೆದ 14 ವರ್ಷಗಳಿಂದ ಕೆಆರ್‌ಎಸ್‌ ಕ್ರಿಕೆಟ್‌ ಅಕಾಡಿಮಿಯಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದಕ್ಕೂ ಮುನ್ನ ಮಣಿಪಾಲದಲ್ಲಿ ಡಾ. ರವೀಂದ್ರನಾಥ್‌ ಶ್ಯಾನುಭಾಗ್‌ ಅವರ ಪ್ರೋತ್ಸಾಹದಲ್ಲಿ ಹಲವು ವರ್ಷಗಳ ಕ್ರಿಕೆಟ್‌ ತರಬೇತಿ ನೀಡಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಎರಡು ವರ್ಷಗಳ ಕಾಲ ಮಂಗಳೂರಿನಲ್ಲಿ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಜಾನ್‌ ಬೇರ್ಲಿ ಅವರಿಂದ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಉಡುಪಿಯಿಂದ ಉದಯ್‌ ಕುಮಾರ್‌ ಕಟಪಾಡಿ ಮತ್ತು ವಿಜಯ್‌ ಆಳ್ವಾ ಪಾಲ್ಗೊಂಡಿದ್ದರು. ಈ ಅನುಭವವನ್ನು ಅವರು ತಮ್ಮ ಕ್ರಿಕೆಟ್‌ ಅಕಾಡೆಮಿಗೆ ಬರುವ ಯುವ ಕ್ರಿಕೆಟಿಗರಿಗೆ ನೀಡುತ್ತಿದ್ದಾರೆ.

ರಾಜ್ಯ ಹಿರಿಯರ ತಂಡದಲ್ಲಿ ಆಡಿದ ಕವಿತಾ ಪೂಜಾರಿ, ಟಿ20ಯಲ್ಲಿ ಆಡಿದ್ದ ಸಂಧ್ಯಾ ಭಟ್‌, ಚೈತ್ರ ಶೇರಿಗಾರ್‌ ಸೇರಿದಂತೆ ಅನೇಕ ಆಟಗಾರರು ಉದಯ್‌ ಕುಮಾರ್‌ ಅವರ ತರಬೇತಿಯಲ್ಲಿ ಪಳಗಿದವರು. ಪುರುಷರ ವಿಭಾಗದಲ್ಲಿ ಆರು ಮಂದಿ ಆಟಗಾರರು ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು. ಉದಯ್‌ ಕುಮಾರ್‌ ಅವರ ಕ್ರಿಕೆಟ್‌ ಕೊಡುಗೆಯನ್ನು ಗಮನಿಸಿ ಉಡುಪಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

Related Articles