Friday, October 4, 2024

ವಿರಾಜ್‌ ಮೆಂಡನ್‌ ತಪ್ಪು ಮಾಡಿದೆ ಮಗು!

ಕರಾವಳಿಯ ಒಬ್ಬ ಚಾಂಪಿಯನ್‌ ಬಾಕ್ಸರ್‌ ವಿರಾಜ್‌ ಮೆಂಡನ್‌ ಆತ್ಮಹತ್ಯೆ ಮೂಲಕ ಸಾವಿಗೆ ಶರಣಾದ Champion Boxer Viraj Mendon suicide

ಸಮಸ್ಯೆಗಳಿಗೆ ಸಾವೇ ಪರಿಹಾರವಾಗಿರುತ್ತಿದ್ದರೆ ಇಂದು ಜಗತ್ತಿನಲ್ಲಿ ಮನುಷ್ಯರೇ ಇರುತ್ತಿರಲಿಲ್ಲವೇನೋ. ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ತಾಳ್ಮೆಯಿಂದ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕ್ರೀಡಾಪಟುಗಳಲ್ಲಿಯೂ ಸಮಸ್ಯೆ ಇದ್ದೇ ಇರುತ್ತದೆ. ಪದಕ ಗೆಲ್ಲದ ಚಿಂತೆ, ಕಾಡುವ ಗಾಯದ ಸಮಸ್ಯೆ, ನಿರಂತರ ವೈಫಲ್ಯ, ವೈಯಕ್ತಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ ಇವೆಲ್ಲವನ್ನು ಮೆಟ್ಟಿನಿಂತು ಯಶಸ್ಸಿನ ಹಾದಿ ತುಳಿಯಬೇಕಾಗುತ್ತದೆ. ದೈಹಿಕ ಆರೋಗ್ಯದ ಜೊತೆಯಲ್ಲಿ ಮಾನಸಿಕ ಆರೋಗ್ಯವೂ ಮುಖ್ಯ.

ಕಳೆದ ಮೇ ತಿಂಗಳ 8 ರಂದು ಮಲ್ಪೆಯ ಯುವ ಬಾಕ್ಸರ್‌ ವಿರಾಜ್‌ ಮೆಂಡನ್‌ ಬದುಕಿನ ಬಗ್ಗೆ ಬರೆಯುವಾಗ ನನಗೆ ಎಲ್ಲಿಲ್ಲದ ಸಂಭ್ರಮ. ಇದಕ್ಕೆ ಹಲವು ಕಾರಣಗಳಿಗೆ. ಆತ ಬೆಳಿಗ್ಗೆ 2:45ಕ್ಕೆ ಎದ್ದು ಮಲ್ಪೆಯಲ್ಲಿ ಕಣ್ಣಿಯವನಾಗಿ ಕೆಲಸ ಮಾಡುತ್ತಿದ್ದ, ಕರಾವಳಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಮೊದಲ ಬಾಕ್ಸರ್‌, ಬಡ ಮೀನುಗಾರರ ಕುಟುಂಬದಲ್ಲಿ ಅರಳಿದ ಪ್ರತಿಭೆ, ಬಾಕ್ಸಿಂಗ್‌ಗೆ ಪೂರಕವಾದ ಮೈಕಟ್ಟು ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬಲ್ಲ ಸಮರ್ಥ. ಅದಕ್ಕೆ ಅಗತ್ಯವಿರುವ ಅಭ್ಯಾಸವನ್ನೂ ಮಾಡುತ್ತಿದ್ದ. ಆದರೆ ಅದೇನು ಯೋಚನೆ ಮಾಡಿದನೋ ಗೊತ್ತಿಲ್ಲ ಮಂಗಳವಾರ (ಸೆ. 5). ತನ್ನ ಮನೆಯಲ್ಲೇ ನೇಣಿಗೆ ಶರಣಾಗಿ ಇಹವನ್ನೇ ತ್ಯಜಿಸಿದ.

ಸದ್ಯ ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಸ್ಯೆ ಆತನಿಗಿರಲಿಲ್ಲ ಎಂದು ಗೆಳೆಯರು ಹೇಳುತ್ತಾರೆ.

ಕ್ರೀಡಾ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಒತ್ತಡ ಇದ್ದೇ ಇರುತ್ತದೆ. ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ಕರ್ನಾಟಕದ ಕ್ರಿಕೆಟಿಗರೊಬ್ಬರು ಮೂರ್ನಾಲ್ಕು ತಿಂಗಳ ಕಾಲ ಮನೆಗೆ ಹೋಗದೇ ಕಾರಿನಲ್ಲೇ ಮಲಗಿ ದಿನ ಕಳೆಯುತ್ತಿದ್ದರು. ಅವರ ಕ್ರಿಕೆಟ್‌ ಬದುಕೇ ಮುಗಿದೇಹೋಯಿತು ಎಂದು ಜನ ಆಡಿಕೊಳ್ಳುತ್ತಿದ್ದರು. ಆಗ ವಿಶ್ವಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌ ಚಾಂಪಿಯನ್‌ ಪಂಕಜ್‌ ಆಡ್ವಾಣಿ ಅವರ ಸಹೋದರ ಶ್ರೀ ಆಡ್ವಾಣಿ ಅವರ ನೆರವಿನಿಂದ ಆ ಕ್ರಿಕೆಟಿಗ ಮತ್ತೆ ಅಂಗಣಕ್ಕಿಳಿದು ಚಾಂಪಿಯನ್‌ ಆಗಿ ನಿವೃತ್ತಿಹೊಂದಿದರು.

ಕ್ರೀಡಾಪಟುವಿರಲಿ ಯಾರೇ ಇರಲಿ ತಮ್ಮ ಸಮಸ್ಯೆಗಳನ್ನು ತಮ್ಮ ಆತ್ಮೀಯರೆನಿಸಕೊಂಡಿರುವ ಒಬ್ಬರಲ್ಲಾದರೂ ಮನಬಿಚ್ಚಿ ಹೇಳಿಕೊಳ್ಳಬೇಕು. ವಿಶ್ವ ಚೆಸ್‌ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರ ತಂಡದಲ್ಲಿ ಒಬ್ಬ ಕ್ರೀಡಾ ಮನಃಶಾಸ್ತ್ರಜ್ಞರು ಇದ್ದೇ ಇರುತ್ತಾರೆ. ಪ್ರತಿಯೊಂದು ದೇಶದ ಫುಟ್ಬಾಲ್‌, ಹಾಕಿ ಅಥವಾ ಯಾವುದೇ ಕ್ರೀಡಾ ತಂಡವಿರಲಿ ಅಲ್ಲಿ ಮನಃಶಾಸ್ತ್ರಜ್ಞರಿರುತ್ತಾರೆ. ಆಟಕ್ಕೆ ಕೇವಲ ದೈಹಿಕ ಕ್ಷಮತೆ ಇದ್ದರೆ ಸಾಲದು ಮಾನಸಿಕ ಕ್ಷಮತೆಯೂ ಮುಖ್ಯವಾಗಿರುತ್ತದೆ. ಕರ್ನಾಟಕದಲ್ಲಿ ಡಾ. ಶ್ರೀ ಅಡ್ವಾಣಿ, ಡಾ. ಚೈತನ್ಯ ಶ್ರೀಧರ್‌, ಪ್ರಿಯಾಂಕ ಪ್ರಭಾಕರ್‌, ದೇಚಮ್ಮ ಕರ್ನಾಟಕದ ಕ್ರೀಡಾಪಟುಗಳ ಆಶಾಕಿರಣ. ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗುವುದು, ಗಾಯದ ಸಮಸ್ಯೆ, ಖಿನ್ನತೆ ಇವೆಲ್ಲ ಕ್ರೀಡಾಪಟುಗಳ ಬದುಕಿನಲ್ಲಿ ಸಾಮಾನ್ಯವಾಗಿರುತ್ತದೆ, ಇವುಗಳ ಪರಿಹಾರಕ್ಕಾಗಿಯೇ ಕ್ರೀಡಾ ಮನಃಶಾಸ್ತ್ರಜ್ಞರಿರುತ್ತಾರೆ. ಇಲ್ಲಿ ಕ್ರೀಡಾಪಟುಗಳು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಕೌಟುಂಬಿಕ ಅಥವಾ ವೈಯಕ್ತಿ ಸಮಸ್ಯೆ ಇದ್ದರೂ ಮುಚ್ಚುಮರೆ ಇಲ್ಲದೆ ಹೇಳಿಕೊಳ್ಳಬೇಕು. ಪ್ರೀತಿಸಿದ ಹುಡುಗಿ ಕೈಕೊಟ್ಟಾಗ ಕ್ರೀಡಾಪಟು ಖಿನ್ನತೆಗೆ ಒಳಗಾಗುವುದು ಸಹಜ. ಆದರೆ ಅದೇ ಬದುಕಲ್ಲ. ಸಾಧನೆಯ ಹಾದಿಯಲ್ಲಿ ಈ ಪ್ರೀತಿ, ಪ್ರೇಮಕ್ಕೆ ಹೆಚ್ಚು ಒತ್ತು ಕೊಡಬಾರದು. ಹಾಗಂತ ಕ್ರೀಡಾಂಗಣದಲ್ಲಿ ಪ್ರೀತಿಸಿ ಬದುಕನ್ನು ಕಟ್ಟಿಕೊಂಡವರಿಲ್ಲವೇ? ಎಂದು ಕೇಳಬಹುದು, ಇದ್ದಾರೆ. ಆದರೆ ನಮ್ಮ ಸಾಧನೆಯ ಹಾದಿಗೆ ಅಡ್ಡಿತಂದುಕೊಳ್ಳುವಷ್ಟು ಅದಕ್ಕೆ ಅವಕಾಶ ನೀಡಬಾರದು. ಕ್ರೀಡಾಂಗಣದಲ್ಲೇ ಪ್ರೀತಿ ಅಂಕುರಿಸಿ ಇಬ್ಬರೂ ದೇಶಕ್ಕೆ ಕೀರ್ತಿ ತಂದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ವಿರಾಜ್‌ ನಿನ್ನ ಹೆತ್ತವರು, ಗೆಳೆಯರು ಮತ್ತು ಅಭಿಮಾನಿಗಳು ನಿನ್ನ ಬದುಕಿನ ಬಗ್ಗೆ ಅದೆಷ್ಟೋ ಕನಸುಗಳನ್ನು ಹೊಂದಿದ್ದಾರೆ. ನಿನಗೆ ತರಬೇತಿ ನೀಡುತ್ತಿದ್ದ ಕೋಚ್‌ ಶಿವಪ್ರಸಾದ್‌ ಆಚಾರ್ಯ ನಿನ್ನ ಬಗ್ಗೆ ಅದೆಷ್ಟು ಕನಸುಗಳನ್ನು ಇಟ್ಟುಕೊಂಡಿದ್ದರು. “ಸರ್‌ ನಮ್ಮೂರಿಂದ ಒಬ್ಬ ಬಾಕ್ಸರ್‌ ಒಲಿಂಪಿಕ್ಸ್‌ಗೆ ಹೋಗಬೇಕು, ಅದು ವಿರಾಜ್‌ ಮೆಂಡನ್‌,” ಎಂದಿದ್ದರು. ಚಿಕ್ಕಂದಿನಿಂದಲೂ ಕಷ್ಟದ ಅಲೆಗಳಿಗೆ ಎದೆಕೊಟ್ಟು ಬದುಕಿದ ನೀನು ಅದ್ಯಾವುದೋ ಕ್ಷುಲ್ಲಕ ವಿಷಯಕ್ಕೆ ಜೀವ ಬಲಿಕೊಡುವ ತೀರ್ಮಾನ ಮಾಡಬಾರದಾಗಿತ್ತು. ನಿನ್ನಂತೆ ನಿನ್ನ ಹೆತ್ತವರು ಕೂಡ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದರಿಂದ ಅವರದ್ದು ಕೂಡ ಕಷ್ಟದ ಬದುಕು ಎಂಬುದನ್ನು ನೀನು ಅರ್ಥೈಸಿಕೊಳ್ಳಬೇಕಿತ್ತು.

ಬದುಕೆಂಬ ಬಾಕ್ಸಿಂಗ್‌ ರಿಂಗ್‌ನಲ್ಲಿ ಎದುರಾಳಿಗೆ ಪಂಚ್‌ ಹೊಡೆಯುವುದನ್ನು ಮಾತ್ರ ಕಲಿತರೆ ಸಾಲದು, ತಪ್ಪಿಸಿಕೊಳ್ಳುವ ತಂತ್ರವೂ ಗೊತ್ತಿರಬೇಕು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ರಾಷ್ಟ್ರ ಮಟ್ಟದಲ್ಲಿ ಪದಕ ಗೆದ್ದ ಮೊದಲ ಬಾಕ್ಸರ್‌ ಎಂಬ ನಿನ್ನ ಹೆಗ್ಗಳಿಕೆ ಮಲ್ಪೆಯ ತಟಕ್ಕೆ ಅಪ್ಪಳಿಸುವ ಅಲೆಯಂತೆ ಸದಾ ಜೀವಂತವಾಗಿರುವುದು.

Related Articles