Saturday, July 27, 2024

ಒಮನ್‌ನಲ್ಲಿ ಮಿಂಚಿದ ರವಿ ಬಿಜಾಪುರವನ್ನೂ ಬೆಳಗಿದ

ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಉತ್ತರ ಕರ್ನಾಟಕದ ಕ್ರಿಕೆಟ್‌ ಕೊಡುಗೆ ಅಪಾರವಾದುದು. ಒಮನ್‌ ರಾಷ್ಟ್ರೀಯ ತಂಡದಲ್ಲಿ ಮಿಂಚಿದ ಬಿಜಾಪುರದ ರವಿ ಎಸ್‌. ಭರದಕಣಿ Ravi S Bharadakane ಈಗ ಬಿಜಾಪುರಲ್ಲಿ ಬುಲ್ಸ್‌ ರಿಂಗ್‌ Bulls Ring Cricket Academy Bijapur ಎಂಬ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಕ್ರಿಕೆಟ್‌ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

ಪ್ರಸ್ತುತ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಕಾಡೆಮಿಯಲ್ಲಿ ರಾಯಚೂರು ವಲಯದ ಕೋಚ್‌ ಆಗಿರುವ ರವಿ ಅವರ ಕ್ರಿಕೆಟ್‌ ಬದುಕಿನ ಹಾದಿ ಇತರರಿಗೆ ಮಾದರಿ. ವಿಕೆಟ್‌ ಕಿಪರ್‌ ಮತ್ತು ಬ್ಯಾಟ್ಸ್‌ಮನ್‌ ಆಗಿರುವ ರವಿ ಕರ್ನಾಟಕ ವಿಶ್ವವಿದ್ಯಾನಿಲಯದ ತಂಡದಲ್ಲಿ ಎರಡು ವರ್ಷಗಳ ಕಾಲ ಆಡಿದವರು. ಬಳಿಕ ರಾಯಚೂರು ವಲಯದಲ್ಲಿ ಕೆಎಸ್‌ಸಿಎ ಲೀಗ್‌ ಪಂದ್ಯಗಳನ್ನು ಆಡಿದರು. ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಬಿಜಾಪುರ ಬುಲ್ಸ್‌ ಪರ ಉತ್ತಮ ಪ್ರದರ್ಶನ ತೋರಿದವರು. ನಂತರ ಉತ್ತಮ ಅವಕಾಶ ಒಮನ್‌ ರಾಷ್ಟ್ರೀಯ ತಂಡದಲ್ಲಿ ಸಿಕ್ಕಿತು. ಅಫಘಾನಿಸ್ತಾನ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಒಮನ್‌ ಕ್ರಿಕೆಟ್‌ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ನೇಪಾಳ ವಿರುದ್ಧದ ಪಂದ್ಯದಲ್ಲಿ 118 ರನ್‌ಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದವರು. ಐದಾರು ವರ್ಷಗಳ ಕಾಲ ಒಮನ್‌ನಲ್ಲಿ ಕ್ರಿಕೆಟ್‌ ಆಡಿದ ಬಳಿಕ ತಾಯ್ನಾಡಿಗೆ ಬಂದು ಕ್ರಿಕೆಟ್‌ ತರಬೇತಿ ನೀಡುವ ಮನಸ್ಸು ಮಾಡಿದರು.

ಬಿಜಾಪುರ-ಬಾಗಲಕೋಟೆ ರಸ್ತೆಯಲ್ಲಿ ಬಿ.ಆರ್‌. ಕಾಲೋನಿಯಲ್ಲಿ ಬುಲ್ಸ್‌ ರಿಂಗ್‌ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿದ್ದು, ಅದರಿಂದ ಬಿಜಾಪುರ ವಲಯದಲ್ಲಿ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಯಿತು. ಬಿಜಾಪುರದಿಂದ ಯಾರಾದರೂ ಒಬ್ಬರು ಭಾರತ ತಂಡವನ್ನು ಪ್ರತಿನಿಧಿಸಬೇಕು. ರಾಜೇಶ್ವರಿ ಗಾಯಕ್ವಾಡ್‌ ಅವರ ರೀತಿಯಲ್ಲೇ ಇನ್ನುಳಿದವರಿಗೂ ಅವಕಾಶ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಅಕಾಡೆಮಿ ಸ್ಥಾಪಿಸಿದ ರವಿ ಅದೇ ರೀತಿಯಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ನಾಲ್ಕು ತರಬೇತಿ ನೆಟ್‌, ಎರಡು ಸಿಮೆಂಟ್‌ ಹಾಗೂ ಎರಡು ಟರ್ಫ್‌ ಅಂಕಣವನ್ನು ಹೊಂದಿರುವ ಈ ಅಕಾಡೆಮಿಯಲ್ಲಿ ಅಭಿ ವಕಾಸ್‌ ಹಾಗೂ ಜಾಕೀರ್‌ ಎನ್‌. ಅವರು ರವಿಯ ಯಶಸ್ಸಿಗೆ ಬೆಂಬಲವಾಗಿ ನಿಂತಿದ್ದಾರೆ. ಅಕ್ಷಯ್‌, ಸಂತೋಷ್‌, ನಿತಿನ್‌, ಪ್ರಮೋದ್‌ ಹಾಗೂ ಸಯ್ಯದ್‌ ತರಬೇತಿಯಲ್ಲಿ ನೆರವಾಗುತ್ತಿದ್ದಾರೆ. ಅಕಾಡೆಮಿಯು ಕೇವಲ ತರಬೇತಿ ನೀಡುವುದು ಮಾತ್ರವಲ್ಲ ಟೂರ್ನಿಗಳನ್ನು ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಕಾರ್ಯವನ್ನೂ ಮಾಡುತ್ತಿದೆ. ಇಲ್ಲಿ ಉಚಿತ ಹಾಸ್ಟೆಲ್‌ ಸೌಲಭ್ಯವೂ ಇದೆ. ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡ ತೆರಬೇತಿ ರಾತ್ರಿ 8:30ರವರೆಗೂ ನಡೆಯುತ್ತದೆ.

ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಶ್ರೇಯಸ್‌ ಗೌಡ ಪಾಟೀಲ್‌ ಉತ್ತಮ ಪ್ರದರ್ಶನ ತೋರುತ್ತಿದ್ದು ಈಗ ವಿಜಯ ಮರ್ಚೆಂಟ್‌ ಟ್ರೋಫಿಯನ್ನಾಡಲಿರುವ ಕರ್ನಾಟಕ ತಂಡದ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಅದೇ ರೀತಿ ಪವನ್‌ ದೀಪ್‌ ಮತ್ತು ಮೊಹಮ್ಮದ್‌ ಮಾಜ್‌ ರಾಜ್ಯ ತಂಡದ ಕದ ತಟ್ಟುತ್ತಿದ್ದಾರೆ. ರಾಯಚೂರು ವಲಯದ ಪರ ಅಂತರ್‌ ವಲಯ ಟೂರ್ನಿಯಲ್ಲಿ ಆಡಿದ ಶ್ರೇಯಸ್‌ ಗೌಡ ಪಾಟೀಲ್‌ 14 ವಿಕೆಟ್‌ಗಳನ್ನು ಗಳಿಸಿ ಅಕಾಡೆಮಿ ಮತ್ತು ವಲಯಕ್ಕೆ ಕೀರ್ತಿ ತಂದಿದ್ದಾರೆ. ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅನುಶ್ರೀ ಎಸ್‌ ಈಗಾಗಲೇ ರಾಜ್ಯ ಟಿ20 ತಂಡದಲ್ಲಿ ಆಡಿರುತ್ತಾರೆ.

ಕ್ರಿಕೆಟಿಗರ ಮೆಚ್ಚುಗೆ: ಕರ್ನಾಟಕದ ಶ್ರೇಷ್ಠ ವಿಕೆಟ್‌ ಕೀಪರ್‌ ಸದಾನಂದ ವಿಶ್ವನಾಥ್‌, ಭರತ್‌ ಚಿಪ್ಲಿ, ಕೆಪಿ ಅಪ್ಪಣ್ಣ, ಚೆಲುವರಾಜ್‌ ಮೊದಲಾದವರು ಅಕಾಡೆಮಿಗೆ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಮಾತ್ರವಲ್ಲ  ಇಲ್ಲಿ ಯುವ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿಗೆ ಅಕಾಡೆಮಿಗೆ ಭೇಟಿ ನೀಡಿ ಇಲ್ಲಿಯ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

38 ವರ್ಷದ ರವಿ ಅವರ ಕ್ರಿಕೆಟ್‌ ಬದುಕಿಗೆ ಪ್ರೋತ್ಸಾಹ ನೀಡುತ್ತಿರುವುದು ಅವರ ಪತ್ನಿ ಕೀರ್ತಿ ಬಿ. “ಭಾರತ ತಂಡವನ್ನು ಪ್ರತಿನಿಧಿಸಲು ನನ್ನಿಂದ ಆಗಲಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಹೆಮ್ಮೆ ಇದೆ. ನಮ್ಮ ಅಕಾಡೆಮಿಯಿಂದ ಒಬ್ಬ ಆಟಗಾರ ಅಥವಾ ಆಟಗಾರ್ತಿ ಭಾರತ ತಂಡವನ್ನು ಮುಂದಿನ ದಿನಗಳಲ್ಲಿ ಪ್ರತಿನಿಧಿಸಬೇಕು ಎಂಬುದೇ ನನ್ನ ಆಶಯ,” ಎನ್ನುತ್ತಾರೆ ರವಿ. ಎಸ್‌,ಬಿ.

ಕೇವಲ ಬೆಂಗಳೂರಿಗೆ ಸೀಮಿತವಾದ ಕ್ರಿಕೆಟ್‌ ಈಗ ಉತ್ತರ ಕರ್ನಾಟಕದಲ್ಲೂ ಚಿಗುರುತ್ತಿರುವುದು ಖುಷಿಯ ಸಂಗತಿ. ಉತ್ತಮ ತರಬೇತಿ ದೊರೆತರೆ ಕರ್ನಾಟಕ ಯಾಕೆ ಭಾರತ ತಂಡದಲ್ಲೂ ಬಿಜಾಪುರದ ಆಟಗಾರರನ್ನು ಮುಂದಿನ ದಿನಗಳಲ್ಲಿ ಕಾಣಬಹುದು. ಅದಕ್ಕೆ ರವಿ ಅವರ ಶ್ರಮಕ್ಕೆ ತಕ್ಕ ಪ್ರೋತ್ಸಾಹ ಸಿಗುವಂತಾಗಲಿ.

Related Articles