ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಯುವಕ ನೊಸ್ತುಶ್ ಕೆಂಜಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ. ನೊಸ್ತುಶ್ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬೆಂಗಳೂರಿನಲ್ಲಿದ್ದುಕೊಂಡು ಎಂಜಿನಿಯರಿಂಗ್ ವಿದ್ಯಾಭ್ಯಾಸದ ನಡುವೆಯೂ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು, ಹಲವು ಕ್ಲಬ್‌ಗಳ ಪರ ಆಡಿ ಉತ್ತಮ ಪ್ರದರ್ಶನ ತೋರಿದರೂ ಇಲ್ಲಿಯ ಆಯ್ಕೆ ಸಮಿತಿಯ ಗಮನ ಸೆಳೆಯಲಾಗಲಿಲ್ಲ. ಇದರಿಂದಾಗಿ ಬದುಕನ್ನು ಕಟ್ಟಿಕೊಳ್ಳಲು ಅಮೆರಿಕಕ್ಕೆ ತೆರಳಿದ ನೊಸ್ತುಶ್‌ಗೆ ಆ ದೇಶದ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಸಿಕ್ಕಿತು, ಜೊತೆಯಲ್ಲಿ ಈಗ ವಿಶ್ವಕಪ್ ತಂಡದಲ್ಲೂ ಮಿಂಚುವ ಹಂಬಲ. ಕಳೆದ ವಾರ ಬೆಂಗಳೂರಿನಲ್ಲಿರುವ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (KIOC)ನಲ್ಲಿ ಕಠಿಣ ಅಭ್ಯಾಸ ಮಾಡಿ ನಂತರ ಅಮೆರಿಕಕ್ಕೆ ತೆರಳುವ ಮುನ್ನ sportsmail ಜೊತೆ ನೊಸ್ತುಶ್ ಮಾತನಾಡಿದರು. ಅವರ ಮಾತಿನ ಪ್ರಮುಖ ಅಂಶಗಳು ಇಲ್ಲಿವೆ. Kannadiga Nosthush Pradeep Kenjige in USA T20 World Cup team.
ಮೂಡಿಗೆರೆಯ ಕಾಫಿ ಬೆಳೆಗಾರರು, ಸಾಹಿತಿಗಳೂ, ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ಸೇರಿ ಮಿಲೇನಿಯಮ್ ಸರಣಿಯ ಮೂಲಕ ಕನ್ನಡಕ್ಕೆ ಅದ್ಭುತ ಕೃತಿಗಳನ್ನು ನೀಡಿದ ಸಂಶೋಧಕರಾದ ಡಾ. ಪ್ರದೀಪ್ ಕೆಂಜಿಗೆ Dr Pradeep Kenjige ಹಾಗೂ ಕೀರ್ತಿ ದಂಪತಿಯ ಪುತ್ರ ನೊಸ್ತುಶ್ ಕೆಂಜಿಗೆ ಹುಟ್ಟಿದ್ದು ಅಮೆರಿಕದಲ್ಲಿ. ಆದರೆ ಬೆಳೆದದ್ದು ಭಾರತದಲ್ಲಿ. ಪ್ರದೀಪ್ ಹಾಗೂ ಕೀರ್ತಿ ದಂಪತಿ ಅಮೆರಿಕ ತೊರೆದು ಈಗ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲೇ ನೆಲೆಸಿದ್ದಾರೆ. ನೊಸ್ತುಶ್ ಅಮೆರಿಕದಲ್ಲಿ ಕೆಲಸ ಮಾಡುತ್ತ ಜೊತೆಯಲ್ಲಿ ಕ್ರಿಕೆಟ್ ಆಡಿಕೊಂಡಿದ್ದಾರೆ.
ಅಮೆರಿಕವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?
ಕರ್ನಾಟಕದಲ್ಲಿ U13 ಹಂತದಿಂದ ವಿವಿಧ ಕ್ಲಬ್‌ಗಳ ಪರ ಆಡಿದ್ದೇನೆ. ಉತ್ತಮ ಪ್ರದರ್ಶನವನ್ನೂ ತೋರಿದ್ದೇನೆ. ಆದರೆ ಇಲ್ಲಿ ಉನ್ನತ ಮಟ್ಟದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಅಷ್ಟರಲ್ಲಿ ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದೆ. ಇಲ್ಲಿ ಅವಕಾಶ ಸಿಗುವುದೇ ಕಷ್ಟ ಎಂದು ಅರಿತು. 2016 ರಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿಕೊಂಡು ಕ್ರಿಕೆಟ್ ಆಡಲು ತೀರ್ಮಾನಿಸಿದೆ. ಅವಕಾಶವೂ ಸಿಕ್ಕಿತು. ಅಮೆರಿಕವನ್ನು ಪ್ರತಿನಿಧಿಸುವ ಅವಕಾಶವೂ ಸಿಕ್ಕಿತು. ಅಮೆರಿಕ ಅವಕಾಶಗಳ ದೇಶ. ಅಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಬದುಕನ್ನು ಕಟ್ಟಿಕೊಳ್ಳಲು ಬರುತ್ತಾರೆ. ಅವಕಾಶ ಸಿಕ್ಕವರು ಕ್ರಿಕೆಟ್ ಆಡುತ್ತಾರೆ. ಅಮೆರಿಕ ತಂಡದಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಆಟಗಾರರನ್ನು ಗಮನಿಸಬಹುದು, ನಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ಅವಕಾಶ ಎಲ್ಲಿಯೂ ಸಿಗಬಹುದು,”. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಬಲಗೈ ಬ್ಯಾಟ್ಸ್‌ಮನ್ ಹಾಗೂ ಎಡಗೈ ಸ್ಪಿನ್ನರ್ ನೊಸ್ತುಶ್ ಇದುವರೆಗೂ 40 ಏಕದಿನ ಪಂದ್ಯಗಳನ್ನಾಡಿ 38 ವಿಕೆಟ್ ಗಳಿಸಿರುತ್ತಾರೆ.
ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆಯಬಹುದೇ?
“ಖಂಡಿತವಾಗಿಯೂ ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆಯಲಿದೆ. ಜಗತ್ತಿನ ಪ್ರಮುಖ ಆಟಗಾರರು ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ. ಮೈನರ್ ಹಾಗೂ ಮೇಜರ್ ಲೀಗ್‌ಗಳು ಯಶಸ್ಸು ಕಂಡಿವೆ. ವಿಶ್ವಕಪ್‌ನ ಎಲ್ಲ ಟಿಕೆಟ್‌ಗಳೂ ಮಾರಾಟಗೊಂಡಿವೆ. ಅಮೆರಿಕದಲ್ಲಿ ಕ್ರಿಕೆಟ್ ಯಶಸ್ಸು ಕಾಣಲಿದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ. ಈ ವಿಶ್ವಕಪ್ ಆತಿಥ್ಯ ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮತ್ತಷ್ಟು ಸಹಾಯಕವಾಗಲಿದೆ. ವಿಶ್ವಕಪ್ ಕ್ರಿಕೆಟ್ ಬಗ್ಗೆ ಇಲ್ಲಿಯ ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಆದ್ದರಿಂದ ಅಮೆರಿಕ ಕ್ರಿಕೆಟ್‌ಗೆ ಮತ್ತೊಂದು ನೆಲೆಯಾಗಲಿದೆ,”
ನ್ಯೂಜಿಲೆಂಡ್‌ನ ಕೋರಿ ಆಂಡರ್ಸನ್ ಅವರ ಬಗ್ಗೆ:
ನ್ಯೂಜಿಲೆಂಡ್‌ನ ಕೋರಿ ಆಂಡರ್ಸನ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರ ಬಗ್ಗೆ ನೊಸ್ತುಶ್ ಅತ್ಯಂತ ಅಭಿಮಾನದಿಂದ ಮಾತನಾಡಿದ್ದಾರೆ.“ಅವರೊಬ್ಬ ಉತ್ತಮ ಆಟಗಾರ. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ವ್ಯಕ್ತಿತ್ವ ಉಳ್ಳವರು. ಅವರು ಎಲ್ಲರೊಂದಿಗೂ ಉತ್ತಮ ರೀತಿಯಲ್ಲಿ ಮಾತನಾಡುತ್ತಾರೆ. ಅಪಾರ ಅನುಭವವಿದ್ದರೂ ಸರಳ ವ್ಯಕ್ತಿತ್ವ ಉಳ್ಳವರು. ಯಾವುದೇ ಸಂದರ್ಭದಲ್ಲೂ ಸಹಾಯ ಕೇಳಿದರೆ ನೆರವಿಗೆ ನಿಲ್ಲುವ ವ್ಯಕ್ತಿ. ಐಪಿಎಲ್ ಹಾಗೂ ವಿಶ್ವಕಪ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಅವರು ಅಮೆರಿಕ ತಂಡದ ದೊಡ್ಡ ಆಸ್ತಿ,”
ಕೆಐಒಸಿ ಅಕಾಡೆಮಿ ಎರಡನೇ ಮನೆ:
ಕ್ರಿಕೆಟ್ ಜಗತ್ತಿನ ಅತ್ಯಂತ ಬೃಹತ್ ಅಕಾಡೆಮಿ ಎನಿಸಿರುವ ಬೆಂಗಳೂರಿನ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ನೂರಾರು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ತರಬೇತಿಯ ತಾಣವಾಗಿದೆ. ನೊಸ್ತುಶ್ ಕೂಡ ಇಲ್ಲಿ ತರಬೇತಿ ಪಡೆದಿರುತ್ತಾರೆ.
“ಕೆಐಒಸಿ ನನ್ನ ಪಾಲಿಗೆ ಎರಡನೇ ಮನೆ ಇದ್ದಂತೆ. ಕಳೆದ 25 ವರ್ಷಗಳಿಂದ ಈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಕ್ರಿಕೆಟಿಗರಿಗೆ ಉತ್ತಮ ತರಬೇತಿ ನೀಡುವಲ್ಲಿ ಇರ್ಫಾನ್ ಸೇಠ್ ಹಾಗೂ ನಾಸೀರ್ ಅವರು ಪ್ರಮುಖ ಪಾತ್ರವಹಿಸುತ್ತಾರೆ. ನನ್ನ ಕ್ರಿಕೆಟ್ ಅಭಿವೃದ್ಧಿಯಲ್ಲಿ ಈ ಇಬ್ಬರೂ ತರಬೇತುದಾರರ ಪಾತ್ರ ಪ್ರಮುಖವಾದುದು. ಪ್ರತಿಯೊಂದು ಸಂದರ್ಭದಲ್ಲೂ ತರಬೇತಿ ನೀಡಿ ಸಹಾಯ ಮಾಡಿರುವ ಶ್ರೇಷ್ಠ ವ್ಯಕ್ತಿಗಳನ್ನು ನಾನು ಸದಾ ಸ್ಮರಿಸುತ್ತೇನೆ,”
ಕ್ರಿಕೆಟನ್ನೇ ಬಿಟ್ಟು ಹೊರಟವ ಮತ್ತೆ ಸ್ಪಿನ್ನರ್ ಆಗಿದ್ದು ಹೇಗೆ?
ಕರ್ನಾಟದಕಲ್ಲಿ ಉತ್ತಮ ಪ್ರದರ್ಶನ ತೋರಿದರೂ ಅವಕಾಶ ಸಿಗದಿರುವಾಗ ಬೇಸತ್ತ ನೊಸ್ತುಶ್, ಕ್ರಿಕೆಟನ್ನೇ ತೊರೆದು ಅಮೆರಿಕದಲ್ಲಿ ಉದ್ಯೋಗ ಅರಸಿ ಹೊರಟರು. ಅಮೆರಿಕಕ್ಕೆ ಹೊರಟ ದಿನ ಡಾ. ಪ್ರದೀಪ್ ಕೆಂಜಿಗೆ ಮತ್ತು ಕೀರ್ತಿ ಬ್ಯಾಟ್ ಮತ್ತು ಬಾಲ್ ಜೊತೆಯಲ್ಲಿ ತೆಗೆದುಕೊಂಡು ಹೋಗಲು ಸೂಚಿಸಿದರು. ಆದರೆ ನೊಸ್ತುಶ್ ಕ್ರಿಕೆಟನ್ನೇ ತೊರೆದಿರುವ ನನಗೆ ಬ್ಯಾಟ್ ಮತ್ತು ಬಾಲ್ ಯಾಕೆ ಎಂದು ನಿರಾಕರಿಸಿದರು. ಆಗ ಪ್ರದೀಪ್ ಕೆಂಜಿಗೆ ಮಗನ ಗಮನಕ್ಕೆ ಬಾರದಂತೆ ಬ್ಯಾಗಿನಲ್ಲಿ ಒಂದು ಚೆಂಡನ್ನು ಇರಿಸುತ್ತಾರೆ. ಅಮೆರಿಕ ತಲುಪಿಸ ನೊಸ್ತುಶ್‌ಗೆ ಬ್ಯಾಗ್ ತೆರೆದು ನೋಡಿದಾಗ ಅಚ್ಚರಿ. ಚೆಂಡು ಜೊತೆಯಲ್ಲೇ ಬಂದಿದೆ. ಮತ್ತೆ ಅಮೆರಿಕದಲ್ಲಿ ಅಭ್ಯಾಸವನ್ನು ಮುಂದುವರಿಸುವಾಗ ತಂದೆ ಬ್ಯಾಗಿನಲ್ಲಿ ಇರಿಸಿದ್ದ ಚೆಂಡನ್ನೇ ಬಳಸುತ್ತಾರೆ. ನಂತರದ್ದು ಇತಿಹಾಸ. ಈ ವಿಷಯವನ್ನು ಡಾ. ಪ್ರದೀಪ್ ಕೆಂಜಿಗೆ sportsmail ಜೊತೆ ಹಂಚಿಕೊಂಡಿದ್ದಾರೆ.
ನೊಸ್ತುಶ್ ಹೆಸರಿನ ಅರ್ಥವೇನು?
ಡಾ. ಪ್ರದೀಪ್ ಕೆಂಜಿಗೆ ಕೃಷಿ ವಿಜ್ಞಾನಿ. ಅಮೆರಿಕದ ಅರಿಝೋನದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅಲ್ಲಿನ ರೆಡ್ ಇಂಡಿಯನ್ಸ್ ಬದುಕಿನ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪ್ರದೀಪ್ ಅವರ ಪತ್ನಿ ಗರ್ಭಿಣಿಯಾಗಿದ್ದರು. ಅಲ್ಲಿ ಮಗು ಹೊಟ್ಟೆಯಲ್ಲಿ ಇರುವಾಗಲೇ ಹೆಸರಿಡುವ ಕ್ರಮ. ಡಾ. ಪ್ರದೀಪ್ ತಮ್ಮ ಜೊತೆಯಲ್ಲಿರುವ ಅಮೆರಿಕದವರೊಂದಿಗೆ ಒಂದು ಉತ್ತಮ ಹೆಸರು ಸೂಚಿಸುವಂತೆ ಕೋರಿಕೊಂಡರು. ಆಗ ಒಬ್ಬರು “ನೊಸ್ತುಶ್” ಎಂಬ ಹೆಸರು ಸೂಚಿಸಿರು. ನೊಸ್ತುಶ್ ಅಂದರೆ “ಕಿಂಗ್ ಆಫ್ ಡೆಸರ್ಟ್” ಅಂದರೆ ಸಿಂಹ ಎಂದರ್ಥ. ಅಂದರೆ ಮರಳುಗಾಡಿನ ಸಿಂಹ. ಡಾ. ಪ್ರದೀಪ್ ದಂಪತಿಯ ಮಗನ ಹೆಸರು ನಿರಂಕುಶ. ಈ ಹೆಸರಿಡಲು ಕುವೆಂಪು ಅವರ ಸಂದೇಶವೇ ಕಾರಣ. ಯುವಕರಿಗೆ ನಿರಂಕುಶ ಮತಿಗಳಾಗಿ ಬದುಕಿ ಎಂದು ಕುವೆಂಪು ಕರೆ ನೀಡಿರುವುದೇ ಸ್ಫೂರ್ತಿ.