Thursday, April 25, 2024

ಕಾಡಿನ ಅಂಚಿನಲ್ಲಿರುವ ಶಾಲೆಗೆ ಆಡಲು ಸಲಕರಣೆ ಇಲ್ಲ!

ಸೋಮಶೇಖರ್ ಪಡುಕರೆ ಬೆಂಗಳೂರು

ಚಾಮರಾಜನಗರ ಜಿಲ್ಲೆಯ ಸಿದ್ಧಯ್ಯನಪುರದಲ್ಲಿರುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ. ಇದು ಕಾಡಂಚಿನಲ್ಲಿರು ಕರ್ನಾಟಕದ ಕೊನೆಯ ಹಾಗೂ ತಮಿಳುನಾಡಿಗೆ ಹತ್ತಿರವಾದ ಶಾಲೆ. ಈ ಶಾಲೆ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಹಸಿರಿನಿಂದ ಕಂಗೊಳಿಸುತ್ತಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ಈ ಶಾಲೆಯ ಮಕ್ಕಳು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುತ್ತಾರೆ. ಹಸಿರು ಶಾಲೆ ಎಂದು ಜಿಲ್ಲಾಮಟ್ಟದ ಪ್ರಶಸ್ತಿಯೂ ಬಂದಿದೆ. ೧೮೭ ಮಂದಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ೮ ಮಂದಿ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಕ್ರೀಡೆಗೆ ಅಗತ್ಯವಿರುವ ಯಾವುದೇ ಸಲಕರಣೆ ಇಲ್ಲವಾಗಿದೆ. ಇದು ಹಾಕಿ, ಇದು ಬಾಸ್ಕೆಟ್‌ಬಾಲ್, ಇದು ವಿಕೆಟ್, ಇದು ಹಾಕಿಸ್ಟಿಕ್, ಇದು ವಾಲಿಬಾಲ್ ಎಂದು ಆಟವನ್ನು ಪರಿಚಿಯಿಸಲೂ ಸೌಲಭ್ಯ  ಇಲ್ಲದಂತಾಗಿದೆ. ಕನ್ನಡ ಶಾಲೆಗಳು ನಶಿಸಿಹೋಗುತ್ತಿರುವ ಇಂದಿನ ದಿನಗಳಲ್ಲಿ ಅಲ್ಲಿಯ ಶಿಕ್ಷಕರು ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸಾರ್ವಜನಿಕರಲ್ಲಿ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರದಿಂದ ಯಾವುದೇ ಕ್ರೀಡಾ ಸೌಲಭ್ಯಗಳು ಈ ಶಾಲೆಗೆ ಸಿಕ್ಕಿಲ್ಲ. ಇದರಿಂದಾಗಿ ಶಾಲಾ ದೈಹಿಕ ಶಿಕ್ಷಣ ನಾರಾಯಣ ಅವರು ಫೇಸ್‌ಬುಕ್‌ನಲ್ಲಿ ಗೆಳೆಯರೊಂದಿಗೆ ನೆರವನ್ನು ಯಾಚಿಸುತ್ತಿದ್ದಾರೆ. ವಲಯ ಮಟ್ಟದ ಕಬಡ್ಡಿಯಲ್ಲಿ ಪಾಲ್ಗೊಳ್ಳಲು ಶೂ ಇಲ್ಲದ ಕಾರಣ ಊರಿನವರಲ್ಲಿ ಚಂದಾ ಎತ್ತಿ ಮಕ್ಕಳಿಗೆ ಶೂ ನೀಡಿರುತ್ತಾರೆ.
ಒಂದೆಡೆ ಕಾಡು ಇನ್ನೊಂದೆಡೆ ತಮಿಳುನಾಡಿನ ಗಡಿ ಇದರಿಂದಾಗಿ ಈ ಶಾಲೆಗೆ ಕನ್ನಡ ಮಕ್ಕಳನ್ನು ಕಾಯ್ದುಕೊಳ್ಳುವುದು ಇಲ್ಲಿಯ ಶಿಕ್ಷಕರಿಗೆ ಹರಸಾಹಸವಾಗಿದೆ. ಆದರೂ ಅತ್ಯಂತ ಸುಂದರವಾಗಿ ಹಸಿರಿನಿಂದ ಕಂಗೊಳಿಸುತ್ತಿರುವ ಈ ಶಾಲೆಯ ಮಕ್ಕಳಿಗೆ ಆಟವಾಡಲು ಯಾವುದೇ ಸಲಕರಣೆ ಇಲ್ಲವೆಂಬುದು ಬೇಸರದ ಸಂಗತಿ.
ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಶಾಲಾ ದೈಹಿಕ ಶಿಕ್ಷಕ ನಾರಾಯಣ ಅವರು, ‘ಶಾಲೆಯಲ್ಲಿ ದೈಹಿಕ ಶಿಕ್ಷಣದ ಬಗ್ಗೆ ಪಠ್ಯ ಇದೆ. ಮಕ್ಕಳಿಗೆ ಕ್ರಿಕೆಟ್, ವಾಲಿಬಾಲ್, ಬಾಸ್ಕೆಟ್‌ಬಾಲ್. ಟೆನಿಸ್, ಹಾಕಿ ಮೊದಲಾದ ಕ್ರೀಡೆಗಳ ಬಗ್ಗೆ ಪರಿಚಯಿಸಲು ಪುಸ್ತಕವೇ ಹೊರತು ಒಂದು ಬ್ಯಾಟ್ ಕೂಡ ಶಾಲೆಯಲ್ಲಿ ಇಲ್ಲವಾಗಿದೆ. ಆಟದ ಸಮಯ ಬಂದಾಗ ಮಕ್ಕಳನ್ನು ಬಲಿಗೈಯಲ್ಲಿ ಅಂಗಣಕ್ಕೆ ಕಳುಹಿಸುವಾಗ ಮನಸ್ಸಿಗೆ ನೋವಾಗುತ್ತದೆ. ಆಡುವ ಮಕ್ಕಳನ್ನು ಕಟ್ಟಿಹಾಕಿದಂತಾಗುತ್ತದೆ. ಕೇವಲ ಸಲಕರಣೆ ಇಲ್ಲದೆ ಆಡುವ ಆಟಗಳನ್ನು ಆಡುತ್ತಿದ್ದಾರೆ. ತಮಿಳುನಾಡಿನ ಅಂಚಿನಲ್ಲಿರುವ ಈ ಶಾಲೆಗೆ ನೆರವಿನ ಅಗತ್ಯವಿದೆ. ಫೇಸ್‌ಬುಕ್‌ನಲ್ಲಿ ಅವರಿವರನ್ನು ಯಾಚಿಸುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಕ್ರೀಡಾ ಸಲಕರಣೆಗಳು ಇಲ್ಲ,‘ ಎಂದು ಅತ್ಯಂತ ಬೇಸರದಿಂದ ನುಡಿದಿದ್ದಾರೆ.
ಕ್ರೀಡಾ ಪ್ರತಿಭೆಗಳಿರುವುದು ಗ್ರಾಮೀಣ ಪ್ರದೇಶದಲ್ಲಿ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸರಕಾರ ಅಲ್ಲಿಲ್ಲಿ ಹೇಳಿಕೆಗಳನ್ನು ನೀಡುತ್ತಿದೆ. ಆದರೆ ಅದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ನಗರ ಪ್ರದೇಶದ ಶಾಲೆಗಳಿಗೆ ಕ್ರೀಡಾ ಸೌಲಭ್ಯಗಳನ್ನು ನೀಡುವುದರಲ್ಲೇ ತಲ್ಲೀನವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಈ ಶಾಲೆಯ ಬಗ್ಗೆ ಗಮನ ಹರಿಸಿ ಅಲ್ಲಿಗೆ ಅಗತ್ಯವಿರುವ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಿದರೆ ಗಡಿ ಪ್ರದೇಶದಲ್ಲಿರುವ ಶಾಲೆಗೆ ನೆರವು ನೀಡಿದಂತಾಗುತ್ತದೆ.

Related Articles