12 ಬಾರಿ ಬೆಸ್ಟ್ ಲಿಫ್ಟರ್ ಗೌರವ ಆದರೆ ಈ ಚಾಂಪಿಯನ್ ನಿರುದ್ಯೋಗಿ !

0
933
ಸೋಮಶೇಖರ್ ಪಡುಕರೆ ಬೆಂಗಳೂರು

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 12 ಬಾರಿ ಬೆಸ್ಟ್ ಲಿಫ್ಟರ್.  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಬಾರಿ ಚಿನ್ನದ ಪದಕ, ದುಬೈಯಲ್ಲಿ ಏಷ್ಯನ್ ಬೆಂಚ್‌ಪ್ರೆಸ್‌ನಲ್ಲಿ ಎರಡು ಸ್ವರ್ಣ. ಹೀಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ  ಮಂಗಳೂರಿನ ಚಾಂಪಿಯನ್ ಲಿಫ್ಟರ್ ಅಕ್ಷತಾ ಪೂಜಾರಿಗೆ ನಾವು ಒಂದು ಉದ್ಯೋಗವನ್ನು ನೀಡುವಲ್ಲಿ ವಿಫಲರಾಗಿದ್ದೇವೆ.

ನಮ್ಮ ಕ್ರೀಡಾ ಸಾಧಕರಿಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತಿದೆ ಎಂಬುದಕ್ಕೆ ಇದು ಉತ್ತಮ ನಿದರ್ಶನ.
ದುಬೈಯಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನ ೫೨ ಕೆಜಿ ವಿಭಾಗದಲ್ಲಿ ಎರಡು ಚಿನ್ನ ಗೆದ್ದು ತಾಯ್ನಾಡಿಗೆ ಹಿಂದಿರುಗುವ ಸಂದರ್ಭ  ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಅಕ್ಷತಾ ಪೂಜಾರಿ, ‘ಇದು ನಾಲ್ಕನೇ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್, ಪ್ರತಿಯೊಂದರಲ್ಲೂ ಪದಕದ ಸಾಧನೆ ಮಾಡಿದ್ದೇನೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 12 ಬಾರಿ ಶ್ರೇಷ್ಠ ಲಿಫ್ಟರ್  (ಬಲಿಷ್ಠ ಮಹಿಳೆ) ಎಂಬ ಗೌರವಕ್ಕೆ ಪಾತ್ರಳಾಗಿರುವೆ, ಎಚ್.ಆರ್.ಡಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವೆ, ಉದ್ಯೋಗ ಪಡೆಯಲು ಇನ್ನೇನು ಬೇಕು?, ಇಲ್ಲಿ ಕ್ರೀಡಾ ಸಾಧನೆಗೆ ಬೆಲೆಯೇ ಇಲ್ಲದಂತಾಗಿದೆ, ಇದು ಬೇಸರದ ಸಂಗತಿ,‘ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪವರ್ ಲಿಫ್ಟರ್  ವಿಜಯ ಕಾಂಚನ್, ಕೇಶವ್ ಕರ್ಕೇರಾ ಹಾಗೂ ಮಂಜುನಾಥ ಮಲ್ಯ ಅವರಲ್ಲಿ ಪಳಗಿರುವ ಅಕ್ಷತಾ ಪೂಜಾರಿ ವೀರ ಮಾರುತಿ ವ್ಯಾಯಾಮಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಬೆಳ್ಮಣ್ಣು ಸಮೀಪದ ಬೋಳ ಗ್ರಾಮದ ನಿವಾಸಿ ಅಕ್ಷತಾ ಪೂಜಾರಿ ಅವರ ಕುಟುಂಬ ಕೃಷಿಯಲ್ಲಿ ತೊಡಗಿಕೊಂಡಿದೆ. ತಂದೆ ಬೋಜ ಪೂಜಾರಿ ಹಾಗೂ ತಾಯಿ ಪ್ರೇಮಾ ಅವರು ಮಗಳ ಸಾಧನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಪವರ್‌ ಲಿಫ್ಟರ್  ವಿಜಯ ಕಾಂಚನ್ ಅವರು ಅಕ್ಷತಾ ಪೂಜಾರಿ ಅವರಿಗೆ ಸರಕಾರ ಉದ್ಯೋಗ ನೀಡುವ ಮೂಲಕ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ‘ಅಕ್ಷತಾ ಪೂಜಾರಿ ಅವರು ನಿರಂತರವಾಗಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ವೀರಮಾರುತಿ ವ್ಯಾಯಾಮ ಶಾಲೆಯ ಹೆಮ್ಮೆಯ ಲಿಫ್ಟರ್. ೨೭ ವರ್ಷ ಪ್ರಾಯದ ಅವರಿಗೆ ಈಗ ಉದ್ಯೋಗದ ಅಗತ್ಯವಿದೆ. ಸರಕಾರ ಸ್ಪೋರ್ಟ್ಸ್ ಕೋಟಾದಡಿ ಕೆಲಸ ನೀಡುವಾಗ ಪವರ್‌ಲ್ಟಿರ್‌ಗಳನ್ನು ಪರಿಗಣಿಸಬೇಕು. ಹಾಗಿದ್ದಲ್ಲಿ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ಇಂಥ ಕ್ರೀಡೆಗಳು ಜೀವಂತವಾಗಿರಲು ಸಾಧ್ಯ. ದುಬೈಯಲ್ಲಿ ಅಕ್ಷತಾ ಉತ್ತಮ ಸಾಧನೆ ಮಾಡಿದ್ದಾರೆ. ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ೧೨ ಪದಕಗಳನ್ನು ಗೆದ್ದಿದ್ದಾರೆ. ಅವರಿಗೆ ತರಬೇತಿ ನೀಡಿರುವುದಕ್ಕೆ ಹೆಮ್ಮೆ
ಅನಿಸುತ್ತಿದೆ,‘ ಎಂದರು.

ಮೊಗವೀರ, ಬಿಲ್ಲವರ ಅಭಿನಂದನೆ

ಅಕ್ಷತಾ ಪೂಜಾರಿ ಅವರು ದುಬೈಯಲ್ಲಿ ನಡೆದ ಏಷ್ಯನ್ ಬೆಂಚ್‌ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನ ಗೆದ್ದು ಸಾಧನೆ ಮಾಡಿರುವುದಕ್ಕೆ ದುಬೈಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೆಮ್ಮೆಯನ್ನುಂಟು ಮಾಡಿದೆ. ಚಿನ್ನ ಗೆದ್ದ ನಂತರ ದುಬೈನಲ್ಲಿರುವ ಬಿಲ್ಲವ ಹಾಗೂ ಮೊಗವೀರ ಸಂಘಟನೆಯ ಪ್ರಮುಖರು ಅಕ್ಷತಾ ಪೂಜಾರಿ ಅವರಿಗೆ ಸನ್ಮಾನ ಮಾಡಿರುತ್ತಾರೆ. ದುಬೈಯಲ್ಲಿ ನೆಲೆಸಿರುವ ಎರಡೂ ಸಮುದಾಯದ ಪ್ರಮುಖರು ಈ ಸಂದರ್ಭದಲ್ಲಿ  ಹಾಜರಿದ್ದರು.