Saturday, July 27, 2024

ಹಾಕಿ:ಐಒಸಿಎಲ್ ತಂಡ ಚಾಂಪಿಯನ್

ಸೂಪರ್ ಡಿವಿಜನ್ ಹಾಕಿ: ಬೆಂಗಳೂರು ಆರ್ಮಿ ಇಲೆವೆನ್‌ಗೆ ರನ್ನರ್ ಅಪ್ ಸ್ಥಾನ
ಸ್ಪೋರ್ಟ್ಸ್ ಮೇಲ್ ವರದಿ

ಕೊನೆಯ ಕ್ಷಣದಲ್ಲಿ ಉತ್ತಮ ಆಟ ಪ್ರದರ್ಶಿಸಿದ  ಮುಂಬಯಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲ್ಲಿ ಮುಕ್ತಾಯಗೊಂಡ ೨ನೇ ಬೆಂಗಳೂರು ಸೂಪರ್ ಡಿವಿಜನ್ ಲೀಗ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಬೆಂಗಳೂರು ಆರ್ಮಿ ಇಲೆವೆನ್ ವಿರುದ್ಧ ರೋಚಕ ಜಯ ಗಳಿಸಿ ಚಾಂಪಿಯನ್ ಪಟ್ಟ ಪಡೆದಿದೆ.

ಅಕ್ಕಿತಿಮ್ಮನಹಳ್ಳಿಯಲ್ಲಿರುವ  ಮೈದಾನದಲ್ಲಿ  ನಡೆದ ರೋಚಕ  ಫೈನಲ್ ಹೋರಾಟದಲ್ಲಿ ಐಒಸಿಎಲ್ ೨-೧ ಗೋಲುಗಳ ಅಂತರದಿಂದ ಆರ್ಮಿ ಇಲೆವೆನ್‌ಗೆ ಸೋಲುಣಿಸಿತು. ಸ್ಟ್ರೈಕರ್ ತಲ್ವಿಂದರ್ ಸಿಂಗ್ ೬೪ನೇ ನಿಮಿಷದಲ್ಲಿ ಐಒಸಿಎಲ್ ಪರ ಗೆಲುವಿನ ಗೋಲು ದಾಖಲಿಸಿ ತಂಡ ೫ ಲಕ್ಷ ರೂ. ಬಹುಮಾನ ಮೊತ್ತ ಸ್ವೀಕರಿಸಲು ಕಾರಣರಾದರು.
೧೬ನೇ ನಿಮಿಷದಲ್ಲಿ ದೀಪಕ್ ಠಾಕೂರ್ ಗೋಲು ಗಳಿಸಿದ ಪರಿಣಾಮ ಐಒಸಿಎಲ್ ಆತಿಥೇಯ ಆರ್ಮಿ ಇಲೆವೆನ್ ಜತೆ ೧-೧ರಲ್ಲಿ ಸಮಬಲದ ಹೋರಾಟ ನೀಡಿತು. ಪಂದ್ಯದುದ್ದಕ್ಕೂ ಸ್ಥಳೀಯ ಪ್ರೇಕ್ಷಕರು ಆರ್ಮಿ ಇಲೆವೆನ್ ಬೆಂಬಲಕ್ಕೆ ನಿಂತರು. ಇದರಿಂದ ಸ್ಪೂರ್ತಿಗೊಂಡ ಆತಿಥೇಯ ತಂಡದ ಪರ ೮ನೇ ನಿಮಿಷದಲ್ಲಿ ರಜಂತ್ ಗೋಲ್ ದಾಖಲಿಸಿ ತಂಡಕ್ಕೆ ೧-೦ ಅಂತರದ ಮುನ್ನಡೆ ತಂದುಕೊಟ್ಟರು. ಪಂದ್ಯದ ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ತುರುಸಿನ ಪೈಪೋಟಿ ನಡೆಸಿದವು. ಆದರೆ ಅಂತಿಮ ಹಂತದಲ್ಲಿ ಐಒಸಿಎಲ್ ಗೋಲು ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಆರ್ಮಿ ಇಲೆವೆನ್ ತಂಡದ ಸುಧಾಕರ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇದಕ್ಕೂ ಮುನ್ನ ೩ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೂಟ್‌ಔಟ್‌ನಲ್ಲಿ ೪-೨ ಗೋಲ್‌ಗಳಿಂದ ದಿಲ್ಲಿಯ ಇಂಡಿಯನ್ ನೇವಿ ವಿರುದ್ಧ ಗೆದ್ದು ಮೂರನೇ ಸ್ಥಾನ ಗಳಿಸಿತು. ಪಿಎನ್‌ಬಿ ತಂಡದ ಶಿವ್‌ದೀಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಂದ್ಯದ ನಿಗದಿತ ಅವಧಿಯಲ್ಲಿ ಇತ್ತಂಡಗಳು ೨-೨ ಗೋಲ್‌ಗಳಿಂದ ಡ್ರಾ ಸಾಸಿದ್ದವು.

Related Articles