Saturday, July 27, 2024

ರವೀಂದ್ರ ಜಡೇಜಾ ಅವರ ಕ್ರಿಕೆಟ್‌ ಬದುಕು ಮುಗಿಯಿತೇ?

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ಜೊತೆಗಿನ ದೀರ್ಘ ಕಾಲದ ಸಂಬಂಧ ಗೊಂದಲದಲ್ಲಿ ಕಡಿದುಹೋಗುವ ಮೂಲಕ ಕ್ರಿಕೆಟ್‌ ಜಗತ್ತಿನ ಉತ್ತಮ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರ ಕ್ರಿಕೆಟ್‌ ಬದುಕು ವಿಶ್ರಾಂತಿಯ ದಿನಗಳ ಕಡೆಗೆ ಮುಖ ಮಾಡಿದಂತಿದೆ.

ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಬದಲಾಗಿ ರವೀಂದ್ರ ಜಡೇಜಾ ಅವರಿಗೆ ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವ ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವ ವಹಿಸಿದ ಎಂಟು ಪಂದ್ಯಗಳಲ್ಲಿ ಸಿಎಸ್‌ಕೆ ಆರು ಪಂದ್ಯಗಳಲ್ಲಿ ಹೀನಾಯ ಸೋಲುಂಡು ಪ್ಲೇ ಆಫ್‌ ತಲಪುವಲ್ಲಿ ವಿಫಲವಾಗಿತ್ತು. ನಂತರ ನಾಯಕಕತ್ವವನ್ನು ಧೋನಿಗೆ ನೀಡಿದರೂ ಯಾವುದೇ ಬದಲಾವಣೆ ಕಾಣಲಿಲ್ಲ. ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಿಂದೆಂದಿಗಿಂತಲೂ ಕಳಪೆ ಪ್ರದರ್ಶನ ತೋರಿ ನಿರ್ಗಮಿಸಿದೆ.

ಸಿಎಸ್‌ಕೆ ಮತ್ತು ಜಡೇಜಾ ನಡುವಿನ ಸಂಬಂಧ ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ತಂಡದಿಂದ ಹೊರ ಬೀಳುತ್ತಿದ್ದಂತೆ ಜಡೇಜಾ ಅವರನ್ನು ಸಿಎಸ್‌ಕೆ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡುವುದನ್ನು ನಿಲ್ಲಿಸಿದೆ. ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಅವರಂಥ ಆಟಗಾರರ ಕ್ರಿಕೆಟ್‌ ಬದುಕು ಇದೇ ರೀತಿಯಲ್ಲಿ ಕೊನೆಗೊಂಡಿತ್ತು. ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಕೂಡ ಮುಂದಿನ ದಿನಗಳಲ್ಲಿ ಜಡೇಜಾ ಸಿಎಸ್‌ಕೆ ಪರ ಆಡುವುದು ಸಂಶಯ ಎಂದಿದ್ದಾರೆ.

ಜಡೇಜಾ ಅವರಿಗೆ ಗಾಯದ ಕಾರಣ ನೀಡಿ ತಂಡದಿಂದ ಹೊರಗಿಡಲಾಗಿದೆ. ನಾಯಕನ ಜವಾಬ್ದಾರಿ ಹೊತ್ತ ಜಡೇಜಾ 10 ಪಂದ್ಯಗಳಲ್ಲಿ 116 ರನ್‌ ಗಳಿಸಿ 5 ವಿಕೆಟ್‌ ಗಳಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವೆಂದರೆ ಸಿಎಸ್‌ಕೆ ಆರು ಪಂದ್ಯಗಳಲ್ಲಿ ಸೋಲನುಭವಿಸಿತ್ತು.

33 ವರ್ಷ ಪ್ರಾಯದ ಜಡೇಜಾ ಅವರು ಇತ್ತೀಚಿನ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಗಮನಿಸಿದಾಗ ಅವರಲ್ಲಿ ಇನ್ನೂ ಕ್ರಿಕೆಟ್‌ ಸಾಮರ್ಥ್ಯ ಇದೆ ಎಂಬುದು ಸ್ಪಷ್ಟವಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗಾಯದ ಸಮಸ್ಯೆಯ ಕಾರಣ ಅವರನ್ನು ಕೈ ಬಿಟ್ಟಾಗ ನಿವೃತ್ತಿಯ ಸುದ್ದಿಯಾಗಿತ್ತು. ಆದರೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ನಾಯಕನೆನಿಸಿಕೊಂಡವನು ಒತ್ತಡದ ನಡುವೆಯೂ ಪ್ರದರ್ಶನ ತೋರಬೇಕಾಗುತ್ತದೆ. ಆದರೆ ಜಡೇಜಾ ನಾಯಕನ ಸ್ಥಾನಕ್ಕೆ ಅನರ್ಹ ಎಂಬುದನ್ನು ಸಾಬೀತುಪಡಿಸಿದರು. ಮಹೇಂದ್ರ ಸಿಂಗ್‌ ಧೋನಿ ಸೋಲಿನ ನಡುವೆಯೂ ಜವಾಬ್ದಾರಿಯುತ ಆಟವಾಡಿದ್ದರು. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಇದಕ್ಕೆ ವಯಸ್ಸು ಕೂಡ ಪ್ರಮುಖ ಕಾರಣವಾಗಿರುತ್ತದೆ. ಕಳೆದ ವರ್ಷ ನಿವೃತ್ತಿಯ ಸುದ್ದಿಯಾದಾಗ ಜಡೇಜಾ,ʼ ಸಾಗಬೇಕಾದ ಹಾದಿ ಇನ್ನೂ ಇದೆ, ವದಂತಿಗಳನ್ನು ನಂಬಬೇಡಿʼ ಎಂದಿದ್ದರು. ಆದರೆ ನಿರಂತರ ವೈಫಲ್ಯ ಒಬ್ಬ ಆಟಗಾರನ ಮನೋಬಲವನ್ನು ಕುಸಿಯುವಂತೆ ಮಾಡುತ್ತದೆ. ಗಾಯಗೊಳ್ಳದಿದ್ದರೂ ತಂಡದ ಮ್ಯಾನೇಜ್‌ಮೆಂಟ್‌ ಆಟಗಾರನನ್ನು ʼಗಾಯಗೊಳಿಸಿʼ ತಂಡದಿಂದ ಹೊರಗಿಡುತ್ತದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಜತೆಗಿನ ಸಂಬಂಧ ಕಡಿದಿರುವುದು ಖಚಿತ, ಮುಂದಿನ ಐಪಿಎಲ್‌ನಲ್ಲಿ ಜಡೇಜಾ ಬೇರೆ ತಂಡಗಳಲ್ಲಿ ಕಾಣಿಸಿಕೊಳ್ಳಬಹುದು, ಆದರೆ ಅವರ ಕ್ರಿಕೆಟ್‌ ಬದುಕಿನಲ್ಲಿ ಸಂಜೆ ಅವರಿಸಿರುವುದು ಸ್ಪಷ್ಟ. ಈ ವರ್ಷ ಅವರು ಕನಿಷ್ಟ ಯಾವುದಾದರೂ ಒಂದು ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಖಚಿತ.

Related Articles