Thursday, September 12, 2024

ಭಾರತಕ್ಕೆ ಜಯ, ಸರಣಿ ಜೀವಂತ

ಏಜೆನ್ಸೀಸ್ ಟ್ರೆಂಟ್‌ಬ್ರಿಡ್ಜ್

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ೨೦೩ ರನ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳಲ್ಲಿ ಸರಣಿಯಲ್ಲಿ ಭಾರತ ೧-೨ ಅಂತರದಲ್ಲಿ ಜೀವಂತಿಕೆ ಕಾಯ್ದುಕೊಂಡಿದೆ.

ಎರಡನೇ ಇನಿಂಗ್ಸ್‌ನಲ್ಲಿ ೫೨೧ ರನ್‌ಗಳ ಬೃಹತ್ ಗುರಿ ಹೊತ್ತ ಇಂಗ್ಲೆಂಡ್ ಕೇವಲ ೩೧೭ ರನ್ ಗಳಿಸಿ ಸರ್ವ ಪತನ ಕಂಡಿತು. ಆಗಸ್ಟ್ ೩೦ರಿಂದ ಸೌತ್‌ಹ್ಯಾಂಪ್ಟನ್‌ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
೩೧೧ ರನ್‌ಗೆ ೯ ವಿಕೆಟ್ ಕಳೆದುಕೊಂಡು ಐದನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಕೇವಲ ೧೭ ಎಸೆತಗಳನ್ನು ಎದುರಿಸುತ್ತಲೇ ಅಂತಿಮ ವಿಕೆಟ್ ಕಳೆದುಕೊಂಡು ಸೋಲೋಪ್ಪಿಕೊಂಡಿತು. ಅಶ್ವಿನ್ ಎಸೆತದಲ್ಲಿ ಜೇಮ್ಸ್ ಆಂಡರ್ಸನ್ ಅಜಿಂಕ್ಯ ರಹಾನೆಗೆ ವಿಕೆಟ್ ಒಪ್ಪಿಸುವ ಮೂಲಕ ಇಂಗ್ಲೆಂಡ್‌ನ ದ್ವಿತೀಯ ಇನಿಂಗ್ಸ್ ಕೊನೆಗೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ೯೭ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ೧೦೩ ರನ್ ಗಳಿಸಿದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮೊದಲ ಇನಿಂಗ್ಸ್‌ನಲ್ಲಿ ಹಾರ್ದಿಕ್ ಪಾಂಡ್ಯಾ ದಾಳಿಗೆ ಸಿಲುಕಿದ ಇಂಗ್ಲೆಂಡ್ ಕೇವಲ ೧೬೧ ರನ್‌ಗೆ ಆಲೌಟ್ ಆಗಿತ್ತು, ಎರಡನೇ ಇನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ದಾಳಿಗೆ ಸಿಕ್ಕು ಕೇವಲ ೩೧೭ ರನ್‌ಗೆ ಆಲೌಟ್ ಆಯಿತು. ಭಾರತದ ಇಬ್ಬರೂ ಬೌಲರ್‌ಗಳು ತಲಾ ೫ ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ೧೯೩೬-೩೭ರಲ್ಲಿ ಡಾನ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ತಂಡ ಆರಂಭ‘ದ ಎರಡು ಪಂದ್ಯಗಳಲ್ಲಿ ಸೋತ ನಂತರ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು. ಈಗ ವಿರಾಟ್ ಕೊಹ್ಲಿ ಪಡೆಗೆ ಅದೊಂದು ಐತಿಹಾಸಿಕ ದಾಖಲೆ ಬರೆಯುವ ಅವಕಾಶ ಇದೆ.

Related Articles