ಆದಾಯ ತೆರಿಗೆ ತಂಡಕ್ಕೆ ಚಾಂಪಿಯನ್ ಪಟ್ಟ

0
266
ಸ್ಪೋರ್ಟ್ಸ್ ಮೇಲ್ ವರದಿ

ಆತಿಥೇಯ ವಿಜಯ ಬ್ಯಾಂಕ್ ತಂಡವನ್ನು ಫೈನಲ್ ಪಂದ್ಯದಲ್ಲಿ ೪ ಅಂಕಗಳ ಅಂತರದಲ್ಲಿ ಸೋಲಿಸಿದ  ಚೆನ್ನೈನ ಆದಾಯ ತೆರಿಗೆ ತಂಡ ಇಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ೫ನೇ ಅಖಿಲ ಭಾರತ  ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ವಿಜಯ ಬ್ಯಾಂಕ್ ಆತಿಥ್ಯದಲ್ಲಿ ನಡೆದ ಚಾಂಪಿಯನ್‌ಷಿಪ್ ನ ಫೈನಲ್ ಪಂದ್ಯದಲ್ಲಿ ಆದಾಯ ತೆರಿಗೆ ತಂಡ ೭೬-೭೨ ರ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ಇಂಡಿಯನ್ ನೇವಿ ಮೂರನೇ ಸ್ಥಾನ ಹಾಗೂ ಎಸಿಎಫ್  ಚೆನ್ನೈ  ನಾಲ್ಕನೇ ಸ್ಥಾನ ಗಳಿಸಿದವು.
ಚಾಂಪಿಯನ್ ಪಟ್ಟ ವಿಜೇತ ಆದಾಯ ತೆರಿಗೆ ತಂಡ ಟ್ರೋಫಿಯ ಜತೆಯಲ್ಲಿ ೧ ಲಕ್ಷ ರೂ. ನಗದು ಬಹುಮಾನ ಪಡೆಯಿತು. ರನ್ನರ್ ಅಪ್ ವಿಜಯ ಬ್ಯಾಂಕ್ ತಂಡ ೫೦,೦೦೦ ರೂ. ಮೂರನೇ ಸ್ಥಾನ ಗಳಿಸಿದ ಇಂಡಿಯನ್ ನೇವಿ ೨೫,೦೦೦ ರೂ. ಹಾಗೂ ಎಸಿಎ್ ತಂಡ ೧೦,೦೦೦ ರೂ. ಬಹುಮಾನ ಗಳಿಸಿತು. ಬಹಳ ಮೌಲ್ಯಾಧಾರಿತ ಆಟಗಾರ ಪ್ರಶಸ್ತಿ ಗಳಿಸಿದ ಆದಾಯ ತೆರಿಗೆ ತಂಡದ ಜಿ. ಶಿವಬಾಲನ್ ೪,೦೦೦ ರೂ. ನಗದು ಬಹುಮಾನ ಗೆದ್ದರು. ಉದಯೋನ್ಮುಖ ಆಟಗಾರ ಗೌರವಕ್ಕೆ ಪಾತ್ರರಾದ ವಿಜಯ ಬ್ಯಾಂಕ್‌ನ ಹರೀಶ್ ಎಂ., ಉತ್ತಮ  ಡಿಫೆನ್ಸ್ ಆಟಗಾರ ಕ್ಲಿಂಟನ್ ಆಂಡ್ರ್ಯೂಸ್, ಆದಾಯ ತೆರಿಗೆ ತಂಡದ ರವಿ ಕುಮಾರ್ ಪ್ರೇಕ್ಷಕರ  ಫೇವರಿಟ್ ಆಟಗಾರ ಗೌರವಕ್ಕೆ ಪಾತ್ರರಾದರು. ಇವರೆಲ್ಲರಿಗೂ ತಲಾ ೪ ಸಾವಿರ ರೂ ನಗದು ಬಹಮಾನ ನೀಡಲಾಯಿತು. ವಿಜಯ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ಮತ್ತು ಮುರಳಿ ರಾಮಸ್ವಾಮಿ ವಿಜೇತರಿಗೆ ಬಹುಮಾನ ವಿತರಿಸಿದರು.
ಫೈನಲ್ ಪಂದ್ಯದಲ್ಲಿ ಆದಾಯ ತೆರಿಗೆ ತಂಡದ ಪರ ರವಿ ಕುಮಾರ್ (೨೬ ಅಂಕ) ಹಾಗೂ ಜೀವನಾಥನ್ (೧೬ ಅಂಕ) ಉತ್ತಮ ಆಟ ಪ್ರದರ್ಶಿಸಿದರು. ವಿಜಯ ಬ್ಯಾಂಕ್ ಪರ ಅನಿಲ್ ಕುಮಾರ್ (೨೭ ಅಂಕ) ಹಾಗೂ ಅರವಿಂದ್ ಅರ್ಮುಗಂ (೨೦ ಅಂಕ) ಉತ್ತಮವಾಗಿ ಆಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಇಂಡಿಯನ್ ನೇವಿ ತಂಡ ೬೯-೫೯ ಅಂತರದಲ್ಲಿ  ಚೆನ್ನೈನ  ಐಸಿಎಎಫ್  ತಂಡ ವಿರುದ್ಧ ಜಯ ಗಳಿಸಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.