Friday, March 29, 2024

ಹೆಸರಿಗೆ ಜಿಮ್, ಒಳಗಡೆ ಏನೂ ಇಲ್ಲ ಧಮ್ !

ಸೋಮಶೇಖರ್ ಪಡುಕರೆ ಬೆಂಗಳೂರು 

ಆರ್ಥಿಕವಾಗಿ ಬಲಿಷ್ಠವಾಗಿರುವ ಕಾರ್ಪೊರೇಟ್ ವಲಯದೊಂದಿಗೆ ಸರಕಾರ ಕೈ ಜೋಡಿಸಿದರೆ ಅವರ ಮಾತನ್ನೇ ಕಳಬೇಕಾಗುತ್ತದೆಯೇ ವಿನಃ ಸರಕಾರದ ಆದೇಶಕ್ಕೆ ಅವರು ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಅಥ್ಲೆಟಿಕ್ಸ್‌ಗಾಗಿಯೇ ಇರುವ ಶ್ರೀ ಕಂಠೀರವ ಕ್ರೀಡಾಂಗಣ ಉತ್ತಮ ಉದಾಹರಣೆ.

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಬೆಂಗಳೂರು ಎಫ್ಸಿ ತಂಡಕ್ಕೆ ಕಂಠೀರವ ಕ್ರೀಡಾಂಗಣವನ್ನು ಬಾಡಿಗೆ ಅಥವಾ ಗುತ್ತಿಗೆಗೆ ನೀಡಲಾಗಿದೆ.  ಅಥ್ಲೆಟಿಕ್ಸ್‌ನಲ್ಲಿ ನಮ್ಮ ರಾಜ್ಯ ಇತ್ತೀಚಿಗೆ ನಿರೀಕ್ಷಿತ ಮಟ್ಟದಲ್ಲಿ ಪದಕ ಗೆಲ್ಲುತ್ತಿಲ್ಲ. ಇದಕ್ಕೆ ಕಾರಣ ನಿರಂತರವಾಗಿ ಅಭ್ಯಾಸ ನಡೆಸಲು ಅವರಿಗೆ ಅವಕಾಶ ಸಿಗುತ್ತಿಲ್ಲ. ರಾಜ್ಯ ನ್ಯಾಯಾಲಯ ಕ್ರೀಡಾಪಟುಗಳಿಗೆ ಅವಕಾಶ ನೀಡಿ ಎಂದು ಆದೇಶ ಹೊರಡಿಸಿದರೂ ಅದಕ್ಕೆ ಸೂಕ್ತವಾದ ಸೌಲಭ್ಯ ಇಲ್ಲವಾಗಿದೆ.

ಬೇರೆ ಕಡೆ ಫಿಟ್ನೆಸ್

ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಉತ್ತಮ ಸೌಭ್ಯಗಳಿಂದ ಕೂಡಿದ ಜಿಮ್ ಇದ್ದಿತ್ತು. ಆದರೆ ಜಿಮ್ ಇದ್ದ ಸ್ಥಳವನ್ನು ಬೆಂಗಳೂರು ಫುಟ್ಬಾಲ್ ತಂಡದ ಆಟಗಾರರು ವಿಶ್ರಾಂತಿ ಪಡೆಯುವುದಕ್ಕೆ ಕೊಠಡಿ ಕಲ್ಪಿಸಲು ನೀಡಲಾಗಿದೆ. ಇಲ್ಲಿದ್ದ ಜಿಮ್ ಪಕ್ಕದ ಕೊಠಡಿಗೆ ಸ್ಥಳಾಂತರಗೊಂಡಿದೆ. ಅದಕ್ಕೆ ಸರಿಯಾದ ಬಾಗಿಲೇ ಇಲ್ಲ. ಸಾಕಷ್ಟು ಸ್ಥಳಾವಕಾಶ ಇಲ್ಲದ ಕೊಠಡಿಗೆ ಜಿಮ್ ಸಲಕರಣೆಗಳನ್ನು ಸಾಗಿಸಲಾಗಿದೆ. ಎಲ್ಲೆಂದರಲ್ಲಿ ಅವು ಬಿದ್ದುಕೊಂಡಿದೆ. ಸದಾ ತೆರೆದುಕೊಂಡಿರುವ ಈ  ಕೊಠಡಿಯಿಂದ ಈಗಾಗಲೇ ಕಬಡ್ಡಿದ ರಾಡ್, ಗುಂಡು ಹಾಗೂ ಭಾರ ಎತ್ತುವ ಸಲಕರಣೆಗಳು ಗುಜರಿಯವರ ಕಣ್ಣಿಗೆ ಬಿದ್ದು ಮಾಯವಾಗಿವೆ. ಇಲ್ಲಿರುವ ಕೋಚ್‌ಗಳು ತಮ್ಮ ಸ್ವಂತ ಖರ್ಚಿನಿಂದ ತಂದ ಸಲಕರಣೆಗಳು ಮಾತ್ರ ಬಾಕ್ಸ್‌ನಲ್ಲಿ ಸುರಕ್ಷಿತವಾಗಿವೆ.

ಹಣ ತೆತ್ತು ಫಿಟ್ನೆಸ್ ಕಾಯ್ದುಕೊಳ್ಳುತ್ತಾರೆ

ಸರಕಾರ ಸಾಕಷ್ಟು ಹಣ ವ್ಯಯ ಮಾಡಿ ನಿರ್ಮಿಸಿರುವ ಜಿಮ್‌ನ ಸ್ಥಿತಿ ಈ ರೀತಿಯಾಗಿರುವ ಕಾರಣ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿರುವ ರಾಜ್ಯದ ಅಥ್ಲೀಟ್‌ಗಳು ಪಕ್ಕದಲ್ಲಿರು ಸೇಂಟ್  ಜೋಸೆಫ್ ಕಾಲೇಜಿನ ಫಿಟ್ನೆಸ್ ಕೇಂದ್ರದಲ್ಲಿ ತಮ್ಮ ಕೈಯಿಂದ ಹಣ ತೆತ್ತು ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾರೆ. ರಾಜ್ಯ ಕ್ರೀಡಾ ಇಲಾಖೆ ಅಥವಾ ಸರಕಾರಕ್ಕೆ ಈಗ ಬೆಂಗಳೂರು ಫುಟ್ಬಾಲ್ ಕ್ಲಬ್ ಮುಖ್ಯವೋ ಅಥವಾ ನಮ್ಮ ಅಥ್ಲೀಟ್‌ಗಳು ಮುಖ್ಯವೋ ಎಂಬುದು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಸರಕಾರದ ನಿಲುವು ಹಾಗೂ ಜಿಮ್‌ನ ಅವ್ಯವಸ್ಥೆಯನ್ನು ಗಮನಿಸಿದಾಗ ಕ್ರೀಡಾ ಇಲಾಖೆಗೆ ಬೆಂಗಳೂರು ಫುಟ್ಬಾಲ್ ಕ್ಲಬ್‌ನ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಮುಖ್ಯವೆನಿಸಿರುವುದು ಸ್ಪಷ್ಟ.
‘ನಾವಿಲ್ಲಿ ಬಹಳ ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇವೆ, ಬರೇ ನಮ್ಮ ಸ್ಪರ್ಧೆಗೆ ಸಂಬಂಧಿಸಿದ ಕ್ರೀಡೆಗಳಲ್ಲಿ ಅಭ್ಯಾಸ ಮಾಡಿದರೆ ಸಾಲದು, ಫಿಟ್ನೆಸ್ ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಕಂಠೀವರ ಕ್ರೀಡಾಂಗಣದಲ್ಲಿರುವ ಜಿಮ್ ಅವ್ಯವಸ್ಥೆಯಿಂದ ಕೂಡಿದೆ. ಎಲ್ಲೆಂದರಲ್ಲಿ ಸಲಕರಣೆಗಳು ಬಿದ್ದುಕೊಂಡಿವೆ. ಜಿಮ್ ಬಾಗಿಲು ಯಾವಾಗಲೂ ತೆರೆದುಕೊಂಡೇ ಇರುತ್ತದೆ. ಪ್ರಮುಖ ದ್ವಾರ ಮುಚ್ಚಿಕೊಂಡಿದ್ದರೂ ೨೦೦ ಮೀ. ಟ್ರ್ಯಾಕ್ ಕಡೆಯಿಂದ ಬೇಲಿ ಹಾರಿ ಬಂದು ಅಲ್ಲಿರುವ ಗಂಡುಗಳನ್ನು ಕದ್ದು ಹೋಗಿದ್ದಾರೆ. ಕ್ರೀಡಾಪಟುಗಳಿಗಾಗಿ ಸರಕಾರ ಉತ್ತಮ ಜಿಮ್ ವ್ಯವಸ್ಥೆಯನ್ನು ಕಂಠೀರವ ಕ್ರೀಡಾಂಗಣದಲ್ಲಿ ಕಲ್ಪಿಸಬೇಕಾಗಿದೆ,‘  ಎಂದು ಹೆಸರು ಹೇಳಬಯಸದ ಕ್ರೀಡಾಪಟುವೊಬ್ಬರು ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.

Related Articles