Saturday, July 27, 2024

ಕರ್ನಾಟಕದ 24,333 ಶಾಲೆಗಳಲ್ಲಿ ಕ್ರೀಡಾಂಗಣಗಳೇ ಇಲ್ಲ!

“ಕೊನೆಯ ಪಿರೇಡ್‌ ಯಾವುದು?” ಎಂದು ಮಕ್ಕಳನ್ನು ಕೇಳಿದಾಗ “ಪಿಟಿ..ಸರ್”‌ ಎನ್ನುತ್ತಾರೆ. “ಸರಿ, ಗಣಿತ ಮೇಸ್ಟ್ರು ಪಾಠ ಮಾಡ್ತಾರೆ, ಎಲ್ಲ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಿ”, ಎಂದು ಗುರುಗಳು ಹೇಳಿದ ನಂತರ ಆ ಮಕ್ಕಳ ಇಡೀ ದಿನ ದೈಹಿಕ ಶಿಕ್ಷಣ ಇಲ್ಲದೇ ಮುಕ್ತಾಯಗೊಂಡಿತು. ಕಾರಣ ಇಷ್ಟೆ. ರಾಜ್ಯದ 24,333 ಶಾಲೆಗಳಲ್ಲಿ ಮಕ್ಕಳಿಗೆ ಆಡಲು ಕ್ರೀಡಾಂಗಣಗಳೇ ಇಲ್ಲ. In Karnataka there are no playgrounds in 24,333 schools!

ಇದು ಈ ವರ್ಷದ ಆರಂಭದಲ್ಲಿ ಬೆಳಕಿಗೆ ಬಂದ ವರದಿ. ಆ ಬಳಿಕ ಎಷ್ಟು ಶಾಲೆಗಳಲ್ಲಿ ಮಕ್ಕಳಿಗೆ ಆಡಲು ಅವಕಾಶ ಸಿಕ್ಕಿತು? ಎಷ್ಟು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲ್ಪಟ್ಟವು ಎಂಬುದು ಬೇರೆ ಸಂಗತಿ. ಹೀಗಿರುವಾಗ ದೈಹಿಕ ಶಿಕ್ಷಣಕ್ಕೆ ಪ್ರಾಮುಖ್ಯತೆ ಸಿಗುವುದಾದರೂ ಹೇಗೆ?. ಚೀನಾ ಹೇಗೆ ಹೆಚ್ಚು ಪದಕ ಗೆದ್ದಿತು? ಜಮೈಕಾ ಯಾಕೆ ಒಲಿಂಪಿಕ್ಸ್‌ನಲ್ಲಿ ಮಿಂಚುತ್ತದೆ? ಈ ಬಗ್ಗೆ ನಾವು ಪ್ರಬಂಧ ಮಂಡಿಸುತ್ತೇವೆ. ಆದರೆ ನಮ್ಮ ಮೂಲಭೂತ ಸಮಸ್ಯೆಗಳ ಬಗ್ಗೆ ನಾವು ಗಮನ ಹರಿಸುವುದೇ ಇಲ್ಲ. ಮೊನ್ನೆ ವಿಶ್ವಕಪ್‌ ಫೈನಲ್‌ ನೋಡಲು ರಾಜ್ಯ ಕ್ರೀಡಾಂಗಣಗಳಲ್ಲಿ ದೈತ್ಯ ಪರದೆಯ ಮೇಲೆ ಪಂದ್ಯ ವೀಕ್ಷಿಸಲು ಅವಕಾಶ ಕೊಡಿ ಎಂದು ಮಾನ್ಯ ಮುಖ್ಯ ಮಂತ್ರಿಗಳು ಲಿಖಿತ ಆದೇಶ ಹೊರಡಿಸುತ್ತಾರೆ. ಹೊರ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅಲ್ಲಿ ಹೋಗಿ ಪ್ರಚಾರ ಮಾಡಲು ಸರಕಾರದ ಹಣವನ್ನು ಪೋಲು ಮಾಡುತ್ತಾರೆ. ಸಚಿವರೊಬ್ಬರು ತನ್ನ ಮತಕ್ಷೇತ್ರದಲ್ಲಿ ಅಂತರ್‌ ಅಪಾರ್ಟ್‌ಮೆಂಟ್‌ ಕ್ರೀಡಾಕೂಟ ನಡೆಸುತ್ತಾರೆ. ಅದಕ್ಕೆ ಬೃಹತ್‌ ಕಂಪೆನಿಗಳ, ಬಿಲ್ಡರ್‌ಗಳ ಜಾಹೀರಾತು ಸಂಗ್ರಹಿಸುತ್ತಾರೆ. ಆದರೆ ಇಂಥ ಗಂಭೀರ ಸಮಸ್ಯೆಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ.

ಕೇಂದ್ರ ಸರಕಾರದ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತಂದಿದೆಯೇ ಎನ್ನುವುದು ಮುಖ್ಯ. ಶಾಲೆಗಳಿಗೆ ಅನುಮತಿ ನೀಡುವಾಗ ಅಲ್ಲಿ ಕ್ರೀಡೆಗಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆಯೇ? ಅಲ್ಲಿ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿವೆಯೇ ಎನ್ನುವುದರ  ಬಗ್ಗೆ ಮಾಹಿತಿ ಸಂಗರಹಿಸಿರುತ್ತಿದ್ದರೆ ಇಂದು ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಅನೇಕ ಖಾಸಗಿ ಶಾಲೆಗಳು ವಾಣಿಜ್ಯ ಕೇಂದ್ರಗಳ ನಡುವೆ ಇದೆ. ಅಲ್ಲಿ ಯಾವುದೇ ಕಾರಣಕ್ಕೂ ಕ್ರೀಡೆಗೆ ಅವಕಾಶ ನೀಡುತ್ತಿಲ್ಲ ಎಂಬುದು ಸರಕಾರದ ಗಮನಕ್ಕೆ ಬಂದಂತಿಲ್ಲ.

ಶಿಕ್ಷಣದ ಹಕ್ಕು ಕಾಯಿದೆ (RTE) ಪ್ರಕಾರ ಶಿಕ್ಷಣ ನೀಡಬೇಕಾದರೆ ಆ ಶಾಲೆಯಲ್ಲಿ ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕಡ್ಡಾಯವಾಗಿರಬೇಕು. ಅಲ್ಲಿ ಕ್ರೀಡಾಂಗಣ ಕಡ್ಡಾಯವಾಗಿರಬೇಕು. ಅನೇಕ ಶಾಲೆಗಳು ಇಂದು ದೈಹಿಕ ಶಿಕ್ಷಣದ ಹೆಸರಿನಲ್ಲಿ ಭೂಮಿಯನ್ನು ಹೊಂದಿದ್ದರೂ ಅಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಹೊಸ ಕಟ್ಟಡಗಳನ್ನು ಕಟ್ಟಿರುತ್ತಾರೆ. ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಕ್ರೀಡಾಂಗಣದ ಸಮಸ್ಯೆ ಹೆಚ್ಚಿದೆ. ಹೆಚ್ಚಿನ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವುದರಿಂದ ಇಂಥ ಸಮಸ್ಯೆಗಳ ಬಗ್ಗೆ ಹೆಚ್ಚಿನ ಒತ್ತು ನೀಡುವುದಿಲ್ಲ. ಪದಕ ಗೆದ್ದ ಮಕ್ಕಳೊಂದಿಗೆ ಮುಂದೆ ಕುಳಿತು ಗ್ರೂಪ್‌ ಫೋಟೋ ತೆಗೆಸಿಕೊಳ್ಳುವುದು, ಯುವಕರನ್ನು ಒಟ್ಟುಗೂಡಿಸಲು ಕ್ರೀಡಾಕೂಟಗಳನ್ನು ಆಯೋಜಿಸುವುದೇ ಮುಖ್ಯವಾಗಿದೆಯೇ ಹೊರತು ಮಕ್ಕಳ ಓದಿಗೆ ದೈಹಿಕ ಶಿಕ್ಷಣ ಮುಖ್ಯವೆಂಬುದು ಸರಕಾರಕ್ಕೆ ಪ್ರಮುಖ ಅಂಶವಲ್ಲ.

ಮಾಜಿ ಕ್ರೀಡಾ ಸಚಿವರೊಬ್ಬರು ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ 100 ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತೇವೆ. ಅವರಲ್ಲಿ ಹೆಚ್ಚಿನವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿ ಎಂದು ಹೇಳಿಕೆ ನೀಡಿದ್ದರು. ಅವರ ನಿರೀಕ್ಷೆ ಸರಿ ಇರಬಹುದು, ಆದರೆ ರಾಷ್ಟ್ರೀಯ ಕ್ರೀಡಾಕೂಟಕ್ಕೆ ನಾವು ಎಷ್ಟು ಕ್ರೀಡಾಪಟುಗಳನ್ನು ಕಳುಹಿಸುತ್ತಿದ್ದೇವೆ ಎನ್ನುವುದು ಮುಖ್ಯ. ಶಾಲೆಯಲ್ಲಿ ಆಡಲು ಅಂಗಣ ಇಲ್ಲದಿರುವಾಗ ಒಲಿಂಪಿಕ್ಸ್‌ ಕನಸು ಕಾಣುವುದಾದರೂ ಹೇಗೆ? ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಮಕ್ಕಳು ಮರದ ಕೆಳಗೆ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವಾಗ ಇನ್ನು ಕ್ರೀಡಾಂಗಣದ ಬಗ್ಗೆ ಮಾತನಾಡುವುದಾರೂ ಹೇಗೆ?

Related Articles