ಹೊಸದಿಲ್ಲಿ: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ 69 ರನ್ ಅಂತರದಲ್ಲಿ ಜಯ Historical win for Afghanistan ಗಳಿಸುವುದರೊಂದಿಗೆ ಅಫಘಾನಿಸ್ತಾನ 2023ರ ವಿಶ್ವಕಪ್‌ಗೆ ಜೀವ ತುಂಬಿದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ಗೆದ್ದರೆ ವಿಶ್ವಕಪ್‌ಗೆ ನಿಜವಾದ ಚಾಲನೆ ಸಿಕ್ಕಂತೆ ಎಂದು ಬಿಂಬಿಸುವ ಪಂಡಿತರ ನಡುವೆ ಅಫಘಾನಿಸ್ತಾನ ಇದು ನಿಜವಾದ ವಿಶ್ವಕಪ್ ಎಂಬುದನ್ನು ತೋರಿಸಿದೆ. ಇದು ವಿಶ್ವಕಪ್ ಇತಿಹಾಸದಲ್ಲಿ ಅಫಘಾನಿಸ್ತಾನ ದಾಖಲಿಸಿದ ಎರಡನೇ ಜಯವಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಅಫಘಾನಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಲಕ್ಷಣ ಯೋಚನೆ ಮಾಡಿತ್ತು. ಆದರೆ ರಹಮತ್‌ಉಲ್ಲಾ ಗುರ್ಬಜ್ ಸಿಡಿಸಿದ 80 ಹಾಗೂ ಇಕ್ರಮ್ ಅಲಿಕಿಲ್ ಅವರ 58 ರನ್ ನೆರವಿನಿಂದ ಆಫ್ಘನ್ ತಂಡ 49.5 ಓವರ್‌ಗಳಲ್ಲಿ ಸವಾಲಿನ 284 ರನ್ ಗಳಿಸಿತು.
ಹಾಲಿ ಚಾಂಪಿಯನ್ ಎಂಬ ಹಣೆಪಟ್ಟಿ ಕಟ್ಟಿರುವ ಇಂಗ್ಲೆಂಡ್ ತಂಡ ಅಲ್ಪ ಮೊತ್ತವನ್ನು ಸುಲಭವಾಗಿ ಗಳಿಸಬಹುದೆಂಬ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಮುಜೀಬ್ ಉರ್ ರೆಹಮಾನ್ (51ಕ್ಕೆ 3) ಇಂಗ್ಲೆಂಡ್‌ನ ಜಯದ ಆಸೆಯನ್ನು ನುಚ್ಚು ನೂರು ಮಾಡಿದರು. ಆರಂಭದಲ್ಲಿ ರೆಹಮಾನ್ ಆಘಾತ ನೀಡಿದರೆ ರಶೀದ್ ಖಾನ್ (37ಕ್ಕೆ 3) ಅಂತಿಮ ಹಂತದ ಕಾರ್ಯವನ್ನು ಪೂರ್ಣಗೊಳಿಸಿದರು. ಇಂಗ್ಲೆಂಡ್ 40.3 ಓವರ್‌ಗಳಲ್ಲಿ ಕೇವಲ 215 ರನ್ ಗಳಿಸಿ ಸರ್ವ ಪತನ ಕಂಡಿತು.
ದೆಹಲಿಯ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವಾಗುತ್ತದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠತೆ ಇಲ್ಲದಿದ್ದರೂ ಅಫಘಾನಿಸ್ತಾನದ ಬೌಲಿಂಗ್ ಪಡೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇಂಗ್ಲೆಂಡ್ ಕೂಡ ಸ್ಪಿನ್ ಬೌಲರ್‌ಗಳನ್ನು ಸಮರ್ಪಕವಾಗಿ ಎದುರಿಸುತ್ತಿಲ್ಲ. ದೆಹಲಿಯ ಪಿಚ್ ಇದನ್ನು ಸಾಬೀತುಪಡಿಸಿತು.