Saturday, July 27, 2024

ವಿರಾಟ್‌ ಕೊಹ್ಲಿ ನಾನ್‌ ವೆಜ್‌ ಬಿಟ್ಟಿದ್ದೇಕೆ?

35 ವರ್ಷದ ವಿರಾಟ್‌ ಕೊಹ್ಲಿಯ ಫಿಟ್ನೆಸ್‌ ನೋಡಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಪಿಚ್‌ನಲ್ಲಿ ಅವರು ಎರಡು ರನ್‌‌ ಓಡುವಾಗ, ಫೀಲ್ಡಿಂಗ್‌ ಮಾಡುವಾಗ ಅವರ ಫಿಟ್ನೆಸ್‌ ಬಗ್ಗೆ ಮಾತನಾಡುವುದಿದೆ. ಆದರೆ ನಾನ್‌ ವೆಜ್‌ ಬಿಟ್ಟ ನಂತರ ಇದೆಲ್ಲ ಸಾಧ್ಯವಾಯಿತು ಎನ್ನುತ್ತಾರೆ ಕೊಹ್ಲಿ. ನಾನ್‌ ವೆಜ್‌ ಬಿಡಲು ಕಾರಣವೂ ಇದೆ. Why Virat Kohli left Non Veg food and became a Vegan?

ಈಗ ವಿರಾಟ್‌ ಕೊಹ್ಲಿ ಊಟದಲ್ಲಿ ತರಕಾರಿ ತಿನ್ನುವದೇ ಹೆಚ್ಚು. ಮೊಟ್ಟೆಯನ್ನು ಕೂಡ ಮುಟ್ಟುವುದಿಲ್ಲ. 2018ರ ಮಧ್ಯಂತರದಲ್ಲಿ ಮಾಂಸಾಹಾರವನ್ನು ತ್ಯಜಿಸಿರುವುದಾಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಡೈರಿ ಉತ್ಪನ್ನಗಳು, ಪ್ರಾಣಿಗಳ ಕೊಬ್ಬು ಇರುವ ತಿನಿಸುಗಳನ್ನೂ ಅವರು ತ್ಯಜಿಸಿರುತ್ತಾರೆ. ಮೊದಲು ಬಟರ್‌ ಚಿಕನ್‌ ಮತ್ತು ನಾನ್‌ ರೋಟಿಗಳನ್ನು ತಿನ್ನುವುದನ್ನು ಬಿಟ್ಟ ನಂತರದಲ್ಲಿ ಫಿಟ್ನೆಸ್‌ನಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎನ್ನುತ್ತಾರೆ.

ವಿರಾಟ್‌ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಪ್ರಾಣಿ ದಯಾ ಸಂಘದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರು ಕೂಡ 2016ರಿಂದ ಮಾಂಸಾಹಾರವನ್ನು ತ್ಯಜಿಸಿರುತ್ತಾರೆ. ಶಕ್ತಿವರ್ಧನೆಗಾಗಿ ಕೊಹ್ಲಿ 2018ರ ವರೆಗೂ ಪ್ರಾಣಿಗಳ ಪ್ರೋಟೀನು ಇರುವಂಥ ಆಹಾರಗಳನ್ನು ಸೇವಿಸುತ್ತಿದ್ದರು. ಆದರೆ ಸಸ್ಯಾಹಾರವನ್ನು ತಿನ್ನಲು ಆರಂಭಿಸಿದಾಗಿನಿಂದ ಫಿಟ್ನೆಸ್‌ ಕಾಯ್ದುಕೊಳ್ಳಲು ಸಾಧ್ಯವಾಯಿತು ಎನ್ನುತ್ತಾರೆ.

2018ರಲ್ಲಿ ಕೊಹ್ಲಿ ಅವರಿಗೆ ತೀವ್ರವಾಗಿ ಕತ್ತು ನೋವು ಕಾಣಿಸಿಕೊಂಡಿತ್ತು. ಈ ನೋವೇ ಅವರಿಗೆ ಮಾಂಸಾಹಾರವನ್ನು ತ್ಯಜಿಸಲು ಮೂಲ ಕಾರಣವಾಯಿತಂತೆ. “ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಮುನ್ನ ಸ್ವಲ್ಪ ದಿನ ಮೊದಲು ಅವರು ಮಾಂಸಾಹಾರವನ್ನು ತ್ಯಜಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯನ್ನಾಡುವಾಗ ಕೊಹ್ಲಿಗೆ ಕತ್ತು ನೋವು ಕಾಣಿಸಿಕೊಂಡಿತ್ತು. ಕತ್ತಿನಲ್ಲಿ ಕಾಣಿಸಿಕೊಂಡ ನೋವು ಕಿರುಬೆರಳಿನ ವರೆಗೂ ಸೆಳೆತವನ್ನುಂಟು ಮಾಡುತ್ತಿತ್ತು. ಇದರಿಂದ ಕೈಯಲ್ಲಿ ಜುಮ್ಮ್‌ ಎನ್ನುಂತಾಗುತ್ತಿತ್ತು. ಇದರಿಂದಾಗಿ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ. ನೋವನ್ನು ತಡೆಯಲಾಗದೆ ಒದ್ದಾಡುತ್ತಿದ್ದರು. ಈ ವಿಷಯವನ್ನು ವಿರಾಟ್‌ ಕೊಹ್ಲಿ ಅವರು ಇನ್‌ಸ್ಟಾಗ್ರಾಂನಲ್ಲಿ ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್‌ ಅವರೊಂದಿಗೆ ಹಂಚಿಕೊಂಡಿದ್ದರು.

ಪರೀಕ್ಷೆ ಮಾಡಿದಾಗ ಹೊಟ್ಟೆ ಮತ್ತು ದೇಹದ ತುಂಬೆಲ್ಲ ಆಮ್ಲೀಯ ಅಂಶ ಆವರಿಸಿರುವುದು ಬೆಳಕಿಗೆ ಬಂತು. ಇದು ಯೂರಿಕ್‌ ಆಸಿಡ್‌ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ. ಕ್ಯಾಲ್ಸಿಯಂ ಮತ್ತು ಮೆಗ್ನೇಷಿಯಂ ಗುಳಿಗೆಗಳನ್ನು ತಿಂದರೂ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಅದು ನಿಜವಾಗಿಯೂ ದೇಹಕ್ಕೆ ಸಾಕಾಗುತ್ತಿರಲಿಲ್ಲ. ಇದರಿಂದಾಗಿ ದೇಹವು ಮೂಳೆಯಿಂದ ಕ್ಯಾಲ್ಸಿಯಂನ್ನು ಹೀರಲು ಆರಂಭಿಸಿತು. ಇದರಿಂದ ಮೂಳೆಗಳು ದುರ್ಬಲವಾಗತೊಡಗಿದವು. ಇದಕ್ಕೆಲ್ಲ ಕಾರಣ ಸೇವಿಸುತ್ತಿರುವ ಆಹಾರ ಎಂದು ವೈದ್ಯರು ಹೇಳಿದ ನಂತರ, ಇಂಗ್ಲೆಂಡ್‌ ಪ್ರವಾಸದ ಮಧ್ಯದಲ್ಲಿಯೇ ಕೊಹ್ಲಿ ಮಾಂಸಾಹಾರ ಸೇವಿಸುವುದನ್ನು ತೊರೆದರು. ಅಲ್ಲಿಂದ ಇಲ್ಲಿಯವರೆಗೂ ಅವರಿಗೆ ದೇಹದಲ್ಲಿ ಯಾವುದೇ ಏರುಪೇರು ಕಾಣಿಸಲಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿ ದಿನಕ್ಕೆ ಮೂರು ಬಾರಿ ಗ್ರೀನ್‌ ಟೀ ಸೇವಿಸುತ್ತಾರೆ.

Related Articles