Saturday, July 27, 2024

ಆಲ್‌ ಈಸ್‌ ವೆಲ್‌… ಮಿರಾಕಲ್‌ ಮ್ಯಾಕ್ಸ್‌ವೆಲ್‌

ಮುಂಬಯಿ: ಇದು ಪದಗಳಿಗೆ ಸಿಲುಕದ ಒಂದು ಇನ್ನಿಂಗ್ಸ್‌ ಕತೆ…. ಇದು ಕ್ರಿಕೆಟ್‌ ಜಗತ್ತಿನ ಅದ್ಭುತ, 91 ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಪಂದ್ಯ ಸೋತೇ ಬಿಟ್ಟಿತು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌ ಎಂಬ ಧೈತ್ಯ ಪ್ರತಿಭೆ ಕಾಲು ನೋವನ್ನೂ ಸಹಿಸಿಕೊಂಡು 128 ಎಸೆತಗಳನ್ನೆದುರಿಸಿ, 21 ಬೌಂಡರಿ ಹಾಗೂ 10 ಸಿಕ್ಸರ್‌ ನೆರವಿನಿಂದ ಸ್ಫೋಟಕ 201* ರನ್‌ ಗಳಿಸಿ ಇನ್ನೂ 19 ಎಸೆತಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾಕ್ಕೆ ಗೌರವಯುತ 3 ವಿಕೆಟ್‌ ಜಯ ತಂದುಕೊಟ್ಟರು. ಮ್ಯಾಕ್ಸ್‌ವೆಲ್‌ ಹಾಗೂ ಕಮಿನ್ಸ್‌ ಅವರ 202ರನ್‌ ಜೊತೆಯಾಟದ ನೆರವಿನಿಂದ ಆಸೀಸ್‌ ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸಿತು. Glenn Maxwell and Pat Cummins created history Australia reaches Semi Final.

ತನ್ನ ಇನ್ನಿಂಗ್ಸ್‌ನ ನಡುವೆ ಮ್ಯಾಕ್ಸ್‌ವೆಲ್‌ ವಿವಿಯನ್‌ ರಿಚರ್ಡ್ಸ್‌, ಕಪಿಲ್‌ ದೇವ್‌, ಗ್ಯಾರಿ ಕರ್ಸ್ಟನ್‌, ಮಾರ್ಟಿನ್‌ ಗಪ್ಟಿಲ್‌, ಕ್ರಿಸ್‌ ಗೇಲ್‌ ಎಲ್ಲರನ್ನೂ ನೆನಪಿಸುವಂತೆ ಮಾಡಿದರು. 1983 ರಲ್ಲಿ ಕಪಿಲ್‌ ದೇವ್‌ ಸಿಡಿಸಿದ್ದ ಅಜೇಯ 175 ರನ್‌ ದಾಖಲೆ ವಾಂಖೆಡೆಯಲ್ಲಿ ಅಳಿಸಲ್ಪಟ್ಟಿತು. ಆಸೀಸ್‌ ಪರ ದ್ವಿಶತಕ ದಾಖಲಿಸಿದ ಮೊದಲ ಆಟಗಾರ ಹಾಗೂ ವಿಶ್ವಕಪ್‌ನಲ್ಲಿ ಮೂರನೇ ಆಟಗಾರ ಎನಿಸಿದರು. ಮಾರ್ಟಿನ್‌ ಗಪ್ಟಿಲ್‌ ಹಾಗೂ ಕ್ರಿಸ್ ಗೇಲ್‌ ವಿಶ್ವಕಪ್‌ನಲ್ಲಿ ದ್ವಿಶತಕ ದಾಖಲಿಸಿದ ಇತರ ಆಟಗಾರರು. ಒಬ್ಬ ಅಬ್ಬರದ ಆಟಗಾರನಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಸಾಥ್‌ ನೀಡಬೇಕು ಎಂಬುದನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌ ತೋರಿಸಿಕೊಟ್ಟರು. 68 ಎಸೆತಗಳನ್ನೆದುರಿಸಿ ಕೇವಲ ಒಂದು ಬೌಂಡರಿ ಮೂಲಕ ಕಮಿನ್ಸ್‌ ಗಳಿಸಿದ್ದು ಬರೇ 12 ರನ್‌ ಆಗಿದ್ದರೂ ಪಂದ್ಯ ಗೆಲ್ಲಿಸಿ ಕೊಡುವ ಆಟಗಾರನಿಗೆ ಜೊತೆಯಾಗಿ ವಿಕೆಟ್‌ ಉಳಿಸಿಕೊಂಡಿದ್ದು ಅವರ ತಾಳ್ಮೆಗೆ ದೊಡ್ಡ ಸಲಾಮ್‌.

8ನೇ ವಿಕೆಟ್‌ ಜೊತೆಯಾಟದಲ್ಲಿ ದಾಖಲಾದ 202 ರನ್‌ ಏಕದಿನದ ದಾಖಲೆಯನ್ನು ಮುರಿಯಿತು. ಆಂಡ್ರ್ಯು ಹಾಲ್‌ ಮತ್ತು ಜಸ್ಟಿನ್‌ ಕೆಂಪ್‌ 8ನೇ ವಿಕೆಟ್‌ ಜೊತೆಯಾಟದಲ್ಲಿ ಗಳಿಸಿದ್ದ 138 ರನ್‌ ಇದುವರೆಗಿನ ದಾಖಲೆಯಾಗಿತ್ತು. ಅಜೇಯ 201 ರನ್‌ ಗಳಿಸಿದ ಮ್ಯಾಕ್ಸ್‌ವೆಲ್‌ ಪ್ರಸಕ್ತ ವಿಶ್ವಕಪ್‌ನಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಬ್ರಾಹಿಂ ಜರ್ದಾನ್‌ (129) ಅವರ ಶತಕದ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತು. ಆಸ್ಟ್ರೇಲಿಯಾಕ್ಕೆ ಇದು ಸಧಾರಣ ಮೊತ್ತವಾಗಿದ್ದರೂ ಆಫ್ಘಾನಿನ ಬೌಲಿಂಗ್‌ ದಾಳಿಗೆ ತತ್ತರಿಸಿ 91 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿತ್ತು. ನಂತರದ್ದು ಮ್ಯಾಕ್ಸ್‌ವೆಲ್‌ ಮ್ಯಾಜಿಕ್‌. ಅಗತ್ಯವಿರುವ 202 ರನ್‌ಗಳನ್ನು ತಾನೊಬ್ಬನೇ ನಿಬಾಯಿಸಿರುವುದು ಕ್ರಿಕೆಟ್‌ ಜಗತ್ತಿನ ಅಚ್ಚರಿ. ನೋವನ್ನು ನುಂಗಿಕೊಂಡು ಸಿಕ್ಸರ್‌ ಬೌಂಡಿಗಳನ್ನು ಸವಿಯುತ್ತ ಮ್ಯಾಕ್ಸ್‌ ಇತಿಹಾಸ ಬರೆದರು. ಆಫಘಾನಿಸ್ತಾನ ಕೂಡ ಪಂದ್ಯದ ಹೈಲೈಟ್ಸ್‌ ಅನ್ನು ಅಂಗಣದಲ್ಲೇ ನೋಡಿತು. ವಿಶ್ವಕಪ್‌ನ ಆರಂಭದಲ್ಲಿ ಸೋಲಿನಿಂದ ಆತಂಕ ಎದುರಿಸಿದ್ದ ಆಸೀಸ್‌ ಈಗ  ಸೆಮಿಫೈನಲ್‌ ಪ್ರವೇಶಿಸಿತು.

Related Articles