Thursday, October 10, 2024

ಮಿನಿಜಿಪಿ ವಿಶ್ವಸರಣಿಗೆ, ಕರ್ನಾಟಕದ ಪುಟ್ಟ ಬಾಲಕಿ ಅನಸ್ತ್ಯ

ಸೋಮಶೇಖರ್‌ ಪಡುಕರೆ, ಬೆಂಗಳೂರು

ಮನೆಗೆ ತರುವ ಆಟಿಕೆಗಳನ್ನು ಮಕ್ಕಳು ಆಡುತ್ತಾರೆ, ಮತ್ತೆ ಮರೆಯುತ್ತಾರೆ. ರಿಮೋಟ್‌ ಕಾರಿರಲಿ, ಬ್ಯಾಟರಿಯಲ್ಲಿ ಓಡುವ ಬೈಕ್‌ ಇರಲಿ ಅದು ತಂದಾಗ ಇದ್ದ ಕುತೂಹಲ ದಿನ ಕಳೆದಂತೆ ಮಾಯವಾಗುತ್ತದೆ. ಆದರೆ ಬೆಂಗಳೂರಿನ ಪುಟ್ಟ ಬಾಲಕಿಯೊಬ್ಬಳು ಮನೆಗೆ ತಂದ ಪುಟ್ಟ ಬೈಕ್‌ನಲ್ಲಿ ಆಟವಾಡಿದಳು, ಆದರೆ ಅದೇ ರೀತಿಯ ಬೈಕನ್ನು ತಾನೂ ಚಲಾಯಿಸಿ ರಾಲಿಯಲ್ಲಿ ಪಾಲ್ಗೊಳ್ಳಬೇಕೆಂದು ಹಠ ಹಿಡಿದಳು. ಆ ಪುಟ್ಟ ಬಾಲಕಿಯ ಆ ಆಸಕ್ತಿಯೇ ಅವಳನ್ನು ಭಾರತದಲ್ಲಿ ಮೊದಲ ಬಾರಿಗೆ ನಡೆಯಲಿರುವ ಫೆಡರೇಷನ್‌ ಆಫ್‌ ಇಂಟರ್‌ನ್ಯಾಷನಲ್‌ ಮೋಟರ್‌ ಸ್ಪೋರ್ಟ್ಸ್‌ನ ಮಿನಿಜಿಪಿ ವಿಶ್ವ ಸರಣಿಗೆ (FIM MiniGP World Series India) ಆಯ್ಕೆ ಮಾಡಿತು.

ಆ ಪುಟ್ಟು ಚಾಂಪಿಯನ್‌ ಬೇರೆ ಯಾರೂ ಅಲ್ಲ, ಇಟಲಿಯ ಬೈಕ್‌ ಏರಿ ವಿಶ್ವ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸುವ 12ರ ಹರೆಯದ ಅನಸ್ತ್ಯ ಅಮೊಲ್‌ ಪಾಲ್‌.( Anastya Amol Pol) ಬೆಂಗಳೂರಿನ ಡೀನ್ಸ್‌ ಅಕಾಡೆಮಿ (Deens Academy, www.deensacademy.com) ನಲ್ಲಿ 7ನೇ ಗ್ರೇಡ್‌ನಲ್ಲಿ ಓದುತ್ತಿದ್ದಾರೆ. ಎಂಟನೇ ವಯಸ್ಸಿನಲ್ಲಿ ಮನೆಗೆ ತಂದ ಮಕ್ಕಳು ರೈಡ್‌ ಮಾಡುವ ಬೈಕ್‌ನಲ್ಲೇ ತರಬೇತಿ ಪಡೆದು ಒಂದು ದಿನ ತಂದೆಯಲ್ಲಿ ತನ್ನನ್ನು ಬೈಕ್‌ ರಾಲಿಗೆ ಸೇರಿಸುವಂತೆ ವಿನಂತಿ ಮಾಡಿಕೊಂಡಳು. ಮಗಳ ಆಸೆಯನ್ನು ಈಡೇರಿಸುವ ಸಲುವಾಗಿ ಅಮೋಲ್‌ ಪಾಲ್‌ ಮಗಳನ್ನು ಸಂತೋಷ್‌ ಅವರಲ್ಲಿ ತರಬೇತಿಗೆ ಕಳುಹಿಸಿದರು.

ಅನಸ್ತ್ಯ ಅಮೋಲ್‌, ಈಗಾಗಲೇ ನಾಸಿಕ್‌ನಲ್ಲಿ ನಡೆದ ಜೂನಿಯರ್‌ SX ನಲ್ಲಿ ಎಂಆರ್‌ಎಫ್  ಸೂಪರ್‌ ನ್ಯಾಷನಲ್‌ ಚಾಂಪಿಯನ್‌ಷಿಪ್‌ನಲ್ಲಿ (MRF Supercross National Championship, Nashik) ಮೂರನೇ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ್ದರು. 13 ರಿಂದ 14 ವರ್ಷ ವಯೋಮಿತಿಯಲ್ಲಿ ಅನಸ್ತ್ಯ ಸ್ಪರ್ಧಿಸಿದ್ದರು.

ಸಿ.ಎಸ್‌. ಸಂತೋಷ್‌ ಸ್ಫೂರ್ತಿ: ಭಾರತದ ನಂಬರ್‌ ಒನ್‌ ಮೋಟಾರ್‌ ರಾಲಿಪಟು ಕನ್ನಡಿಗ ಸಿ.ಎಸ್‌. ಸಂತೋಷ್‌ (CS Santosh)ಅವರಲ್ಲಿ ತರಬೇತಿ ಪಡೆಯುತ್ತಿರುವ ಅನಸ್ತ್ಯಗೆ ರಾಲಿಯಲ್ಲಿ ಸಂತೋಷ್‌ ಅವರೇ ಸ್ಫೂರ್ತಿ. ಸಂತೋಷ್‌ ಅವರು ಡಾಕರ್‌ ರಾಲಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕೋಲಾರದಲ್ಲಿ ಸಂತೋಷ್‌ ಅವರು ತಮ್ಮದೇ ಆದ ಓಟ್‌ ಡೋರ್‌ ಯಾಲಿ ಅಕಾಡೆಮಿಯನ್ನು ಹೊಂದಿದ್ದು ಅನಸ್ತ್ಯ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಿ.ಎಸ್.‌ ಸಂತೋಷ್‌ ಭಾರತ ಕಂಡ ಶ್ರೇಷ್ಠ ರಾಲಿಪಟುಗಳಲ್ಲಿ ಒಬ್ಬರು. ಗಾಯಗೊಂಡು ಸಾವು ಬದುಕಿನ ನಡುವೆಹೋರಾಡಿ, ಮತ್ತೆ ರಾಲಿ ಟ್ರ್ಯಾಕ್‌ಗೆ ಮರಳಿದ ದಿಟ್ಟ ಹೋರಾಟಗಾರ.

ಅಪಾಯದ ಕ್ರೀಡೆ: ಸಿ.ಎಸ್.‌ ಸಂತೋಷ್‌ ಅವರ ರಾಲಿ ಬದುಕನ್ನು ಅರಿತವರು ಈ ಬೈಕ್‌ ರಾಲಿ ಎಷ್ಟು ಅಪಾಯಕಾರಿ ಎಂಬುದು ಸ್ಪಷ್ಟವಾಗುತ್ತದೆ. ಈ ಕುರಿತು ಅನಸ್ತ್ಯ ಅವರ ತಂದೆ ಅಮೋಲ್‌ ಅವರನ್ನು ಪ್ರಶ್ನಿಸಿದಾಗ, “ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಇದ್ದರೇನೆ ಅವರು ಬದುಕಿನಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಯಶಸ್ಸು ಕಾಣುತ್ತಾರೆ. ನನ್ನ ಮಗಳಿಗೆ ರಾಲಿ ಎಂದರೆ ಪಂಚಪ್ರಾಣ. ಅಪಾಯದ ಬಗ್ಗೆ ಹೆಚ್ಚು ಯೋಚಿಸಬಾರದು. ಪ್ರತಿಯೊಂದು ಕ್ಷೇತ್ರದಲ್ಲೂ ಅಪಾಯ ಇದ್ದೇ ಇರುತ್ತದೆ. ಹೆದರಿಕೊಂಡಿದ್ದರೆ ಯಾವುದೇ ಸಾಧನೆ ಮಾಡಲಾಗದು,” ಎಂದು ಉತ್ತರಿಸಿದರು.

ಇಟಲಿ ನಿರ್ಮಿತ ಬೈಕ್‌: ಇಟಲಿಯ ಒಹ್ವಾಲೆ ಜಿಪಿ-೦160 ಮೆಷಿನರಿ ಮಿನಿ ಬೈಕ್‌ನಲ್ಲಿ (Ohvale GP-0 160 machinery (Mini bikes) ಸ್ಪರ್ಧಿಗಳು ಸ್ಪರ್ಧೆ ಮಾಡಲಿದ್ದಾರೆ. ಇದು ಮಿನಿ ಬೈಕ್‌ ಆಗಿದ್ದು, 150 ಸಿಸಿ ಸಾಮರ್ಥ್ಯ ಹೊಂದಿರುತ್ತದೆ.

ಪ್ರತಿಯೊಬ್ಬರ ಬೈಕ್‌ ಪಿರೆಲ್ಲಿ (Pirelli) ನಿರ್ಮಿತ ಗುಣಮಟ್ಟದ ಟೈರ್‌ ಹೊಂದಿರುತ್ತದೆ. ಇದು ಫಿಮ್‌ ಮಿನಿಜಿಪಿ ಸರಣಿಯ ಅಧಿಕೃತ ಗುಣಮಟ್ಟವಾಗಿರುತ್ತದೆ. ಅಂತಾರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್‌ನಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ. ಭಾರತದಲ್ಲಿ ಅಗ್ರ ಸ್ಥಾನ ಪಡೆದ ಇಬ್ಬರು ಸ್ಪೈನ್‌ನಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಫೈನಲ್‌ ರೇಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯುತ್ತಾರೆ.

ಒಟ್ಟು ಭಾರತ ಸೇರಿದಂತೆ 16 ರಾಷ್ಟ್ರಗಳು ಈ ವಿಶ್ವ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಭಾರತ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಇಂಡೋನೇಷ್ಯಾ, ಜಪಾನ್‌, ಕತಾರ್‌, ಫ್ರಾನ್ಸ್‌, ಐರ್ಲೆಂಡ್‌, ಇಟಲಿ, ಮಲೇಷ್ಯಾ, ನೆದರ್ಲೆಂಡ್ಸ್‌, ಉತ್ತರ ಅಮೆರಿಕ, ಪೋರ್ಚುಗಲ್‌, ಸ್ಪೇನ್‌, ಇಂಗ್ಲೆಂಡ್‌ ಮತ್ತು ಅಲ್ಪೆ-ಆಡ್ರಿಯಾ ದೇಶಗಳು ಪಾಲ್ಗೊಳ್ಳಲಿವೆ.

ಹೆಣ್ಣು ಮಕ್ಕಳು ಬೈಕ್‌ ರಾಲಿಯಂಥ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ವಿರಳ, ಅವರಿಗೆ ಆಸಕ್ತಿ ಇದ್ದರೂ ಹೆತ್ತವರು ತಮ್ಮ ಕಾಳಜಿಯಿಂದ ಅಪಾಯಕಾರಿ ಕ್ರೀಡೆಗಳಲ್ಲಿ ಭಾಗವಹಿಸಲು ಅನುವುಮಾಡಿಕೊಡುವುದಿಲ್ಲ, ಈ ಬಗ್ಗೆ ಮಾತನಾಡಿದ ಅನಸ್ತ್ಯ ಅವರ ತಂದೆ ಅಮೋಲ್‌ ಪಾಲ್‌, “ನಾನು ಮಗಳ ಆಸಕ್ತಿಗೆ ಹೆಚ್ಚು ಬೆಲೆ ಕೊಡುವವ, ಇದು ಅವಳು ಆಸಕ್ತಿಯಿಂದ ವಹಿಸಿಕೊಂಡ ಕ್ಷೇತ್ರ, ಕ್ರೀಡಾ ಜಗತ್ತಿನ ಯಾವುದೇ ಸವಾಲುಗಳನ್ನು ಎದುರಿಸಲು ಅಂಜಿಕೆ ಇರಬಾರದು. ಆಕೆ ಕೇವಲ ಬಾಲಕಿಯರೊಂದಿಗೆ ಸ್ಪರ್ಧಿಸುತ್ತಿಲ್ಲ, ಅಲ್ಲಿ ಹುಡುಗರೂ ಸ್ಪರ್ಧಿಸುತ್ತಿದ್ದಾರೆ. ಇದು ನಮ್ಮಲ್ಲಿರುವ ಸ್ಕಿಲ್‌ಗೆ ಸಂಬಂಧಿಸಿದ್ದು, ಹೇಗೆ ರೈಡ್‌ ಮಾಡುತ್ತೀ ಎಂಬುದೇ ಮುಖ್ಯ ಹೊರತು, ನೀವೆಷ್ಟು ಬಲಿಷ್ಠರಾಗಿದ್ದೀರಿ ಎಂಬುದು ಮುಖ್ಯವಲ್ಲ. ಆಕೆ ವಿಶ್ವ ಸರಣಿಗೆ ಆಯ್ಕೆಯಾಗಿರುವುದ ನಮ್ಮ ಹೆಮ್ಮೆ,” ಎಂದಿದ್ದಾರೆ. ಮೂಲತಃ ಮುಂಬಯಿಯವರಾದ ಅಮೋಲ್‌ ಅವರು ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿ ದುಡಿಯುತ್ತಿದ್ದಾರೆ.

ಅನಸ್ತ್ಯ ಓದುತ್ತಿರುವ ಡೀನ್ಸ್‌ ಅಕಾಡೆಮಿ (Deens Academy) ಕೂಡ ಆಕೆಯ ಸಾಹಸ ಕ್ರೀಡೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ಹೇಳಿದೆ.

Related Articles