Saturday, July 27, 2024

ಸ್ಕೇಟಿಂಗ್‌ ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಬೆಂಗಳೂರಿನಲ್ಲಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಒಂದು ಕ್ರೀಡಾ ಸಂಸ್ಥೆಯ ಜವಾಬ್ದಾರಿಯು ಆ ಕ್ರೀಡೆಯ ಬಗ್ಗೆ ಅರಿವಿರುವ ಸಮರ್ಥರಿಗೆ ಸಿಕ್ಕರೆ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆ ಉತ್ತಮ ಉದಾಹರಣೆ.

ಹಲವಾರು ಸ್ಕೇಟರ್‌ಗಳಿಗೆ ಪ್ರೋತ್ಸಾಹ ನೀಡಿದ ಇಂದೂಧರ ಸೀತಾರಾಮ್‌ ಅವರು ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಕಾರ್ಯದರ್ಶಿ ಆದಾಗಿನಿಂದ ರಾಜ್ಯದಲ್ಲಿ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಮಾತ್ರವಲ್ಲ, ಕರ್ನಾಟಕದ ಸ್ಕೇಟರ್‌ಗಳು ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಇಂದಿನಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭಗೊಳ್ಳಲಿರುವ ವಿಶ್ವ ಗೇಮ್ಸ್‌ನಲ್ಲಿ ಭಾರತದ ಶ್ರೇಷ್ಠ ಸ್ಕೇಟರ್‌ಗಳಾದ ಡಾ. ವರ್ಷಾ ಪುರಾಣಿಕ್‌ ಹಾಗೂ ಧನುಷ್‌ ಬಾಬು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ವನಿತೆಯ ವಿಭಾಗದಲ್ಲಿ ಡಾ. ವರ್ಷಾ ಭಾರತವನ್ನು ಪ್ರತಿನಿಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ, ಧನುಷ್‌ ಪುರುಷರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ ಮೊದಲ ಸ್ಪರ್ಧಿ ಎನಿಸಿದ್ದಾರೆ.

ದೇಶದ ಹೆಮ್ಮೆ

ಕರ್ನಾಟಕದ ಇಬ್ಬರು ಸ್ಕೇಟರ್‌ಗಳು ವಿಶ್ವ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಂದೂಧರ್‌ ಸೀತಾರಾಮ್‌ ಇದು ಕರ್ನಾಟಕ ಮಾತ್ರವಲ್ಲ ದೇಶದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ. “ಡಾ. ವರ್ಷಾ ಅವರು ಎರಡನೇ ಬಾರಿಗೆ ವಿಶ್ವ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಭಾರತದ ವೇಗದ ಸ್ಕೇಟರ್‌ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇರಶಕ್ಕೆ ಮೊದಲ ಪದಕ ತಂದಿತ್ತ ಧನುಷ್‌ ಬಾಬು ಪುರುಷರ ವಿಭಾಗದಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರೂ ಕರ್ನಾಟಕದ ಸ್ಪರ್ಧಿಗಳು ಎಂಬುದು ಹೆಮ್ಮೆಯ ಸಂಗತಿ. ಇಬ್ಬರಿಗೂ ಯಶಸ್ಸು ಸಿಗಲಿ, ಇಬ್ಬರೂ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ಸ್ಕೇಟಿಂಗ್‌ ಸಂಸ್ಥೆಯಿಂದ ಅಗತ್ಯವಿರು ಎಲ್ಲ ನೆರವನ್ನೂ ನೀಡಲಿದ್ದೇವೆ,” ಎಂದು ಶುಭ ಹಾರೈಸಿದ್ದಾರೆ.

ಸರಕಾರದಿಂದ ಎಲ್ಲ ರೀತಿಯ ಪ್ರೋತ್ಸಾಹ:

ಕರ್ನಾಟಕ ರಾಜ್ಯ ಸರಕಾರ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೋಲರ್‌ ಸ್ಕೇಟಿಂಗ್‌ಗೆ ಉತ್ತಮ ರೀತಿಯ ನೆರವನ್ನು ನೀಡುತ್ತಿದೆ ಎಂದು ಇಂದೂಧರ್‌ ಹೇಳಿದ್ದಾರೆ. “ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ ಕಾರ್ಯದರ್ಶಿಯಾಗಿ ಕಳೆದ ಐದು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯದ ಮುಖ್ಯಮಂತ್ರಿಗಳು, ಕ್ರೀಡಾ ಸಚಿವರು, ಶಾಸಕರು ಮತ್ತು ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಈ ಕ್ರೀಡೆಯ ಯಶಸ್ಸಿಗೆ ನೆರವಾಗುವಂತೆ ಕೇಳಿಕೊಂಡಿದ್ದೇನೆ. ಎಲ್ಲರೂ ಉತ್ತಮ ರೀತಿಯಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಕ್ರೀಡೆಯನ್ನು ರಾಜ್ಯದ ಇತರ ಜಿಲ್ಲೆಗಳಲ್ಲೂ ಹೆಚ್ಚು ಜನಪ್ರಿಯಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ,” ಎಂದರು.

ಅಂತಾರಾಷ್ಟ್ರೀಯ ಗುಣಮಟ್ಟದ 200ಮೀ. ರಿಂಕ್‌:

ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಸ್ಕೇಟಿಂಗ್‌ ರಿಂಕ್‌ಗಳ ಅಗತ್ಯ ಇದೆ. ಈ ಕಾರಣಕ್ಕಾಗಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಕ್ರೀಡಾಂಗಣದಲ್ಲಿರುವ 200 ಮೀ. ರಿಂಕ್‌ ಅನ್ನು ನವೀಕರಣಗೊಳಿಸಲಾಗುವುದು. ಸುಮಾರು 4ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಸಜ್ಜಾಗುತ್ತಿದ್ದು, ಅಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಿಂಕ್‌ ನಿರ್ಮಾಣವಾಗುತ್ತಿದೆ. ಕರ್ನಾಟಕದಲ್ಲಿರುವ ಕ್ರೀಡಾಪಟುಗಳಿಗೆ ಇದು ನಿಜವಾಗಿಯೂ ಸಂತಸ ಸುದ್ದಿ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಮಾತುಕತೆ ನಡೆಸಿ ಶಾಸಕರಾದ ರವಿ ಸುಬ್ರಹ್ಮಣ್ಯಮ್‌ ಅವರು ಈ ಕಾರ್ಯಕ್ಕೆ ನೆರವಾಗಿದ್ದಾರೆ. ಅವರು ಸ್ವ ಆಸಕ್ತಿ ತೆಗೆದುಕೊಂಡಿದ್ದರಿಂದ ಈ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ಸ್ಕೇಟಿಂಗ್‌ ಟ್ರ್ಯಾಕ್‌ನಿಂದ ಬೆಂಗಳೂರಿನ ಹೆಚ್ಚಿನ ಸ್ಕೇಟರ್‌ಗಳಿಗೆ ನೆರವಾಗುತ್ತದೆ. ಮಾತ್ರವಲ್ಲ ಹಲವಾರು ಟೂರ್ನಿಗಳನ್ನು ಇಲ್ಲಿ ನಡೆಸಲು ಸಾಧ್ಯವಾಗುತ್ತದೆ, ಮಾನ್ಯ ಶಾಸಕರಿಗೆ ರಾಜ್ಯ ಸ್ಕೇಟಿಂಗ್‌ ಸಂಸ್ಥೆ ಸದಾ ಚಿರಋಣಿಯಾಗಿರುತ್ತದೆ,” ಎಂದು ಇಂದೂಧರ್‌ ಹೇಳಿದರು.

ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್‌:

“ಚೆನ್ನಮ್ಮನ ಕೆರೆ ಕ್ರೀಡಾಂಗಣ ಐತಿಹಾಸಿಕ ಟೂರ್ನಿಕಯೊಂದಕ್ಕೆ ಸಾಕ್ಷಿಯಾಗಲಿದೆ. 60ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನ ಅತಿಥ್ಯವನ್ನು ಭಾರತೀಯ ರೋಲರ್‌ ಸ್ಕೇಟಿಂಗ್‌ ಫೆಡರೇಷನ್‌ ಕರ್ನಾಟಕಕ್ಕೆ ನೀಡಿದೆ. ಡಿಸೆಂಬರ್‌ 12 ರಿಂದ 22ರವರೆಗೆ ನೂತನ ಟ್ರ್ಯಾಕ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯಲಿದೆ. ಕರ್ನಾಟಕದಿಂದ ಸುಮಾರು 4500 ಸ್ಕೇಟರ್‌ಗಳು ಈ ಐತಿಹಾಸಿಕ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಒಂದು ರೀತಿಯಲ್ಲಿ ಮಿನಿ ಖೇಲೋ ಇಂಡಿಯಾ ರೀತಿಯಲ್ಲಿ ನಡೆಯಲಿದೆ,” ಎಂದು ಇಂದೂಧರ್‌ ತಿಳಿಸಿದರು.

ಸಾಧಕರಿಗೆ ಸನ್ಮಾನ: ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸುವುದಕ್ಕೆ ಮುನ್ನ ನೂತನ ರಿಂಕ್‌ ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ರಾಜ್ಯದ ಘನತೆವೆತ್ತ ಗವರ್ನರ್‌ ಥಾವರ್‌ ಚಾಂದ್‌ ಗೆಲೋಟ್‌, ಮುಖ್ಯಮಂತ್ರಿಗಳಾದ ಶ್ರೀ. ಬಸವರಾಜ್‌ ಬೊಮ್ಮಾಯಿ ಹಾಗೂ ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣ ಗೌಡ ಅವರು ಪಾಲ್ಗೊಳ್ಳಲಿದ್ದಾರೆ. ಜೊತೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಆಹ್ವಾನಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪ್ರದರ್ಶನ:

ಕರ್ನಾಟಕದ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ರೋಲರ್‌ ಸ್ಕೇಟಿಂಗ್‌ ಕ್ರೀಡೆಯ ಪ್ರದರ್ಶನ ನಡೆದಿತ್ತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರು ಹೆಚ್ಚು ಮುತುವರ್ಜಿ ವಹಿಸಿ ಸ್ಕೇಟಿಂಗ್‌ ಕ್ರೀಡೆಗೆ ಅವಕಾಶ ನೀಡಿರುವುದನ್ನು ಇಂದೂಧರ್‌ ಈ ಸಂದರ್ಭದಲ್ಲಿ ಸ್ಮರಿಸಿದರು.

ಇಂದೂಧರ್‌ ಸೀತಾರಾಮ್‌ ಅವರ ಪುತ್ರ ಮಿಹಿರ್‌ ಇಂದೂಧರ್‌ ಕೂಡ ಏಷ್ಯನ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಏಷ್ಯಾದಲ್ಲೇ ಅಗ್ರ ಐದನೇ ಸ್ಥಾನ ಗಳಿಸಿದವರು.

ಯೂಥ್‌ ಒಲಿಂಪಿಕ್ಸ್‌ನಲ್ಲಿ ರೋಲರ್‌ ಸ್ಕೇಟಿಂಗ್‌: ವರ್ಲ್ಡ್‌ ಗೇಮ್ಸ್‌ನಲ್ಲಿ ರೋಲರ್‌ ಸ್ಪೀಡ್‌ ಸ್ಕೇಟಿಂಗ್‌ ಇದ್ದರೂ ಇದುವರೆಗೂ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗಲಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಈ ಕ್ರೀಡೆಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಸಿಗುವುದು ಖಚಿತ. ಏಕೆಂದರೆ ಯೂಥ್‌ ಒಲಿಂಪಿಕ್ಸ್‌ನಲ್ಲಿ ರೋಲರ್‌ ಸ್ಕೇಟಿಂಗ್‌ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ. 2014ರಲ್ಲಿ  ನಾನ್ಜಿಂಗ್‌ನಲ್ಲಿ ಮೊದಲ ಬಾರಿಗೆ ರೋಲರ್‌ ಸ್ಪೀಡ್‌ ಸ್ಕೇಟಿಂಗ್‌ ಕ್ರೀಡೆಯನ್ನು ಪ್ರದರ್ಶಿಸಲಾಯಿತು. ನಂತರ 2018ರ ಬ್ಯೂನಸ್‌ ಐರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಯೂಥ್‌ ಗೇಮ್ಸ್‌ನಲ್ಲಿ ರೋಲರ್‌ ಸ್ಕೇಟಿಂಗ್‌ ಕ್ರೀಡೆಯನ್ನು ಸ್ಪರ್ಧೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಯಿತು. ಡಾಕರ್‌ನಲ್ಲಿ ನಡೆಯುವ 2026ರ ಯೂಥ್‌ ಒಲಿಂಪಿಕ್ಸ್‌ನಲ್ಲಿ ರೋಲರ್‌ ಸ್ಕೇಟಿಂಗ್‌ ಕ್ರೀಡೆ ಎಂದಿನಂತೆ ಸ್ಪರ್ಧೆಯಲ್ಲಿರುತ್ತದೆ.

Related Articles