ಸ್ಪೋರ್ಟ್ಸ್ ಮೇಲ್ ವರದಿ
ಈ ವರ್ಷದ ಕೊನೆಯಲ್ಲಿ ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ಗೆ ಒಲ್ಲೀ ಹೆಸರಿನ ಲಾಂಛನ ಬಿಡುಗಡೆ ಮಾಡಲಾಗಿದೆ.
ನಾಶವಾಗುತ್ತಿರುವ ವಿರಳ ಪ್ರಬೇಧದ ಆಮೆಯನ್ನು ಈ ಬಾರಿ ವಿಶ್ವಕಪ್‌ಗೆ ಲಾಂಛನವನ್ನಾಗಿ ಬಳಸಿಕೊಂಡಿರುವುದು ವಿಶೇಷ.

ಪುರಿಯ ಕಡಲ ಕಿನಾರೆಯಲ್ಲಿ ಲಾಂಛನ ಬಿಡುಗಡೆಗೊಳಿಸಲಾಗಿದೆ. ಇದುವರೆಗೆ ನಡೆದ ವಿಶ್ವಕಪ್‌ಗಳಲ್ಲಿ ಕಂಡು ಬಂದಿರುವ ಲಾಂಛನಗಳಗಿಂತ ಒಲ್ಲೀ ಅತ್ಯಂತ ಅದ್ಭುತವಾಗಿ ಕಂಡು ಬಂತು. ಕಡಲ ಕಿನಾರೆಯಲ್ಲಿ ಕಂಡು ಬಂದ ಈ ಪ್ರದರ್ಶನ ಹಾಕಿ ಅಭಿಮಾನಿಗಳು ಮಾತ್ರವಲ್ಲಿ ಪರಿಸರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು. ವಿಶ್ವಕಪ್ ಹಾಕಿ ಭುವನೇಶ್ವರದಲ್ಲಿ ನವೆಂಬರ್ 28ರಿಂದ ಆರಂಭಗೊಳ್ಳಲಿದೆ.

ಒಲಿವ್ ರೆಡಿಲೀ ಆಮೆ ಒಡಿಶಾದ ಕಡಲ ಕಿನಾರೆಯಲ್ಲಿ ಕಾಣ ಸಿಗುವ ವಿಶೇಷ ಪ್ರಬೇಧ. ಆದರೆ ಇದರ ಸಂತತಿ ಈಗ ನಾಶದ ಅಂಚಿನಲ್ಲಿದೆ. ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಒಲ್ಲೀಗೆ ಲಾಂಛನದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಡಿಸೆಂಬರ್ 16ರವರೆಗೆ ನಡೆಯಲಿರುವ ಚಾಂಪಿಯನ್‌ಷಿಪ್‌ನಲ್ಲಿ ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡು ಆಡಲಿ ಎಂಬ ಉದ್ದೇಶದಿಂದ ಒಲ್ಲೀಯನ್ನು ಲಾಂಛನವನ್ನಾಗಿ ಆಯ್ಕೆ ಮಾಡಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಎ.ಆರ್. ರೆಹಮಾನ್ ಹಾಡಿನ ಮೂಲಕ ಚಾಲನೆ ನೀಡಲಿದ್ದಾರೆ.
18 ದಿನಗಳ ಕಾಲ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ೧೬ ರಾಷ್ಟ್ರಗಳು ಸ್ಪರ್ಧಿಸಲಿವೆ. 2014ರ ಚಾಂಪಿಯನ್ ಪಟ್ಟ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆತಿಥೇಯ ಭಾರತ 1975ರಲ್ಲಿ ಪ್ರಶಸ್ತಿ ಗೆದ್ದಿರುವುದನ್ನು ಬಿಟ್ಟರೆ ಇದುವರೆಗೂ ಯಶಸ್ಸು ಕಂಡಿರಲಿಲ್ಲ.
ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ಇದೇ 18ರಿಂದ ಆರಂಭಗೊಳ್ಳಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಪಾಕಿಸ್ತಾನ, ಮಲೇಷ್ಯಾ ಹಾಗೂ ಕೊರಿಯಾ ರಾಷ್ಟ್ರಗಳ ನಡುವೆ ಹೋರಾಟ ನಡೆಸಲಿರುವ ಭಾರತ ತಂಡಕ್ಕೆ ಏಷ್ಯನ್ ಗೇಮ್ಸ್ ಪದಕ ಗೆದ್ದಿರುವ ಜಪಾನ್ ಜತೆ ಕಠಿಣ ಹೋರಾಟ ನಡೆಸಬೇಕಾದ ಅನಿವಾರ್ಯತೆ ಹೊಂದಿದೆ.
ಸರ್ದಾರ್ ಸಿಂಗ್ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಮನ್‌ಪ್ರೀತ್ ಸಿಂಗ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಚೆಂಗ್ಲೆನ್‌ಸನ್ನಾ ಸಿಂಗ್ ಅವರು ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ.