Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತದ ಗೋಲ್‌ಕೀಪರ್‌ ಹೆಜಮಾಡಿ ಕೋಡಿಯ ಸೂರಜ್‌ ಕರ್ಕೇರ

ಉಡುಪಿ: ಖ್ಯಾತ ಗೋಲ್‌ಕೀಪರ್‌ ಪಿ.ಆರ್. ಶ್ರೀಜೇಶ್‌ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್‌ ಸೂರಜ್‌ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ ತಂಡದ ಶಿಬಿರದಲ್ಲಿ ಪಾಲ್ಗೊಂಡಿರುವ ಸೂರಜ್‌ ಕರಾವಳಿಯಿಂದ ಭಾರತ ಹಾಕಿ ತಂಡವನ್ನು ತಲುಪಿರುವುದು ಅದೊಂದು ಸಾಹಸ ಗಾಥೆ. Mumbai born Udupi District Hejamadi Kodi Suraj Karkera shining at Indian Hockey Goalkeeping.

ಮುಂಬಯಿಯ ಯಶಸ್ಸಿಗೆ ಕನ್ನಡಿಗರ ಕೊಡುಗೆ ಅಪಾರವಾದುದು. ಅದು ಸಾಹಿತ್ಯ, ಕಲೆ, ಸಂಸ್ಕೃತಿ, ಉದ್ದಿವೆ, ಶಿಕ್ಷಣ ಮತ್ತು ಕ್ರೀಡೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಕನ್ನಡಿಗರು ತಮ್ಮದೇ ಆದ ಛಾಪವನ್ನು ಮೂಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಪಾಂಗಳ ಮೂಲದ ತನುಷ್‌ ಕೋಟ್ಯಾನ್‌ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಕರಳೆದ ವರ್ಷ ಮುಂಬಯಿ ರಣಜಿ ತಂಡ ಚಾಂಪಿಯನ್‌ ಪಟ್ಟ ಗೆಲ್ಲುವಲ್ಲಿ ತನುಷ್ ‌ಪಾತ್ರ ಪ್ರಮುಖವಾಗಿತ್ತು. ಅದೇ ರೀತಿಯಲ್ಲಿ ಸೂರಜ್‌ ಕರ್ಕೇರ ಭಾರತದ ಹಾಕಿ ತಂಡದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಈಗ ಕೃಷ್ಣ ಪಾಠಕ್‌ ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಆಗಿದ್ದರೂ ಜೂನಿಯರ್‌ ಹಂತದಲ್ಲಿ ಮಿಂಚಿ ಈಗ ಪ್ರಬುದ್ಧರೆನಿಸಿರುವ ಸೂರಜ್‌ ಕರ್ಕೇರ ಮುಂದಿನ ದಿನಗಳಲ್ಲಿ ಶ್ರೀಜೇಶ್‌ ಆವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಹೊಂದಿರುವ ಆಟಗಾರ. “ಆ ದಿನಗಳಿಗಾಗಿ ಕಾಯುತ್ತಿರುವೆ,ʼ ಎಂದಿದ್ದಾರೆ.

ಹಾಕಿ ಇಂಡಿಯಾ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಸೂರಜ್‌ ಕರ್ಕೇರ ಅವರು ಕೋರ್‌‌ ಟೀಮ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಹೆಜಮಾಡಿ ಕೋಡಿಯ ಹರಿಶ್ಚಂದ್ರ ಹಾಗೂ ಆಶಾಲತಾ ಕರ್ಕೇರ ಅವರ ಪುತ್ರರಾಗಿರುವ ಸೂರಜ್‌ ನಾಲ್ಕನೇ ವಯಸ್ಸಿನಿಂದಲೇ ಹಾಕಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಭಾರತ ಹಾಕಿ ತಂಡದ ನಾಯಕ ಹಾಗೂ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ರೀತಿಯಲ್ಲಿ ಉತ್ತಮ ಗೋಲ್‌ಕೀಪಿಂಗ್‌ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಮುಂಬಯಿಯ ಮಲಾಡ್‌ನಲ್ಲಿರುವ ಕನ್ನಡಿಗ ವಿ.ವಿ. ಭಟ್‌ ಅವರ ಚಿಲ್ಡ್ರನ್ಸ್‌ ಅಕಾಡೆಮಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿರುವ ಸೂರಜ್‌ ಚಿಕ್ಕಂದಿನಿಂದಲೇ ಹಾಕಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅಲ್ಲದೆ ಹಾಕಿ ಇಂಡಿಯಾ ಲೀಗ್‌ನಲ್ಲಿ ಉತ್ತರ ಪ್ರದೇಶ ವಿಜಾರ್ಡ್ಸ್ ಪರ ಆಡಿದ್ದ ಸೂರಜ್‌ ಕಂಚಿನ ಪದಕ ಗೆದ್ದಿರುವುದಲ್ಲದೆ, ಉತ್ತಮ ಗೋಲ್‌ಕೀಪರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಜೂನಿಯರ್‌ ಹಾಕಿ ತಂಡ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವಾಗ ಸೂರಜ್‌ ಅವರ ಆಟವನ್ನು ಗಮನಿಸಿದ ಪ್ರಧಾನ ಕೋಚ್‌ ರೊಲ್ಯಾಂಟ್‌ ಓಲ್ಟಮನ್ಸ್‌ ಆಗ 24 ವರ್ಷದ ಈ ಗೋಲ್‌ಕೀಪರ್‌ ಕಡೆಗೆ ಹೆಚ್ಚಿನ ಗಮನ ವಹಿಸಿದ್ದರು.

2005ರಿಂದ ರಾಷ್ಟ್ರೀಯ ಜೂನಿಯರ್‌ ತಂಡದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಸೂರಜ್‌, ಭಾರತದ ಪಾಲಿಗೆ ಹೆಮ್ಮೆಯ ಗೋಲ್‌ಕೀಪರ್‌ ಎನಿಸಿದ್ದು, ಜೂನಿಯರ್‌ ಏಷ್ಯಾಕಪ್‌ನಲ್ಲಿ. ಪಾಕಿಸ್ತಾನ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಸೂರಜ್‌ ಅವರ ಗೋಲ್‌ಕೀಪಿಂಗ್‌ ಕ್ಷಮತೆ ಪ್ರಮುಖ ಪಾತ್ರವಹಿಸಿತ್ತು. 2015ರಲ್ಲಿ ರಾಷ್ಟ್ರೀಯ ಕಿರಿಯರ ತಂಡಕ್ಕೆ ಆಯ್ಕೆಯಾದ ಸೂರಜ್‌, ಭಾರತ ತಂಡದಲ್ಲಿ ಹಲವಾರು ಪ್ರವಾಸಗಳನ್ನು ಮಾಡಿದ್ದಾರೆ. 2017ರಲ್ಲಿ ಭಾರತ ಕಿರಿಯರ ತಂಡ ಏಷ್ಯಾ ಕಪ್‌ ಗೆಲ್ಲುವಲ್ಲಿ ಸೂರಜ್‌ ಕರ್ಕೇರ ಅವರ ಗೋಲ್‌ಕೀಪಿಂಗ್‌ ಪ್ರಮುಖ ಪಾತ್ರವಹಿಸಿತ್ತು. 2021ರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು, ಇಲ್ಲಿ ಸೂರಜ್‌ ಉತ್ತಮ ಗೋಲ್‌ಕೀಪರ್‌ ಪ್ರಶಸ್ತಿಗೆ ಭಾಜನರಾದರು. 2024ರಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಚಿನ್ನದ ಪದಕ  ಗೆದ್ದಾಗಲೂ ಸೂರಜ್‌ ಭಾರತ ತಂಡದಲ್ಲಿದ್ದರು. ಮಸ್ಕತ್‌ನಲ್ಲಿ ನಡೆದ ಹಾಕಿ 5S ವಿಶ್ವಕಪ್‌ನಲ್ಲಿ ಭಾರತ ಐದನೇ ಸ್ಥಾನ ಗಳಿಸಿದಾಗಲೂ ಸೂರಜ್‌ ಬಾರತ ತಂಡದಲ್ಲಿದ್ದರು. 2023ರ 5S ಏಷ್ಯಾ ಕಪ್‌ನಲ್ಲಿ ಭಾರತ ತಂಡ ಚಿನ್ನದ ಪದಕ ಗೆಲ್ಲುವಲ್ಲಿಯೂ ಸೂರಜ್‌ ಅವರ ಪಾತ್ರ ಪ್ರಮುಖವಾಗಿತ್ತು. 2022ರಲ್ಲಿ ಜಕಾರ್ತದಲ್ಲಿ ನಡೆದ ಹೀರೋ ಏಷ್ಯಾ ಕಪ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದಾಗಲೂ ಸೂರಜ್‌ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಬೆಂಗಳೂರಿನಲ್ಲಿ sportsmail ಜೊತೆ ಮಾತನಾಡಿದ ಸೂರಜ್‌ ಕರ್ಕೇರ, “ ಭಾರತದಲ್ಲಿ ವೃತ್ತಿಪರ ಹಾಕಿಗೆ ಉತ್ತಮ ಬೇಡಿಕೆ ಇದೆ. ಹಾಕಿ ಇಂಡಿಯಾ ಲೀಗ್‌ ನಮ್ಮಲ್ಲಿರುವ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಅಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಿರಿಯರ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ. ಮಾಜಿ ಗೋಲ್‌ಕೀಪರ್‌ ಶ್ರೀಜೇಶ್‌ ಅವರ ಆದರ್ಶ ನಮ್ಮಂಥ ಆಟಗಾರರಿಗೆ ಆದರ್ಶವಾಗಲಿದೆ,ʼ ಎಂದಿದ್ದಾರೆ.

ಫಾರವರ್ಡ್‌ ಆಟಗಾರ ಗೋಲ್‌ಕೀಪರ್‌ ಆದ ಕತೆ:

ಆರಂಭದಲ್ಲಿ ಸೂರಜ್‌ ಫಾರ್ವರ್ಡ್‌ ಆಟಗಾರರಾಗಿದ್ದರು. ಆದರೆ ಎತ್ತರವನ್ನು ನೋಡಿ ಕೋಚ್‌ ಗೋಲ್‌ಕೀಪಿಂಗ್‌ಗೆ ಸೂಕ್ತ ಎಂದು ಸೂಚಿಸಿದರು. ಸೂರಜ್‌ ಕರ್ಕೇರ ಅವರ ಹಾಕಿ ಬದುಕಿನ ಬಗ್ಗೆ ತಂದೆ ಹರಿಶ್ಚಂದ್ರ ಕರ್ಕೇರ ಮಾತನಾಡಿ, “ಮುಂಬಯಿಯಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಬೇಡಿಕೆ. ಹುಡುಗರೆಲ್ಲ ಕ್ರಿಕೆಟ್‌ ಬ್ಯಾಟ್‌ ಹಿಡಿದು ಅಂಗಳಕ್ಕೆ ಹೋಗುತ್ತಿರುವಾಗ ಸೂರಜ್‌ ಹಾಕಿ ಸ್ಟಿಕ್‌ ಹಿಡಿದು ಬೇರೆ ಮಾರ್ಗ ಹಿಡಿದ.  ಈಗ ಆತನ ಆಯ್ಕೆ ಸೂಕ್ತವಾಗಿಯೇ ಇತ್ತು ಎಂದು ಅನಿಸುತ್ತಿದೆ. ಗೋಲ್‌ಕೀಪರ್‌ ಅವಕಾಶ ನೀಡಿದಾಗ ಮೊದಲು ಬೇಸರಗೊಂಡಿದ್ದ, ಆದರೆ ಅದರಲ್ಲೇ ಬದುಕನ್ನು ಕಟ್ಟಿಕೊಂಡಿರುವುದಕ್ಕೆ ಈಗ ಖುಷಿಯಾಗಿದೆ,” ಎಂದಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.