Saturday, February 24, 2024

ರಾಷ್ಟ್ರೀಯ ದಾಖಲೆ ಬರೆದ ಕನ್ನಡಿಗ ಹೇಮಂತ್‌ ಮುದ್ದಪ್ಪ!!

sportsmail:

ಡ್ರ್ಯಾಗ್‌ ರೇಸಿಂಗ್‌ನಲ್ಲಿ ಏಳು ಬಾರಿ ರಾಷ್ಟ್ರೀಯ ಚಾಂಪಿಯನ್‌ಪಟ್ಟ ಗೆದ್ದಿರುವ ಕೊಡಗಿನ ರೇಸರ್‌ ಹೇಮಂತ್‌ ಮುದ್ದಪ್ಪ ಗಂಟೆಗೆ 248 ಕಿ.ಮೀ. ವೇಗದಲ್ಲಿ ಬೈಕ್‌ ಚಲಾಯಿಸಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.

ಅಂಬೆ ವ್ಯಾಲಿಯಲ್ಲಿ ನಡೆದ ದಿ ವ್ಯಾಲಿ ರನ್‌ ಡ್ರ್ಯಾಗ್‌ ರೇಸ್‌ನಲ್ಲಿ ಬೆಂಗಳೂರಿನ ಮಂತ್ರಾ ರೇಸಿಂಗ್‌ ತಂಡದ ಸದಸ್ಯ ಕೊಡಗಿನ ಹೇಮಂತ್‌ ಮುದ್ದಪ್ಪ ಕಳೆದ ವರ್ಷ ಆಂಧ್ರಪ್ರದೇಶದ ಸತ್ಯನಾರಾರಣ ರಾಜು ಅವರ ರಾಷ್ಟ್ರೀಯ ದಾಖಲೆಯನ್ನು ಮುರಿದು ನೂತನ ದಾಖಲೆ ಬರೆದರು, ಈ ರಾಲಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

31ವರ್ಷದ ಹೇಮಂತ್‌ ಮುದ್ದಪ್ಪ 9.508 ಸೆಕೆಂಡುಗಳಲ್ಲಿ ಗುರಿ ತಲುಪಿ, ಕಳೆದ ವರ್ಷ ಆಂಧ್ರಪ್ರದೇಶದ ಸತ್ಯನಾರಾಯಣ ರಾಜು ಅವರು 9.522 ಸೆಕೆಂಡುಗಳಲ್ಲಿ ಗುರಿ ತಲುಪಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು.ಎರಡನೇ ರೇಸ್‌ನಲ್ಲಿ 9.684ಸೆಕೆಂಡುಗಳಲ್ಲಿ ಗುರಿ ತಲುಪಿದ ಮುದ್ದಪ್ಪ ಎರಡನೇ ಚಿನ್ನದ ಪದಕ ಗೆದ್ದುಕೊಂಡರು. ಬ್ಲ್ಯಾಕ್‌ ಸುಜುಕಿ ಹಯಾಬುಜಾದಲ್ಲಿ ಸ್ಪರ್ಧಿಸಿದ್ದ ಹೇಮಂತ್‌ ಮುದ್ದಪ್ಪ ಅವರೊಂದಿಗೆ ಬೆಂಗಳೂರಿನ ವಿಘ್ನೇಶ್‌ ಪುರುಷೋತ್ತಮ್‌ ಮತ್ತು ಹಫೀಝ್‌ ಉಲ್ಲಾಖಾನ್‌ ಅವರು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸುವುದರೊಂದಿಗೆ ಮೂರೂ ಸ್ಥಾನಗಳನ್ನೂ ಬೆಂಗಳೂರಿನ ಸವಾರರೇ ಗೆದ್ದಂತಾಗಿದೆ.

“ಕಠಿಣವಾದ ಪರಿಶ್ರಮ ಮತ್ತು ಸಿದ್ಧತೆಯಿಂದ ಈ ರೀತಿಯಲ್ಲಿ ಯಶಸ್ಸು ಕಾಣಲು ಸಾಧ್ಯ. ಇದು ಅಂತಾರಾಷ್ಟ್ರೀಯ ಗುಣಮಟ್ಟದ ಟ್ರ್ಯಾಕ್.‌ ಇಲ್ಲಿ ಯಶಸ್ಸು ಕಂಡಿರುವುದು ಖುಷಿಕೊಟ್ಟಿದೆ. ಅಲ್ಲದೆ ನೂತನ ದಾಖಲೆ ಬರೆದಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಉತ್ತಮ ರೀತಿಯಲ್ಲಿ ಬೈಕ್‌ ಸಿದ್ಧಗೊಳಿಸಿದ ಮಂತ್ರ ರೇಸಿಂಗ್‌ನ ಶರಣ್‌ ಅವರಿಗೆ ನಾನು ಚಿರಋಣಿಯಾಗಿದ್ದೇನೆ,” ಎಂದು ಚಾಂಪಿಯನ್‌ ಹೇಮಂತ್‌ ಮುದ್ದಪ್ಪ ಹೇಳಿದರು.

Related Articles