ಚೆನ್ನೈ: ಭಾರತೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ಗಳ ಸಂಘಟನೆ (ಎಫ್‌ಎಂಎಸ್‌ಸಿಐ) ನೀಡುವ ವಾರ್ಷಿಕ ಪ್ರಶಸ್ತಿಯಲ್ಲಿ ಕನ್ನಡಿಗ ಕೊಡಗಿನ ಹೇಮಂತ್ ಮುದ್ದಪ್ಪ ಎರಡು ಬೆಸ್ಟ್ ರೈಡರ್ ಪ್ರಶಸ್ತಿ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಮಂತ್ರ ರೇಸಿಂಗ್ ತಂಡವನ್ನು ಪ್ರತಿನಿಧಿಸುತ್ತಿರುವ ಮುದ್ದಪ್ಪ 2021ನೇ ಸಾಲಿನ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್ ಚಾಂಪಿಯನ್‌ಷಿಪ್‌ನ 4 ಸ್ಟ್ರೋಕ್ 851cc ಯಿಂದ 1050 cc ವರೆಗಿನ ವಿಭಾಗದಲ್ಲಿ ಚಾಂಪಿಯನ್ ರೈಡರ್ ವಿಭಾಗದಲ್ಲಿ ಎರಡು ಪ್ರಶಸ್ತಿ ಗೆದ್ದಿದ್ದಾರೆ. ಡ್ರ್ಯಾಗ್ ರೇಸಿಂಗ್ ಚಾಂಪಿಯನ್ ಟೀಮ್ ವಿಭಾಗದಲ್ಲಿ ಮಂತ್ರ ರೇಸಿಂಗ್ ತಂಡ ಪ್ರಶಸ್ತಿ ಗೆದ್ದುಕೊಂಡಿದ್ದು ಈ ಪ್ರಶಸ್ತಿ ಗೆಲ್ಲುವಲ್ಲಿಯೂ ಹೇಮಂತ್ ಮುದ್ದಪ್ಪ ಅವರ ಪಾತ್ರ ಪ್ರಮುಖವಾಗಿತ್ತು.
ಅಪಘಾತದಿಂದ ಚೇತರಿಸಿ ಚಾಂಪಿಯನ್ ಆದ ಹೇಮಂತ್: ಹೇಮಂತ್ ವೃತ್ತಿಪರ ರೇಸಿಂಗ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ರಸ್ತೆ ಅಪಘಾತಕ್ಕೊಳಗಾಗಿ ಜೀವನ್ಮರಣದ ನಡುವೆ ಹೋರಾಟ ಮಾಡಿದ್ದರು. ಹಲವು ತಿಂಗಳ ಕಾಲ ಕೋಮಾದಲ್ಲೇ ಇದ್ದರು. ಆದರೂ ಛಲವನ್ನು ಬಿಡದೆ ರೇಸಿಂಗ್‌ನಲ್ಲಿ ಪಾಲ್ಗೊಂಡು ದೇಶದ ಉತ್ತಮ ಡ್ರ್ಯಾಗ್ ರೇಸರ್ ಆಗಿ ಮೂಡಿಬಂದರು.
ಭಾರತಕ್ಕೆ ಜಾಗತಿಕ ಮಟ್ಟದ ಮೋಟೋ ಸ್ಪೋರ್ಟ್ಸ್: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಫ್‌ಎಂಎಸ್‌ಸಿಐ ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಅವರು ಭಾರತಕ್ಕೆ ಮೋಟೋಜಿಪಿ ಹಾಗೂ ಫಾರ್ಮುಲಾ -ಇ ವಿಶ್ವ ಚಾಂಪಿಯನ್‌ಷಿಪ್ ತರುವ ಯೋಜನೆ ಇದೆ ಎಂದು ಹೇಳಿದ್ದಾರೆ. ಈ ಕುರಿತು ಉನ್ನತ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.
ಸೆಪ್ಟಂಬರ್‌ನಲ್ಲಿ ನಡೆಯಲಿರುವ 17-26 ವರ್ಷ ವಯೋಮಿತಿಯ ಎಫ್‌ಐಎ ವಿಶ್ವ ರಾಲಿ ಸ್ಟಾರ್‌ಗೆ ಚೆನ್ನೈ ಆತಿಥ್ಯ ವಹಿಸಲಿದೆ ಎಂದು ಅಬ್ರಾಹಂ ಈ ಸಂದರ್ಭದಲ್ಲಿ ನುಡಿದರು. ಇದನ್ನು ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಅಯೋಜಿಸಲಿದೆ ಎಂದರು. 2021ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಿದ ಬಳಿಕ ಅವರು ಈ ವಿಷಯವನ್ನು ತಿಳಿಸಿದರು.
“ಮೋಟೋಜಿಪಿ ಹಾಗೂ ಫಾರ್ಮುಲಾ-ಇಯ ಯಾವುದಾದರೂ ಒಂದು ಸುತ್ತಿನ ರಾಲಿಯನ್ನು ಭಾರತದಲ್ಲಿ ನಡೆಸಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಫಾರ್ಮುಲಾ-ಇ ಸ್ಟ್ರೀಟ್ ಸರ್ಕ್ಯುಟ್ ಹೈದರಾಬಾದ್‌ನಲ್ಲಿ ನಡೆಸುವ ಸಾಧ್ಯತೆ ಇದೆ,” ಎಂದರು.
ಎಫ್‌ಐಎ ರಾಲಿ ಸ್ಟಾರ್ ದೇಶದ ಯುವ ರಾಲಿ ಪಟುಗಳಿಗೆ ವಿಶ್ವ ರಾಲಿಯಲ್ಲಿ ಪಾಲ್ಗೊಳ್ಳಲು ಉತ್ತಮ ವೇದಿಕೆಯಾಗಲಿದೆ.
“10 ರಿಂದ 14 ವರ್ಷ ವಯೋಮಿತಿಯವರಿಗೆ ಮೀಸಲಾಗಿರುವ ವಿಶ್ವ ಮಿನಿಜಿಪಿ ಮೂಲಕ ಭಾರತವು ಎಫ್‌ಐಎಂನ ಮೋಟೋಜಿಪಿಯೊಂದಿಗೆ ಕೈ ಜೋಡಿಸಲಿದೆ. ಈ ಕಾರ್ಯಕ್ರಮದಲ್ಲಿ ಡೋರ್ನಾ ಸ್ಪೋರ್ಟ್ಸ್ ಮತ್ತು ಇಟಲಿ ಬೈಕ್ ತಯಾರಕರಾದ ಒಹ್ವಾಲೆ ಸಕ್ರಿಯವಾಗಿದ್ದಾರೆ. ಈ ವರ್ಷದ ಜುಲೈನಲ್ಲಿ ಮೊದಲ ಐದು ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಭಾರತದ ಸರಣಿಗಳು ಮುಗಿದ ಮೇಲೆ ಸ್ಪೇನ್‌ನಲ್ಲಿ ನಡೆಯಲಿರುವ ವಿಶ್ವ ಫೈನಲ್ಸ್‌ನಲ್ಲಿ ಭಾರತದ ಇಬ್ಬರು ಅಗ್ರ ರೈಡರ್‌ಗಳು ಅರ್ಹತೆ ಪಡೆಯಲಿದ್ದಾರೆ,” ಎಂದು ಅಬ್ರಾಹಂ ತಿಳಿಸಿದರು.
ಸಾಂಕ್ರಮಿಕ ರೋಗದ ನಡುವೆಯೂ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಿಭಾಗಗಳಲ್ಲಿ ವರ್ಷಕ್ಕೆ ಒಂಬತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸುವ ಜಗತ್ತಿನ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸೇರಿದೆ. ಈ ಯಶಸ್ಸಿನಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ಇಬ್ರಾಹಿಂ ಎಫ್‌ಎಂಎಸ್‌ಸಿಐ ಪರವಾಗಿ ಧನ್ಯವಾದ ಹೇಳಿದರು. ಎಫ್‌ಎಂಎಸ್‌ಸಿಐ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
ವನಿತೆಯರ ವಿಭಾಗದಲ್ಲಿ ಐಶ್ವರ್ಯ ಪಿಸ್ಸೆ ಚಾಂಪಿಯನ್ ಮಹಿಳಾ ರೈಡರ್ ಪ್ರಶಸ್ತಿಗೆ ಭಾಜನರಾದರು.