Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಾಧನೆ ಮಾಡಿದ ದಿವ್ಯಾಂಗ ಕ್ರೀಡಾಪಟುವನ್ನೇ ವರ್ಗಾಯಿಸಿದ ಸರಕಾರ

ಬೆಂಗಳೂರು: ನೈಜೀರಿಯಾದಲ್ಲಿ ನಡೆದ ಕಾಮನ್‌ವೆಲ್ತ್‌ ಪ್ಯಾರಾ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಆರೋಗ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಅವರು ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ವಿಷಯ ಕರ್ನಾಟಕ ಆರೋಗ್ಯ ಇಲಾಖೆಗೆ ಗೊತ್ತಾದಂತಿಲ್ಲ. ಒಂದು ವೇಳೆ ಗೊತ್ತಿರುತ್ತಿದ್ದರೆ ರಾಜ್ಯ ಔಷಧ ನಿಯಂತ್ರಣ ಘಟಕದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಅವರನ್ನು ಮಾನವೀಯತೆ ಮರೆತು ದೂರದ ಬಳ್ಳಾರಿಗೆ ವರ್ಗಾವಣೆ ಮಾಡುತ್ತಿರಲಿಲ್ಲ. Has the Karnataka Health Department forgotten humanity by transferring international medal-winning para-fencer Raghavendra to Bellary?

ಈ ಹಿಂದೆ 2022ರಲ್ಲಿ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಈಗ ಚಿನ್ನದ ಸಾಧನೆ ಮಾಡಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ರಾಜ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್‌ ಅವರು ರಾಘವೇಂದ್ರ ಅವರ ನೋವಿಗೆ ಸ್ಪಂದಿಸಬೇಕು.

ಪದಕ ಗೆದ್ದಿರುವುದಕ್ಕೆ ಬಳ್ಳಾರಿಗೆ ಟ್ರಾನ್ಸ್ಫರ್‌!:

ಪದಕ ಗೆದ್ದವರಿಗೆ ಕರ್ನಾಟಕ ಸರಕಾರ ಉದ್ಯೋಗ ನೀಡುತ್ತಿದೆ. ನಗದು ಬಹುಮಾನ ಕೊಡುತ್ತಿದೆ. ಉದ್ಯೋಗದಲ್ಲಿದ್ದವರಿಗೆ ಭಡ್ತಿ ನೀಡುತ್ತದೆ.  ಆದರೆ ಪದಕ ಗೆದ್ದ ಒಬ್ಬ ಇಲಾಖೆಯ ದಿವ್ಯಾಂಗ ಉದ್ಯೋಗಿಯನ್ನು ದೂರದ ಊರಿಗೆ ವರ್ಗಾವಣೆ ಮಾಡಿರುವುದು ಆರೋಗ್ಯ ಇಲಾಖೆಯ ಅನಾರೋಗ್ಯ ನಿರ್ಧಾರವೇ ಸರಿ.

ರಾಘವೇಂದ್ರ ಅವರ ಸಾಧನೆಯ ಬಗ್ಗೆ ಆರೋಗ್ಯ ಇಲಾಖೆಯ ಔಷಧ ನಿಯಂತ್ರಣ ವಿಭಾಗಕ್ಕೆ ಇನ್ನೂ ಗೊತ್ತಾದಂತಿಲ್ಲ. ಒಂದು ವೇಳೆ ಗೊತ್ತಾಗಿರುತ್ತಿದ್ದರೆ ಒಬ್ಬ ದಿವ್ಯಾಂಗ ಕ್ರೀಡಾ ಸಾಧಕನನ್ನು ದೂರದ ಬಳ್ಳಾರಿಗೆ ವರ್ಗಾವಣೆ ಮಾಡುತ್ತಿರಲಿಲ್ಲ. ಶಿಕ್ಷಣ ನಮಗೆ ಅರಿವನ್ನು ನೀಡುತ್ತದೆ. ಆದರೆ ಅಜ್ಞಾನಿಯನ್ನಾಗಿ ಮಾಡುವುದಿಲ್ಲ. ಐತಿಹಾಸಿಕ ಚಿನ್ನ ಗೆದ್ದ ದಿವ್ಯಾಂಗ ಕ್ರೀಡಾಪಟುವನ್ನು ದೂರದ ಬಳ್ಳಾರಿಗೆ ವರ್ಗಾವಣೆ ಮಾಡಿದ ಅಧಿಕಾರಿ ಪದವಿ ಗಳಿಸಿರುವುದು ನಿಜ, ಆದರೆ ಅರಿವು, ಮಾನವೀಯತೆ ಮತ್ತು ಜ್ಞಾನ ಇವುಗಳ ಕೊರತೆ ಇದ್ದಿರುವುದು ಸಹಜ.

ರಾಘವೇಂದ್ರ ಅವರು ಕಳೆದ ವಾರ ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಪ್ಯಾರಾ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಹಿಂದೆಯೂ ಅವರು ಜಾಗತಿಕ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮೊದಲು ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಈಗ ಫೆನ್ಸಿಂಗ್‌ನಲ್ಲಿ ಸಾಧನೆ ಮುಂದುವರಿಸಿದ್ದಾರೆ. 2018ರಲ್ಲಿ ದುಬೈನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿಯ ಸಾಧನೆ ಮಾಡಿದ್ದಾರೆ. 2022ರಲ್ಲಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಹಾಗೂ ತಂಡದಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದಾರೆ. ಲಾನ್‌ಬೌಲ್‌ನಲ್ಲೂ ಸ್ಪರ್ಧಿಸಿದ್ದ ರಾಘವೇಂದ್ರ ಮಲೇಷ್ಯಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ  ಬೆಳ್ಳಿ ಪದಕ ಗೆದ್ದಿದ್ದಾರೆ.

ದಿವ್ಯಾಂಗರನ್ನು ವರ್ಗಾವಣೆ ಮಾಡಬಹುದೇ?

ದಿವ್ಯಾಂಗರನ್ನು ಅವರ ಅನುಕೂಲಕ್ಕೆ ತಕ್ಕಂತೆ ವರ್ಗಾವಣೆ ಮಾಡಬೇಕು. ಅವರು ನೆಲೆಸಿರುವ ಪ್ರದೇಶದ ಹಸುತ್ತಮುತ್ತ ವರ್ಗಾವಣೆ ಮಾಡಬಹುದು. ಆದರೆ ನೂರಾರು ಕಿಲೋ ಮೀಟರ್‌ ದೂರಕ್ಕೆ ವರ್ಗಾವಣೆ ಮಾಡುವಂತಿಲ್ಲ. ರಾಘವೇಂದ್ರ ಅವರನ್ನು ಬೆಂಗಳೂರಿನ ಕೆಆರ್‌ಸರ್ಕಲ್‌ ಹತ್ತಿರದ ಕಚೇರಿಯಿಂದ ಬಳ್ಳಾರಿಗೆ ವರ್ಗವಾಣೆ ಮಾಡಲಾಗಿದೆ. ಇದರಿಂದಾಗಿ ಅವರ ಕ್ರೀಡಾ ತರಬೇತಿಗೆ ಅಡ್ಡಿಯಾಗಿದೆ. ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ತಂಡವಿಭಾಗದಲ್ಲಿ ಚಿನ್ನ ಗೆದ್ದರು, ಆದರೆ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಸಿಗಲಿಲ್ಲ. ಕಾರಣ ಅಭ್ಯಾಸದ ಕೊರತೆ. ಬಳ್ಳಾರಿಯಲ್ಲಿ ಅಭ್ಯಾಸ ಮಾಡಲು ಅಗತ್ಯವಾದ ಸೌಕರ್ಯಗಳಿಲ್ಲ. ಇದರಿಂದಾಗಿ ಉತ್ತವಾಗಿ ಅಭ್ಯಾಸ ಮಾಡಲಾಗದ ಕಾರಣ ಏಷ್ಯನ್‌ ಗೇಮ್ಸ್‌ಗೆ ಅಹರ್ತೆ ಪಡೆಯಲಾಗಲಿಲ್ಲ ಎಂದು ರಾಘವೇಂದ್ರ ನೋವನ್ನು ವ್ಯಕ್ತಪಡಿಸಿದ್ದಾರೆ.

ಶುಭ ಕೋರಿ ಪ್ರೋತ್ಸಾಹಿಸಿದ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ದಿವ್ಯಾಂಗರ ಕ್ರೀಡಾ ಸಂಸ್ಥೆಗೆ ರಾಘವೇಂದ್ರ ಅವರ ಧನ್ಯವಾದ ಸಲ್ಲಿಸಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.