Friday, December 13, 2024

ಅಖಿಲ ಭಾರತ ಬಾಸ್ಕೆಟ್‌ಬಾಲ್

ವಿಜಯ ಬ್ಯಾಂಕ್ ಶುಭಾರಂಭ

ಸ್ಪೋರ್ಟ್ಸ್ ಮೇಲ್ ವರದಿ

೫ನೇ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಬುಧವಾರ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಆತಿಥೇಯ ವಿಜಯ ಬ್ಯಾಂಕ್ ತಂಡ ಜಯದೊಂದಿಗೆ ಶುಭಾರಂಭ  ಕಂಡಿದೆ.

ಭಾರತದ ಪ್ರಮುಖ ಬಾಸ್ಕೆಟ್‌ಬಾಲ್ ಆಟಗಾರರಿಂದ ಕೂಡಿರುವ ವಿಜಯ ಬ್ಯಾಂಕ್, ಇಂಡಿಯನ್ ಕಸ್ಟಮ್ಸ್, ಇಂಡಿಯನ್ ನೇವಿ ಮತ್ತು ಆದಾಯ ತೆರಿಗೆ ತಂಡಗಳು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬೀಗಲ್ಸ್ ಒಳಾಂಗಣ ಬಾಸ್ಕೆಟ್‌ಬಾಲ್ ಅಂಗಣದಲ್ಲಿ ಪಂದ್ಯಗಳು ನಡೆಯುತ್ತಿವೆ. ಚಾಂಪಿಯನ್ ತಂಡಕ್ಕೆ ೧ ಲಕ್ಷ, ರನ್ನರ್ ಅಪ್‌ಗೆ ೫೦ ಸಾವಿರ, ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ೨೫ ಹಾಗೂ ೧೦ ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ಪಡೆಯಲಿವೆ.

ಉದ್ಘಾಟನೆ

ವಿಜಯ ಬ್ಯಾಂಕ್‌ನ ಹಲವಾರು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಂಡಿದ್ದ ಉದ್ಘಾಟನಾ ಸಮಾರಂಭದಲ್ಲಿ ಮಲ್ಲೇಶ್ವಂ ಶಾಸಕ ಡಾ. ಸಿ.ಎ. ಅಶ್ವತ್ಥನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಜಯ ಬ್ಯಾಂಕ್‌ನ ಎಂ.ಡಿ. ಹಾಗೂ ಸಿಇಒ ಆರ್.ಎ. ಶಂಕರನಾರಾಯಣ ಮತ್ತು ಎಕ್ಸಿಕ್ಯುಟಿವ್ ಡೈರೆಕ್ಟರ್ ವೈ. ನಾಗೇಶ್ವರ ರಾವ್ ಹಾಗೂ ಹಲವು ಜನರಲ್ ಮ್ಯಾನೇಜರ್‌ಗಳು ಪಾಲ್ಗೊಂಡಿದ್ದರು.
ಏಳು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಟೂರ್ನಿ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಗುಂಪಿನ ಎರಡು ಅಗ್ರ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ವಿಜಯ ಬ್ಯಾಂಕ್‌ಗೆ ಜಯ

ದಿನದ ಮೊದಲ ಪಂದ್ಯದಲ್ಲಿ ವಿಜಯ ಬ್ಯಾಂಕ್ ತಂಡ ಇಂಡಿಯನ್ ಕಸ್ಟಮ್ಸ್ ವಿರುದ್ಧ ೧೦೦-೭೭ ಅಂತರದಲ್ಲಿ ಜಯ ಗಳಿಸಿ ಶುಭಾರಂಭ  ಕಂಡಿದೆ. ಭಾರತ ತಂಡದ ಮಾಜಿ ಆಟಗಾರರಾದ ಅಜಿಂಕ್ಯ ಮಾನೆ ಹಾಗೂ ಸಿದ್ಧಾಂತ  ಶಿಂಧೆ  ಅವರಿಂದ ಕೂಡಿದ ಪುಣೆ ತಂಡ ಮೊದಲ ಬಾರಿಗೆ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿದೆ. ವಿಜಯ ಬ್ಯಾಂಕ್ ತಂಡದಲ್ಲಿ ಭಾರತ ತಂಡದ ಮಾಜಿ ಆಟಗಾರ ರಾಜೇಶ್ ಉಪ್ಪಾರ್, ಅರವಿಂದ್ ಅರ್ಮುಗಂ ಹಾಗೂ ಅನಿಲ್ ಕುಮಾರ್ ಪ್ರಮುಖ ಆಟಗಾರರು. ವಿಜಯ ಬ್ಯಾಂಕ್ ಪರ ಅನಿಲ್ ಕುಮಾರ್ ೨೭ ಹಾಗೂ ಹರೀಶ್ ಎಂ. ೨೧ ಅಂಕ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಕಸ್ಟಮ್ಸ್ ತಂಡದ ಪರ ಸಿದ್ಧಾಂತ್ ಶಿಂದೆ ೪೧ ಹಾಗೂ ಎಡ್ವಿನ್ ೧೪ ಅಂಕ ಗಳಿಸಿದರು.

Related Articles