Saturday, July 27, 2024

ಬಿಸಿಸಿಐಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ?

ಜಗತ್ತಿನ ಅಂತ್ಯ ಕ್ರೀಡಾ ಸಂಸ್ಥೆಗಳಲ್ಲಿ ಒಂದಾಗಿರುವ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇರಳ ಹಾಗೂ ಕರ್ನಾಟಕದಲ್ಲಿರುವ ಸಂಭವಿಸಿರುವ ನೈಸರ್ಗಿಕ ವಿಕೋಪದ ಬಗ್ಗೆ ಮೌನವಾಗಿದೆ. ಕೇವಲ ಸಾಂತ್ವಾನದ ಮಾತುಗಳನ್ನಾಡಿ ಕೈ ಒರೆಸಿಕೊಂಡಿದೆ.

ಭಾರತ ಕ್ರಿಕೆಟ್ ತಂಡದ ಆಟಗಾರರು ಟ್ರೆಂಟ್‌ಬ್ರಿಡ್ಜ್‌ನಲ್ಲಿ ಕಂಡ ಟೆಸ್ಟ್ ಪಂದ್ಯದ ಜಯವನ್ನು ಕೇರಳದ ನೆರೆ ಸಂತೃಸ್ತರಿಗೆ ಅರ್ಪಿಸಿದ್ದಾರೆ. ಅಲ್ಲದೆ ತಮ್ಮ ಪಂದ್ಯ ಶುಲ್ಕದ ಮೊತ್ತ ಸುಮಾರು ೨ ಕೋಟಿ ರೂ.ಗಳನ್ನು ಕೇರಳದ ಪರಿಹಾರಕ್ಕೆ ನೀಡಲು ತೀರ್ಮಾನಿಸಿದ್ದಾರೆ ಎಂದು ವರದಿಗಳು ಬಂದಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಸೇರಿದಂತೆ ವರ್ಷಕ್ಕೆ ಕನಿಷ್ಠ ೩ ರಿಂದ ೪ ಸಾವಿರ ಕೋಟಿ ರೂ. ಆದಾಯ ಗಳಿಸುತ್ತಿದೆ. ಕೇರಳದಲ್ಲಿ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಅದೇ ರೀತಿ ಕೊಡಗಿನಲ್ಲೂ. ಇಂಥ ಸಂದರ್ಭದಲ್ಲಿ ಬಿಸಿಸಿಐ ಮೌನವಾಗಿರುವುದು ಅದರ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ಪ್ರಶ್ನಿಸುವಂತಿದೆ.
ಕೇವಲ ಲಾಭ  ಹೊಡೆಯಲು, ಪಂಚತಾರಾ ಹೊಟೇಲ್‌ಗಳಲ್ಲಿ ಐಶಾರಾಮಿ ದಿನಗಳನ್ನು ಕಳೆಯಲು ಕ್ರಿಕೆಟ್ ಬೇಕು. ಇದೆಲ್ಲ ಕ್ರಿಕೆಟ್ ಅಭಿಮಾನಿಗಳಿಂದ ಎಂಬುದನ್ನು ಮರೆಯಬಾರದು. ಕನಿಷ್ಠ ೫೦ ಕೋಟಿ ರೂ. ಕೇರಳಕ್ಕೆ ನೀಡಿದರೂ ಬಿಸಿಸಿಐಗೆ ನಷ್ಟವಾಗುವುದಿಲ್ಲ. ವಿರಾಟ್ ಕೊಹ್ಲಿ ಪಂದ್ಯ ಗೆದ್ದು ಮೈಕ್‌ನ ಮುಂದೆ ಮಾತನಾಡುವಾಗ ಕೇರಳದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಇನ್‌ಸ್ಟಾಗ್ರಾಮ್ ಫೋಟೋ ಒಂದಕ್ಕೆ ಕೋಟ್ಯಂತರ ರೂ. ಹಣ ಪಡೆಯುವ ಕೊಹ್ಲಿ ಈ ಹಣ ಗಳಿಸಲು ಕ್ರಿಕೆಟ್ ಅಭಿಮಾನಿಗಳೇ ಕಾರಣ ಎಂಬುದನ್ನು ಮರೆಯಬಾರದು.
ಕರ್ನಾಟಕದ ಕೊಡಗು ಕೂಡ ಭೂ ಕುಸಿತದಿಂದ ಹಾನಿಯಾಗಿದೆ. ಊರಿಗೆ ಊರೇ ಮುರಳುಗಿ ಹೋಗಿದೆ. ಆದರೆ ಕೊಹ್ಲಿ ಕೊಡಗಿನ ಬಗ್ಗೆ ಏನನ್ನೂ ಹೇಳಿಲ್ಲ. ಕರ್ನಾಟಕದ ಆಟಗಾರರು ತಂಡದಲ್ಲಿದ್ದಾರೆ. ಬೆಂಗಳೂರಿನ ಆರ್‌ಸಿಬಿ ಅಭಿಮಾನಿಗಳೂ ಕೊಡಗಿನಲ್ಲಿದ್ದಾರೆ. ಇಂಥ ಸಂದರ್ಭರ್ದಲ್ಲಿ ಕೇವಲ ಒಂದು ರಾಜ್ಯದ ಬಗ್ಗೆ ಮಾತನಾಡಿರುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಸಿಎಸ್ ಆರ್ ಫಂಡ್  ಯಾಕೆ?

ಬೆಂಗಳೂರಿನಲ್ಲಿ ಬಹಳಷ್ಟು ಕಂಪೆನಿಗಳು ಕಾರ್ಪೋರೇಟ್ ಸೋಶಿಯಲ್ ರೆಸ್ಪಾಂನ್ಸಿಬಲಿಟಿ (ಸಿಎಸ್‌ಆರ್) ಗಾಗಿ ಹಣವನ್ನು ಮೀಸಲಿಡುತ್ತವೆ. ಕೇವಲ ಲೆಕ್ಕ ತೋರಿಸುವುದಕ್ಕಾಗಿ ಗಿಡ ನೆಡೋದು, ಕೊಳೆಗೇರಿ ಪ್ರದೇಶಗಳಿಗೆ  ಭೇಟಿ ನೀಡಿ ಪುಸ್ತಕ ಹಂಚುವ ಕೆಲಸವನ್ನು ಮಾಡಿ ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡು ಸುಮ್ಮನಿರುತ್ತವೆ. ಕಾರ್ಪೋರೇಟ್ ವಲಯವು ಇಂಥ ಸಂದರ್ಭರ್ಗಳಲ್ಲಿ ತಮ್ಮ ಹಣವನ್ನು ವಿನಿಯೋಗಿಸಬೇಕು. ಆದಾಯ ತೆರಿಗೆ ಇಲಾಖೆಗೆ ಉಂಡೆ ನಾಮ ಇಡುವ ಉದ್ದೇಶದಿಂದ ತಮ್ಮದೇ ಹೆಸರಿನಲ್ಲಿ ಟ್ರಸ್ಟ್‌ಗಳನ್ನು ನಿರ್ಮಿಸಿಕೊಂಡು ಹಣವನ್ನು ಅಲ್ಲಿಗೆ ವರ್ಗಾಯಿಸುತ್ತಾರೆ. ಇಂಥ ಸಂದ‘ರ್ದಲ್ಲಿ ಬೆಂಗಳೂರಿನಲ್ಲಿರುವ ಕಂಪೆನಿಗಳು ತಮ್ಮ ಸಿಎಸ್‌ಆರ್ ನಿಧಿಯಲ್ಲಿರುವ ಹಣವನ್ನು  ಕೇರಳ ಅಥವಾ ಕೊಡಗಿಗೆ ದಾನ ಮಾಡಬೇಕು. ಈಗ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಬೇಕಾದ ಅನಿವಾರ್ಯತೆ ಇದೆ.
ಕೇರಳದ ಆಟಗಾರ ಸಂಜು ಸ್ಯಾಮ್ಸನ್ ತಂದೆಯ ಮೂಲಕ ೧೫ ಲಕ್ಷ ರೂ.ಗಳನ್ನು ಕೇರಳ ಪರಿಹಾರ ನಿಧಿಗೆ ನೀಡಿದ್ದಾರೆ. ಪಠಾಣ್ ಸೋಹದರರಾದ ಯೂಸುಫ್  ಹಾಗೂ ಇರ್ಫಾನ್ ಈಗಾಗಲೇ ತಮ್ಮನ್ನು ಪರಿಹಾರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ೧೦ ಲಕ್ಷ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಸದ್ಯ ಅವರ ಟ್ವಿಟರ್ ಖಾತೆಯಲ್ಲಿ ಅನುಕಂಪ ಮಾತ್ರ ಇದೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಮಾಲೀಕರಾಗಿರುವ ಸಚಿನ್ ಅಲ್ಲಿಯ ಜನರ ಕಷ್ಟಕ್ಕೆ ಸ್ಪಂದಿಸುವ  ಅನಿವಾರ್ಯತೆ ಇದೆ.
ಬಿಸಿಸಿಐನ ಸಂವಿಧಾನ ಬದಲಾಗುತ್ತಿರುವುದರಿಂದ ತನ್ನ ಪಾಲಿನ ಹಣವನ್ನು ಪ್ರಕಟಿಸುವಲ್ಲಿ ವಿಳಂಬ ಮಾಡಿರಬಹುದು, ಯಾವುದಕ್ಕೂ ಆ ಶ್ರೀಮಂತ ಸಂಸ್ಥೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.

Related Articles