Saturday, October 5, 2024

ಜೇತ್ನಾ ತಂಡದ ಮಾನವೀಯ ಗುಣ

ಜನರಲ್ ತಿಮ್ಮಯ್ಯ ಅವರು ಕೊಡಗಿನ ವೀರ, ಅವರ ಹೆಸರಿನಲ್ಲಿ ಕರ್ನಾಟಕ ಯುವಜನ ಸೇವಾ ಕ್ರೀಡಾ ಇಲಾಖೆ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೇತ್ನ)ಯನ್ನು ಸ್ಥಾಪಿಸಿ ಕಾಲು ಶತಮಾನವೇ ಕಳೆದಿದೆ. ಈಗ ಕೊಡಗಿನಲ್ಲಿ ಸಂಭವಿಸಿರುವ ದುರಂತದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಾಹಸಿಗರು ದೇವರು ಮೆಚ್ಚುವ ಕೆಲಸವನ್ನು ಮಾಡಿದ್ದಾರೆ.

ಅದು ಜನರಲ್ ತಿಮ್ಮಯ್ಯ ಅವರಿಗೆ ಸಂದ ಗೌರವ, ಹಾಗೂ ಕೊಡಗಿನ ಸಂತೃಸ್ತರಿಗೆ ಸಾಹಸ ಕ್ರೀಡಾಪಟುಗಳು ನೀಡಿದ ನೆರವು. ಈ ಕಾಯಕದಲ್ಲಿ ಜೇತ್ನಾದ ಪ್ರಮುಖ ಸಲಹೆಗಾರ ಕೀರ್ತಿ ಪಾಯಸ್ ಹಾಗೂ ಸಹಾಯಕ ನಿರ್ದೇಶಕ ಡಾ. ಜಿತೇಂದ್ರ ಶೆಟ್ಟಿ ಅವರ ತಂಡದ ಶ್ರಮ ಸ್ಮರಣೀಯವಾದುದು.
ಕೀರ್ತಿ ಪಾಯಸ್ ಅವರ ನೇತೃತ್ವದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ೧೪ ಮಂದಿ ಸಾಹಸಗಾರರು ಮಡಿಕೇರಿಯಲ್ಲಿ ರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತಮ ರೀತಿಯಲ್ಲಿ ತರಬೇತಿ ಪಡೆದಿರುವ ತಂಡ ನಾಲ್ಕು ಎಸ್‌ಯುವಿ ಹಾಗೂ ಇತರ ಸಲಕರಣೆಗಳೊಂದಿಗೆ ಮಡಿಕೇರಿಯ ದುರ್ಗಮ ಪ್ರದೇಶದಲ್ಲಿ ಸಾಹಸ ಮಾಡಿ ಹಲವು ಜೀವಗಳನ್ನು ರಕ್ಷಿಸಿರುವುದು ಗಮನಾರ್ಹ. ಮಡಿಕೇರಿಯ ಜಿಲ್ಲಾಧಿಕಾರಿ ಹಾಗೂ ಎಸಿಎಸ್ ಕಂಟ್ರೋಲ್ ರೂಮ್‌ನ ನಿರ್ದೇಶಕಿ ಕಲ್ಪನಾ ಅವರಿಗೆ ತಂಡ ವರದಿಯನ್ನು ನೀಡುತ್ತಿದೆ. ಡಿಸಿ ಕಚೇರಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕಲ್ಪನಾ ಅವರು ಜೇತ್ನಾ ತಂಡದ ಕಾರ್ಯ ವೈಖರಿಯನ್ನು ಗಮನಿಸಿರುತ್ತಾರೆ. ಮಾಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಂತಿಪಾಳದಲ್ಲಿರುವ ಐವರು ಜನರ ಗುಂಪೊಂದು ನೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಅವರನ್ನು ರಕ್ಷಿಸುವ ಕೆಲಸವನ್ನು ತಂಡಕ್ಕೆ ಆರಂಭದಲ್ಲಿ ನೀಡಲಾಯಿತು.
ಆಗಸ್ಟ್ ೧೭ರ ಸಂಜೆ ತಂಡದ ಸದಸ್ಯ ಮುನಿರಾಜು ಎಸ್.ಆರ್. ಅವರು ೬ಮಂದಿ ಸ್ಥಳೀಯರು ಹಾಗೂ ೧೦ ಪೊಲೀಸ್ ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಕ್ಕೆ ಮುಂದಾದರು. ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ನಾಶವಾಗಿತ್ತು. ತಂಡ ೫ ರಿಂದ ೭ ಕಿಮೀ. ದೂರದಲ್ಲಿತ್ತು. ಭೂ  ಕುಸಿತದ ಪರಿಣಾಮ ಪ್ರದೇಶವನ್ನು ತಲುಪಲು ಹೊಸ ಮಾರ್ಗವನ್ನೇ ಕಂಡುಕೊಳ್ಳಬೇಕಾಯಿತು ಎರಡು ಕಿಮೀ ದೂರದ  ಈ ರಸ್ತೆ ಬೆಟ್ಟ ಹಾಗೂ ಅರಣ್ಯದಿಂದ ಕೂಡಿತ್ತು. ಭೂ ಕುಸಿತದಿಂದಾಗಿ ಆ ಗ್ರಾಮಕ್ಕೆ ಪ್ರಯಾಣಿಸುವುದು ಅಷ್ಟು ಸುಲಭವಾಗಿರಲಿಲ್ಲ. ೭ ಕಿ.ಮೀ. ದೂರ ಸಾಗಿದ ನಂತರ ರಭಸವಾಗಿ ಹರಿಯುವ ನದಿಯೊಂದು ಪ್ರಯಾಣಕ್ಕೆ ಅಡ್ಡಿಯಾಯಿತು. ವೈಟ್ ವಾಟರ್ ಕಯಾಕ್ ಮೂಲಕ ತಂಡ ನದಿಯನ್ನು ದಾಟಿತು. ಅಲ್ಲಿ ಸಿಕ್ಕಿಹಾಕಿಕೊಂಡ ಐವರಲ್ಲಿ  ಎರಡು ತಿಂಗಳ  ಪುಟ್ಟ ಮಗುವೂ ಸೇರಿತ್ತು. ನಮ್ಮ ರಕ್ಷಣೆಗೆ ಯಾರೂ ಬರುವುದಿಲ್ಲ ಎಂದು ಅರಿತ ಅಲ್ಲಿಯ ಜನರಲ್ಲಿ ಆತಂಕ ಮನೆ ಮಾಡಿತ್ತು.
ತಂಡದ ಇನ್ನೋರ್ವ ಪ್ರಮುಖ ಬರೀಶ್ ಅಲ್ಲಿಯ ಜನರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ರೋಡಿಯೋ ಮೂಲಕ ಖಚಿತಪಡಿಸಿಕೊಂಡು ಮಾಹಿತಿ ನೀಡಿದರು. ನದಿ ಹಾಗೂ ಗ್ರಾಮದ ನಡುವಿನ ಅಂತರ ೫೦೦ ಮೀ. , ನದಿ ದಾಟಲು ೩೦೦ ಮೀ. ಉದ್ದದ ಜಿಪ್ ಲೇನ್ ನಿರ್ಮಿಸಲಾಯಿತು. ಪ್ರವೀಣ್ ಹಾಗೂ ಬಶೀರ್ ಜಿಪ್‌ಲೇನ್ ಮೂಲಕ ಗ್ರಾಮವನ್ನು ಪ್ರವೇಶಿಸಿದರು. ಮೊದಲು ವಯಸ್ಸಾದವರನ್ನು ನಂತರ ಮಗುವನ್ನು ದಡ ಸೇರಿಸಲಾಯಿತು. ನಿರಂತರವಾಗಿ ಮಳೆ ಸುರಿಯುತ್ತಿತ್ತು. ಮಗು ಮಲಗಿದ್ದ ಕಾರಣ ಹಿಡಿದು ದಾಟಲು ಸುಲಭವಾಯಿತು.. ಇದು ಜೇತ್ನ ತಂಡದ ನಿಜವಾದ ಸಾಹಸವಾಗಿತ್ತು.
ಕಯಾಕ್  ಹಿಡಿದುಕೊಂಡು ರಕ್ಷಣೆ ಕಾರ್ಯದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿತ್ತು. ತಂಡದ ಸದಸ್ಯರು ೨೪ ಗಂಟೆಗಳ ಕಾಲ ಶ್ರಮಿಸಿದ ಪರಿಣಾಮ ಹಳ್ಳಿಗರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು.
ರಕ್ಷಿಸಿದ ನಂತರ ನಾಮಕರಣ
೨ ತಿಂಗಳ ಮಗುವಿಗೆ ಅದುವರೆಗೂ ನಾಮಕರಣ ಮಾಡಿರಲಿಲ್ಲ. ರಕ್ಷಣೆ ಕಾರ್ಯ ಮುಗಿದ ನಂತರ ಮಗುವಿನ ಹೆತ್ತವರು ಎಸ್ ಅಕ್ಷರದಿಂದ ಆರಂಭಗೊಳ್ಳುವ ಹೆಸರನ್ನಿಟ್ಟು ಮಗುವಿಗೆ ನಾಮಕರಣ ಮಾಡಿ ಎಂದು ಜೇತ್ನ ತಂಡವನ್ನು ವಿನಂತಿಸಿಕೊಂಡರು. ಅದೇ ರೀತಿ ಮಗುವಿಗೆ ಶಾಲಿನಿ ಎಂದು ನಾಮಕರಣ ಮಾಡಲಾಯಿತು.
ಇತ್ತೀಚಿಗೆ ಜೋಗದಲ್ಲಿ ನಾಪತ್ತೆಯಾಗಿದ್ದವರೊಬ್ಬರನ್ನು ಹುಡುಕುತ್ತ ಕಲ್ಲಿನ ನಡುವೆ ಸಿಕ್ಕಿಹಾಕಿಕೊಂಡಿದ್ದ ಕೋತಿರಾಜ್ ಅವರನ್ನು ಇದೇ ತಂಡ ರಕ್ಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles