Wednesday, November 13, 2024

ಮುಂಬೈ ಕ್ರಿಕೆಟ್‌ನ ಮಿಂಚಿನ ವೇಗಿ ಗೌರವ್‌ ಬೆಂಗ್ರೆ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಮಂಗಳೂರಿನ ಕಡಲ ತಡಿಯ ಪುಟ್ಟ ಊರು ತೋಟದ ಬೆಂಗ್ರೆಯಲ್ಲಿ ಬೆಳೆದು, ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಿಂಚಿ, ಲೆದರ್‌ ಬಾಲ್‌ನಲ್ಲಿ U19 ಮಂಗಳೂರು ವಲಯದ ಪರ ಆಡಿ, ನಂತರ ಮುಂಬೈಯಲ್ಲಿ ವಿವಿಧ ಲೀಗ್‌ ಪಂದ್ಯಗಳನ್ನಾಡಿ ಟೈಮ್ಸ್‌ ಗ್ರೂಪ್‌ನ ಪ್ರತಿಭಾನ್ವೇಷಣೆಯಲ್ಲಿ ವೇಗದ ಬೌಲರ್‌ ಪಟ್ಟ ಗೆದ್ದು, ಮುಂಬಯಿ ರಣಜಿ ತಂಡದಲ್ಲಿ ಸಂಭಾವ್ಯವರ ಪಟ್ಟಿಯಲ್ಲಿ ಸ್ಥಾನ ಪಡೆದು, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ ಸೇರಿದಂತೆ ಪ್ರಮುಖ ಆಟಗಾರರೊಂದಿಗೆ ಆಡಿ “ಗಾಡ್‌ ಫಾದರ್”‌ ಇಲ್ಲದೆ ಇದುವರೆಗೂ ದೇವರ ಆಶಯದಂತೆ ಆಡುವ ಮೀನುಗಾರರ ಕುಟುಂಬದ ಆಟಗಾರ ಗೌರವ್‌ ಬೆಂಗ್ರೆ ಮುಂಬೈ ಕ್ರಿಕೆಟ್‌ನಲ್ಲಿ ಮನೆ ಮಾತು.

ಮುಂಬೈ ಕ್ರಿಕೆಟ್‌ನ ರಾಜಕೀಯ ಸಚಿನ್‌ ತೆಂಡೂಲ್ಕರ್‌ ಅವರ ಮಗನಿಗೇ ಸ್ಥಾನ ನೀಡಲಿಲ್ಲ. ಇನ್ನು ಬೆಂಗ್ರೆಯಂಥ ಸಣ್ಣ ಊರಿನಿಂದ ವಲಸೆ ಬಂದ ಪ್ರತಿಭೆ ಗೌರವ್ ಬೆಂಗ್ರೆ ಅವರನ್ನು ಕೇಳುವವರು ಯಾರು? ಆದರೂ ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದು, ಯೋಗಿ ಕ್ರಿಕೆಟ್‌ ಕ್ಲಬ್‌, ಪಯ್ಯಡೆ ಕ್ರಿಕೆಟ್‌ ಕ್ಲಬ್‌, ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾದ ಎ ಡಿವಿಜನ್‌ನಲ್ಲಿ ಆಡಿ, ಮುಂಬೈ ಪ್ರೀಮಿಯರ್‌ ಲೀಗ್‌ನಲ್ಲಿ ಶಿವಾಜಿ ಲಯನ್ಸ್‌ ಪರ ಆಡಿ, ಕಾರ್ಪೊರೇಟ್‌ ಕ್ರಿಕೆಟ್‌ನಲ್ಲಿ ನಿರ್ಲಾನ್‌ ಕಂಪೆನಿಯನ್ನು ಪ್ರತಿನಿಧಿಸಿ ಆ ತಂಡ ಚಾಂಪಿಯನ್‌ ಪಟ್ಟಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರವ್‌ ಬೆಂಗ್ರೆ ಈಗಲೂ ಮುಂದೊಂದು ದಿನ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಕರಾವಳಿಯ ಕನ್ನಡಿಗರು ಮುಂಬೈಗೆ ಹೋಗುವುದು ಬದುಕನ್ನು ಕಟ್ಟಿಕೊಳ್ಳಲು. ಆದರೆ ಮೀನುಗಾರರಿಂದ ಕೂಡಿರುವ ತೋಟದ ಬೆಂಗ್ರೆಯ ಸುಂದರ್‌ ಪುತ್ರನ್‌ ಹಾಗೂ ಶಶಿಕಲ ಅವರ ಮಗ ಗೌರವ ಕ್ರಿಕೆಟಿಗನಾಗಬೇಕೆಂದು ಮುಂಬೈಗೆ 13 ವರ್ಷಗಳ ಹಿಂದೆ ಹೊರಟು ಹೋದರು. ಅವರಿಗೆ ನೆರವು ನೀದವರು ಹರಿಶ್ಚಂದ್ರ ಪುತ್ರನ್‌, ವಿನೋದ್‌ ಪುತ್ರನ್‌ ಹಾಗೂ ನಿತಿನ್‌ ಪುತ್ರನ್‌. ವೇಗದ ಬೌಲರ್‌ ಗೌರವ್‌ ಅವರ ಬೌಲಿಂಗ್‌ ಶೈಲಿ ಮುಂಬೈ ಕ್ರಿಕೆಟ್‌ ವಲಯದಲ್ಲಿ ಸದ್ದು ಮಾಡಿತು. ಮಂಗಳೂರಿನಲ್ಲಿದ್ದಾಗ ಪ್ರಗತಿ ಸ್ಪೋರ್ಸ್ಸ್‌ ಕ್ಲಬ್‌ ಪರ ಆಡುತ್ತಿದ್ದ ಗೌರವ್‌ U19 ಕ್ರಿಕೆಟ್‌ನಲ್ಲಿ ನಿಹಾಲ್‌ ಉಳ್ಳಾಲ್‌ ನಾಯಕತ್ವದ ಮಂಗಳೂರು ವಲಯವನ್ನು ಪ್ರತಿನಿಧಿಸಿ ಯಶಸ್ಸು ಕಂಡವರು. ಕೆ.ಎಲ್‌. ರಾಹುಲ್‌ ಜೊತೆಯಲ್ಲೂ ನೆಟ್‌ನಲ್ಲಿ ಅಭ್ಯಾಸ ಮಾಡಿದ್ದರು. ಉತ್ತಮ ಅವಕಾಶ ಸಿಗಬಹುದೆಂಬ ಕನಸು ಹೊತ್ತು ಮುಂಬೈಗೆ ತಲುಪಿದಾಗ ಅವರಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿ ತರಬೇತಿ ನೀಡಿದವರು ವೆಸ್ಟ್‌ ಇಂಡೀಸ್‌ನ ಬ್ಯಾಟಿಂಗ್‌ ಕೋಚ್‌ ಆಗಿರುವ ಮೋಂಟಿ ದೇಸಾಯಿ. ಅವರ ಯೋಗಿ ಕ್ರಿಕೆಟ್‌ ಕ್ಲಬ್‌ನಲ್ಲಿ ಪಳಗಿದ ಗೌರವ್‌ ಉತ್ತಮ ಆಲ್ರೌಂಡರ್‌ ಆಗಿ ಬೆಳೆದರು. ಇದಕ್ಕೂ ಮುನ್ನ ಚಿಕ್ಕಂದಿನಲ್ಲಿ ಮಂಗಳೂರಿನ ದಿನೇಶ್ ಕರ್ಕೇರ ಅವರು ಗೌರವ್‌ ಅವರಲ್ಲಿದ್ದ ಕ್ರಿಕೆಟ್‌ ಪ್ರತಿಭೆಯನ್ನು ಗುರುತಿಸಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿ ಯುವ ಆಟಗಾರನಲ್ಲಿ ಆತ್ಮವಿಶ್ವಾಸವನ್ನು ತುಂಬಿದ್ದರು.

ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾದ ಗೌರವ

ಯೋಗಿ ಕ್ರಿಕೆಟ್‌ ಕ್ಲಬ್‌ ಆಗ ಇ ಡಿವಿಜನ್‌ ಆಡುತ್ತಿತ್ತು. ಗೌರವ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಇದರಿಂದಾಗಿ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾದಿಂದ ಎ ಡಿವಿಜನ್‌ನಲ್ಲಿ ಆಡುವ ಅವಕಾಶ ಸಿಕ್ಕಿತು. ಟೈಮ್ಸ್‌ ಶೀಲ್ಡ್‌ನಲ್ಲೂ ಗೌರವ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿ 20 ವಿಕೆಟ್‌ ಗಳಿಸಿದರು. ಎ ಡಿವಿಜನ್‌ಲ್ಲಿ 30 ವಿಕೆಟ್‌ ಗಳಿಕೆಯ ಸಾಧನೆ ಮಾಡಿದರು.

ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಗೌರವ್:‌

ಮುಂಬೈ ರಣಜಿ ತಂಡದ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಸಿಗುವುದೆಂದರೆ ಇತರ ರಾಜ್ಯಗಳಲ್ಲಿ ರಣಜಿ ಆಡಿದಷ್ಟೇ ಗೌರವ. ಲೀಗ್‌ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಗೌರವ್‌ಗೆ ಮುಂಬೈ ರಣಜಿ ಸಂಭಾವ್ಯರ ಪಟ್ಟಿಯಲ್ಲಿ ಅವಕಾಶ ಸಿಕ್ಕಿತು. ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ತಂಡದಲ್ಲಿ ಆಡುವ ಅವಕಾಶವೂ ಸಿಕ್ಕಿತು. ಅದೇ ರೀತಿಯಲ್ಲಿ ಪ್ರಮುಖ ವಿಕೆಟ್‌ಗಳನ್ನೂ ಕಬಳಿಸಿದರು. ಆದರೆ ಆಯ್ಕೆಯ ವಿಷಯ ಬಂದಾಗ ಅಲ್ಲಿ ಗೌರವ್‌ ಬಗ್ಗೆ “ಪ್ರಭಾವ” ಬೀರುವವರು ಯಾರೂ ಇರಲಿಲ್ಲ. ಕ್ರಿಕೆಟ್‌ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವುದನ್ನು ಬಲ್ಲವರು ಮಾತ್ರ ಗೌರವ್‌ ಯಾಕೆ ಆಯ್ಕೆಯಾಗಿಲ್ಲ ಎಂಬುದನ್ನು ಅರಿಯಬಲ್ಲರು.

ಟಿ20 ಲೀಗ್‌ಗಳಲ್ಲಿ ಮಿಂಚಿದ ಗೌರವ್:‌

ರಣಜಿಯಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಗೌರವ್‌ ಕೈ ಕಟ್ಟಿ ಕುಳಿತಿಲ್ಲ. ಅವರ ವೇಗಕ್ಕೂ ಯಾವುದೇ ಅಡ್ಡಿಯಾಗಲಿಲ್ಲ. 2019ರ ಮುಂಬೈ ಪ್ರೀಮಿಯರ್‌ ಲೀಗ್‌ನಲ್ಲಿ ಶಿವಾಜಿ ಲಯನ್ಸ್‌ ಪರ ಆಡುವಾಗ ಶಿವಂ ದುಬೆ, ಪ್ರಥ್ವಿ ಶಾ ಮೊದಲಾದ ಆಟಗಾರರು ಗೌರವ್‌ ಅವರ ಬೌಲಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಥಾಣೆ ಪ್ರೀಮಿಯರ್‌ ಲೀಗ್‌ನಲ್ಲೂ ಗೌರವ್‌ ಬೌಲಿಂಗ್‌ನಲ್ಲಿ ಯಶಸ್ಸು ಕಂಡರು. ಪರಿಣಾಮ ತಂಡ ಸೆಮಿಫೈನಲ್‌ ಹಂತದ ವರೆಗೂ ತಲುಪಿತ್ತು.

ನೆಟ್‌ ಬೌಲಿಂಗ್‌ ಮಾಡುವಾಗ ಆಸ್ಟ್ರೇಲಿಯಾದ ಶೇನ್‌ ವ್ಯಾಟ್ಸ್‌ನ್‌ ಕನ್ನಡಿಗನ ಬೌಲಿಂಗ್‌ ಶೈಲಿಯ ಬಗ್ಗೆ ಗುಣಗಾನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ಮುಂಬೈ ಆಯ್ಕೆ ಸಮಿತಿಗೆ ಗೌರವ್‌ ಸಾಧನೆ ಕಾಣದಾಯಿತು.

ಕಾರ್ಪೊರೇಟ್‌ ಚಾಂಪಿಯನ್‌:

ಮುಂಬೈಯಲ್ಲಿ ಎಲ್ಲ ಹಂತದ ಕ್ರಿಕೆಟ್‌ಗೂ ಬೆಲೆ ಇದೆ. ಅಲ್ಲಿ ನಡೆಯುತ್ತಿರುವ ಕಾರ್ಪೊರೇಟ್‌ ಕ್ರಿಕೆಟ್‌ನಲ್ಲಿ ಗೌರವ್‌ ಅವರ ಬೌಲಿಂಗ್‌ ಜನಪ್ರಿಯಗೊಂಡಿತ್ತು. ಉದ್ಯೋಗದಾತ ನಿರ್ಲಾನ್‌ ತಂಡದ ಪರ ಆಡುತ್ತಿರುವ ಗೌರವ್‌ ಆ ತಂಡವು ಹಲವು ಚಾಂಪಿಯನ್‌ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಿರ್ಲಾನ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಗೌರವ್‌, ವಾರದ ಕೊನೆಯಲ್ಲಿ ಸಿಗುವ ಎರಡು ದಿನಗಳಲ್ಲಿ ಸ್ಪೋರ್ಟ್ಸ್‌ ಲೈಫ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದಾರೆ.

“ನಾನು ಮಂಗಳೂರಿನ ಕಡಲ ಕಿನಾರೆಯಲ್ಲಿರುವ ತೋಟದ ಬೆಂಗ್ರೆ ಎಂಬ ಪುಟ್ಟ ಗ್ರಾಮದಿಂದ ಬಂದವ. ಮುಂಬೈಗೆ ಬರುವಾಗ ಸಾಕಷ್ಟು ಕನಸಗುಳನ್ನು ಹೊತ್ತು ಬಂದಿದ್ದೆ. ಆ ಕನಸನ್ನು ಈಡೇರಿಸಿಕೊಳ್ಳುವ ಸಾಮರ್ಥ್ಯವೂ ನನ್ನಲ್ಲಿತ್ತು. ಅದರೆ ಮುಂಬೈ ರಣಜಿ ತಂಡದ ಪರ ಆಡುವ ಅವಕಾಶ ಸಿಗಲಿಲ್ಲ. ಆ ಬಗ್ಗೆ ಆರಂಭದಲ್ಲಿ ಬೇಸರ ಇದ್ದಿತ್ತು. ಆದರೆ ಇತರ ಪಂದ್ಯಗಳನ್ನು ಆಡುತ್ತ ಬದುಕು ಕಟ್ಟಿಕೊಂಡಿರುವೆ. ವಿವಿಧ ಹಂತದ ಕ್ರಿಕೆಟ್‌ ಆಡುವ ಸಾಮರ್ಥ್ಯ ಈಗಲೂ ನನ್ನಲ್ಲಿದೆ. ಆಡುತ್ತಿರುವೆ. ಕ್ರಿಕೆಟ್‌ ನನಗೆ ಬದುಕು ನೀಡಿದೆ. ಅದರಲ್ಲೇ ಮುಂದುವರಿಯುವೆ,” ಎಂದು ಗೌರವ್‌ ಬೆಂಗ್ರೆ ಹೇಳಿದರು.

 

 

Related Articles