Thursday, September 12, 2024

ಡ್ರಾದೊಂದಿಗೆ ಮೂರನೇ ಸ್ಥಾನ ತಲುಪಿದ ನಾರ್ಥ್ ಈಸ್ಟ್

ಸ್ಪೋರ್ಟ್ಸ್ ಮೇಲ್ ವರದಿ, ಗೋವಾ:

 ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ವಿರುದ್ಧ 3-3 ಗೋಲುಗಳಿಂದ ಡ್ರಾ ಸಾಧಿಸಿದ ನಾರ್ಥ್ ಈಸ್ಟ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 90 ನೇ ನಿಮಿಷದಲ್ಲಿ ಲೂಯಿಸ್ ಮಚಾಡೋ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಚೆನ್ನೈಯಿನ್ ತಂಡದ ಜಯ ಕಸಿದುಕೊಂಡಿತು.

ಚೆನ್ನೈಯಿನ್ ಪರ ಲಾಲ್ರಿಯಾನ್ಜುವಾಲ ಚಾಂಗ್ಟೆ (8 ಮತ್ತು 52ನೇ ನಿಮಿಷ) ಮತ್ತು ಮಾನ್ವೆಲ್ ಲಾನ್ಜೆರೋಟ್ (50ನೇ ನಿಮಿಷ )ಗೋಲು ಗಳಿಸಿದ್ದರು.

ನಾರ್ಥ್ ಈಸ್ಟ್ ಗೆ ಮುನ್ನಡೆ: ಜಯವನ್ನೇ ಗುರಿಯಾಗಿರಿಸಿಕೊಂಡಿರುವ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಚೆನ್ನೈಯಿನ್ ವಿರುದ್ಧದ ಪ್ರಮುಖ ಪಂದ್ಯದ ಪ್ರಥಮಾರ್ಧದಲ್ಲಿ 2-1 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿತು. ಚೆನ್ನೈಯಿನ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ನಾಲ್ರಿಯಾನ್ಜುವಾಲಾ ಚಾಂಗ್ಟೆ ( 8ನೇ ನಿಮಿಷ) ಗಳಿಸಿದ ಗೋಲು ಚೆನ್ನೈಯಿನ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಆದರೆ ಚೆನ್ನೈಯಿನ್ ತಂಡದ ಈ ಮುನ್ನಡೆಯ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಯುವ ಆಟಗಾರ ಇಮ್ರಾನ್ ಖಾನ್ (14 ನೇ ನಿಮಿಷ) ಹೆಡರ್ ಮೂಲಕ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಚೆನ್ನೈಯಿನ್ ತಂಡ ಪಂದ್ಯದ ಮೇಲೆ ಸಾಕಷ್ಟು ಹಿಡಿತ ಸಾಧಿಸಿತ್ತು. ಈ ನಡುವೆ ನಾರ್ಥ್ ಈಸ್ಟ್ ನೇರವಾಗಿ ಗೋಲು ಗಳಿಸುವ ಅವಕಾಶವನ್ನು ಕೈಚೆಲ್ಲಿತು. ಆದರೆ 43ನೇ ನಿಮಿಷದಲ್ಲಿ ದಿಶ್ರಾನ್ ಬ್ರೌನ್ ಗಳಿಸಿದ ಗೋಲು ನಾರ್ಥ್ ಈಸ್ಟ್ ಗೆ ಮುನ್ನಡೆ ತಂದುಕೊಟ್ಟಿತು.

ಚೆನ್ನೈ ಗೆದ್ದರೆ ನಾರ್ಥ್ ಈಸ್ಟ್ ಗೆ ಆತಂಕ: ಹೇಗೂ ಪ್ಲೇ ಆಫ್ ತಲುಪಲು ಆಗಲಿಲ್ಲ, ಉಳಿದಿರುವ ಪಂದ್ಯಗಳಲ್ಲಾದರೂ ಜಯ ಗಳಿಸಿ ಗೌರವ ಕಾಯ್ದುಕೊಳ್ಳುವ ಎಂಬ ಹಂಬಲದೊಂದಿಗೆ ಚೆನ್ನೈಯಿನ್ ಎಫ್ ಸಿ ಅಂಗಣಕ್ಕಿಳಿಯಿತು. ನಾರ್ಥ್ ಈಸ್ಟ್ ಈಗ ಐದನೇ ಸ್ಥಾನದಲ್ಲಿದ್ದು ಗೆದ್ದರೆ ಮಾತ್ರ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಇದುವರೆಗೂ ಇತ್ತಂಡಗಳೂ 13 ಬಾರಿ ಮುಖಾಮುಖಿಯಾಗಿದ್ದು ,6 ಬಾರಿ ನಾರ್ಥ್ ಈಸ್ಟ್ ಜಯ ಗಳಿಸಿದೆ. ಚೆನ್ನೈಯಿನ್ ಮೂರು ಬಾರಿ ಮೂರು ಅಂಕಗಳನ್ನು ಗಳಿಸಿದೆ. ಉಳಿದ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತ್ತು. ಹಿಂದಿನ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಗೊವಾ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು. ಇದರೊಂದಿಗೆ ಸತತ ಏಳು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಯಿತು. ಖಾಲಿದ್ ಜಮೀಲ್ ಅವರು ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ನಾರ್ಥ್ ಈಸ್ಟ್ ತಂಡ ಸತತ ಆರು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಆರು ಪಂದ್ಯಗಳಲ್ಲಿ ನಾರ್ಥ್ ಈಸ್ಟ್ 11 ಗೋಲುಗಳನ್ನು ಗಳಿಸಿದೆ ಇದಕ್ಕೆ ಮುಖ್ಯ ಕಾರಣ ತಂಡ ಆಕ್ರಮಣಕಾರಿ ಆಟ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಗೋಲಿಲ್ಲದೆ ಡ್ರಾ ಕಂಡಿತ್ತು. ಫೆಡರಿಕೊ ಗಲ್ಲೆಗೋ, ದೆಶ್ರಾನ್ ಬ್ರೌನ್ ಮತ್ತು ಲೂಯಿಸ್ ಮಚಾಡೊ ಅವರಿಂದಾಗಿ ನಾರ್ಥ್ ಈಸ್ಟ್ ಯಶಸ್ಸಿನ ಹಾದಿ ತುಳಿದಿದೆ. ಇಲ್ಲಿ ಗೆದ್ದರೆ ನಾರ್ಥ್ ಈಸ್ಟ್ ಮೂರನೇ ಸ್ಥಾನ ತಲುಪಲಿದೆ.

Related Articles