Tuesday, March 19, 2024

ಮೋಹನ್ ಬಾಗನ್ ವಿರುದ್ಧ ಸೇಡಿಗೆ ಕಾಯುತ್ತಿರುವ ಈಸ್ಟ್ ಬೆಂಗಾಲ್

ISL

 ಕೋಲ್ಕತಾ ಡರ್ಬಿಗೆ 100 ವರ್ಷಗಳ ಸಂಭ್ರಮ. ಈ ಹಿಂದೆ ಡರ್ಬಿಯಲ್ಲಿ ಸ್ಪರ್ಧಿಸಿದ್ದ ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್ ಈಗ ಎಟಿಕೆ ಮೋಹನ್ ಬಾಗನ್ ಮತ್ತು ಎಸ್ ಸಿ ಈಸ್ಟ್ ಬೆಂಗಾಲ್ ರೂಪದಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸ್ಪರ್ಧಿಸುತ್ತಿವೆ. 1921ರಲ್ಲಿ ಕೂಚ್ ಬೆಹಾರ್ ಕಪ್ ನಲ್ಲಿ ಸ್ಪರ್ಧಿಸಿದ್ದ ಈ ಎರಡು ತಂಡಗಳು ಮತ್ತೆ ಈಗ ಮುಖಾಮುಖಿಯಾಗುತ್ತಿವೆ.

 

ಒಂದು ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಇನ್ನೊಂದು ತಂಡ ಕೆಳ ಹಂತದಲ್ಲಿದೆ. ಮೋಹನ್ ಬಾಗನ್ ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದವರಿಗೆ ಸಿಗುವ ಲೀಗ್ ವಿನ್ನರ್ಸ್ ಶೀಲ್ಡ್ ಗೆಲ್ಲುವ ಫೇವರಿಟ್ ಎನಿಸಿದೆ. ಇತ್ತೀಚಿನ ಪಂದ್ಯಗಳಲ್ಲಿ ಈಸ್ಟ್ ಬೆಂಗಾಲ್ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಜಯ ಕಾಣದೆ ಹಿನ್ನಡೆ ಕಂಡಿದೆ.

ಶುಕ್ರವಾರ ಫಟೋರ್ಡಾ ಅಂಗಣದಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿದ್ದು, ಮೂರು ಅಂಕಗಳನ್ನು ಗಳಿಸಲು ಉತ್ಸುಕವಾಗಿವೆ. ರಾಬಿ ಫ್ಲವರ್ ಪಡೆ ತನ್ನ ಪ್ರೇಕ್ಷಕರಿಗಾಗಿ ಐತಿಹಾಸಿಕ ಪಂದ್ಯದಲ್ಲಿ ಜಯ ಗಳಿಸುವ ಗುರಿ ಹೊಂದಿದ್ದರೆ ಆಂಟೋನಿಯೊ ಹಬ್ಬಾಸ್ ಪಡೆ  ಪ್ರಶಸ್ತಿಗಾಗಿ ಅಗತ್ಯ ಇರುವ ಮೂರು ಅಂಕಗಳನ್ನು ಗಳಿಸುವ ಗುರಿಯಲ್ಲಿದೆ.

ಬೇರೆ ವರ್ಷಗಳಲ್ಲಿ ಆಗಿರುತ್ತಿದ್ದರೆ ಈ ಪಂದ್ಯವನ್ನು ಸಾಲ್ಟ್ ಲೇಕ್ ಅಂಗಣದಲ್ಲಿ ಸಹಸ್ರಾರು ಮಂದಿ ಪ್ರೇಕ್ಷಕರು ವೀಕ್ಷಿಸುತ್ತಿದ್ದರು. ಆದರೆ ಇ ಬಾರಿ ಅಂಗಣ ಖಾಲಿ ಇದ್ದರು ಪ್ರೇಕ್ಷಕರು ತಮ್ಮ ಮನೆಯಲ್ಲೇ ಕುಳಿತು ಪಂದ್ಯವನ್ನು ವೀಕ್ಷಿಸಲಿದ್ದಾರೆ.

ಋತುವಿನುದ್ದಕ್ಕೂ ಮರಿನರ್ಸ್ ಪಡೆ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಇತರ ತಂಡಗಳಿಗೆ ಹೋಲಿಸಿದರೆ ಕಡಿಮೆ ಗೋಲುಗಳನ್ನು ನೀಡಿ ಹೆಚ್ಚು ಗೋಲುಗಳನ್ನು ಗಳಿಸಿದೆ. 17ನೇ ಪಂದ್ಯ ಮುಗಿದಿರುವ ಈ ಹಂತದಲ್ಲಿ ಮೋಹನ್ ಬಾಗನ್ 36 ಗೋಲುಗಳನ್ನು ಗಳಿಸಿದ್ದರೆ, ಈಸ್ಟ್ ಬೆಂಗಾಲ್ 17 ಗೋಲುಗಳನ್ನು ಗಳಿಸಿದೆ. ಈ ಡರ್ಬಿಯು ಇತರ ಪಂದ್ಯಗಳಿಗಿಂತ ಭಿನ್ನವಾಗಿದೆ ಎಂದು ಹಬ್ಬಾಸ್ ಹೇಳಿದ್ದಾರೆ.

“ಡರ್ಬಿಯು ಭಿನ್ನವಾಗಿದೆ, ಆಟಗಾರರ ವರ್ತನೆ ಮತ್ತು ಒತ್ತಡ ಇತರ ಪಂದ್ಯಗಳಿಗಿಂತ ಭಿನ್ನವಾಗಿದೆ.  ಏಕೆಂದರೆ ಈ ಜಯ ಋತುವಿನ ಗತಿಯನ್ನೇ ಬದಲಿಸಬಹುದು. ನಮ್ಮ ಪಾಲಿಗೆ ಇದು ಅಪಾಯಕಾರಿ ಪಂದ್ಯ,” ಎಂದು ಹಬ್ಬಾಸ್ ಹೇಳಿದ್ದಾರೆ.

ಈಸ್ಟ್ ಬೆಂಗಾಲ್ ತಂಡಕ್ಕೆ ಈ ಡರ್ಬಿಯು ಮುಂದಿನ ಋತುವಿಗೆ ಉತ್ತಮ ವೇದಿಕೆಯನ್ನು ರೂಪಿಸಲಿದೆ. ಇತರ ತಂಡಗಳಿಗೆ ಹೋಲಿಸಿದೆ ಈಸ್ಟ್ ಬೆಂಗಾಲ್ ಕಡಿಮೆ ಸಿದ್ಧತೆಯಲ್ಲಿ ಲೀಗ್ ಗೆ ಆಗಮಿಸಿತ್ತು. ಈ ಋತುವಿನ ದ್ವಿತಿಯಾರ್ಧದಿಂದ ತಂಡ ಉತ್ತಮ ರೀತಿಯಲ್ಲಿ ಆಟ ಪ್ರದರ್ಶಿಸುತ್ತಿದೆ. “ನಾವು ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿದ್ದೇವೆ. ನಮ್ಮ ಆಟಗಾರರು ಆಟವನ್ನು ಸಂಭ್ರಮಿಸುತ್ತಿದ್ದಾರೆ., “ ಎಂದು ಹೇಳಿರುವ ಸಹಾಯಕ ಕೋಚ್ ಟೋನಿ ಗ್ರಾಂಟ್, ಈ ಡರ್ಬಿಯು ಐತಿಹಾಸಿಕವಾಗಿ ಮಹತ್ವವಾದದ್ದು ಮತ್ತು ಸಾಕಷ್ಟು ನೆನಪುಗಳನ್ನು ಬಿತ್ತರಿಸುತ್ತದೆ. ಜನರಿಗೆ ಈ ಡರ್ಬಿ ಎಷ್ಟು ಪ್ರಮುಖವಾದುದು ಎಂಬುದನ್ನು ನಾವು ಬಲ್ಲೆವು. ಮೊದಲ ಡರ್ಬಿ ನಮಗೆ ಕಹಿ ಅನುಭವ ನೀಡಿತ್ತು, ಆದರೆ ಇದು ಆಟದ ಅಂಗಣ, ನಾವು ನಮ್ಮ ಅಭಿಮಾನಿಗಳಿಗಾಗಿ ಉತ್ತಮವಾಗಿ ಆಡಲಿದ್ದೇವೆ,” ಎಂದರು.

 

Related Articles