Tuesday, September 10, 2024

ಮಾಗಿಯ ವಿರಾಮಮದ ಬಳಿಕ ಸಾಗಿದೆ ಫುಟ್ಬಾಲ್

ಕೊಚ್ಚಿ ಜನವರಿ 24

ಹೀರೋ ಇಂಡಿಯನ್ ಸೂಪರ್ ಲೀಗ್ ಮತ್ತೆ ಬಂದಿದೆ. ವಿರಾಮದ ನಂತರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ  ಕೇರಳ ಬ್ಲಾಸ್ಟರ್ ಹಾಗೂ ಎಟಿಕೆ ನಡುವೆ ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕೊಚ್ಚಿಯ ಜವಹರಲಾಲ್ ನೆಹರು ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಈ ಬಾರಿಯ ಐಎಸ್‌ಎಲ್‌ನಲ್ಲಿ ಕೇರಳ ಅತ್ಯಂತ ಕಳಪೆ ಪ್ರರ್ದಶನ ತೋರಿತ್ತು. ಕೇವಲ ಒಂದು ಜಯ ಗಳಿಸಿದೆ. 11 ಪಂದ್ಯಗಳಲ್ಲಿ ಕೇರಳ ಜಯ ಗಳಿಸುವಲ್ಲಿ ವಿಲವಾಗಿದೆ. ಇದು ಐಎಸ್‌ಎಲ್ ಇತಿಹಾಸದಲ್ಲೇ ಕೇರಳದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ತಂಡದ ಕೋಚ್ ಡೇವಿಡ್ ಜೇಮ್ಸ್ ಅವರನ್ನು ಕೈ ಬಿಡಲಾಗಿದೆ, ಅವರ ಸ್ಥಾನದಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ನ ನೆಲೊ ವಿಂಗಡಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಪೋರ್ಚುಗೀಸ್ ಮೂಲದ ಕೋಚ್ ಮೂಲಕ ಕೇರಳ ತಂಡ ಹೊಸ ಆರಂಭ ಕಾಣಲು ಸಜ್ಜಾಗಿದೆ. ಜೇಮ್ಸ್ ತರಬೇತಿಯಲ್ಲಿ ಕೇರಳ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸುವಲ್ಲಿ ವಿಲವಾಗಿತ್ತು, ಈಗ ಪೋರ್ಚುಗೀಸ್ ಕೋಚ್ ಆಕ್ರಮಣ ಆಟಕ್ಕೆ ಅವಕಾಶ ನೀಡುತ್ತಾರೆಂಬ ನಿರೀಕ್ಷೆ ಇದೆ. ‘ಸಿಬ್ಬಂದಿಗಳಿಂದ ದೊರೆತ ಸಲಹೆ ಸೂಚನೆಗಳ ಪ್ರಕಾರ ನಮ್ಮ ತಂಡದ ಆಟಗಾರರು ಅಂಗಣದಲ್ಲಿ ತೋರಿದ ಸಾಮರ್ಥ್ಯಕ್ಕಿಂತ ಉತ್ತಮ ಪ್ರದರ್ಶನ ತೋರಬಲ್ಲ ನೈಪುಣ್ಯತೆ ಹೊಂದಿದ್ದಾರೆ. ತಂಡ ಕೊನೆಯ ಕ್ಷಣದಲ್ಲಿ ಯಾಕೆ ಸೋಲುತ್ತಿದೆ ಎಂಬುದನ್ನು ಕಂಡುಹಿಡಿಯಬೇಕು. ಕೋಚ್ ವಿಂಗಡಾ ತಂಡದಲ್ಲಿ ಏನಾದರೂ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆಯೂ ಕೇರಳದ ತಂಡದ ಅಭಿಮಾನಿಗಳಿಗೆ ಇದೆ. ಅದನ್ನು ಮಾಡಿ ತೋರಿಸಬೇಕಾಗಿದೆ. ನಮ್ಮ ತಂಡ ಕೊನೆಯ 20 ನಿಮಿಷಗಳ ಅವಧಿಯಲ್ಲಿ ಸೋಲನುಭವಿಸಿರುತ್ತದೆ,‘ ಎಂದು ವಿಂಗಡಾ ಹೇಳಿದ್ದಾರೆ.
‘ಉಳಿದಿರುವ ಎಲ್ಲ ಆರು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದೇ ರೀತಿ ನಮ್ಮ ಅಭಿಮಾನಿಗಳನ್ನು ಗೌರವಿಸಬೇಕಾಗಿದೆ. ಎದುರಾಳಿ ತಂಡಕ್ಕೂ ತಾವು ಒಂದು ವಿಭಿನ್ನವಾದ ತಂಡದೊಂದಿಗೆ ಆಡುತ್ತಿದ್ದೇವೆ ಎಂಬ ಅರಿವಾಗಬೇಕು,‘ ಎಂದು ಇನ್ನೂ ಮನೆಯಂಗಣದಲ್ಲಿ ಜಯ ಕಾಣದ ಅಲ್ಲದೆ ಮನೆಯಂಗಣದಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡದ ಕೇರಳ ತಂಡದ ಕೋಚ್ ಹೇಳಿದರು. ವಿಶೇಷವೆಂದರೆ ಈ ಋತುವಿನ ಆರಂಭದಲ್ಲಿ ನಡೆದ ಪಂದ್ಯದಲ್ಲಿ ಕೇರಳ ತಂಡ ಎಟಿಕೆ ವಿರುದ್ಧ ಜಯ ಗಳಿಸಿತ್ತು. ಆ ಜಯವೇ ಇದುವರೆಗಿನ ಏಕೈಕ ಜಯವಾಗಿತ್ತು.
ಕೇರಳ ತಂಡದಲ್ಲಿ ಇಬ್ಬರು ಹೊಸ ಆಟಗಾರರು ಸೇರಿದ್ದಾರೆ. ಬೌರಿಂಗ್ಡೊವ್ ಬೊಡೊ ಮತ್ತು ನಾಂಗ್‌ಡಾಂಬಾ ನೊರೆಮ್ ಹೊಸ ಆಟಗಾರರು. ಇಬ್ಬರು ಯುವ ಆಟಗಾರರು ತಂಡಕ್ಕೆ ಅಗತ್ಯವಿರುವ ಗೋಲು ಗಳಿಸುವಲ್ಲಿ ನೆರವಾಗುತ್ತಾರೆಂಬ ನಂಬಿಕೆ. ಅದೇ ರೀತಿ ಹಲಿಚರಣ್ ನಾರ್ಜರಿ ಹಾಗೂ ಸಿ.ಕೆ, ವಿನೀತ್ ಚೆನ್ನೆ‘ಯಿನ್ ತಂಡವನ್ನು ಸೇರಿಕೊಂಡಿದ್ದಾರೆ. ಈಗ ಕೇರಳ ತಂಡಕ್ಕೆ ಸಂದೇಶ್ ಜಿಂಗಾನ್ ಪ್ರಮುಖ ಅಸ್ತ್ರವೆನಿಸಿದ್ದಾರೆ. ಎಟಿಕೆ ತಂಡಕ್ಕೆ ಕಲು ಅಚೆ ಹಾಗೂ ಎಡು ಗಾರ್ಸಿಯಾ ಮರಳಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಲಿದೆ. ಏಷ್ಯನ್ ಕಪ್ ಚಾಂಪಿಯನ್‌ಷಿಪ್ ವೇಳೆ ಗಾಯಗೊಂಡಿರುವ ಅನಾಸ್ ಎಡುಥೋಡಿಕಾ ಅವರು ಇನ್ನೂ ಚೇತರಿಸಿಕೊಂಡಿರುವ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.  ಪ್ಲೇ ಆಫ್  ತಲುಪಲು ಎಟಿಕೆ ತಂಡಕ್ಕೆ ಇನ್ನು ಆರು ಪಂದ್ಯಗಳಲ್ಲಿ ಆಡಬೇಕಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಹೊಂದಿರುವ ತಂಡದ ವಿರುದ್ಧ ಮೂರು ಪಂದ್ಯಗಳನ್ನು ಆಡಬೇಕಿದೆ. ಕೇರಳ ವಿರುದ್ಧ ಜಯ ಗಳಿಸಿದ್ದಲ್ಲಿ ಎಟಿಕೆ ತಂಡ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನ ತಲುಪಲಿದೆ.
‘ಕೇರಳದ ಬಗ್ಗೆ ನಮಗೆ ಅಪಾರ ಗೌರವವಿದೆ. ಕೇರಳ ತಂಡದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಸ್ಪಷ್ಟ ಅರಿವಿದೆ. ಅವರು ಒಂದು ಉತ್ತಮ ತಂಡ, ಹೊಸ ಕೋಚ್ ಸೇರ್ಪಡೆಯಾಗಿದೆ. ಹೊಸ ಕೋಚ್ ಸಮ್ಮುಖದಲ್ಲಿ ಪ್ರತಿಯೊಬ್ಬ ಆಟಗಾರರೂ ತಮ್ಮದಿಂದಾ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿರುತ್ತಾರೆ. ಉತ್ತಮ ಆಟಗಾರರಿಂದ ಕೂಡಿದ ಎಟಿಕೆ ಒಂದು ಉತ್ತಮ ತಂಡ,‘ ಎಂದು ಸ್ಟೀವ್ ಕೊಪ್ಪೆಲ್ ಹೇಳಿದ್ದಾರೆ. ಆಟಗಾರರ ವರ್ಗಾವಣೆಯಲ್ಲಿ ಕೇರಳ ತಂಡ ಅತಿ ಹೆಚ್ಚಾಗಿ ತೊಡಗಿಕೊಂಡಿದೆ.  ಚೈನೀಸ್ ಸೊಜೊರ್ನ್ ತಂಡವನ್ನು ಸೇರಿಕೊಳ್ಳುವುದಕ್ಕೆ ಮೊದಲು ಬೆಂಗಳೂರು ತಂಡದಲ್ಲಿದ್ದ ಎಡು ಗಾರ್ಸಿಯಾ  ಹಾಗೂ ಮಿಡ್‌ಫೀಲ್ಡ್‌ನಲ್ಲಿ ಕಲು ಅಚೆ ಉತ್ತಮ ಪ್ರದರ್ಶನ ತೋರಿದರೆ ಎಟಿಕೆ ಯಶಸ್ಸು ಸಾಧಿಸುವುದು ಖಚಿತ.

Related Articles