Friday, October 4, 2024

ರಾಜ್ಯಕ್ಕೆ ಕೀರ್ತಿ ತಂದ ಹಾಕಿ ಕೋಚ್‌ ಸುಂದರೇಶ್‌

ಸೋಮಶೇಖರ್‌ ಪಡುಕರೆ ಬೆಂಗಳೂರು:

ಸರಕಾರದ ಕ್ರೀಡಾ ಶಾಲೆಗಳಲ್ಲಿ ಓದಿ, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕ್ರೀಡಾ ಬದುಕಿನ ಆಗು ಹೋಗುಗಳ ಬಗ್ಗೆ ಅಪಾರ ಅನುಭವವಿರುತ್ತದೆ. ಹೀಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ಓದಿ ಕ್ರೀಡೆಯಲ್ಲಿ ಸಾಧನೆ ಮಾಡಿ, ತರಬೇತುದಾರರಾಗಿ, ತನ್ನಂತೆಯೇ ಇತರ ಕ್ರೀಡಾಪಟುಗಳ ಸಾಧನೆಗೆ ಶ್ರಮಿಸುತ್ತಿರುವ ಹಾಕಿ ಕೋಚ್‌ ಸುಂದರೇಶ್‌ ಮೈಸೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಹೊಸ ಅಧ್ಯಯಾಯವನ್ನೇ ಬರೆದಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ರಾಷ್ಟ್ರೀಯ ಸೀನಿಯರ್‌ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ 33 ವರ್ಷಗಳ ನಂತರ ಬೆಳ್ಳಿ ಪದಕ ಗೆಲ್ಲುವಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಸುಂದರೇಶ್‌ ಅವರ ಪಾತ್ರ ಪ್ರಮುಖವಾದುದು. ಏಕೆಂದರೆ ಈ ಎರಡೂ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಹೆಚ್ಚಿನ ಆಟಗಾರ್ತಿಯರು ಮೈಸೂರು ಕ್ರೀಡಾ ಹಾಸ್ಟೆಲ್‌ನವರು.

ಹಾಕಿಯಿಂದಲೇ ಬದುಕು ಆರಂಭ

ಶಿವಮೊಗ್ಗ ಮೂಲದವರಾದ ಸುಂದರೇಶ್‌ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶಿವಮೊಗ್ಗದಲ್ಲಿ ಹಾಕಿಯನ್ನು ಅಭಿವೃದ್ಧಿಗೊಳಿಸಿದ ಮನೋಹರ್‌ ಕಟ್ಗೆ ಅವರಲ್ಲಿ ತರಬೇತಿ ಪಡೆದು, ನಂತರ ಮಂಗಳೂರಿನಲ್ಲಿರುವ ಡಿವೈಇಎಸ್‌ ಕ್ರೀಡಾ ಇಲಾಖೆಯಲ್ಲಿದ್ದುಕೊಂಡು ಶಿಕ್ಷಣವನ್ನು ಮುಂದುವರಿಸಿದರು. ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವಾಗ ನಾಲ್ಕು ಬಾರಿ ಹಾಕಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌)ನಲ್ಲಿ ಕೋಚ್‌ ತರಬೇತಿ ಪಡೆದ ಸುಂದರೇಶ್‌ ಬೆಂಗಳೂರಿನ ಸೇಂಟ್‌ ಜೊಸೆಫ್‌ ಶಾಲೆಯಲ್ಲಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರದ ಯೋಜನೆಯಲ್ಲಿ ದೈಹಿಕ ಶಿಕ್ಷಣ ಮತ್ತು ಹಾಕಿ ಕೋಚ್‌ ಆಗಿ ಕಾರ್ಯನಿರ್ವಹಿಸಿದರು. ನಂತರ 1996ರಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಹಾಕಿ ತರಬೇತುದಾರರಾಗಿ ಸೇರ್ಪಡೆಗೊಂಡರು. ಮೊದಲು ಪುರುಷರ ಹಾಕಿ ತಂಡಕ್ಕೆ ಕೋಚ್‌ ಆಗಿದ್ದ ಸುಂದರೇಶ್‌ ಮೈಸೂರಿಗೆ ವರ್ಗಾವಣೆಗೊಂಡ ನಂತರ ಮಹಿಳಾ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.

ಡಿವೈಇಎಸ್‌ ಚಾಂಪಿಯನ್‌: 1999ರಲ್ಲಿ ಡಿವೈಇಎಸ್‌ (ಆವಾಗ ಡಿವೈಎಸ್) ತಂಡ ರಾಜ್ಯ ಎ ಡಿವಿಜನ್‌ ಹಾಕಿಯಲ್ಲಿ ಚಾಂಪಿಯನ್‌ ಪಟ್ಟ ಗೆದ್ದು, ಸೂಪರ್‌ ಡಿವಿಜನ್‌ಗೆ ತೇರ್ಗಡೆಹೊಂದಿತ್ತು. ಈ ಸಾಧನೆ ಮಾಡುವಲ್ಲಿ ಸುಂದರೇಶ್‌ ಅವರ ಪಾತ್ರ ಪ್ರಮುಖವಾಗಿತ್ತು. ಈ ನಡುವೆ ಹಲವು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ ಸುಂದರೇಶ್‌ ಅಲ್ಲಿನ ನೆಹರು ಕ್ರೀಡಾಂಗಣದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಹಾಕಿ ತರಬೇತಿ ನೀಡಲಾರಂಭಿಸಿದರು. ಇದರಿಂದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಗ್ರಾಮೀಣ ಪ್ರದೇಶದಿಂದ ತರಬೇತಿಗಾಗಿ ಸೇರುವ ಹಾಕಿ ಆಟಗಾರರ ಸಂಖ್ಯೆಯಲ್ಲಿ ಏರಿಕೆಯಾಗತೊಡಗಿತು. ಅನೇಕ ಆಟಗಾರರು ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾರತದ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಪಡೆದರು. ಇದರಿಂದಾಗಿ ಬೆಂಗಳೂರು ಮತ್ತು ಕೊಡಗು ಕೇಂದ್ರಕೃತವಾಗಿದ್ದ ಹಾಕಿ ಶಿವಮೊಗ್ಗಕ್ಕೂ ಬೆಳೆಯಿತು.

ಶಶಾಂಕ್‌, ಅಂಜಲಿ, ಕಾರ್ತಿಕ್‌, ಭರತ್‌ , ಸಂಜಯ್, ಕಾವೇರಮ್ಮ ಸೇರಿದಂತೆ ನೂರಾರು ಕ್ರೀಡಾಪಟುಗಳು ಹಾಕಿಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡರು.

ಕ್ರೀಡಾ ಹಾಸ್ಟೆಲ್‌ಗೆ ಗೌರವ: 33 ವರ್ಷಗಳ ಬಳಿಕ ಕರ್ನಾಟಕ ಮಹಿಳಾ ಹಾಕಿ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಬೆಳ್ಳಿ ಪದಕ ಗೆಲ್ಲುವ ಮೂಲಕ ಕರ್ನಾಟಕ ಮಹಿಳಾ ಹಾಕಿಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಇಲ್ಲಿ ಆಡಿರುವ ಹೆಚ್ಚಿನ ಆಟಗಾರರು ಮೈಸೂರಿನ ಡಿವೈಇಎಸ್‌ ಕ್ರೀಡಾ ಹಾಸ್ಟೆಲ್‌ನವರು. ಈಗ ಮುಂದಿನ ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಆಟಗಾರರನ್ನು ಆಯ್ಕೆ ಮಾಡುವಾಗ ಮೊದಲ ಎರಡು ಸ್ಥಾನ ಗೆದ್ದ ತಂಡಗಳಿಂದಲೇ ಆಯ್ಕೆ ಮಾಡಬೇಕಾಗುತ್ತದೆ. ಆದ್ದರಿಂದ ಈ ಬಾರಿ ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕದಿಂದ ಅದರಲ್ಲೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೈಸೂರು ಕ್ರೀಡಾ ಹಾಸ್ಟೆಲ್‌ನ ಹೆಚ್ಚಿನ ಆಟಗಾರ್ತಿಯರು ಸ್ಥಾನ ಪಡೆಯುವ ನಿರೀಕ್ಷೆ ಇದೆ.

ಸಂಖ್ಯೆಯಲ್ಲಿ ಏರಿಕೆ:  “ಹಾಕಿ ಕ್ರೀಡೆಗೆ ಈಗ ಉತ್ತಮ ಪ್ರೋತ್ಸಾಹ ನೀಡಲಾಗುತ್ತಿದೆ. ಕ್ರೀಡಾ ಇಲಾಖೆ ಪ್ರತಿಯೊಂದು ಕ್ರೀಡಾ ಪ್ರತಿಭೆಗಳಿಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದೆ. ಇದರಿಂದಾಗಿ ಹಾಕಿ ಕ್ರೀಡೆಗಾಗಿ ಕ್ರೀಡಾ ಹಾಸ್ಟೆಲ್‌ ಸೇರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.ಭವಿಷ್ಯದಲ್ಲಿ ರಾಷ್ಟ್ರ ತಂಡದಲ್ಲಿ ಹೆಚ್ಚಿನ ಆಟಗಾರರನ್ನು ನಿರೀಕ್ಷಿಸಬಹುದು. ಹಾಕಿ ಕರ್ನಾಟಕ ಕೂಡ ರಾಜ್ಯದಲ್ಲಿ ಹಾಕಿ ಕ್ರೀಡೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಮಾಜಿ ಆಟಗಾರರು, ಒಲಂಪಿಯನ್ನರು ಹಾಕಿ ಸಂಸ್ಥೆಯನ್ನು ಮುನ್ನಡೆಸುತ್ತಿರುವುದರಿಂದ ಪ್ರತಿಭೆಗಳನ್ನು ಗುರುತಿಸುವಲ್ಲಿ ನೆರವಾಗುತ್ತಿದೆ. ಕರ್ನಾಟಕ ರಾಜ್ಯ ಒಲಿಂಪಿಕ್ಸ್‌ ಸಂಸ್ಥೆಯು ಹಾಕಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದಾಗಿ ಆಟಗಾರರಿಗೆ ಉತ್ತಮ  ಪ್ರದರ್ಶನ ನೀಡಲು ಸ್ಫೂರ್ತಿ ದೊರೆಯುತ್ತದೆ,” ಎಂದು ಸುಂದರೇಶ್‌ ಹೇಳಿದ್ದಾರೆ.

Related Articles