Friday, October 4, 2024

ದೇಶಕ್ಕೆ ಕೀರ್ತಿ ತಂದ ಕನ್ನಡಿಗ ಮಣಿಕಂಠನ್‌ ಕುಮಾರ್‌

ಬೆಂಗಳೂರು: ಅಮೆರಿಕದ ಸಾಲ್ಟ್‌ ಲೇಕ್‌ ಸಿಟಿಯಲ್ಲಿ ನಡೆದ, ಅಂತಾರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಅಸೋಸಿಯೇಷನ್‌ ಆಯೋಜಿಸಿದ್ದ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕನ್ನಡಿಗ ಮಣಿಕಂಠನ್‌ ಕುಮಾರ್‌ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಕರ್ನಾಟಕ ಸರಕಾರ ಯುವಸಬಲೀಕರಣ ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ, ಇಂಡಿಯನ್‌ ಮೌಂಟೆನೆರಿಂಗ್‌ ಫೌಂಡೇಷನ್‌ ನೆರವಿನಿಂದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿರುವ ಮಣಿಕಂಠನ್‌ ಈಗಾಗಲೇ ಹಲವು ಅಂತಾರಾಷ್ಟ್ರೀಯ ಮತ್ತು ವಿಶ್ವಕಪ್‌ಗಳಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ಮೂಲಕ ಜಗತ್ತಿನ ಶ್ರೇಷ್ಠ ಪ್ಯಾರಾ ಕ್ಲೈಮರ್‌ಗಳಲ್ಲಿ ಒಬ್ಬರೆನಿಸಿದ್ದಾರೆ.

20ನೇ ಅಂತಾರಾಷ್ಟ್ರೀಯ ಪದಕ!!

ಇದುವರೆಗೂ ವಿಶ್ವಕಪ್‌ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 20 ಪದಕಗಳನ್ನು ಗೆದ್ದಿರುವ ಮಣಿಕಂಠನ್‌, ಜೂನ್‌ ತಿಂಗಳಲ್ಲಿ ಆಸ್ಟ್ರಿಯಾ ಮತ್ತು ಜುಲೈ ತಿಂಗಳಲ್ಲಿ ಸ್ವಿಜರ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಚಿನ್ನದ ಮೇಲೆ ಗುರಿ ಇಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ 5 ಚಿನ್ನ, 13 ಬೆಳ್ಳಿ ಹಾಗೂ  3 ಕಂಚಿನ ಪದಕಗಳನ್ನು ಗೆದ್ದಿರುವ ಮಣಿಕಂಠನ್‌ ತಮ್ಮ ಸಾಧನೆಗೆ ನೆರವಾದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ಸ್ಪೋರ್ಟ್‌ ಕ್ಲೈಮಿಂಗ್‌, ಇಂಡಿಯನ್‌ ಮೌಂಟೈನರಿಂಗ್‌ ಫೆಡರೇಷನ್‌ ಅನ್ನು ಸ್ಮರಿಸಿದ್ದಾರೆ.

ಸಾಲ್ಟ್‌ ಲೇಕ್‌ನಿಂದ ಮಾತನಾಡಿದ ಮಣಿಕಂಠನ್‌, “ಪ್ಯಾರಾ ಕ್ಲೈಮಿಂಗ್‌ ಕ್ರೀಡೆಗೆ ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಅದಕ್ಕೆ ನಾನು ಚಿರಋಣಿ, ಮುಂದಿನ ಎರಡು ತಿಂಗಳುಗಳಲ್ಲಿ ನಡೆಯುವ ಎರಡು ವಿಶ್ವಕಪ್‌ಗಳಲ್ಲಿ ಚಿನ್ನ ಗೆಲ್ಲುವ ಗುರಿ ಹೊಂದಿದ್ದೇನೆ,” ಎಂದರು.

ಅತ್ಯಂತ ಬಡ ಕುಟುಂದಿಂದ ಬಂದ ಮಣಿಕಂಠನ್‌ ಭಾರತದ ಮುಂಚೂಣಿಯಲ್ಲಿರುವ ಪ್ಯಾರಾ ಸ್ಪೋರ್ಟ್‌ ಕ್ಲೈಮರ್‌ ಎನಿಸಿದ್ದು ಮಾತ್ರವಲ್ಲದೆ, ತೇನ್ಸಿಂಗ್‌ ನೋರ್ಗೆ ಪ್ರಶಸ್ತಿ ಗಳಿಸಿದ ಹೆಮ್ಮೆಯ ಕನ್ನಡಿಗ.

Related Articles