Wednesday, May 31, 2023

ಹಾಕಿ: ಸಾಧಕ ತಂಡಗಳಿಗೆ ಅಭಿನಂದನೆ

ಬೆಂಗಳೂರು: ಭೋಪಾಲದಲ್ಲಿ ನಡೆದ 12ನೇ ಹಾಕಿ ಇಂಡಿಯಾ ಸೀನಿಯನ್‌ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ಮಹಿಳಾ ಹಾಕಿ ತಂಡ ಮತ್ತು ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯರನ್ನು ಗುರುವಾರ ಅತ್ಯಂತ ಗೌರವದಿಂದ ಸ್ವಾಗತಿಸಿ, ಗೌರವಿಸಲಾಯಿತು.

ಹಾಕಿ ಕರ್ನಾಟಕ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸಾಧಕ ತಂಡಗಳ ಹಾಕಿ ಆಟಗಾರರನ್ನು ಹಿರಿಯ ಆಟಗಾರರು, ಮಾಜಿ ಒಲಿಂಪಿಯನ್ನರು, ತರಬೇತುದಾರರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

33 ವರ್ಷಗಳ ಬಳಿಕ ಕರ್ನಾಟಕ ಮಹಿಳಾ ಹಾಕಿ ತಂಡ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದೆ. ಈ ತಂಡದಲ್ಲಿ 10 ಆಟಗಾರರು ಮೈಸೂರು ಡಿವೈಇಎಸ್‌  ಕ್ರೀಡಾ ಹಾಸ್ಟೇಲ್‌ನ ಆಟಗಾರ್ತಿಯರು ಸೇರಿದ್ದಾರೆ. ಇತ್ತೀಚಿಗೆ ನಡೆದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿತ್ತು, ಅಲ್ಲಿಯೂ ಹೆಚ್ಚಿನ ಆಟಗಾರ್ತಿಯರು ಮೈಸೂರು ಕ್ರೀಡಾ ಹಾಸ್ಟೆಲ್‌ನವರೇ ಆಗಿದ್ದರು.

ಗುರುವಾರ ಬೆಳಿಗ್ಗೆ ಮಹಿಳಾ ಹಾಗೂ ಪುರುಷ ಹಾಕಿ ತಂಡಗಳು ಭೋಪಾಲ್‌ನಿಂದ ಬೆಂಗಳೂರಿಗೆ ಆಗಮಿಸಿದ್ದು, ನಗರದ ಸ್ಥಳೀಯ ಹೊಟೇಲ್‌ನಲ್ಲಿ ಆಟಗಾರರಿಗೆ ಅಭಿನಂದನೆ ಸಲ್ಲಿಸಲಾಯಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯಕ್ತ ಡಾ. ಎಚ್‌.ಎನ್‌. ಗೋಪಾಲಕೃಷ್ಣ ಅವರು ಇತ್ತಂಡಗಳ ಸಾಧನೆಯ ಗುಣಗಾನ ಮಾಡಿದರು, “ಉತ್ತಮ ರೀತಿಯಲ್ಲಿ ಸಂಘಟಿತ ಹೋರಾಟ ನೀಡಿದರೆ ಯಶಸ್ಸು ಸಾಧ್ಯ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಸೇರಿದಂತೆ ಇತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುತ್ತಿರುವುದು ಖುಷಿಯ ಸಂಗತಿ. ಸರಕಾರ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಅದಕ್ಕೆ ಪ್ರತಿಯಾಗಿ ಕ್ರೀಡಾಪಟುಗಳು ರಾಜ್ಯಕ್ಕೆ ಕೀರ್ತಿ ತರುವಂಥ ಸಾಧನೆ ಮಾಡಬೇಕು,” ಎಂದರು.

ಆಯುಕ್ತರು ಪ್ರತಿಯೊಬ್ಬ ಹಾಕಿ ಆಟಗಾರರನ್ನು ವೈಯಕ್ತಿಕ ಮಾತನಾಡಿಸಿ, ಕ್ರೀಡಾ ಹಾಸ್ಟೆಲ್‌ನಲ್ಲಿ ಅವರ ಅನುಭವವನ್ನು ಆಲಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ (ಆಡಳಿತ)ರಾದ ಡಾ. ಜಿತೇಂದ್ರ ಶೆಟ್ಟಿ ಅವರು ಮಾತನಾಡಿ, “ಈ ಸಾಧನೆಯ ಹಿಂದೆ ನಿರಂತರ ಪರಿಶ್ರಮವಿದೆ. ಇದು ಇದ್ದಕ್ಕಿದ್ದಂತೆ ಮೂಡಿ ಬಂದ ಯಶಸ್ಸಲ್ಲ. ಇದು ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗೆಲ್ಲುವುದುಕ್ಕೆ ಈ ಸಾಧನೆ ಸ್ಫೂರ್ತಿಯಾಗಬೇಕು,” ಎಂದರು.

ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ, ಭಾರತ ಹಾಕಿ ತಂಡದ ಮಾಜಿ ನಾಯಕ ವಿ.ಆರ್‌.ರಘುನಾಥ್‌ ಹಾಗೂ ಹಾಕಿ ಕರ್ನಾಟಕ ಮತ್ತು ಕ್ರೀಡಾ ಇಲಾಖೆಯ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.

ಉತ್ತರ ಕರ್ನಾಟಕಕ್ಕೆ ಹಾಕಿ ಟರ್ಫ್‌ಗೆ ಒತ್ತಾಯ:

 

ಪಂಜಾಬ್‌, ಹರಿಯಾಣ ಹಾಗೂ ಒಡಿಶಾ ವಿರುದ್ಧದ ಪಂದ್ಯಗಳಲ್ಲಿ ನಮ್ಮ ಆಟಗಾರರು ಉತ್ತಮ ಸಾಧನೆ ತೋರಿದ್ದಾರೆ. ಇದರಲ್ಲಿ ಹೆಚ್ಚಿನ ಆಟಗಾರ್ತಿಯರು ಉತ್ತರ ಕರ್ನಾಟಕದವರು. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಉತ್ತಮ ಟರ್ಫ್‌ ಇಲ್ಲ. ಇದನ್ನು ಗಮನಿಸಿದ ಹಾಕಿ ಕರ್ನಾಟಕದ ಕಾರ್ಯದರ್ಶಿ ಹಾಗೂ ಮಾಜಿ ಒಲಿಂಪಿಯನ್‌ ಡಾ. ಎ.ಬಿ. ಸುಬ್ಬಯ್ಯ ಅವರು, ಉತ್ತರ ಕರ್ನಾಟಕದಲ್ಲಿ ಟರ್ಫ್‌ ಹಾಕಿ ಅಂಗಣವನ್ನು ನಿರ್ಮಿಸುವಂತೆ ಈ ಸಂದರ್ಭದಲ್ಲಿ ಕ್ರೀಡಾ ಆಯುಕ್ತರಲ್ಲಿ ಮನವಿ ಮಾಡಿಕೊಂಡರು. ಮುಂದಿನ ಯೋಜನೆಯಲ್ಲಿ ಹುಬ್ಬಳ್ಳಿಯಲ್ಲಿ ಹಾಕಿ ಟರ್ಫ್‌ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಯಕ್ತರು ಭರವಸೆ ನೀಡಿದ್ದಾರೆ.

Related Articles