Saturday, July 27, 2024

ಮೀನುಗಾರರ ಮನೆಯಂಗಣದಿಂದ ಕುಸ್ತಿಯ ಕಣಕ್ಕೆ ಬೆಂಗ್ರೆಯ ಧನುಷ್

ಸೋಮಶೇಖರ್ ಪಡುಕರೆ ಬೆಂಗಳೂರು

ಸದಾ ಕಡಲಿನಬ್ಬರ, ಕಡಲನ್ನೇ ನಂಬಿಕೊಂಡಿರುವ ಮೀನುಗಾರರ ಕುಟಂಬ, ನಗರ ಹಾಗೂ ಊರನ್ನು ಪ್ರತ್ಯೇಕಿಸುವ ನದಿ, ಸದಾ ಚುರುಕಾಗಿರುವ ಜನ, ಶಾಂತಿಯ ನೆಲೆಗೆ ಕ್ರೀಡೆಯ ಸ್ಪರ್ಷ. ಕುಸ್ತಿ, ಕಬಡ್ಡಿ ಹಾಗೂ ಫುಟ್ಬಾಲ್ ಕ್ರೀಡೆಗಳನ್ನೇ ಮೈಗೂಡಿಸಿಕೊಂಡಿರುವ ಯುವಕರು…ಈ ಯುವಕರ ನಡುವೆ ಭವಸೆಯ ಕುಸ್ತಿಪಟು ಧನುಷ್ ಖಾರ್ವಿ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದೈಹಿಕ ಶಿಕ್ಷಣ ಪದವಿ ಪಡೆಯುತ್ತಿರುವ ಧನುಷ್, ಖಾರ್ವಿ ಸಮುದಾಯದಿಂದ ಕ್ರೀಡೆಯಲ್ಲಿ ಆಸಕ್ತಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವ ಯುವ ಕುಸ್ತಿಪಟು. ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಕುಸ್ತಿ ಚಾಂಪಿಯನ್‌ಷಿಪ್‌ನ 61 ಕೆಜಿ ಫ್ರೀ ಸ್ಟೈಲ್  ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಬೆಂಗರೆಯವರ ಪಾಲಿಗೆ ಚಿನ್ನ ಗೆದ್ದಂತೆ.

ಬೆಂಗ್ರೆಯೇ ಬೇರೆ 

ಮಂಗಳೂರಿನ ಪೂರ್ವ ದಿಕ್ಕಿನಲ್ಲಿ ಸಮುದ್ರ ಮತ್ತು ನದಿಗೆ ತಾಗಿಕೊಂಡಿರುವ ಪುಟ್ಟ ಊರು ಬೆಂಗರೆ ಅಥವಾ ಬೆಂಗ್ರೆ.  ಸಾಮಾನ್ಯ ಮಕ್ಕಳಂತೆ  ಇಲ್ಲಿಯ ಮಕ್ಕಳು ಬರೇ ಕ್ರಿಕೆಟ್ ಆಡಿಕೊಂಡಿದ್ದಾರೆ ಎಂದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಬೆಂಗ್ರೆಯಲ್ಲಿ ಕುಸ್ತಿ, ಕಬಡ್ಡಿ ಹಾಗೂ ಫುಟ್ಬಾಲ್ ಕ್ರೀಡೆಗೆ ಮೊದಲ ಪ್ರಾಶಸ್ತ್ಯ. ಈ ಕಾರಣಕ್ಕಾಗಿಯೇ ಅಲ್ಲಿ ೫೦ಕ್ಕೂ ಹೆಚ್ಚು  ಕುಸ್ತಿಪಟುಗಳು, ವೀರಭಾರತಿ ವ್ಯಾಯಾಮ ಶಾಲೆಯಲ್ಲಿ ಕುಸ್ತಿಯ ಸ್ಪರ್ಧೆ,  ಸ್ಥಳೀಯವಾಗಿ ನಡೆಯುವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಂಗರೆ ಕುಸ್ತಿಪಟುಗಳು ಜಯ ಗಳಿಸುತ್ತಿರುವುದೇ ಸಾಕ್ಷಿಯಾಗಿದೆ. ಮೋಹನ್ ಅಮೀನ್ ,ರಮಾನಂದ ಮಾಸ್ತರ್ ಹಾಗೂ ಆನಂದ ಮಾಸ್ತರ್ ಅವರಲ್ಲಿ  ಪಳಗಿರುವ ಕುಸ್ತಿಪಟುಗಳು ರಾಜ್ಯಮಟ್ಟದಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಕೇಸರಿಯನ್ನು ಕೆಣಕುವ ಸಾಮರ್ಥ್ಯಹೊಂದಿರುವವರು.

ಅಪ್ಪ, ಅಮ್ಮನ ಆರೈಕೆ 

ಮಂಗಳೂರಿನ ರೊಸಾರಿಯೋ ಕಾಲೇಜಿನ ಹಳೆ ವಿದ್ಯಾರ್ಥಿ ಧನುಷ್ ಪ್ರತಿಯೊಂದು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ನಾರಾಯಣ ಖಾರ್ವಿ ಹಾಗೂ ಸುಶೀಲ ಖಾರ್ವಿ ಅವರ ಮಗನಾಗಿರುವ ಧನುಷ್ ಕುಟುಂಬಕ್ಕೆ ತಾಯಿಯೇ ಆಧಾರ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಮೀನುಮಾರುಕಟ್ಟೆಯಲ್ಲಿ ಮೀನು ಮಾರಿ ಮಗನ ಶಿಕ್ಷಣ ನೋಡಿಕೊಳ್ಳುತ್ತಿದ್ದಾರೆ. ತನ್ನ ಮಗ ಓದಬೇಕು, ಶಿಕ್ಷಕನಾಗಬೇಕು ಹೊರತು ಕಷ್ಟದ ಬದುಕಾಗಿರುವ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವುದು ಬೇಡ ಎಂಬುದು ನಾರಾಯಣ ಖಾರ್ವಿ ಅವರ ಆಸೆಯಾಗಿತ್ತು. ತಂದೆಯ ಆಸೆಯನ್ನು ಈಡೇರಿಸುವುದಕ್ಕಾಗಿ, ತಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಾಲಾ, ಕಾಲೇಜು ಮಟ್ಟದಲ್ಲಿ ಪದಕಗಳನ್ನು ಗೆದ್ದು, ದಸರಾ ಕ್ರೀಡಾಕೂಟಗಳಲ್ಲಿ ಮಿಂಚಿ ಈಗ ದೈಹಿಕ ಶಿಕ್ಷಕರಾಗುವುದರ ಜತೆಯಲ್ಲಿ ವೃತ್ತಿಪರ ಕುಸ್ತಿಪಟುವಾಗುವ ಗುರಿಹೊಂದಿದ್ದಾರೆ.

ಉಪಕುಲಪತಿ ಡಾ. ಕಿಶೋರ್ ಕುಮಾರ್ ಪ್ರೋತ್ಸಾಹ

ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆಯಲ್ಲಿ ಬಿಪಿಎಡ್ ಮಾಡುತ್ತಿರುವ ವಿದ್ಯಾರ್ಥಿಗಳು ಈ ಬಾರಿ ಕುಸ್ತಿಯನ್ನು ವಿಶೇಷ ವಿಷಯವನ್ನಾಗಿ ತೆಗೆದುಕೊಂಡಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದ ಡಾ. ಕಿಶೋರ್ ಕುಮಾರ್ ಈಗ ಮಂಗಳೂರು ವಿವಿಯ ಉಪಕುಲಪತಿಗಳಾಗಿದ್ದಾರೆ. ಅವರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕ್ರೀಡೆಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸುತ್ತಿದೆ.

ಕುಸ್ತಿ 

‘ಡಾ. ಕಿಶೋರ್ ಕುಮಾರ್ ಸರ್ ಕುಸ್ತಿ ಮಾತ್ರವಲ್ಲದೆ ಎಲ್ಲ ರೀತಿಯ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕರು ಉಪಕುಲಪತಿಗಳಾಗಿರುವುದು ನಮ್ಮ ಅದೃಷ್ಟ,‘  ಎಂದು ಧನುಷ್ ಹೇಳಿದ್ದಾರೆ.
ಶಾರದಾ ಕೇಸರಿ, ತುಳು ಕೇಸರಿ ಮಾತ್ರವಲ್ಲದೆ ಲೋಕಯ್ಯ ಶೆಟ್ಟಿ ಸ್ಮಾರಕ ಕುಸ್ತಿ ಸ್ಪರ್ಧೆ ನಡೆಯುತ್ತಿದೆ.

Related Articles