Friday, April 19, 2024

ದಿಲ್ಲಿಯಲ್ಲಿ ನಡೆಯಿತು ಕಬಡ್ಡಿ ಡ್ರಾಮಾ!

ಸ್ಪೋರ್ಟ್ಸ್ ಮೇಲ್ ವರದಿ

ನ್ಯಾಯಾಲಯದ ಸಮ್ಮುಖದಲ್ಲಿ ಕಬಡ್ಡಿ ಆಯ್ಕೆ ಟ್ರಯಲ್ಸ್ ನಡೆಯಬೇಕೆಂಬ ಆದೇಶ ಗೊಂದಲದ ಗೂಡಾಗಿ ಕೊನೆಗೊಂಡಿತು. ಆಯ್ಕೆ ಟ್ರಯಲ್ಸ್ ಬರಬೇಕಾಗಿದ್ದ ಭಾರತ ತಂಡದ ಆಟಗಾರರು ಗೈರಾದ ಕಾರಣ ನ್ಯಾಯಾಲಯದ ಉದ್ದೇಶ ಈಡೇರಲೇ ಇಲ್ಲ. ಕೇವಲ ಹೆಸರಿಗೆ ಮಾತ್ರ ಟ್ರಯಲ್ಸ್ ಡ್ರಾಮ ನಡೆಯಿತೇ ಹೊರತು ಅದರರಿಂದ ಫಲಿತಾಂಶ ಹೊರಬೀಳಲಿಲ್ಲ.

ಆಯ್ಕೆಯಲ್ಲಿ ಗೊಂದಲ ಇದೆ ಎಂದು ನ್ಯೂ ಕಬಡ್ಡಿ ಫೆಡರೇಷನ್ ಆ್ ಇಂಡಿಯಾದ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಆದ್ದರಿಂದ ಸೆ. ೧೫ರಂದು ನ್ಯಾಯಲಯದ ನೇಮಿಸಿದ ವೀಕ್ಷಕರ ಸಮ್ಮುಖದಲ್ಲಿ ಆಯ್ಕೆ ಟ್ರಯಲ್ಸ್ ನಡೆಸುವಂತೆ ದಿಲ್ಲಿ ಹೈಕೋರ್ಟ್ ಆದೇಶಿಸಿತ್ತು. ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಆಟಗಾರರು ಈ ಟ್ರಯಲ್ಸ್‌ಗೆ ಆಗಮಿಸಲೇ ಇಲ್ಲ.
ದಿಲ್ಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದ ಕೆ.ಡಿ. ಜಾದವ್ ಕುಸ್ತಿ ಕಣದಲ್ಲಿ ಪಂದ್ಯ ನಡೆಯಬೇಕಾಗಿತ್ತು. ಆದರೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು  ಆದರೆ ಆಟಗಾರರು ಗೈರಾಗಿದ್ದರು.  ಎರಡೂ ಫೆಡರೇಷನ್‌ನ ಪದಾಧಿಕಾರಿಗಳಿಗೆ ಇದರಿಂದ ಫಲಿತಾಂಶ ಸಿಗಲಿಲ್ಲ.
ನ್ಯೂ ಕಬಡ್ಡಿ ಫೆಡರೇಷನ್ ಆಫ್  ಇಂಡಿಯಾದ ಆಟಗಾರರು ಆಗಸ್ಟ್ ೧೫ರಿಂದ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು. ಈ ಆಟಗಾರರ ತಂಡ ಮಾತ್ರ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿತ್ತು. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಹಾಗೂ ಬೆಳ್ಳಿ ಗೆದ್ದಿದ್ದ ಪುರುಷ ಹಾಗೂ ಮಹಿಳಾ ತಂಡದ ಆಟಗಾರರು ಟ್ರಯಲ್ಸ್‌ಗೆ ಸಿದ್ಧರಾಗಲಿಲ್ಲ. ನಮಗೆ ಯಾವ ಕಾರಣಕ್ಕಾಗಿ ಬರಹೇಳಿದ್ದಾರೆಂಬುದು ಸರಿಯಾಗಿ ಗೊತ್ತಿಲ್ಲ, ನಮಗೆ ಬರಲು ಹೇಳಿದ್ದರು, ಹಾಗಾಗಿ ಬಂದಿದ್ದೇವೆ ಎಂದಷ್ಟೇ ಕೆಲವು ಆಟಗಾರರು ಪ್ರತಿಕ್ರಿಯೆ ನೀಡಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಆಯ್ಕೆಯಲ್ಲಿ ಮೋಸ ನಡೆದಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಮಹಿಪಾಲ್ ಸಿಂಗ್ ದಿಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಹಾಗೂ ವಿ.ಕೆ. ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆಯ್ಕೆ ಟ್ರಯಲ್ಸ್ ನಡೆಸುವಂತೆ ಆದೇಶ ಹೊರಡಿಸಿತ್ತು. ಟ್ರಯಲ್ಸ್‌ಗೆ ವೀಕ್ಷಕರಾಗಿ ಆಗಮಿಸಿದ್ದ ನಿವೃತ್ತ ನ್ಯಾಯಾಧೀಶ ಎಸ್.ಪಿ. ಗರಗ್ ಹೆಚ್ಚು ಮಾತನಾಡದೆ ನಿರ್ಗಮಿಸಿದರು. ನಾನಿಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸಲು ಬಂದಿರುವೆ. ಆಯ್ಕೆ ಟ್ರಯಲ್ಸ್ ಗಮನಿಸಲು ಬಂದಿರುವೆ. ಈ ಕುರಿತು ವರದಿಯನ್ನು ಸಲ್ಲಿಸುವೆ, ಎಂದಷ್ಟೇ ಅವರು ಹೇಳಿದರು. ತರಬೇತುದಾರರು ಕೂಡ ಉತ್ತರ ನೀಡುವಲ್ಲಿ ವಿಲರಾದರು. ನ್ಯೂಕಬಡ್ಡಿ ಫೆಡರೇಷನ್ ಆಫ್  ಇಂಡಿಯಾದ ಪದಾಧಿಕಾರಿಗಳೂ ಈ ಕುರಿತು ಪ್ರತಿಕ್ರಿಯೆ ನೀಡಲು ಈ ಸಮಯಕ್ಕೆ ಸಿಗುತ್ತಿಲ್ಲ.
ಎಕೆಎಫ್ ಐ  ಜಂಟಿ ಕಾರ್ಯದರ್ಶಿ ಮಾತನಾಡಿ, ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡ ಆಟಗಾರರು ಹಾಗೂ ತಂಡದಲ್ಲಿ ಸ್ಥಾನ ಸಿಗದ ಆಟಗಾರರ ನಡುವೆ ಪಂದ್ಯ ನಡೆಸಬೇಕೆಂದು ನ್ಯಾಯಾಲಯದ ಆದೇಶದಲ್ಲಿ ಇಲ್ಲ ಎಂದು ಹೇಳಿದರು.
ಎನ್‌ಕೆಎಫ್ ಐ  ಪರ ವಕೀಲ ಬಿಎಸ್. ನಾಗರ್ ಮಾತನಾಡಿ, ಆಟಗಾರರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಅವರಿಗೆ ಸೋಲುತ್ತೇವೆಂಬ ಭಯ ಇದ್ದಿತ್ತು, ಈ ಕಾರಣಕ್ಕಾಗಿ ಅಂಗಣಕ್ಕೆ ಬಂದಿಲ್ಲ. ಈ ಕುರಿತು ನಾವು ನ್ಯಾಯಾಲಯಕ್ಕೆ ದೂರು ನೀಡಲಿದ್ದೇವೆ ಎಂದರು. ಅಕ್ಟೋಬರ್ ೩೦ರಂದು ಮುಂದಿನ ವಿಚಾರಣೆ ನಡೆಯಲಿದೆ.

Related Articles