Saturday, April 20, 2024

ಬಾಂಗ್ಲಾ ಹುಲಿಗಳ ಜಯದ ಹೆಜ್ಜೆ

ಏಜೆನ್ಸೀಸ್ ದುಬೈ

ಮುಷ್ಫಿಕರ್ ರಹೀಂ ಅವರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಏಷ್ಯಾಕಪ್ ಏಕದಿನ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ  137 ರನ್‌ಗಳ ಜಯ ಗಳಿಸಿ ಶುಭಾರಂಭ  ಕಂಡಿದೆ.

150 ಎಸೆತಗಳನ್ನೆದುರಿಸಿದ ಮುಷ್ಫಿಕರ್ 11 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಜೀವನ ಶ್ರೇಷ್ಠ 144 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ಲಸಿತ್ ಮಾಲಿಂಗ 4 ವಿಕೆಟ್ ಗಳಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಉತ್ತಮ ರೀತಿಯಲ್ಲಿ ಮರಳಿದರೂ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಲಂಕಾ ಪಡೆ 261 ರನ್ ಗುರಿ ತಲಪುವಲ್ಲಿ ವಿಫಲವಾಗಿ ಕೇವಲ 124 ರನ್‌ಗೆ ಸರ್ವ ಪತನ ಕಂಡಿತು.
5 ಓವರ್‌ಗಳು ಮುಗಿಯುತ್ತಿದ್ದಂತೆ ಶ್ರೀಲಂಕಾ ತಂಡ 38 ರನ್‌ಗೆ ಅಮೂಲ್ಯ 4 ವಿಕೆಟ್ ಕಳೆದುಕೊಂಡಾಗಲೇ ಸೋಲು ಖಚಿತವಾಗಿತ್ತು. ಲಂಕಾ ನಾಯಕ ಏಂಜಲೋ ಮ್ಯಾಥ್ಯೂಸ್ ವಿಕೆಟ್ ಉರುಳುತ್ತಿದ್ದಂತೆ ಲಂಕೆ ಮತ್ತೆ ಪೆವಿಲಿಯನ್ ಪರೇಡ್ ಮುಂದುವರಿಸಿತು. ಮಾಲಿಂಗ ಮೊದಲ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿಕೆಟ್ ಉರುಳಿಸಿದಾಗ ಬಾಂಗ್ಲಾ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಲಕ್ಷಣ ತೋರಿತ್ತು. ಆದರೆ ಮುಷ್ಫಿಕರ್ ಹಾಗೂ ಮೊಮ್ಮದ್ ಮಿಥುನ್ (63) ತಂಡಕ್ಕೆ ಆಧಾರವಾದರು.
ಕೈ ಮೂಳೆ ಮುರಿದಿದ್ದರೂ ತಮೀಮ್ ಇಕ್ಬಾಲ್ 11ನೇ ಆಟಗಾರನಾಗಿ ಅಂಗಣಕ್ಕಿಳಿದು ಕ್ರೀಡಾ ಸ್ಫೂರ್ತಿ ಮೆರೆದರು. ನಿರೀಕ್ಷೆಯಂತೆ ಮುಷ್ಫಿಕರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್ 
ಬಾಂಗ್ಲಾದೇಶ 
49.3 ಓವರ್‌ಗಳಲ್ಲಿ 161
(ಮುಷ್ಫಿಕರ್ ರಹೀಮ್ 144, ಮಿಥುನ್ 63, ಲಸಿತ್ ಮಾಲಿಂಗ  23ಕ್ಕೆ 4)
ಶ್ರೀಲಂಕಾ 
35.2 ಓವರ್‌ಗಳಲ್ಲಿ 124
(ತರಂಗ 27, ಪೆರೆರಾ 29, ಲಕ್ಮಲ್ 20 ಮಶ್ರೆ ಮೊರ್ತಾಜಾ 25ಕ್ಕೆ 2, ಮುಸ್ತಾಫಿಜುರ್ ರೆಹಮಾನ್ 20ಕ್ಕೆ 2, ಮೆಹಿದಿ ಹಸನ್ 20ಕ್ಕೆ2)

Related Articles