Thursday, April 18, 2024

ದಸರಾ: ಒಲಿಂಪಿಕ್ಸ್ ಕ್ರೀಡೆಗಳಿಗಿಂತ ಸಾಂಪ್ರದಾಯಿಕ ಕ್ರೀಡೆಗಳಿಗಿರಲಿ

ಸ್ಪೋರ್ಟ್ಸ್ ಮೇಲ್ ವರದಿ

ಕೇವಲ ಒಲಿಂಪಿಕ್ಸ್ ಕ್ರೀಡೆಗಳಿಗೆ ಅವಕಾಶ ನೀಡುವುದು, ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ರೀಡಾ ಸಂಸ್ಥೆಗಳ ಕ್ರೀಡೆಗಳನ್ನೇ ನಡೆಸುವುದಾದರೆ ಅದನ್ನು ದಸರಾ ಕ್ರೀಡಾಕೂಟ ಎಂದು ಕರೆಯುವುದು ಸೂಕ್ತವಲ್ಲ. ಅದನ್ನು ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ ಎಂದು ಕರೆಯುವುದೇ ಸೂಕ್ತ. ನೈಸರ್ಗಿಕ ವಿಕೋಪ ಕೇವಲ ಸಾಂಪ್ರದಾಯಿಕ ಕ್ರೀಡೆಗಳಿಗೆ ಮಾತ್ರ ಅನ್ವಯಿಸುವುದೇ?

ಒಲಿಂಪಿಕ್ಸ್ ಕ್ರೀಡೆಗಳಿಗೆ ವರ್ಷದಲ್ಲಿ ಹಲವು ಅವಕಾಶಗಳಿರುತ್ತವೆ. ಆದರೆ ಒಲಿಂಪಿಕ್ಸ್ ಮಾನ್ಯತೆ ಪಡೆಯದ ಕ್ರೀಡೆಗಳಿಗೆ ಅವಕಾಶ ಕಡಿಮೆ. ಆದ್ದರಿಂದ ಸರಕಾರ ಈಬಾರಿ ಒಲಿಂಪಿಕ್ಸ್ ಮಾನ್ಯತೆ ಇಲ್ಲದ ಸಾಂಪ್ರದಾಯಿಕ ಕ್ರೀಡೆಗಳಿಗೆ ಅವಕಾಶ ಕೊಡುವುದು ಉತ್ತಮ. ಹಣವೂ ಉಳಿಯುತ್ತೆ, ಸಂಪ್ರದಾಯವನ್ನೂ ಕಾಯ್ದುಕೊಂಡಂತಾಗುತ್ತೆ.
ಈ ಬಾರಿ ಕೊಡಗಿನಲ್ಲಿ ನೆರೆ ಬಂದ ಕಾರಣ ದಸರಾ ಕ್ರೀಡಾಕೂಟವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದು ಸರಕಾರದ ತೀರ್ಮಾನ. ಸರಕಾರ, ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಒಲಿಂಪಿಕ್ಸ್ ಸಂಸ್ಥೆ ಜಂಟಿಯಾಗಿ ಆಯೋಜಿಸುತ್ತಿವೆ, ಇದಕ್ಕಾಗಿ ಸೋಮವಾರ ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯಲ್ಲಿ ಸಭೆ  ಕರೆಯಲಾಗಿದೆ. ಈ ಸಭೆಗೆ ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ಮಾನ್ಯತೆ ಪಡೆದ ಕ್ರೀಡೆಗಳನ್ನು  ಮಾತ್ರ ಆಹ್ವಾನಿಸಲಾಗಿದೆ ಎಂಬ ಸುದ್ದಿ ಇದೆ.
ದಸರಾ ಕ್ರೀಡಾಕೂಟ ಅದು ರಾಜ್ಯದ ಎಲ್ಲ ಸಾಂಪ್ರದಾಯಿಕ ಕ್ರೀಡೆಗಳಿಗೆ ಅವಕಾಶ ನೀಡುವಂಥ ಕೂಟ. ವರ್ಷಕ್ಕೊಮ್ಮೆ ಒಲಿಂಪಿಕ್ಸ್‌ನಲ್ಲಿ ಮಾನ್ಯತೆ ಇಲ್ಲದ ಕ್ರೀಡೆಗಳಿಗೆ ರಾಜ್ಯಮಟ್ಟದಲ್ಲಿ ಸ್ಪರ್ಧೆ ನಡೆಸಲು, ಕ್ರೀಡಾಪಟುಗಳಿಗೆ ಪಾಲ್ಗೊಳ್ಳಲು ಅವಕಾಶ ಇರುವಂಥ ಕ್ರೀಡಾಕೂಟ, ಆದರೆ ಈ ಬಾರಿ ಹೆಚ್ಚಿನ ಸಾಂಪ್ರದಾಯಿಕ ಕ್ರೀಡೆಗಳಿಗೆ ಅವಕಾಶ ಇಲ್ಲ ಎಂಬ ಸುದ್ದಿ ಕೇಳಿ ಬಂದಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೂ  ದಸರಾ ಕ್ರೀಡಾಕೂಟಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಇಲ್ಲಿಯ ದಾಖಲೆಗಳು ರಾಷ್ಟ್ರೀಯ ಒಲಿಂಪಿಕ್ಸ್‌ಗೆ ಅನ್ವಯ ಪಡುವುದೂ ಇಲ್ಲ. ಹಾಗಾದಲ್ಲಿ ಬರೇ ಒಲಿಂಪಿಕ್ಸ್ ಕ್ರೀಡೆಗಳನ್ನೇ ದಸರಾ ಕ್ರೀಡಾಕೂಟದಲ್ಲಿ ನಡೆಸುವುದು ಎಷ್ಟು ಸೂಕ್ತ?
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ರಾಜ್ಯ ಸರಕಾರ ಈ ಬಾರಿ ಬ್ರೇಕ್ ಹಾಕಿದೆ. ಜಿಲ್ಲಾ ಮಟ್ಟದಲ್ಲಿ ಗೆದ್ದವರು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಇದುವರೆಗೂ ನಡೆದುಕೊಂಡು ಬಂದ ಸಂಪ್ರದಾಯ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ಪ್ರತಿಯೊಂದು ಜಿಲ್ಲೆಯಿಂದ ಪ್ರತಿಯೊಂದು ಕ್ರೀಡಾ ವಿಭಾಗದಿಂದ ಸ್ಪರ್ಧಿಗಳು ಪಾಲ್ಗೊಳ್ಳಬೇಕು ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ.
ಒಲಿಂಪಿಕ್ಸ್ ಕ್ರೀಡೆಗಳಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಆದರೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಅಷ್ಟು ಅವಕಾಶ ಇರುವುದಿಲ್ಲ. ದಸರಾ ಕ್ರೀಡಾಕೂಟವೇ ಅವರ ಪಾಲಿಗೆ ರಾಜ್ಯಮಟ್ಟದ ಒಲಿಂಪಿಕ್ಸ್‌ಇದ್ದಂತೆ. ಅದಕ್ಕೂ ತಡೆಯೊಡ್ಡಿದರೆ ದಸರಾ ಕ್ರೀಡಾಕೂಟ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದು ಸ್ಪಷ್ಟ. ಸರಕಾರ ಹೇಳಿದಂತೆ ಕ್ರೀಡಾ ಸಂಸ್ಥೆಗಳು ಇರಬೇಕೇ ವಿನಃ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು ಹೇಳಿದಂತೆ ಕ್ರೀಡಾ ಇಲಾಖೆ ಕೇಳುವ ಹಂತ ತಲುಪಬಾರದು. ರಾಜ್ಯದ ಕ್ರೀಡಾ ಸೌಲಭ್ಯ ಕೇವಲ ಬೆಂಗಳೂರಿಗೆ ಸೀಮಿತವಾದರೆ ಸಾಲದು. ಇತರ ಜಿಲ್ಲೆಗಳ ಬಗ್ಗೆಯೂ ಇರಬೇಕು.
ಅಷ್ಟು ಕಾಳಜಿ ಇದ್ದರೆ ಕ್ರೀಡಾಪಟುಗಳ  ಅಥವಾ ತರಬೇತುದಾರರ ಪರವಾಗಿ ಸ್ಪಂದಿಸುವುದಾದರೆ ಹಲವು ವರ್ಷಗಳಿಂದ ಬಾಕಿ ಬಿದ್ದಿರುವು ನಗದು ಬಹುಮಾನ, ಕೆಲವು ತರಬೇತುದಾರರಿಗೆ ಮಾತ್ರ ವೇತನದಲ್ಲಿ ಹೆಚ್ಚಳ, ಕಂಠೀರವ ಕ್ರೀಡಾಂಗಣದಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯ (ಈಗ ಜಿಮ್ ಇಲ್ಲ), ಎಲ್ಲ ಜಿಲ್ಲೆಗಳಲ್ಲೂ ಒಲಿಂಪಿಕ್ಸ್ ಜಿಲ್ಲಾ ಸಂಸ್ಥೆಗಳು, ಇವುಗಳ ಬಗ್ಗೆ ಯೋಚಿಸುವುದು, ನೆರವಾಗುವುದು ಉತ್ತಮವೆನಿಸುತ್ತದೆ.  ವಾರ್ಷಿಕ ಚುನಾವಣೆಯಲ್ಲಿ ತಮಗೇ ಮತ ನೀಡುವ ಕ್ರೀಡಾ ಸಂಸ್ಥೆಗಳ ಯೋಗಕ್ಷೇಮವನ್ನು ಮಾತ್ರ ನೋಡಿಕೊಳ್ಳುವುದು, ಇತರ ಕ್ರೀಡೆಗಳ ಬಗ್ಗೆ ನಿರ್ಲ್ಯಕ್ಷ ವಹಿಸುವುದು ಅದು ಕ್ರೀಡಾ ಧರ್ಮವಲ್ಲ.

Related Articles