Friday, April 26, 2024

ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ “ಕೊಹಿನೂರು ಚಿನ್ನ”!

ಸೋಮಶೇಖರ್‌ ಪಡುಕರೆ ಬೆಂಗಳೂರು

ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಆಶಯದೊಂದಿಗೆ ಹೈಸ್ಕೂಲ್‌ ಬಳಿಕ ಕ್ರೀಡಾ ಹಾಸ್ಟೆಲ್‌ ಸೇರಿದ ಯುವಕನೊಬ್ಬ ನಿರಂತರ ಶ್ರಮದ ಮೂಲಕ ದಕ್ಷಿಣ ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಕುಸ್ತಿಪಟು ಉಮೇಶ್‌ ಜಮಾದಾರ ಥಾಯ್ಲೆಂಡ್‌ನಲ್ಲಿ ನಡೆದ ದಕ್ಷಿಣ ಏಷ್ಯಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಯುವಜನ ಸೇವಾ ಕ್ರೀಡಾ ಇಲಾಖೆಯ ಕುಸ್ತಿ ತರಬೇತುದಾರ ಶಿವಾನಂದ ಅವರಲ್ಲಿ ಉಮೇಶ್‌ ತರಬೇತಿ ಪಡೆಯುತ್ತಿದ್ದಾರೆ.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಉಮೇಶ್‌ ಚಿಕ್ಕಂದಿನಲ್ಲಿಯೇ ಕುಸ್ತಿಪಟು ಆಗಬೇಕೆಂದು ಕನಸು ಕಂಡವರು. ಆದರೆ ಕೊಹಿನೂರಿನಲ್ಲಿ ಅದಕ್ಕೇ ಪೂರಕವಾದ ಸೌಲಭ್ಯಗಳು ಇರಲಿಲ್ಲ. ಇದರಿಂದಾಗಿ ಊರು ಬಿಟ್ಟು ದಾವಣಗೆರೆಗೆ ಬಂದು ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಉಮೇಶ್‌  ಕಳೆದ 13 ವರ್ಷಗಳಿಂದ ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಜ್ಯಮಟ್ಟದಲ್ಲಿ ಹಲವು ಪದಕಗಳನ್ನು ಗೆದ್ದಿರುವ ಉಮೇಶ್‌, ರಾಷ್ಟ್ರಮಟ್ಟದಲ್ಲಿ 2 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿರುತ್ತಾರೆ. ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟ ಮತ್ತು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌, ಫೆಡರೇಷನ್‌ ಸೀನಿಯರ್‌ ಕಪ್‌ನಲ್ಲೂ ಉಮೇಶ್‌ ಸ್ಪರ್ಧಿಸಿರುತ್ತಾರೆ.

“ಮೊದಲ ಅಂತಾರಾಷ್ಟ್ರೀಯ ಮಟ್ಟದ ಪದಕ ಗೆದ್ದಿರುವುದು ಖುಷಿಕೊಟ್ಟಿದೆ. ಉತ್ತಮ ರೀತಿಯಲ್ಲಿ ತರಬೇತಿ ಸಿಕ್ಕಿರುವುದರಿಂದ ಈ ಯಶಸ್ಸು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಹಂಬಲವಿದೆ,” ಎಂದು ಉಮೇಶ್‌ ಹೇಳಿದರು.

ಉಮೇಶ್‌ ಅವರ ತಂದೆ ಬಾಬುರಾವ್‌ ಗಾರೆ ಕೆಲಸ ಮಾಡುತ್ತಿದ್ದು, ಬಡ ಕುಟುಂಬದಿಂದ ಬಂದಿರುವ ಈ ಕ್ರೀಡಾ ಸಾಧಕನಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಹಾಯವಾಗಬಹುದು.

ಕ್ರೀಡಾ ಹಾಸ್ಟೆಲ್‌ ವಿದ್ಯಾರ್ಥಿ ಎನ್ನಲು ಹೆಮ್ಮೆ: ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಕಳೆದ ಆರು ವರ್ಷಗಳಿಂದ ಕ್ರೀಡಾ ತರಬೇತಿ ಪಡೆಯುತ್ತಿರುವ ಉಮೇಶ್‌ ಹಾಸ್ಟೆಲ್‌ನ ವಿದ್ಯಾರ್ಥಿ ಎನ್ನಲು ಹೆಮ್ಮೆ ಎಂದಿದ್ದಾರೆ. “ನಮಗೆ ಊರಿನಲ್ಲಿ ಕುಸ್ತಿ ಕ್ರೀಡೆಗೆ ಉತ್ತಮ ಸೌಲಭ್ಯ ಇರಲಿಲ್ಲ. ಇದರಿಂದಾಗಿ ಊರು ಬಿಟ್ಟು ಬರಬೇಕಾದ ಅನಿವಾರ್ಯತೆ ಉಂಟಾಯಿತು. ಕ್ರೀಡಾ ಹಾಸ್ಟೆಲ್‌ಗಳಲ್ಲಿ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಾರೆ ಎಂಬುದನ್ನು ಕೇಳಲ್ಪಟ್ಟೆ, ಉತ್ತಮ ಆಹಾರ, ಶಿಸ್ತು ಹಾಗೂ ಓದಿಗೂ ನೆರವು ಸಿಕ್ಕಿತು. ಇದರಿಂದಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಪ್ರತಿಯೊಬ್ಬರಿಗೂ ನಾನು ಚಿರಋಣಿ,” ಎಂದು ಉಮೇಶ್‌ ಹೇಳಿದರು.

Related Articles