Friday, March 1, 2024

ಅಂತಾರಾಷ್ಟ್ರೀಯ ಪೆಂಟಾಂಗ್ಯುಲರ್‌ ಡ್ಯೂಬಾಲ್‌: ಭಾರತಕ್ಕೆ ಚಾಂಪಿಯನ್‌ ಪಟ್ಟ

ಬೆಂಗಳೂರು: ಭಾರತದಲ್ಲೇ ಜನ್ಮತಾಳಿದ ಡ್ಯೂಬಾಲ್‌ ಅಂತಾರಾಷ್ಟ್ರೀಯ ಪೆಂಟಾಂಗ್ಯುಲರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳೆಯ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಬಾಸ್ಕೆಟ್‌ಬಾಲ್‌, ಥ್ರೋಬಾಲ್‌ ಮತ್ತು ಫುಟ್ಬಾಲ್‌ ಕ್ರೀಡೆಯನ್ನು ಹೋಲುವ ಈ ಕ್ರೀಡೆ ಅತ್ಯಂತ ಕುತೂಹಲದಿಂದ ಕೂಡಿರುತ್ತದೆ. ಮುಂಬೈಯ ಬಿಪಿಸಿಎ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಇರಾಕ್‌, ಬಾಂಗ್ಲಾದೇಶ, ಯೆಮನ್‌ ಮತ್ತು ಒಮನ್‌ ರಾಷ್ಟ್ರದ ತಂಡಗಳು ಪಾಲ್ಗೊಂಡಿದ್ದವು.

ಪುರುಷರ ಫೈನಲ್‌ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶದ ವಿರುದ್ಧ 8-6 ಡ್ಯೂಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪುರುಷರ ತಂಡದಲ್ಲಿ ಕರ್ನಾಟಕದ ವಿಜಯ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ವನಿತೆಯರ ವಿಭಾಗದಲ್ಲಿ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಮಹಿಳೆಯ ತಂಡದಲ್ಲಿ ಕರ್ನಾಟಕದಿಂದ ಭೂಮಿಕಾ ಶ್ರೀನಿವಾಸ್‌ ಹಾಗೂ ಗೀತಾ ಥಾಪಾ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಬೀದಿ ಮಕ್ಕಳ ಆಟ ನೋಡಿ ಹುಟ್ಟಿದ ಡ್ಯೂಬಾಲ್‌ ಆಟ:

ಮಹಾರಾಷ್ಟ್ರದ ನಾಗ್ಪುರದಲ್ಲಿ ಫಿರೋಜ್‌ ಖಾನ್‌ ಎಂಬುವರು ತಮ್ಮ ಮನೆಯಿಂದ ಬೀದಿಯಲ್ಲಿ ಆಡುತ್ತಿದ್ದ ಮಕ್ಕಳ ಆಟವನ್ನು ಗಮನಿಸಿದರು. ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದ ಫಿರೋಜ್‌ ಖಾನ್‌ ಅವರಿಗೆ ಮಕ್ಕಳ ಆಟದ ಬಗ್ಗೆ ಕುತೂಹಲ ಮೂಡಿತು. ಮರದ ಹಲಗೆಯೊಂದರ ಮೇಲೆ ವೃತ್ತಾಕಾರದ ಗುರುತು ಮಾಡಿ ಆ ವೃತ್ತಕ್ಕೆ ಚೆಂಡಿನಿಂದ ಗುರಿ ಇಡುತ್ತಿದ್ದರು. ಇತರರು ಗುರಿ ಸಿಗದಂತೆ ತಡೆಯುತ್ತಿದ್ದರು. ಇದು ಫುಟ್ಬಾಲ್‌, ಬಾಸ್ಕೆಟ್‌ಬಾಲ್‌ ಮತ್ತು ಹ್ಯಾಂಡ್‌ಬಾಲ್‌ ರೀತಿಯಲ್ಲಿ ಇರುವುದರಿಂದ ಖಾನ್‌ ಅವರ ತಲೆಯಲ್ಲಿ ಹೊಸ ಕ್ರೀಡೆಯೊಂದನ್ನು ಹುಟ್ಟು ಹಾಕುವ ಯೋಚನೆ ಮೂಡಿತು.

ಸಮಾನ ಮನಸ್ಕರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಕೆಲವು ಸರಳ ನಿಯಮಗಳನ್ನು ರೂಪಿಸಿದರು. ಒಂದು ತಂಡದ ಆಟಗಾರರು ಒಂದು ಅಂಕ ಮಾಡಿದರೆ ಅದು ಎದುರಾಳಿಗೆ “ಡ್ಯೂ” (ಬಾಕಿ) ಎಂದರ್ಥ. ಆತ ಸಮಬಲ ಸಾಧಿಸಬೇಕಾದರೆ ಅಥವಾ ಮುನ್ನಡೆಯಬೇಕಾದರೆ ಆ ಡ್ಯೂ ತೀರಿಸಬೇಕಾಗುತ್ತದೆ. ಎಲ್ಲರೂ ಸೇರಿ ಆಟಕ್ಕೆ ʼಡ್ಯೂಬಾಲ್‌ʼ ಎಂದು ಹೆಸರಿಟ್ಟರು. ನಾಗ್ಪುರದ ಫಿಜೋಜ್‌ ಖಾನ್‌ ಭಾರತೀಯ ಡ್ಯೂಬಾಲ್‌ ಫೆಡರೇಷನ್‌ ಹುಟ್ಟು ಹಾಕಿದರು. ಮೊದಲು ಮಹಾರಾಷ್ಟ್ರದ ಸುತ್ತಮುತ್ತಲಿನ ರಾಜ್ಯಗಳಿಗೆ ತಲುಪಿದ ಕ್ರೀಡೆ ನಂತರ ಭಾರತದ ನೆರೆಯ ರಾಷ್ಟ್ರಗಳಿಗೂ ತಲುಪಿತು. 2013ರಲ್ಲಿ ಮೊದಲ ಬಾರಿಗೆ ಫೆಡರೇಷನ್‌ ಕಪ್‌ ಡ್ಯೂಬಾಲ್‌ ಚಾಂಪಿಯನ್‌ಷಿಪ್‌ ನಡೆಯಿತು. ಈಗ ಈ ಕ್ರೀಡೆ ಶ್ರೀಲಂಕಾ, ಭೂತಾನ್‌, ನೇಪಾಳ, ಇಂಡೋನೇಷ್ಯಾ, ಮಲೇಷ್ಯಾ, ಮಾಲ್ದೀವ್ಸ್‌, ಯುಎಇ ಸೇರಿದಂತೆ 25 ದೇಶಗಳಲ್ಲಿ ಜನಪ್ರಿಯಗೊಂಡಿದೆ. ಭಾರತೀಯ ಡ್ಯೂಬಾಲ್‌ ಫೆಡರೇಷನ್‌ ಹಾಗೂ ಅಂತಾರಾಷ್ಟ್ರೀಯ ಡ್ಯೂಬಾಲ್‌ ಫೆಡರೇಷನ್‌ ಕೂಡ ಹುಟ್ಟಿಕೊಂಡಿದೆ.

ಒಳಾಂಗಣ, ಹೊರಾಂಗಣ, ಟರ್ಫ್‌ ಎಲ್ಲಿಬೇಕಾದರೂ ಆಡಬಹುದಾದ ಈ ಕ್ರೀಡೆ ಈಗ ಬೀಚ್‌ಗಳಲ್ಲೂ ಜನಪ್ರಿಯಗೊಂಡಿದೆ. ತಂಡದಲ್ಲಿ ಗರಿಷ್ಠ 12 ಆಟಗಾರರಿರುತ್ತಾರೆ. ಅಂಗಣದಲ್ಲಿ 7 ಆಟಗಾರರಿರುತ್ತಾರೆ. (6 + 1 ಗೋಲ್‌ಕೀಪರ್‌). 5 ಮಂದಿ ಬದಲಿ ಆಟಗಾರರಿರುತ್ತಾರೆ. ಅಂಗಣ (20×40 ಮೀ)ದ ಎರಡೂ ಕಡೆ ಮರದ ಬೋರ್ಡ್‌(1.2 ಮೀ) ಇರುತ್ತದೆ. ಇದು ನೆಲದಿಂದ 4 ಮೀ. ಎತ್ತರದಲ್ಲಿರುತ್ತದೆ. ಅದರಲ್ಲಿ ರಂದ್ರವಿರುತ್ತದೆ (60ಸೆ,ಮೀ). ಚೆಂಡು ರಂದ್ರದ ಮೂಲಕ ಹಾದು ಹೋದರೆ ಒಂದು ಅಂಕ.

 

“ಕರ್ನಾಟದಕಲ್ಲಿ 2017ರಿಂದ ಡ್ಯೂಬಾಲ್‌ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈಗ ರಾಜ್ಯದ ವಿವಿಧ ಜಿಲ್ಲೆಯವರು ಆಸಕ್ತಿ ತೋರಿದ್ದಾರೆ. ಬೆಂಗಳೂರಿಗೆ ಸೀಮಿತವಾಗಿದ್ದ ಕ್ರೀಡೆ ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಅಖಿಲ ಭಾರತ ವಿಶ್ವವಿದ್ಯಾನಿಲಯ ಈ ಕ್ರೀಡೆಗೆ ಮಾನ್ಯತೆ ನೀಡಲು ಮುಂದಾಗಿದೆ. ಆದ್ದರಿಂದ ಈ ಕ್ರೀಡೆಗೆ ಉತ್ತಮ ಭವಿಷ್ಯವಿದೆ,” ಎಂದು ಕರ್ನಾಟಕ ಡ್ಯೂಬಾಲ್‌ ಸಂಸ್ಥೆಯ ಕಾರ್ಯದರ್ಶಿ ಆಕರ್ಶ್‌ ಪಿ.ಎಂ. ಹೇಳಿದ್ದಾರೆ. ಆಕರ್ಶ್‌ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಾಂತ್ರಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಏಕೈಕ ಅಂತಾರಾಷ್ಟ್ರೀಯ ಮಹಿಳಾ ರೆಫರಿ ಕನ್ನಡತಿ:

2013ರಲ್ಲಿ ಹುಟ್ಟಿಕೊಂಡ ಈ ಕ್ರೀಡೆ ಹಲವಾರು ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಸಾಕ್ಷಿಯಾಗಿದೆ. ಪುರುಷರ ವಿಭಾಗದಲ್ಲಿ ಹಲವಾಋು ಮಂದಿ ಅಂತಾರಾಷ್ಟ್ರೀಯ ರೆಫರಿಗಳಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿರುವುದು ಏಕೈಕ ರೆಫರಿ. ಅದು ಕೂಡ ಕರ್ನಾಟಕದವರೇ ಎನ್ನುವುದು ಹೆಮ್ಮೆಯ ಸಂಗತಿ. ಮಂಗಳೂರಿನ ಸುಶ್ಮಿತಾ ಶೆಟ್ಟಿ ಡ್ಯೂಬಾಲ್‌ ಕ್ರೀಡೆಯ ಮೊದಲ ಅಂತಾರಾಷ್ಟ್ರೀಯ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Related Articles