Friday, October 4, 2024

ಟೆನಿಸ್ ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಸಾಗರ್

ಆರ್.ಕೆ.ಆಚಾರ್ಯ ಕೋಟ 

ಕರ್ನಾಟಕ ರಾಜ್ಯ ಕಂಡ ಬರಸಿಡಿಲಿನ ಹೊಡೆತದ ಈ ಬಲಗೈ ದಾಂಡಿಗನಿಗೆ, ತಾಂತ್ರಿಕ, ಮಾಂತ್ರಿಕ ಎಸೆತಗಳನ್ನು ಬಲಶಾಲಿ ಹೊಡೆತಗಳನ್ನಾಗಿ ಮಾರ್ಪಾಡಿಸಿ ಬೌಂಡರಿ,ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮ.

ಹೌದು ಸ್ನೇಹಿತರೇ ಟೆನ್ನಿಸ್ ಕ್ರಿಕೆಟ್ ನ ” ಸಾಗರ್  ಭಂಡಾರಿ” ಯಾರಿಗೆ ತಾನೇ ಗೊತ್ತಿಲ್ಲ. ಈತ ಬ್ಯಾಟಿಂಗ್ ಗೆ ಇಳಿದರೆ ಬೌಲರ್ ಗಳಿಗೆ ನಡುಕ. ಈ ಆಟಗಾರನಿಗೆ ಎಸೆತಗಳನ್ನು ಎಸೆಯುವುದು ತಲೆಬೇನೆಯ ವಿಚಾರವೇ ಸರಿ.
ಮೂಲತಃ  ಉಡುಪಿ ಸಮೀಪದ ಪರ್ಕಳದವರಾದ, ಸಾಗರ್ ಅವರನ್ನು ಪ್ರಾರಂಭದ ದಿನಗಳಲ್ಲಿ  ಗುರುತಿಸಿದವರು ಸ್ಪಾರ್ಕ್ ನ ಡಾಕ್ಟರ್ ವಿನೋದ್.
ಸ್ಪಾರ್ಕ್ ತಂಡದಲ್ಲಿ ಮೊತ್ತಮೊದಲ ಬಾರಿ ಅಂಗಣದಲ್ಲಿ ಕಾಣಿಸಿಕೊಂಡ ಸಾಗರ್ ಭಂಡಾರಿ ಪ್ರತಿಯೊಂದು ಪಂದ್ಯದಲ್ಲೂ ಮಿಂಚತೊಡಗಿದರು. ನಂತರದ ದಿನಗಳಲ್ಲಿ ಬೆಂಗಳೂರಿನ ಪೀಣ್ಯದ ಅಂಗಣದಲ್ಲಿ ತೋರುತ್ತಿದ್ದ ಅದ್ಭುತ ಪ್ರದರ್ಶನವನ್ನು ಗುರುತಿಸಿದ ಕರ್ನಾಟಕ ರಾಜ್ಯ ಕಂಡ ಸಹೃದಯಿ ಕ್ರೀಡಾ ಪೋಷಕರಾದ  ರೇಣು ಗೌಡ ಅವರು ಕಳೆದ 26 ವರ್ಷಗಳಿಂದ ಕಟ್ಟಿ ಬೆಳೆಸಿದ ಬಲಿಷ್ಡ ತಂಡ “ಫ್ರೆಂಡ್ಸ್ ಬೆಂಗಳೂರು” ತಂಡದಲ್ಲಿ ಭಂಡಾರಿಯವರಿಗೆ ಖಾಯಂ ಸ್ಥಾನವನ್ನು ದೊರಕಿಸಿಕೊಟ್ಟರು.
 “ಫ್ರೆಂಡ್ಸ್ ನ ಟ್ರಂಪ್ ಕಾರ್ಡ್”
ಆರಂಭಿಕ ಆಟಗಾರನಾಗಿ ಸ್ಥಾನ ಭದ್ರಪಡಿಸಿಕೊಂಡ ಇವರು ತನ್ನ “ಒನ್ ಮ್ಯಾನ್ ಶೋ” ಪ್ರದರ್ಶನದ ಮೂಲಕ ತನ್ನ ತಂಡವನ್ನು ಹಲವಾರು ಪ್ರತಿಷ್ಟಿತ ಪಂದ್ಯಾಟಗಳಲ್ಲಿ ಸೋಲಿನಿಂದ ಪಾರು ಮಾಡಿ, ಚಾಂಪಿಯನ್ ಪಟ್ಟವನ್ನು ತಂದು ಕೊಟ್ಟ
 ನಂಬಿಕಸ್ಥ ಹುಡುಗ. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಈ ಆಟಗಾರ ವೇಗದ ಎಸೆತವನ್ನು ಎಸೆದು ಅಗ್ರಕ್ರಮಾಂಕದ ಆಟಗಾರರನ್ನು ಪೆವಿಲಿಯನ್ ಗೆ ಅಟ್ಟುವ ಬಲಗೈ  ಮಾರಕ ವೇಗಿ.
ಗೂಟದ ಹಿಂದೆ ಗೂಟ ರಕ್ಷಕನಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಅದ್ಭುತ ಕೀಪರ್ ಕೂಡ ಹೌದು. ಈ ಆಟಗಾರ ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ ಪಡೆದ 3 ದ್ವಿಚಕ್ರ ವಾಹನಗಳನ್ನು ಪಡೆದ ಸಾಹಸಿ ಆಟಗಾರ.
ಕೇರಳದಲ್ಲಿ ನಡೆದ ಪಂದ್ಯಾಟದಲ್ಲಿ ,ಜಾಲ ಹಳ್ಳಿಯ ರಂಗ ಇಲೆವೆನ್ ಶಾರ್ಟ್ ಪಿಚ್ ಪಂದ್ಯಾಟ ಹಾಗೂ ಇತ್ತೀಚಿಗಷ್ಟೇ ಕೆ.ಆರ್.ಪುರಂ ನಲ್ಲಿ ನಡೆದ “ನಾಗ ಇಲೆವೆನ್ ಟ್ರೋಫಿ” ಯ ಸರಣಿ ಶ್ರೇಷ್ಠ ಪ್ರಶಸ್ತಿ ಈತನ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿ.
ಇವರು ಕಳೆದ 11ವರ್ಷಗಳಿಂದ “ಫ್ರೆಂಡ್ಸ್ ಬೆಂಗಳೂರು” ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
   ‌”ಸಾಗರದಾಚೆಯೂ ಸಾಗರನ ಕೀರ್ತಿ”
ಸಾಗರನ ಕೀರ್ತಿ ಸಾಗರದಾಚೆಯೂ ಪಸರಿಸಿರುವುದು ರಾಜ್ಯ ಟೆನ್ನಿಸ್ ಕ್ರಿಕೆಟ್‌ ಗೆ ಹೆಮ್ಮೆಯ ವಿಷಯ.
“ಕುವೈಟ್ ರೈಡರ್ಸ್” ತಂಡದ ಪರವಾಗಿ ಆಡುವ ಇವರು ಹಲವಾರು ದುಬಾರಿ ಮೊತ್ತದ ಪಂದ್ಯಾಕೂಟಗಳಲ್ಲಿ,ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದು ಗಲ್ಫ್ ರಾಷ್ಟ್ರದ ಪ್ರೇಕ್ಷಕರನ್ನು ಗಮನ ಸೆಳೆದವರು.
    ಸಾಗರ್ ರ ಸಹೋದರ ಸಂದೀಪ್ ಭಂಡಾರಿ ಯವರು ಮುಂಬಯಿ ಯ “ಪಯ್ಯಡೇ” ಲೆದರ್ ಬಾಲ್ ತಂಡವನ್ನು ಪ್ರತಿಸಿಧಿಸುತ್ತಿರುವ ಓರ್ವ ಶ್ರೇಷ್ಠ ಆಟಗಾರ. ಅಣ್ಣನ ಹಾದಿ ಹಿಡಿದ “ಸಾಗರ್ ಭಂಡಾರಿ” ಯವರನ್ನು
ಅವರ ಬಲಶಾಲಿ ಹೊಡೆತಗಳಿಗಾಗಿ “ಟೆನ್ನಿಸ್ ಬಾಲ್ ನ ಕ್ರಿಸ್ ಗೇಲ್ ” ಬಿರುದನ್ನು ನೀಡಿರುತ್ತಾರೆ.ಉಡುಪಿಯ ಕೀರ್ತಿಯನ್ನು ಸಾಗರದಾಚೆಯೂ ಕೊಂಡೊಯ್ದ “ಸಾಗರ್ ಭಂಡಾರಿ” ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ರಾಜ್ಯ,ರಾಷ್ಟ್ರ ಮಟ್ಟದಲ್ಲಿ ನಿಮ್ಮ ಕೀರ್ತಿ ಪಸರಿಸಲಿ.

Related Articles