Tuesday, May 21, 2024

ಸಾರಾಯಿ ಕುಡಿದು ಸೆಂಚುರಿ ಹೊಡೆದರು!!

ಯಾರಾದರೂ ಕ್ರಿಕೆಟಿಗರು ಎಣ್ಣೆ ಹಾಕಿ ಬ್ಯಾಟಿಂಗ್‌ ಮಾಡಿದ್ದನ್ನು ನೋಡಿದ್ದೀರಾ? ಅಥವಾ ಕೇಳಿದ್ದೀರಾ? ಬಹಳ ವಿರಳ. ಆದರೆ ಕ್ರಿಕೆಟ್‌ ಜಗತ್ತಿನಲ್ಲಿ ಇಂಥ ಘಟನೆ ನಡೆದಿದೆ ಎಂದು ಕ್ರಿಕೆಟಿಗರೇ ಹೇಳಿಕೊಂಡಾಗ  ನಂಬಲೇ ಬೇಕು. ಕೆಲವರು ಹೇಳಿಕೊಳ್ಳುತ್ತಾರೆ ಇನ್ನು ಕೆಲವರು ಬಾಯಿ ಒರೆಸಿಕೊಂಡು ಸುಮ್ಮನಿರುತ್ತಾರೆ. Cricketers who were Drunk on the field

ದಕ್ಷಿಣ ಆಫ್ರಿಕದ ಖ್ಯಾತ ಕ್ರಿಕೆಟಿಗ ಹರ್ಷಲ್‌ ಗಿಬ್ಸ್‌ ಬ್ಯಾಟಿಂಗ್‌ ವೈಭವದ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಅವರ ಕುಡಿತದ ಇನ್ನಿಂಗ್ಸ್‌ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. 2006 ಮಾರ್ಚ್‌ 12. ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣ. ಆಸ್ಟ್ರೇಲಿಯಾ 4 ವಿಕೆಟ್‌ 434 ರನ್‌ ಗಳಿಸಿ ದಾಖಲೆ ಬರೆದಿತ್ತು. ದಕ್ಷಿಣ ಆಫ್ರಿಕಾ 3 ರನ್‌ಗೆ ಆರಂಭಿಕ ಆಟಗಾರ ಬೊಯ್ಟಾ ಡಿಪ್ಪೆನಾರ್‌ ಅವರ ವಿಕೆಟ್‌ ಕಳೆದುಕೊಂಡಿತ್ತು. ಅಂಗಣಕ್ಕಿಳಿದ ಹರ್ಷಲ್‌ ಗಿಬ್ಸ್‌ 142 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದು 111 ಎಸೆತಗಳನ್ನೆದುರಿಸಿ 21 ಬೌಂಡರಿ ಹಾಗೂ 7 ಸಿಕ್ಸರ್‌ ಮೂಲಕ ದಾಖಲೆಯ 175 ರನ್‌ ಸಿಡಿಸಿ ವಾಂಡರರ್ಸ್‌ ವಂಡರ್‌ ಎಂಬಂತೆ ದಕ್ಷಿಣ ಆಫ್ರಿಕಾಕ್ಕೆ ಜಯ ತಂದಿತ್ತರು.

ಆದರೆ ಅಂಗಣಕ್ಕಿಳಿದಾಗ ಪರಿಸ್ಥಿತಿ ಏನಾಗಿದೆ ಎಂಬುದೇ ಗೊತ್ತಿರಲಿಲ್ವಂತೆ. ಕಾರಣ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಮದ್ಯಸೇವನೆ ಮಾಡಿದ್ದರು. ಎಣ್ಣೆ ಮೇಲೆ ಬ್ಯಾಟಿಂಗ್‌ ಮಾಡಿದ ಗಿಬ್ಸ್‌ ಹೊಡೆದದ್ದೆಲ್ಲವೂ ಬೌಂಡರಿ ಗೆರೆಯ ಆಚೆ ಸಾಗುತ್ತಿತ್ತು. ಈ ವಿಷಯವನ್ನು ಗಿಬ್ಸ್‌ ಆತ್ಮಚರಿತ್ರೆ To the Point ನಲ್ಲಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಆಲ್ರೌಂಡರ್‌ ಆಂಡ್ರ್ಯೂ ಫ್ಲಿಂಟಾಫ್‌ ಕ್ರಿಕೆಟ್‌ ಜಗತ್ತಿನ ಉತ್ತಮ ಆಟಗಾರ. ITV ಯಲ್ಲಿ  ಜೊನಾಥನ್‌ ರಾಸ್‌ ಅವರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫ್ಲಿಂಟಾಫ್‌ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೊಂದರಲ್ಲಿ ಮದ್ಯದ ಅಮಲಿನಲ್ಲೇ ಟೆಸ್ಟ್‌ ಕ್ರಿಕೆಟ್‌ನ ಎರಡನೇ ಟೆಸ್ಟ್‌ ದಾಖಲಾಯಿತು ಎಂಬುದನ್ನು ನಗುತ್ತ ಒಪ್ಪಿಕೊಂಡಿದ್ದಾರೆ.

ಆರು ಎಸೆತಗಳಿಗೆ ಆರ ಸಿಕ್ಸರ್‌ ಸಿಡಿಸಿದ ವೆಸ್ಟ್‌ಇಂಡೀಸ್‌ನ ಕ್ರಿಕೆಟ್‌ ದಿಗ್ಗಜ ಗ್ಯಾರಿ ಸೋಬರ್ಸ್‌ ಲಾರ್ಡ್ಸ್‌ ಅಂಗಣದಲ್ಲಿ ಅಜೇಯ 150 ರನ್‌ ಸಿಡಿಸಿ ಅಮಲಿನಲ್ಲಿ ತೇಲಿದರು. ವಾಂತಿ ಮಾಡಿಕೊಂಡರು. ಇದಕ್ಕೆ ಮುಖ್ಯ ಕಾರಣ ಹಿಂದಿನ ದಿನದ ಪಾರ್ಟಿ ಕೊನೆಗೊಂಡಿದ್ದೇ ಪಂದ್ಯ ಮುಗಿಯುವುದಕ್ಕೆ ಸ್ವಲ್ಪ ಹೊತ್ತು ಮುಂಚೆ. ಇದನ್ನು ಸ್ವತಃ ಗ್ಯಾರಿ ಸೋಬರ್ಸ್‌ ಹೇಳಿಕೊಂಡಿದ್ದಾರೆ.

ಆಂಡ್ರ್ಯೂ ಸೈಮಂಡ್ಸ್‌ ನಮ್ಮ ಮುಂದೆ ಇಲ್ಲ. ಆದರೆ ಆಸೀಸ್‌ನ ಈ ಶ್ರೇಷ್ಠ ಆಲ್ರೌಂಡರ್‌ ಕೂಡ ಮದಿರೆಯ ಸೇವಿಸಿ ಅಂಗಣಕ್ಕಿಳಿದಿರುವುದನ್ನು ಹೇಳಿಕೊಂಡಿದ್ದಾರೆ. 2005 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯಕ್ಕೂ ಮುನ್ನ ಸೈಮಂಡ್ಸ್‌ ಮದ್ಯಸೇವನೆ ಮಾಡಿದ್ದರು,  ತರಬೇತಿಯ ವೇಳೆ ನಿಯಂತ್ರ ತಪ್ಪಿ ನೆಟ್‌ನಲ್ಲೇ ಒರಗಿದ್ದು ನಂತರದ ದಿನಗಳಲ್ಲಿ ಬೆಳಕಿಗೆ ಬಂದಿತ್ತು.

ಕರಾಚಿಯ ಟೆಸ್ಟ್‌ ಪಂದ್ಯವೊಂದರಲ್ಲಿ ಪಾಕಿಸ್ತಾನದ ಎಡಗೈ ಆಟಗಾರ ವಾಸಿಂ ರಾಜಾ ಬೌಂಡರಿ ಲೇನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದರು. ಪ್ರೇಕ್ಷಕರ ಮೇಲೆ ಸಿಟ್ಟಾಗಿ ಪ್ಯಾಂಟಿನ ಜಿಪ್‌ ತೆಗೆಯುವ ಹಾಗೆ ತೋರಿಸುತ್ತಿದ್ದರು. ನಂತರ ಬ್ಯಾಟಿಂಗ್‌ ವೇಳೆ ಶತಕವನ್ನೂ ದಾಖಲಿಸಿದರು. ಪಂದ್ಯ ಮುಗಿದ ನಂತರ ತಿಳಿದು ಬಂದಿದ್ದು, ವಾಸಿಂ ರಾಜಾ ಫೀಲ್ಡಿಂಗ್‌ ಮಾಡುವಾಗ ಒಂದ್‌ ಕ್ವಾರ್ಟರ್‌ ಹಾಕಿದ್ದಾರೆ ಎಂದು.

ಎಣ್ಣೆ ಹಾಕಿ ಗಲಾಟೆ ಮಾಡಿದ ಅನೇಕ ಕ್ರಿಕೆಟಿಗರೂ ಇದ್ದರೆ, ಕೆಟ್ಟ ಚಾಳಿಯಿಂದ ಹೊರ ಬಂದು ಉತ್ತಮ ಕ್ರಿಕೆಟಿಗರಾದವರೂ ಇದ್ದಾರೆ. ಯಾರಿಗೂ ಗೊತ್ತಾಗದೆ ಕುಡಿದು ಬಾಯಿ ಒರೆಸಿಕೊಂಡು ಈಗಲೂ ಸಭ್ಯರಂತೆ ನಗು ಬೀರುವವರೂ ಇದ್ದಾರೆ,

Related Articles