Wednesday, November 6, 2024

ಐಪಿಎಲ್ ನಿಂದ ವಾರ್ನರ್‌, ಜಾನಿ ಬೈರ್‌ಸ್ಟೋ ಔಟ್!

ನವದೆಹಲಿ:  ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮೌಲ್ಯಯುತ ಆರಂಭಿಕರಾದ ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ ಹಾಗೂ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರು ರಾಷ್ಟ್ರೀಯ ತಂಡಗಳಿಗೆ ಮರಳಲಿದ್ದು, ಐಪಿಎಲ್‌ ಟೂರ್ನಿಯಿಂದ ನಿರ್ಗಮಿಸಿಲಿದ್ದಾರೆ.

ಮುಂಬರುವ ಐಸಿಸಿ ವಿಶ್ವಕಪ್‌ ಹಿನ್ನೆಲೆಯಲ್ಲಿ ಬಲಗೈ ಬ್ಯಾಟ್ಸ್‌ಮನ್‌ ಜಾನಿ ಬೈರ್‌ ಸ್ಟೋ ಇಂಗ್ಲೆಂಡ್‌ ತಂಡ ಸೇರ್ಪಡೆಗೊಳ್ಳುತ್ತಿದ್ದಾರೆ. ಇಂದು ಸನ್‌ ರೈಸರ್ಸ್‌ ಹೈದರಾಬಾದ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ಬಳಿಕ ಅವರು ಸ್ವದೇಶಕ್ಕೆ ತೆರಳಲಿದ್ದಾರೆ. ಕಳೆದ ವಾರದಲ್ಲೇ ಈ ಕುರಿತು ಜಾನಿ ಬೈರ್‌ಸ್ಟೋ ಸ್ಪಷ್ಟಪಡಿಸಿದ್ದರು.
ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಕೂಡ ಐಪಿಎಲ್‌ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಡೇವಿಡ್‌ ವಾರ್ನರ್‌ ಪ್ರಸಕ್ತ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 9 ಪಂದ್ಯಗಳಿಂದ 517 ರನ್‌ ಸಿಡಿಸಿದ್ದಾರೆ, ಜತೆಗೆ ಜಾನಿ ಬೈರ್‌ ಸ್ಟೋ 445 ರನ್‌ ದಾಖಲಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರ ನಿರ್ಗಮನದಿಂದ ಹೈದರಾಬಾದ್‌ ತಂಡಕ್ಕೆ ಭಾರಿ ನಷ್ಟವಾಗಲಿದೆ. ಈ ಜೋಡಿ ಇಲ್ಲಿಯವರೆಗೂ ಮೊದಲ ವಿಕೆಟ್‌ಗೆ 733 ರನ್‌ ಜತೆಯಾಟವಾಡಿದೆ.
“ಭರ್ಜರಿ ಲಯದಲ್ಲಿರುವ ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ ಸ್ಟೋ ಅವರ ನಿರ್ಗಮನದಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಭಾರಿ ನಷ್ಟವಾಗಲಿದೆ. ಇವರಿಬ್ಬರು ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿದ್ದು, ಇದುವರೆಗೂ ಅವರು ತಂಡದ ಆಧಾರ ಸ್ಥಂಭಗಳಾಗಿದ್ದರು.” ಎಂದು ನಾಯಕ ಕೇನ್‌ ವಿಲಿಯಮ್ಸನ್‌ ಹೇಳಿದ್ದಾರೆ.
ಕಳೆದ ಭಾನುವಾರ ಕೊಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ವಾರ್ನರ್‌ ಹಾಗೂ ಬೈರ್‌ ಸ್ಟೋ ಜೋಡಿಯು 131 ರನ್ ಜತೆಯಾಟವಾಡಿದ್ದರು. ಇವರಿಬ್ಬರ ಅರ್ಧ ಶತಕಗಳ ನೆರವಿನಿಂದ ಹೈದರಾಬಾದ್‌ 9 ವಿಕೆಟ್‌ಗಳ ಜಯ ಸಾಧಿಸಿತ್ತು.
ಸನ್‌ ರೈಸರ್ಸ್‌ ಹೈದರಾಬಾದ್‌ ಆಡಿರುವ ಒಟ್ಟು 9 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ನಾಲ್ಕರಲ್ಲಿ ಸೋಲು ಅನುಭವಿಸಿದೆ. ಒಟ್ಟು 10 ಅಂಕಗಳೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Related Articles