Friday, October 4, 2024

ನಾಲ್ಕನೇ ಸೋಲಿನ ಆತಂಕದಲ್ಲಿ ದಕ್ಷಿಣ ಆಫ್ರಿಕಾ

ಸೌಥ್‌ಹ್ಯಾಮ್ಟನ್‌:

ಸತತ ಮೂರು ಪಂದ್ಯಗಳಲ್ಲಿ ಸೋಲಿನಿಂದ ತೀವ್ರ ನಿರಾಸೆಗೆ ಒಳಗಾಗಿರುವ ದಕ್ಷಿಣ ಆಫ್ರಿಕಾ, ಐಸಿಸಿ ವಿಶ್ವಕಪ್‌ನ ಬಲಿಷ್ಠ ಬೌಲಿಂಗ್‌ ಪಡೆ ಎಂದೆನಿಸಿಕೊಂಡಿರುವ ವೆಸ್ಟ್‌ ಇಂಡೀಸ್‌ ವಿರುದ್ಧ ನಾಳೆ ಎದುರಿಸಲು ಸಿದ್ಧವಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಕೇವಲ 15 ರನ್‌ಗಳಿಂದ ಸೋಲು ಒಪ್ಪಿಕೊಂಡಿರುವ ವಿಂಡೀಸ್‌ ಮತ್ತೆ ಗೆಲುವಿನ ಲಯಕ್ಕೆ ಮರಳುವ ಯೋಜನೆಯೊಂದಿಗೆ ನಾಳೆ ಕಣಕ್ಕೆ ಇಳಿಯಲಿದೆ.

ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಭಾರತದ ವಿರುದ್ಧ ಹ್ಯಾಟ್ರಿಕ್‌ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾಗಿದೆ. ಹಾಗಾಗಿ, ನಾಳಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ಮೂಲಕ ಚೊಚ್ಚಲ ಪ್ರಶಸ್ತಿ ಗೆಲ್ಲುವ ಹಾದಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಒಂದು ವೇಳೆ ನಾಳಿನ ಪಂದ್ಯದಲ್ಲೂ ಸೋಲು ಅನುಭವಿಸಿದ್ದೇ ಆದಲ್ಲಿ ಆಫ್ರಿಕಾ ಪಡೆಯ ಪ್ಲೇ ಅಪ್‌ ಹಾದಿ

ಕಠಿಣವಾಗಲಿದೆ.
ದಕ್ಷಿಣ ಆಫ್ರಿಕಾ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲವಾಗುತ್ತಿರುವುದು ನಾಯಕ ಫಾಫ್‌ ಡುಪ್ಲೇಸಿಸ್‌ಗೆ ತಲೆ ನೋವಾಗಿ ಪರಿಣಮಿಸಿದೆ. ಕ್ವಿಂಟನ್ ಡಿ ಕಾಕ್‌, ಫಾಫ್‌ ಡುಪ್ಲೇಸಿಸ್‌ ಹಾಗೂ ವಾನ್‌ ಡೆರ್‌ ಡುಸೆನ್‌ ಅವರು ಮೂರು ಪಂದ್ಯಗಳಿಂದ ತಲಾ ಒಂದೊಂದು ಅರ್ಧ ಶತಕ ಸಿಡಿಸಿದ್ದು ಬಿಟ್ಟರೆ, ಆರಂಭಿಕ ಐಡೆನ್‌ ಮಕ್ರಾಮ್‌, ಡೇವಿಡ್‌ ಮಿಲ್ಲರ್‌ ಹಾಗೂ ಜೆಪಿ ಡುಮಿನಿ ಬ್ಯಾಟಿಂಗ್‌ ಲಯಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ. ನಾಳಿನ ಪಂದ್ಯದಲ್ಲಿ ಇವರು ಆಡಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಇಲ್ಲವಾದಲ್ಲಿ ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಬೌಲಿಂಗ್‌ ವಿಭಾಗದಲ್ಲಿ ಕಗಿಸೋ ರಬಾಡ ಹಾಗೂ ಆ್ಯಂಡಿಲೆ ಫೆಹ್ಲುಕ್ವಾಯೊ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಗಾಯಗೊಂಡಿರುವ ಲುಂಗಿ ಎನ್‌ಗಿಡಿ ಅವರು ನಾಳಿನ ಪಂದ್ಯಕ್ಕೆ ಇನ್ನೂ ಸ್ಪಷ್ಟತೆಯಿಲ್ಲ. ಸ್ಪಿನ್‌ ವಿಭಾಗದಲ್ಲಿ ಇಮ್ರಾನ್‌ ತಾಹಿರ್‌ ಪ್ರಧಾನ ಪಾತ್ರ ನಿರ್ವಹಿಸಲಿದ್ದಾರೆ.
ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನೇನು ಗೆಲುವು ಪಡೆಯುತ್ತಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ವಿಂಡೀಸ್‌ ಅಂತಿಮವಾಗಿ 15 ರನ್‌ ಗಳಿಂದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾಗೆ ವಿಂಡೀಸ್‌ ಬೌಲರ್‌ಗಳು ಆಘಾತ ನೀಡಿದ್ದರು. ಕೇವಲ 38 ರನ್‌ ಗಳಿಗೆ ನಾಲ್ಕು ವಿಕೆಟ್‌ ಕಬಳಿಸಿದ್ದರು. ಆದರೆ, ಸ್ಟೀವ್‌ ಸ್ಮಿತ್‌ ಹಾಗೂ ನಥಾನ್‌ ಕೌಲ್ಟರ್‌ ನೈಲ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಆಸೀಸ್‌ 288 ರನ್‌ ಕಲೆಹಾಕಿತ್ತು.
ಪಂದ್ಯದ ಆರಂಭದಲ್ಲಿ ಶಾರ್ಟ್‌ ಪಿಚ್‌ಗಳ ಮೂಲಕ ಯಶಸ್ವಿಯಾಗಿದ್ದ ಬೌಲರ್‌ಗಳು ಬಳಿಕ ಮಧ್ಯಮ ಹಾಗೂ ಅಂತಿಮ ಅವಧಿಯಲ್ಲಿ ಫಿಂಚ್‌ ಬಳಗವನ್ನು ಕಟ್ಟಿಹಾಕುವಲ್ಲಿ ವಿಫಲವಾಗಿತ್ತು. ನಂತರ 289 ರನ್‌ ಗುರಿ ಹಿಂಬಾಲಿಸಿದ್ದ ವೆಸ್ಟ್‌ ಇಂಡೀಸ್‌, ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ನಂತರ ಶಾಯ್‌ ಹೋಪ್‌, ನಾಯಕ ಜೇಸನ್‌ ಹೋಲ್ಡರ್‌ ಹಾಗೂ ನಿಕೋಲಸ್‌ ಪೂರನ್‌ ಅವರ ಬ್ಯಾಟಿಂಗ್‌ ತಂಡವನ್ನು ಗೆಲುವಿನ ಸಮೀಪ ತಂದಿತ್ತು. ಆದರೆ, ಆ್ಯಂಡ್ರೆ ರಸೆಲ್‌ ಅವರ ವಿಕೆಟ್‌ ಪತನ ವಿಂಡಿಸ್‌ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಅಂತಿಮವಾಗಿ ವಿಂಡೀಸ್‌ 15 ರನ್‌ಗಳಿಂದ ಸೋಲು ಅನುಭವಿಸಿತ್ತು.
ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಇದೀಗ ವೆಸ್ಟ್‌ ಇಂಡೀಸ್ ತಂಡದಲ್ಲಿ ಕ್ರಿಸ್ ಗೇಲ್‌ ಹಾಗೂ ಎವಿನ್ ಲೆವಿಸ್‌ ಅವರಿಂದ ಉತ್ತಮ ಆರಂಭದ ನಿರೀಕ್ಷೆ ಇದೆ. ಶಾಯ್‌ ಹೋಪ್‌ ಲಯದಲ್ಲಿರುವುದು ವಿಂಡೀಸ್‌ಗೆ ಪ್ಲಸ್‌ ಪಾಯಿಂಟ್‌. ಆ್ಯಂಡ್ರೆ ರಸೆಲ್‌ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
ಕಳೆದ ಪಂದ್ಯಗಳಲ್ಲಿ  ಶಾರ್ಟ್‌ ಪಿಚ್‌ ಎಸೆತಗಳಿಂದ ಎದುರಾಳಿ ತಂಡಗಳ ನಿದ್ದೆ ಕೆಡಸಿದ್ದ ವಿಂಡೀಸ್‌ ಬೌಲರ್‌ಗಳು ನಾಳಿನ ಪಂದ್ಯದಲ್ಲೂ ಅದೇ ಹಾದಿಯಲ್ಲಿ ಬೌಲಿಂಗ್‌ಗೆ ಕಣಕ್ಕೆ ಇಳಿಯಲಿವೆ.

Related Articles