Thursday, September 12, 2024

ಜಯದ ಒತ್ತಡದಲ್ಲಿ ರಾಯಲ್ಸ್ -ರೈಡರ್ಸ್

ಕೊಲ್ಕತಾ: ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿ ತೀವ್ರ ಆಘಾತಕ್ಕೆ ಒಳಗಾಗಿರುವ ಕೊಲ್ಕತಾ ನೈಟ್‌ ರೈಡರ್ಸ್‌ ಹಾಗೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿರುವ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ನಾಳೆ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌  (ಐಪಿಎಲ್‌) 43ನೇ ಪಂದ್ಯದಲ್ಲಿ ನಾಳೆ ಈಡೆನ್‌ ಗಾರ್ಡನ್ಸ್‌ ಮೈದಾನದಲ್ಲಿ ಮುಖಾಮುಖಿಯಾಗಲಿವೆ.

ಪ್ರಸಕ್ತ ಆವೃತ್ತಿಯಲ್ಲಿ ಕೆಕೆಆರ್ ಆಡಿರುವ 10 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಇನ್ನುಳಿದ ಆರರಲ್ಲಿ ಸೋಲು ಅನುಭವಿಸಿದೆ. ಒಟ್ಟು 8 ಅಂಕಗಳೊಂದಿಗೆ ಗುಂಪು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ರಾಜಸ್ಥಾನ್‌ ರಾಯಲ್ಸ್‌ 10 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದು ಇನ್ನುಳಿದ ಏಳು ಪಂದ್ಯಗಳಲ್ಲಿ ಪರಾಭವಗೊಂಡಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಉಭಯ ತಂಡಗಳು ಮೊದಲ ಕಾದಾಟದಲ್ಲಿ ಕೆಕೆಆರ್‌ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.

ಸತತ ಐದು ಪಂದ್ಯಗಳಲ್ಲಿ ಗೆಲುವು ಕಾಣದೆ ವಿಶ್ವಾಸ ಕಳೆದುಕೊಂಡಿರುವ ಕೊಲ್ಕತಾ ನೈಟ್‌ ರೈಡರರ್ಸ್‌ ಗೆ ಗೆಲುವಿನ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಕಳೆದ ಪಂದ್ಯದಲ್ಲಿ ಕ್ರಿಸ್‌ ಲೀನ್‌ 51 ರನ್‌ ಗಳಿಸಿದ್ದರು. ಇವರ ಜತೆಗೆ ಸುನೀಲ್‌ ನರೇನ್ 25 ಹಾಗೂ ರಿಂಕು ಸಿಂಗ್‌ 30 ರನ್‌ ಗಳಿಸಿದ್ದರು. ಇನ್ನುಳಿದಂತೆ ಆಂಡ್ರೆ ರಸೆಲ್‌, ಶುಭಮನ್‌ ಗಿಲ್‌, ನಿತೀಶ್‌ ರಾಣಾ, ದಿನೇಶ್‌ ಕಾರ್ತಿಕ್‌ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.

ಬೌಲಿಂಗ್‌ ವಿಭಾಗದಲ್ಲಿಯೂ ಕೂಡ ಕೆಕೆಆರ್‌ ಬೌಲಿಂಗ್‌ ಪಡೆ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಕಳೆದ ಪಂದ್ಯದಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಪದೇ-ಪದೆ ವಿಫಲರಾಗುತ್ತಿದೆ. ಹಾಗಾಗಿ, ಈ ಪಂದ್ಯದಲ್ಲಿ ಹ್ಯಾರಿ ಗರ್ನಿ ಅವರಿಗೆ ಇನ್ನುಳಿದ ಬೌಲರ್‌ಗಳು ಬೆನ್ನು ನೀಡುವುದು ಅಗತ್ಯವಾಗಿದೆ. ಸ್ಪಿನ್‌ ವಿಭಾಗ ಕೂಡ ಕಳೆದ ಪಂದ್ಯದಲ್ಲಿ ದುಬಾರಿಯಾಗಿತ್ತು. ನಾಳಿನ ಪಂದ್ಯಕ್ಕೆ ಕೆ.ಸಿ ಕಾರಿಯಪ್ಪ ಬದಲಿಗೆ ಕುಲ್ದೀಪ್‌ ಯಾದವ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ರಾಜಸ್ಥಾನ್‌ ರಾಯಲ್ಸ್ ಕೂಡ ಪ್ರಸಕ್ತ ಆವೃತ್ತಿಯಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಆರ್‌ಆರ್‌ ಪಾಲಿಗೆ ಪ್ಲೇ ಆಫ್‌ ಹಾದಿ ಕಷ್ಟವಾಗಿದೆ. ಹಾಗಾಗಿ, ಗೆಲುವಿನ ಲಯಕ್ಕೆ ಮರಳುವುದು ಅನಿವಾರ್ಯವಾಗಿದೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ಅಂಜಿಂಕ್ಯಾ ರಹಾನೆ ಹಾಗೂ ಅರ್ಧ ಶತಕಗಳಿಸಿದ್ದ ಸ್ಟೀವ್‌ ಸ್ಮಿತ್‌ಗೆ ಇನ್ನುಳಿದ ಆಟಗಾರರು ಸಾಥ್‌ ನೀಡುವುದು ಅಗತ್ಯವಾಗಿದೆ.

ಇನ್ನೂ ಬೌಲಿಂಗ್‌ ವಿಭಾಗದಲ್ಲಿ ವೇಗ ಹಾಗೂ ಸ್ಪಿನ್‌  ಎರಡೂ ವಿಭಾಗದಲ್ಲಿ ಸ್ಥಿರತೆಯ ಸಮಸ್ಯೆಯನ್ನು ರಾಜಸ್ಥಾನ್‌ ಎದುರಿಸುತ್ತಿದೆ.
ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಶ್ರೇಯಸ್‌ ಗೋಪಾಲ್‌ ಕಳೆದ ಪಂದ್ಯದಲ್ಲಿ 11.75 ಸರಾಸರಿಯಲ್ಲಿ ರನ್‌ ಕೊಟ್ಟಿದ್ದರು. ಇಂಗ್ಲೆಂಡ್‌ ಕ್ರಕೆಟ್‌ ಮಂಡಳಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಳ್ಳಲು ಇದೇ 26 ರಂದು ಕೊನೆಯ ದಿನಾಂಕ ನೀಡಿರುವ ಹಿನ್ನೆಲೆಯಲ್ಲಿ ಜೋಫ್ರಾ ಆರ್ಚರ್‌ ಹಾಗೂ ಬೆನ್ ಸ್ಟೋಕ್ಸ್‌ ನಾಳಿನ ಪಂದ್ಯದಲ್ಲಿ ಆಡುತ್ತಿಲ್ಲ. ಇವರ ಬದಲು ಲಿಯಾಮ್‌ ಲಿವಿಂಗ್‌ಸ್ಟೋನ್‌ ಹಾಗೂ ಓಶಾನೆ ಥಾಮಸ್ ಕಣಕ್ಕೆ ಇಳಿಯುತ್ತಿದ್ದಾರೆ.

Related Articles