ದೆಹಲಿ:
ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭಾರತದ 19 ವಯೋಮಿತಿ ಮಾಜಿ ವೇಗಿ ಮುಂಬೈನ ಸೌರಭ್ ನೇತ್ರವಾಲ್ಕರ್ ಇದೀಗ ಯುಎಸ್ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ.
ಮುಂಬೈನ 27 ವರ್ಷದ ಯುವಕ 2010ರಲ್ಲಿ 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಅತೀ ಹಚ್ಚು ವಿಕೆಟ್ ಪಡೆದುಕೊಂಡಿದ್ದರು. ಬಳಿಕ, ಮುಂಬೈ ತಂಡದ ಪರ ಒಂದು ರಣಜಿ ಪಂದ್ಯ ಆಡಿದ್ದರು. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದರು. ನಂತರ, ಕ್ರಿಕೆಟ್‌ನಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಎರಡು ವರ್ಷ ಸತತ ಕಠಿಣ ಪರಿಶ್ರಮ ಪಟ್ಟರು. ಆದರೆ, ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ನಂತರ, ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರು.
ಇದೇ ವೇಳೆ ಅವರು ಸರ್ದಾರ್ ಪಟೇಲ್ ಇಂಜಿನಿಯರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಬಳಿಕ, ಸ್ನಾತಕೋತ್ತರ ಪದವಿಗಾಗಿ ಯುಎಸ್‌ಗೆ ತೆರಳುತ್ತಾರೆ. ನಂತರ, ಓರೆಕಲ್ ಸಂಸ್ಥೆಯಲ್ಲಿ ಸಾಫ್ಟ್ ಇಂಜಿನಿಯರ್ ಆಗಿ ಸೇರಿಕೊಳ್ಳುತ್ತಾರೆ. ಉದ್ಯೋಗ ಬಂದರೂ ಕ್ರಿಕೆಟ್ ಬಿಟ್ಟಿರದ ಸೌರಭ್, ವಾರಾಂತ್ಯದಲ್ಲಿ ಲಾಸ್ ಏಜೆಂಲ್‌ಸ್‌ನಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿದ್ದರು.
ಉದ್ಯೋಗದ ನಡುವೆಯೂ ಸೌರಭ್ ನೇತ್ರವಾಲ್ಕರ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುತ್ತಾರೆ. ವಾರಾಂತ್ಯದಲ್ಲಿ 50 ಓವರ್ ಪಂದ್ಯಗಳಲ್ಲಿ ಆಡುತ್ತಿದ್ದರು. ಇವರ ಪ್ರತಿಭೆ ಗುರುತಿಸಿದ ಯುಎಸ್ ರಾಷ್ಟ್ರೀಯ ಆಯ್ಕೆದಾರರು, ತಂಡಕ್ಕೆ ಆಯ್ಕೆ ಮಾಡುತ್ತಾರೆ. ತಂಡದಲ್ಲಿ ಉತ್ತಮ ಪ್ರತಿಭೆ ಅನಾವರಣ ಮಾಡಿದ ಭಾರತದ ಸೌರಭ್, ಇದೀಗ ಯುಎಸ್ ರಾಷ್ಟ್ರೀಯ ತಂಡದಲ್ಲಿ ನಾಯಕರಾಗಿದ್ದಾರೆ. ಯುಎಸ್ ತಂಡದಲ್ಲಿ ಭಾರತದ ಜತೆಗೆ, ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಮೂಲದ ಆಟಗಾರರು ಇದ್ದಾರೆ. ಮಹಾರಾಷ್ಟ್ರ ತಂಡದ ಸುಶೀಲ್ ನಾಡಕರ್ಣಿ ಮತ್ತು ಹೈದರಾಬಾದ್‌ನ ಇಂಬ್ರಾಹಿಂ ಖಲೀಲ್ ಕೂಡ ಈ ಹಿಂದೆ ಯುಎಸ್ ತಂಡದ ನಾಯಕರಾಗಿದ್ದರು.