Friday, October 4, 2024

ಅಮೆರಿಕ ಮೇಜರ್‌  ಲೀಗ್‌ ಕ್ರಿಕೆಟ್‌ನಲ್ಲಿ ಕನ್ನಡಿಗ ಸುಜಿತ್‌ ಗೌಡ

ಕರ್ನಾಟಕದ ಕ್ರಿಕೆಟ್‌ನಲ್ಲಿ ಅವಕಾಶ ಸಿಗದೆ ಅದೆಷ್ಟೋ ಆಟಗಾರರು ಬೇರೆ ಬೇರೆ ರಾಜ್ಯಗಳನ್ನು ಪ್ರತಿನಿಧಿಸುವುದಿದೆ. ಆದರೆ ಕರ್ನಾಟಕ ಕ್ರಿಕೆಟಿಗರೊಬ್ಬರು ಓದಿನ ಜೊತೆಯಲ್ಲಿ ಕ್ರಿಕೆಟ್‌ ಆಡಿಕೊಂಡು ಅಮೆರಿಕದ ಮೈನರ್‌ ಲೀಗ್‌ಗಳಲ್ಲಿ ಮಿಂಚಿ ಈಗ ಪ್ರತಿಷ್ಠಿತ ಮೇಜರ್‌ ಕ್ರಿಕೆಟ್‌ ಲೀಗ್‌ Major League Cricket ನಲ್ಲಿ ವಾಷಿಂಗ್ಟನ್‌ ಫ್ರೀಡಂ Washington Freedom ಪರ ಆಡುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚಿ ಈಗ ಮೇಜರ್‌ ಲೀಗ್‌ನಲ್ಲಿ ಆಡುತ್ತಿರುವ ಕನ್ನಡಿಗರ ಹೆಮ್ಮೆ ಸುಜಿತ್‌ ಗೌಡ Sujith Gowda ಜಾಗತಿಕ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಲು ಸಜ್ಜಾಗಿದ್ದಾರೆ.

ಬೆಂಗಳೂರಿನ ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌ ಪರ ಆಡುತ್ತಿದ್ದ ಹಾಸನದ ಚನ್ನರಾಯಪಟ್ಟಣದ ಅತ್ತಿಹಳ್ಳಿಯ ನಾರಾಯಣ ಗೌಡ ಹಾಗೂ ವನಿತಾ ಎಸ್‌ಬಿ ಅವರ ಪುತ್ರ ಸುಜಿತ್‌ ಗೌಡ ಈಗಾಗಲೇ ಮೈನರ್‌ ಕ್ರಿಕೆಟ್‌ ಲೀಗ್‌ನಲ್ಲಿ 1000 ರನ್‌ ಗಳಿಸಿ ಮೇಜರ್‌ ಲೀಗ್‌ನಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಡಿಗ್ರಿ ಪಡೆಯಲು ಅಮೆರಿಕಕ್ಕೆ ಬಂದು ನೆಲೆಸಿದ ಸುಜಿತ್‌ ಓದು ಹಾಗೂ ಉದ್ಯೋಗದ ನಡುವೆ ತನ್ನ ಆಸಕ್ತಿಯ ಕ್ಷೇತ್ರವಾದ ಕ್ರಿಟೆಗ್‌ಗೂ ಸಮಯವನ್ನು ವಿನಿಯೋಗಿಸಿದ ಕಾರಣ ಇಂದು ಜಾಗತಿಕ ಲೀಗ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಮೆರಿಕದ Lennox International ಕಂಪೆನಿಯಲ್ಲಿ Business systems analyst ಆಗಿ ಕಾರ್ಯನಿರ್ವಹಿಸುತ್ತಿರುವ ಸುಜಿತ್‌ ಗೌಡ, “ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ,” ಎಂದಿದ್ದಾರೆ. ಮೊಯ್ಸಸ್‌ ಹೆನ್ರಿಕ್‌ ಅವರು ನಾಯಕರಾಗಿರುವ ವಾಷಿಂಗ್ಟನ್‌ ಫ್ರೀಡಮ್‌ ತಂಡದಲ್ಲಿ ಆಡುತ್ತಿರುವ ಸುಜಿತ್‌ ಗೌಡ, ಜಗತ್ತಿನ ಶ್ರೇಷ್ಠ ಆಟಗಾರರಾದ ಕೀರನ್‌ ಪೊಲಾರ್ಡ್‌, ಆರೋನ್‌ ಫಿಂಚ್‌, ವೇನ್‌ ಪರ್ನೆಲ್‌, ಫಾಫ್‌ ಡು ಪ್ಲೆಸಿಸ್‌ ಮೊದಲಾದ ಆಟಗಾರರ ವಿರುದ್ಧ ಆಡಲಿದ್ದಾರೆ.

ಕ್ರಿಕೆಟನ್ನೇ ಉಸಿರಾಗಿಸಿಕೊಂಡಿರುವ ಭಾರತದ ಆಟಗಾರನಿಗೆ ಅಮೆರಿಕದಲ್ಲಿ ಉತ್ತಮ ಗೌರವ ಸಿಕ್ಕಿದೆ, ಕರ್ನಾಟಕದಲ್ಲಿರುವಾಗ ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಕರುಣ್‌ ನಾಯರ್‌, ಶ್ರೀಶಾಂತ್‌ ಅರವಿಂದ್‌, ದೇವದತ್ತ ಪಡಿಕ್ಕಲ್‌, ವೈಶಾಖ್‌ ವಿಜಯ್‌ ಕುಮಾರ್‌ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರೊಂದಿಗೆ ಆಡಿರುವ ದಿನಗಳನ್ನು ಸುಜಿತ್‌ ಗೌಡ ಸ್ಮರಿಸಿದ್ದಾರೆ.

14 ಮತ್ತು 23 ವರ್ಷ ವಯೋಮಿತಿಯ ಕರ್ನಾಟಕ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಸುಜಿತ್‌ ಅವರಿಗೆ ಸಲ್ಲುತ್ತದೆ. ಆದರೆ ಉನ್ನತ ಅಧ್ಯಯನದ ಕಾರಣ ರಾಜ್ಯದ ಕ್ರಿಕೆಟನ್ನು ತೊರೆದು ಅಮೆರಿಕ ಸೇರಬೇಕಾಯಿತು. 23 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಎರಡು ಋತುವಿನಲ್ಲಿ 500ಕ್ಕೂ ಹೆಚ್ಚು ರನ್‌ ಗಳಿಸಿದರೂ ಕರ್ನಾಟಕ ರಣಜಿ ತಂಡಕ್ಕೆ ಈ ಯುವ ಆಟಗಾರನನ್ನು ಪರಿಗಣಿಸಲಿಲ್ಲ. ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲೂ ಕೆಳ ಕ್ರಮಾಂಕದ ಆಟಗಾರನಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದರು.

ವಾರದಲ್ಲಿ ಎಂಟು ಗಂಟೆಗಳನ್ನು ಬ್ಯಾಟಿಂಗ್‌ ಮಾಡಲು ವಿನಿಯೋಗಿಸುತ್ತಿರುವ ಸುಜಿತ್‌ ಗೌಡ, “ನಾನು ಪ್ರೀತಿಸುತ್ತಿರುವ ಕ್ರೀಡೆಯಲ್ಲಿ ಯಶಸ್ಸು ಕಾಣಲು ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ, ಇಲ್ಲಿ ಕ್ರಿಕೆಟ್‌ಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಇಲ್ಲಿಯ ಇತರ ಕ್ರೀಡೆಗಳ ಅಭಿಮಾನಿಗಳು ಕೂಡ ಕ್ರಿಕೆಟ್‌ ಬಗ್ಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ,” ಎಂದು ಸುಜಿತ್‌ ಗೌಡ sportsmail ಗೆ ತಿಳಿಸಿದ್ದಾರೆ.

ಮೈನರ್‌ ಲೀಗ್‌ ಕ್ರಿಕೆಟ್‌ನಲ್ಲಿ 1014 ರನ್‌ ಗಳಿಸಿರುವ ಸುಜಿತ್‌ ಗೌಡ ಲೀಗ್‌ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ನಾಲ್ಕನೇ ಆಟಗಾರರೆನಿಸಿದ್ದಾರೆ. ಭಾರತದ ಆಟಗಾರ ಉನ್ಮುಕ್ತ್‌ ಚಾಂದ್‌ ಅವರ ಬಳಿಕ ಅಮೆರಿಕ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತಿ ಹೆಚ್ಚು ರನ್‌ ಗಳಿಸಿದ ಇತರ ಮೂವರು ಆಟಗಾರರಿಗಿಂತ ಸ್ಟ್ರೇಕ್‌ ರೇಟ್‌ (149)ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಸ್ಥಿರ ಪ್ರದರ್ಶನ ತೋರುತ್ತಿರುವ ಸುಜಿತ್‌ ಗೌಡ ವಾಷಿಂಗ್ಟನ್‌ ಫ್ರೀಡಂ ತಂಡದ ಆಧಾರ ಸ್ತಂಭ ಎನಿಸಿದ್ದಾರೆ.

ಅಂತಾರಾಷ್ಟ್ರೀಯ ಶ್ರೇಷ್ಠ ವೀಕ್ಷಕ ವಿವರಣೆಗಾರ ಸುನಿಲ್‌ ಗವಾಸ್ಕರ್‌ ಅವರು ಮೇಜರ್‌ ಲೀಗ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿದಕಲ್ಲಿ ಕ್ರಿಕೆಟ್‌ ಇನ್ನೂ ಅಭಿವೃದ್ಧಿಹೊಂದಬೇಕಷ್ಟೆ. ಬೇಸ್‌ಬಾಲ್‌ನ ಅಭಿಮಾನಿಗಳು ಕ್ರಿಕೆಟ್‌ನಲ್ಲೂ ಆಸಕ್ತಿ ತೋರಿದರೆ ಅಮೆರಿಕ ಕೂಡ ಭಾರದಂತೆ ಕ್ರಿಕೆಟ್‌ ರಾಷ್ಟ್ರವಾಗಿ ರೂಪುಗೊಳ್ಳಲಿದೆ. ಈ ಬಾರಿ ಒಟ್ಟು ಆರು ತಂಡಗಳು ಪ್ರತಿಷ್ಠಿತ ಮೇಜರ್‌ ಲೀಗ್‌ನಲ್ಲಿ ಸ್ಪರ್ಧಿಸುತ್ತಿದ್ದು, ಭಾರತ ಮೂಲದ ಅನೇಕ ಆಟಗಾರರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಕರ್ನಾಟಕ ಮೂಲದ ಇನ್ನೋರ್ವ ಆಟಗಾರ ಸಂಜಯ್‌ ಕೃಷ್ಣಮೂರ್ತಿ ಅವರು ಆರೋನ್‌ ಫಿಂಚ್‌ ನಾಯಕತ್ವದ ಸ್ಯಾನ್‌ ಫ್ರಾನ್ಸಿಸ್ಕೋ  ಯುನಿಕಾರ್ನ್‌ ತಂಡದ ಪರ ಆಡುತ್ತಿದ್ದಾರೆ.

Related Articles