Saturday, July 27, 2024

ಕ್ರಿಕೆಟ್‌ನ ಭಂಡಾರ, ಉಡುಪಿಯ ದಯಾನಂದ ಬಂಗೇರ

 

 

ಸೋಮಶೇಖರ್‌ ಪಡುಕರೆ, SportsMail

ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಉಡುಪಿಯ ಬಲಿಷ್ಠ ಪ್ಯಾರಡೈಸ್‌ ಬನ್ನಂಜೆಯ ಭರವಸೆಯ ಆಟಗಾರ, ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಕ್ರಿಕೆಟ್‌ ತಂಡದ ನಾಯಕ, ಲೆದರ್‌ಬಾಲ್‌ ಕ್ರಿಕೆಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಕೆಟ್‌ಕೀಪರ್‌, ಬ್ಯಾಟ್ಸ್ಮನ್‌, ಮಂಗಳೂಕರಿನ ಸಿಟಿ ಕ್ರಿಕೆಟರ್ಸ್‌ ತಂಡದ ಸದಸ್ಯ, ಕಾರ್ಪೊರೇಷನ್‌ ಬ್ಯಾಂಕ್‌ ಕ್ರಿಕೆಟ್‌ ತಂಡದ ಆಟಗಾರ, ಗೋವಾ ರಣಜಿ ತಂಡದ ದಾಖಲೆ ವೀರ, ಯುಎಇ ಏಷ್ಯಾ ಕಪ್‌ ತಂಡದ ಆಟಗಾರ, ಯುಎಇ ವಿಶ್ವಕಪ್‌ ತಂಡದ ಸದಸ್ಯ, ಯುಎಇ ಪರ ಭಾರತದ ವಿರುದ್ಧ ಶಾರ್ಜಾದಲ್ಲಿ ಆಡಿದ ಆಟಗಾರ, ಸಿಂಗಲ್‌ ವಿಕೆಟ್‌ ಟೂರ್ನಿಯಲ್ಲಿ ಸಚಿನ್‌ ತೆಂಡೂಲ್ಕರ್‌ ವಿರುದ್ಧ ಆಡಿದ್ದ ಕನ್ನಡಿಗ, ನ್ಯೂ ಮೆಡಿಕಲ್‌ ಸೆಂಟರ್‌ ಯುಎಇ ತಂಡದ ಸದಸ್ಯ, ಐಸಿಸಿ ಲೆವೆಲ್‌ 2 ಕೋಚ್‌, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಲೆವೆಲ್‌ 2 ಗ್ರೇಡ್‌ ಕೋಚ್‌, ಸಸೆಕ್ಸ್‌ ಕೌಂಟಿಯಲ್ಲಿ ತರಬೇತಿ, ಮೊಹಮ್ಮದ್‌ ಅಜರುದ್ದೀನ್‌, ಜಿ.ಆರ್.‌ ವಿಶ್ವನಾಥ್‌, ಜಾವಗಲ್‌ ಶ್ರೀನಾಥ್‌, ರೋಜರ್‌ ಬಿನ್ನಿ, ಸಯ್ಯದ್‌ ಕಿರ್ಮಾನಿ, ಮಾಲ್ಕಂ ಮಾರ್ಷಲ್‌ ಮೊದಲಾದ ಕ್ರಿಕೆಟ್‌ ದಿಗ್ಗಜರ ವಿರುದ್ಧ ಆಡಿದ್ದ ಆಟಗಾರನನ್ನು ನಾವು ಮರೆತು ಆಟ ಮುಂದುವರೆಸಿದ್ದೇವೆ. ಈ ಕ್ರಿಕೆಟ್‌ ಸಾಧಕ ಬೇರೆ ಯಾರೂ ಅಲ್ಲ, ಹಿತಮಿತ ಮೃದುವಚನದ ಕನ್ನಡಿಗ ಉಡುಪಿಯ ದಯಾನಂದ ಬಂಗೇರ.

ಉಡುಪಿಯ ತಮ್ಮ ನಿವಾಸ ಜ್ಯೋತಿ ಕಿರಣ್‌ ನಲ್ಲಿ ಕುಳಿತು. ಬ್ಯಾಟ್‌ ಹಿಡಿದು ತಾವು ಸಾಗಿ ಬಂದ ಹಾದಿಯನ್ನು ಬಂಗೇರ ಅವರು ಮೆಲುಕು ಹಾಕುತ್ತಿರುವಾಗ ಅಲ್ಲಿ ಮಾತಿಗೆ ಅವಕಾಶ ಇರಲಿಲ್ಲ….ಪ್ರಶ್ನೆಗಳು ಮಾತ್ರ ಕಾಡುತ್ತಿತ್ತು. ಇಂಥ ಪ್ರತಿಭಾವಂತ ಹಿರಿಯ ಕ್ರಿಕೆಟಿಗನನ್ನು ನಾವು ಏಕೆ ಮೂಲೆಗುಂಪು ಮಾಡಿದೆವು ಎಂದು.

7ನೇ ವಯಸ್ಸಿನಲ್ಲೇ ಹಿರಿಯರ ತಂಡಕ್ಕೆ:

ಉಡುಪಿಯ ಕಟಪಾಡಿಯಲ್ಲಿ ಜನಿಸಿದ ದಯಾನಂದ್‌ ಚಿಕ್ಕಂದಿನಿಂದಲೇ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ತಮ್ಮನ್ನು ತೋಡಗಿಸಿಕೊಂಡವರು. 7ನೇ ವಯಸ್ಸಿನಲ್ಲೇ ಊರಿನ ಹಿರಿಯರ ತಂಡದಲ್ಲಿ ಆಡುವ ಅವಕಾಶ ಪಡೆದರು. ಗ್ರಾಮ ಗ್ರಾಮಗಳ ನಡುವೆ ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದರೆ ಅಲ್ಲಿ ದಯಾನಂದ್‌ ಬಂಗೇರ ಅವರ ಮಿಂಚಿನಾಟ ನೋಡಲು ಜನ ಸೇರುತ್ತಿದ್ದರು. ಬೇರೆಯವರು ಕ್ರಿಕೆಟ್‌ ಆಡುತ್ತಿರುವುದನ್ನು ನೋಡಲು ಅಜ್ಜರಕಾಡು ಮೈದಾನಕ್ಕೆ ಎಲ್ಲರಿಗಿಂತ ಮೊದಲು ಬಂದು ಒಂದು ಮೂಲೆಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ವಲಯ ಮಟ್ಟದ ಕ್ರಿಕೆಟ್‌ ಆಯ್ಕೆ ಟ್ರಯಲ್ಸ್‌ನಲ್ಲಿ ದಯಾನಂದ್‌ ಅವರ ಆಟವನ್ನು ನೋಡಿ ಎಲ್ಲರಿಗೂ ಮೆಚ್ಚುಗೆಯಾಯಿತು. ಇದೇ ವೇಳೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕ್ರಿಕೆಟ್‌ ತಂಡ ಪ್ಯಾರಡೈಸ್‌ ಬನ್ನಂಜೆಯ ಕೆಲವು ಆಟಗಾರರು ದಯಾನಂದ್‌ ಅವರ ಮನೆಗೆ ಬಂದು ತಮ್ಮ ತಂಡದ ಪರ ಆಡುವಂತೆ ಕೇಳಿಕೊಂಡರು. ಅಲ್ಲಿಂದ ಆರಂಭಗೊಂಡ ದಯಾನಂದರ ಕ್ರಿಕೆಟ್‌ ಬದುಕು ವಿವಿಧ ಹಂತಗಳಲ್ಲಿ ಸಾಗಿ ಎಲ್ಲರಿಗೂ ಆದರ್ಶವೆನಿಸಿತು.

ಪೂರ್ಣಪ್ರಜ್ಞಾ ಕಾಲೇಜು ಕ್ರಿಕೆಟ್‌ ತಂಡದ ನಾಯಕರಾಗಿದ್ದಾಗ ದಯಾನಂದ್‌ ಅವರು ಮಂಗಳೂರು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾದರು. ಇದೇ ವೇಳೆ ದಕ್ಷಿಣ ವಲಯದಲ್ಲಿ ಆಡುವ ಅವಕಾಶ ಸಿಕ್ಕಿತು. ಮಂಗಳೂರು ವಿಶ್ವವಿದ್ಯಾಲಯ ಆ ವರ್ಷ ದಕ್ಷಿಣ ವಯಲದಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿತ್ತು. ಆಗ ಒಸ್ಮಾನಿಯಾ ವಿಶ್ವವಿದ್ಯಾನಿಲಯದ ಪರ ಆಡುತ್ತಿದ್ದ ಮೊಹಮ್ಮದ್‌ ಅಜರುದ್ದೀನ್‌ ಮಂಗಳೂರು ವಿಶ್ವವಿದ್ಯಾಲಯದ ವಿರುದ್ಧ 190ರನ್‌ ಹೊಡೆದಿದ್ದರು. ಆವಾಗಲೇ ಅಜರುದ್ದೀನ್‌ ಭಾರತದ ಪರ ಆಡಲಿರುವ ಆಟಗಾರ ಎಂದು ಎಲ್ಲರೂ ಮಾತನಾಡುತ್ತಿದ್ದರು ಎಂಬುದನ್ನು ದಯಾನಂದ್‌ ಅವರು ಹೇಳಲು ಮರೆತಿಲ್ಲ. ಮುಂದೆ ಹಾಗೆಯೇ ಆಯಿತು.
ಕಾರ್ಪೊರೇಷನ್‌ ಬ್ಯಾಂಕ್‌ ಮೂಲಕ ಗೋವಾಕ್ಕೆ:

ಕಾಮರ್ಸ್‌ನಲ್ಲಿ ಪದವಿ ಮುಗಿಯುತ್ತಿದ್ದಂತೆ ಕ್ರಿಕೆಟ್‌ ಆಟದ ಹಿನ್ನೆಲೆಯಲ್ಲಿ ದಯಾನಂದ್‌ ಅವರಿಗೆ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕಿತು. ಇದರಿಂದಾಗಿ ಬ್ಯಾಂಕ್‌ ತಂಡದಲ್ಲಿ ಕ್ರಿಕೆಟ್‌ ಆಟವನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಅಂತರ್‌ ಬ್ಯಾಂಕ್‌ ಕ್ರಿಕೆಟ್‌ ಟೂರ್ನಿ ನಡೆಯುತ್ತಿತ್ತು. ಬ್ಯಾಂಕ್‌ಗಳ ನಡುವೆ ನಡೆಯುತ್ತಿದ್ದ ಪ್ರತಿಯೊಂದು ಪಂದ್ಯದಲ್ಲೂ ದಯಾನಂದ್‌ ಬ್ಯಾಟಿಂಗ್‌ ನಲ್ಲಿ ಮಿಂಚುತ್ತಿದ್ದರು. 1985ರ ಸುಮಾರಿಗೆ ಗೋವಾ ರಣಜಿ ತಂಡ ಆರಂಭಗೊಂಡಿತ್ತು. ಅಲ್ಲಿಯ ಕಾರ್ಪೊರೇಷನ್‌ ಬ್ಯಾಂಕ್‌ ಉದ್ಯೋಗಿ ಪ್ರಮೋದ್‌ ಕಾಮತ್‌ ದಯಾನಂದ ಬಂಗೇರ ಅವರ ಆಟಕ್ಕೆ ಮನಸೋತಿದ್ದರು, ಹೇಗಾದರೂ ಮಾಡಿ ಈ ಆಟಗಾರನನ್ನು ಗೋವಾಕ್ಕೆ ಕರೆದೊಯ್ಯಬೇಕೆಂದು ಯೋಚಿಸಿದರು. ಅದೇ ರೀತಿ, ದಯಾನಂದ್‌ ಅವರಿಗೆ ನೇರವಾಗಿ ವಿಷಯ ತಿಳಿಸಿದರು. ದಯಾನಂದ್‌ ಅವರು ಕೆಲಸಕ್ಕೆ ಸೇರಿ ಕೇವಲ ಆರು ತಿಂಗಳಾಗಿತ್ತು. ಆದರೂ ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ನೇರವಾಗಿ ಎಜಿಎಂಗೆ ಪತ್ರ ಬರೆದರು. ಆಗ ಕಾರ್ಪೊರೇಷನ್‌ ಬ್ಯಾಂಕಿನ ಚೇರ್ಮನ್‌ ಕಟಪಾಡಿಯ ವೈ.ಎಸ್.‌ ಹೆಗ್ಡೆ. ಗೋವಾಕ್ಕೆ ಹೋಗುವ ವಿಷಯ ಅವರಿಗೂ ತಿಳಿಯಿತು.

“ಗೋವಾದಲ್ಲಿ ಕುಡಿದು ಹಾಳಾಗುತ್ತಿ ಬೇಡ,” ಎಂದು ತಮಾಷೆ ಮಾಡಿದರು, ಆದರೂ ಒಲ್ಲದ ಮನಸ್ಸಿನಲ್ಲಿ ಉತ್ತಮ ಆಟಗಾರನನ್ನು ಗೋವಾಕ್ಕೆ ವರ್ಗಾವಣೆ ಮಾಡಿದರು. ಇದರಿಂದ ಗೋವಾ ರಣಜಿ ತಂಡ ಮೊದಲ ಬಾರಿಗೆ ಒಬ್ಬ ಕನ್ನಡಿಗನಿಗೆ ಅವಕಾಶ ನೀಡಿತು.

ಗೋವಾ ತಂಡ ದಯಾನಂದ ಬಂಗೇರ ಹೋದ ಮೊದಲ ವರ್ಷದಲ್ಲಿ ಹೆಚ್ಚಿನ ಸೋಲು ಅನುಭವಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ಸೋಲಿನ ಪ್ರಮಾಣ ಕಡೆಮೆಯಾಗಿ ಡ್ರಾ ಪಂದ್ಯಗಳ ಸಂಖ್ಯೆ ಹೆಚ್ಚಾಯಿತು.

ಗೋವಾ ತಂಡವು ದಕ್ಷಿಣದ ತಂಡಗಳಾದ ಕರ್ನಾಟಕ, ಹೈದರಾಬಾದ್‌, ಆಂಧ್ರ, ಕೇರಳ, ಮದ್ರಾಸ್‌ ತಂಡಗಳ ವಿರುದ್ಧ ಆಡುತ್ತಿತ್ತು.

ಕರ್ನಾಟಕದ ದಿಗ್ಗಜರ ವಿರುದ್ಧ ಆಡಿದ ಅನುಭವ:

 

ಗೋವಾ ತಂಡದ ವಿಕೆಟ್‌ ಕೀಪರ್‌ ಆಗಿದ್ದ ದಯಾನಂದ್‌ ಬಂಗೇರ ಅವರಿಗೆ ರಣಜಿ ಟೂರ್ನಿಯಲ್ಲಿ ಕರ್ನಾಟಕದ ಪ್ರಮುಖ ಆಟಗಾರರ ವಿರುದ್ಧ ಆಡುವ ಅವಕಾಶ ಸಿಕ್ಕಿತ್ತು. ಜಿ.ಆರ್.‌ ವಿಶ್ವನಾಥ್‌ ಪಣಜಿಯಲ್ಲಿ ನಡೆದ ಪಂದ್ಯದಲ್ಲಿ ಆಡಿದ್ದರು. ದಾವಣಗೆರೆಯಲ್ಲಿ ನಡೆದ ಪಂದ್ಯದಲ್ಲಿ ಬೃಜೇಶ್‌ ಪಟೇಲ್‌ 10,000 ರನ್‌ ಪೂರ್ಣಗೊಳಿಸಿದ್ದನ್ನು ದಯಾನಂದ್‌ ಮರೆತಿಲ್ಲ. ವಿಕೆಟ್‌ ಕೀಪಿಂಗ್‌ ಮಾಡುತ್ತಿದ್ದ ದಯಾನಂದ್‌ ಅವರು ಬೃಜೇಶ್‌ಗೆ ಮೊದಲು ಶುಭಕೋರುವ ಅವಕಾಶ ಪಡೆದಿದ್ದರು. ರೋಜರ್‌ ಬಿನ್ನಿಯ ಬೌಲಿಂಗ್‌ನಲ್ಲಿ ಬೌಂಡರಿ ಸಿಡಿಸಿದ್ದನ್ನೂ ಸ್ಮರಿಸುತ್ತಾರೆ. ಎ. ವಿ. ಜಯಪ್ರಕಾಶ್‌, ಅಭಿರಾಮ್‌ ಮೊದಲಾದ ಆಟಗಾರರ ವಿರುದ್ಧ ಆಡಿರುತ್ತಾರೆ.

 

ಯುಎಇಗೆ ಪ್ರಯಾಣ:

ನಾಲ್ಕು ವರ್ಷಗಳ ಕಾಲ ಗೋವಾ ಪರ ರಣಜಿಯಲ್ಲಿ ಮಿಂಚಿದ ದಯಾನಂದ್‌ ಕ್ರಿಕೆಟ್‌ನಲ್ಲಿ ಭವಿಷ್ಯದ ಬಗ್ಗೆ ಯೋಚಿಸಿದರು. ಆಗ ರಣಜಿ ಆಡುವವರಿಗೆ ದೈನಂದಿನ ಭತ್ಯೆಯಾಗಿ 300ರೂ, ನೀಡುತ್ತಿದ್ದರು ಹೊರತಾಗಿ ಬೇರೇನೂ ಸಿಗುತ್ತಿರಲಿಲ್ಲ. ಗೋವಾದ ಇಬ್ಬರು ಆಟಗಾರರು ಯುಎಇಯಲ್ಲಿ ಆಡುವುದಕ್ಕಾಗಿ ಗೋವಾ ತಂಡವನ್ನು ತೊರೆದರು. ಹೊದವರು ಮೊದಲು ಆಹ್ವಾನ ನೀಡಿದ್ದು ದಯಾನಂದ್‌ ಅವರಿಗೆ. ಇದಕ್ಕೂ ಮೊದಲು ದಯಾನಂದ್‌ ಹೈದರಾಬಾದ್‌ ಬ್ಲೂಸ್‌ ಮೂಲಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಕ್ರಿಕೆಟ್‌ ಪ್ರವಾಸ ಕೈಗೊಂಡರು. ಕೇರಳ, ಹೈದರಾಬಾದ್‌ ಮತ್ತು ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಇಪ್ಪತ್ತೆರಡು ಆಟಗಾರರು ಈ ಪ್ರವಾಸದಲ್ಲಿದ್ದರು. ದಯಾನಂದ್‌ ಅವರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರೆನಿಸಿದರು.

ಬಿ.ಆರ್.ಶೆಟ್ಟಿ ತಂಡಕ್ಕೆ ಸೇರ್ಪಡೆ:

ಯುಎಇಯಲ್ಲಿ ನೆಲೆಸಿರುವ ಖ್ಯಾತ ಉದ್ಯಮಿ ಬಿ,ಆರ್.‌ ಶೆಟ್ಟಿ ಅವರು ಆಗ ನ್ಯೂ ಮೆಡಿಲ್‌ ಸೆಂಟರ್‌ ಹೆಸರಿನಲ್ಲಿ ಕ್ರಿಕೆಟ್‌ ತಂಡವನ್ನು ಕಟ್ಟಿದ್ದರು. ಈ ತಂಡದಲ್ಲಿ ದಯಾನಂದ ಬಂಗೇರ ಅವರು ಆಡುವ ಅವಕಾಶ ಗಳಿಸಿದರು. ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳಿಂದ ಉತ್ತಮ ಆಟಗಾರರನ್ನು ಕರೆಸಿ ಶೆಟ್ಟಿಯವರು ಉತ್ತಮ ತಂಡವನ್ನು ಕಟ್ಟಿದರು. ಆಗ ಅವರು ಅಬುದಾಬಿ ಕ್ರಿಕೆಟ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಅಬುದಾಬಿಯಲ್ಲಿ ಕ್ರಿಕೆಟ್‌ ಅರಂಭಗೊಂಡಿದ್ದೇ ಬಿ.ಆರ್.‌ ಶೆಟ್ಟಿ ಅವರಿಂದ. ಅಬುದಾಬಿ ಸ್ಟೇಡಿಯಂ ಕಟ್ಟುವಲ್ಲಿ ಮೊದಲ ಆಸಕ್ತಿ ತೋರಿದ್ದೇ ಬಿ,ಆರ್.‌ ಶೆಟ್ಟರು. ಅಬುದಾಬಿ ಕ್ರಿಕೆಟ್‌ ಕೌನ್ಸಿಲ್‌ನ ಆರಂಭಿಕ ಕಚೇರಿ ಇದ್ದುದೇ ಬಿ,ಆರ್.‌ ಶೆಟ್ಟರ ಕಟ್ಟಡದಲ್ಲಿ. 1996 ವಿಶ್ವಕಪ್‌ ವೇಳೆ ಬಿ.ಆರ್.‌ ಶೆಟ್ಟರು ಯುಎಇ ಕ್ರಿಕೆಟ್‌ ಅಯ್ಕೆ ಸಮಿತಿಯ ಅಧ್ಯಕ್ಷರೂ ಆಗಿದ್ದರು. ದಯಾನಂದ್‌ ಅವರು ಆರು ವರ್ಷಗಳ ಕಾಲ ಯುಎಇ ರಾಷ್ಟ್ರೀಯ ತಂಡದಲ್ಲಿ ಆಡಿದರು. 1996ರ ಕ್ರಿಕೆಟ್‌ ವಿಶ್ವಕಪ್‌ ನಲ್ಲಿ ಯುಎಇ ತಂಡದಲ್ಲಿ ದಯಾನಂದ್‌ ಸ್ಥಾನ ಪಡೆದಿದ್ದರು. ಅದೇ ರೀತಿ ವಿಶ್ವ ಇಲೆವೆನ್‌ ತಂಡದ ವಿರುದ್ಧವೂ ಆಡುವ ಅವಕಾಶ ಸಿಕ್ಕಿದ್ದನ್ನು ದಯಾನಂದ್‌ ಸ್ಮರಿಸುತ್ತಾರೆ. ಈ ಸಂದರ್ಭದಲ್ಲಿ ಮಾಲ್ಕಂ ಮಾರ್ಷಲ್‌, ಕ್ಲೈವ್‌ ಲಾಯ್ಡ್ಸ್‌ ಅವರಂಥ ಆಟಗಾರರ ವಿರುದ್ಧ ಆಡುವ ಅವಕಾಶ. ಭಾರತ ಎ ತಂಡ ಪ್ರವಾಸ ಕೈಗೊಂಡಾಗ ರಾಹುಲ್‌ ದ್ರಾವಿಡ್‌, ಲಕ್ಷ್ಮಣ್‌ ಅವರ ವಿರುದ್ಧವೂ ಆಡಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ನಾಡಿದ ಆಹ್ವಾನಿತ ಕ್ರಿಕೆಟ್‌ ಟೂರ್ನಿಯಲ್ಲಿ ದಯಾನಂದ್‌ ಬಂಗೇರ ಅವರು ಎರಡು ಶತಕ ಗಳಿಸಿ ಗಮನ ಸೆಳೆದಿದ್ದರು. ಆಟಗಾರನಾಗಿ, ಕೋಚ್‌ ಅಗಿ ಸುಮಾರು 40 ವರ್ಷಗಳ ಕಾಲ ಕ್ರಿಕೆಟ್‌ಗಾಗಿ ದುಡಿದ ದಯಾನಂದ ಬಂಗೇರ ಅವರು, ತಮ್ಮ ಯಶ್ಸಿನ ಹಾದಿಯಲ್ಲಿ  ಐಸಿಸಿ ಮತ್ತು ಏ಼ಷ್ಯನ್‌ ಹಂತದ ತರಬೇತುದಾರರು.

ತಂದೆಯಂತೆ ಮಗ:

ದಯಾನಂದ ಬಂಗೇರ ಅವರ ಮಗ ಅಕ್ಷಯ್‌ ಬಂಗೇರ ಉತ್ತಮ ಕ್ರಿಕೆಟಿಗ. ವಿವಿಧ ವಯೋಮಿತಿಯಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದರೂ ಅಕ್ಷಯ್‌ ಅವರ ಕ್ರಿಕೆಟ್‌ ಬದುಕು ಮುನ್ನಡೆಯಲಿಲ್ಲ. ಪ್ರಾಥಮಿಕ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆಯನ್ನು ಗಮನಿಸಿ ದಯಾನಂದ ಬಂಗೇರ ಅವರು ಮಗನಿಗೆ ಶಿಕ್ಷಣದ ಕಡೆಗೆ ಗಮನಹರಿಸುವಂತೆ ಸೂಚಿಸಿದರು. ಉತ್ತಮ ಕ್ರಿಕೆಟಿಗನಾಗಿದ್ದರೂ ಅಕ್ಷಯ್‌ ಓದನ್ನು ಗಂಭೀರವಾಗಿ ಪರಿಗಣಿಸಿ ಈಗ ಮಾಹೆಯಲ್ಲಿ ಎಂಜಿನಿಯರಿಂಗ್‌ ಅಧ್ಯಯನ ಮಾಡುತ್ತಿದ್ದಾರೆ.

ಕ್ರಿಕೆಟ್‌ ಅಕಾಡೆಮಿ ಸ್ಥಾಪನೆ:

ತಮ್ಮಲ್ಲಿರುವ ಕ್ರಿಕೆಟ್‌ ಅನುಭವವನ್ನು ಭವಿಷ್ಯದ ಕ್ರಿಕೆಟ್‌ಪಟುಗಳಿಗೆ ನೀಡುವ ಉದ್ದೇಶದಿಂದ ದಯಾನಂದ ಬಂಗೇರ ಅವರು ಉಡುಪಿಯಲ್ಲಿ ಅಕ್ಷಯ್‌ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಲು ಉದ್ದೇಶಿಸಿದ್ದಾರೆ. ಅದಕ್ಕೆ ಸ್ಥಳೀಯ ಶಾಸಕರಾದ ರಘುಪತಿ ಭಟ್‌ ನೆರವನ್ನು ನೀಡಿದ್ದು, ಬೀಡಿನ ಗುಡ್ಡೆಯಲ್ಲಿರುವ ಅಂಗಣದಲ್ಲಿ ಅಕಾಡೆಮಿ ಸ್ಥಾಪಿಸಲಿದ್ದಾರೆ.

Related Articles