Wednesday, May 31, 2023

ಬದುಕಿಗೆ ಸ್ಫೂರ್ತಿಯಾಗುವ “ಸತೀಶ್‌ ಮರಾಠೆ ರಾವ್‌ʼʼ ಜೀವನ ಗಾಥೆ

ಸೋಮಶೇಖರ್‌ ಪಡುಕರೆ, SportsMail

ಸತೀಶ್‌ ಮರಾಠೆ ರಾವ್‌ ಈ ಸಾಧಕರ ಕತೆಯನ್ನು ನೀವು ಓದಲೇ ಬೇಕು. ಏಕೆಂದರೆ ಇಲ್ಲಿ ಬರೆದಿರುವುದು ಕತೆಯಲ್ಲ…ಜೀವನ.

ಕರ್ನಾಟಕದ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ ಒಬ್ಬರು ಅಮೆರಿಕಾದಲ್ಲಿದ್ದಾರೆ, ಅವರ ಬದುಕಿನ ಬಗ್ಗೆ ನೀವು ಬರೆಯಬೇಕು ಎಂದು ಬೆಂಗಳೂರಿನ ವೀಲ್ಸ್‌ ಇನ್‌ ಮಾಲೀಕ ವೆಂಕಟೇಶ್‌ ಅವರು ಬಹಳ ಹಿಂದೆಯೇ ಹೇಳಿದ್ದರು, ಆದರೆ ಸಂಪರ್ಕಿಸಲು ಅಸಾಧ್ಯವಾದ ಕಾರಣ ಬರೆಯಲಾಗಲಿಲ್ಲ. ಈಗ ಅವರು ನನ್ನ ಫೇಸ್ಬುಕ್‌ ಗೆಳೆಯರು. ದೂರವಾಣಿ ಮೂಲಕ ಮೊಬೈಲ್‌ ನಂಬರ್‌ ಕೇಳಿದಾಗ ಕೂಡಲೇ ನೀಡಿದರು….ಅವರ ಬದುಕಿನ ಕತೆಯನ್ನು ಕೇಳಿ ಒಂದು ಉತ್ತಮ ಸಿನಿಮಾ ಮಾಡಲೇ…ಕಾದಂಬರಿ ಬರೆಯಲೇ…ಎಂದೆನಿಸಿತು.

ನಿಮಗೆ ಈ ಪೀಠಿಕೆ ಅತಿಶಯೋಕ್ತಿ ಎನಿಸಬಹುದು, ಆದರೆ ಈ ಲೇಖನ ಓದಿದ ಮೇಲೆ ಅಭಿಪ್ರಾಯ ತಿಳಿಸಿ..

ಅಕ್ಟೋಬರ್‌ 26ರಂದು ಸತೀಶ್‌ ಅವರಿಗೆ ಕರೆ ಮಾಡಿದೆ. ಮಾತನ್ನು ಕೇಳಿದಾಗ ಯಾರೋ ಅಮೆರಿಕದ ಪ್ರಜೆ ಮಾತನಾಡಿದ ಹಾಗಾಯಿತು. ಎಲ್ಲೋ ರಾಂಗ್‌ ನಂಬರ್‌ ಹೋಗಿರಬೇಕು ಎಂದು ಕಸಿವಿಯಾಯಿತು. ಅವರ ಮಾತಿನಲ್ಲಿ ನನಗೆ ಕೇಳಿದ್ದು ಫಾದರ್‌ ಅಂತ ಮಾತ್ರ. ಛೆ…ಈಗ ನಾನು ಕೇಳಿದ ಪ್ರಶ್ನೆಗೆ ಅವರು ಕೊಡುವ ಉತ್ತರವನ್ನು ಗ್ರಹಿಸುವುದು ಹೇಗೆ ಎಂಬ ಆತಂಕ ನನ್ನಲ್ಲಿ. ಸ್ವಲ್ಪ ಹೊತ್ತು ಬಿಟ್ಟು ಕರೆಬಂತು, “ಹ್ವಾಯ್‌ ಹೇಳಿ ಮರ್ರೆ,,,,, ನೀವು ಕ್ವಾಟದರ್‌ ಅಂತ ಕೇಳಿ ಖುಷಿಯಾಯ್ತ್, ನಮಗೇನ್‌ ಅಷ್ಟ್‌ ಇಂಗ್ಲಿಷ್‌ ಬತ್ತಿಲ್ಲ, ಅದ್‌ ನನ್‌ ಮಗ, ನಾವ್‌ ಊರಿಗ್‌ ಬಂದಾಗೆಲ್ಲ ಸಾಲಿಗ್ರಾಮದ್‌ ಗಂಪು ಕ್ಯಾಂಟಿನಲ್‌ ಗೋಲಿ ಬಜಿ ತಿಂದ್, ಆನಿಗುಡ್ಡೆ ದೇವಸ್ಥಾನಕ್ಕ್‌ ಹೋಪುದ್‌,” ಎಂದಾಗ ನನಗೆ ಎಲ್ಲಿಲ್ಲದ ಖುಷಿ. ನಮ್‌ ಹೆಂಡ್ತಿ ಕಾರ್‌ ಡ್ರೈವಿಂಗ್‌ ಮಾಡ್ತಿದ್ದಾಳೆ, ದೇವಸ್ಥಾನಕ್ಕ್‌ ಹೊರ್ಟಿತ್‌, ನಾನ್‌ ಹಿಂದೆ ಕುಳಿತಿದ್ದಿ, ಆರಾಮವಾಗಿ ಮಾತನಾಡುವ,” ಎಂದು ಸತೀಶ್‌ ಅವರು ಸುಮಾರು 30 ನಿಮಿಷಗಳ ಕಾಲ ಮಾತನಾಡಿದರು.

ಅಮೆರಿದಕ ಟೆಕ್ಸಾಸ್‌ನ ಹೂಸ್ಟನ್‌ನಿಂದ ಮಾತನಾಡಿದ ಮಾಜಿ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ ಅಷ್ಟು ಹೊತ್ತು ಮಾತನಾಡಿದ ನಂತರ ಹೇಳಿದ್ದು ಇಷ್ಟೆ, “ಹಸಿವು ಕಲಿಸಿದಷ್ಟು ಪಾಠ ಯಾವುದೇ ವಿಶ್ವವಿದ್ಯಾನಿಲಯ ಕಲಿಸುವುದಿಲ್ಲ,” ಎಂದು.

ಉಡುಪಿ ಸಮೀಪದ ಹಿರಿಯಡ್ಕದಲ್ಲಿ ಹುಟ್ಟಿದ ಸತೀಶ್‌ಗೆ ಬಾಲ್ಯದಲ್ಲಿ ಶಾಲೆ ಎಂದರೆ ಅಲರ್ಜಿ. ಇದಕ್ಕೆ ಬಡತನವೇ ಕಾರಣವಾಗಿತ್ತು. ಮನೆಯವರ ಹಸಿವನ್ನು ನೀಗಿಸುವುದು ಅವರ ಉದ್ದೇಶವಾಗಿತ್ತು. ಪೇಟೆಯಲ್ಲಿ ನೆಗಡಲೆ ಮಾರುವುದು, ಕೂಗಿಕೊಂಡು ಗೋಲಿ ಸೋಡ ಮಾರುವುದು, ಅಂಗಡಿಗಳಿಗೆ ಬೇಕಾದ ಸಾಮಾನುಗಳನ್ನು ತಂದುಕೊಡುವುದು, ಬ್ರಾಹ್ಮಣ ಬಾಲನಾಗಿದ್ದರೂ ಸೈಕಲ್‌ನಲ್ಲಿ ಅಂಗಡಿಗಳಿಗೆ ಕೋಳಿ ಕೊಂಡೊಯ್ಯುವುದು ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ, ಆಗ ಸತೀಶ್‌ ಅವರ ತಂದೆ ಯಶವಂತ್‌ ರಾವ್ ಉತ್ತಮ ಅಡುಗೆ ಭಟ್ಟರು. ಊರಿನಲ್ಲೆಲ್ಲ ವ್ಯಾಪಾರ ಮಾಡಿ ಕೈ ಸುಟ್ಟುಕೊಂಡು ಬೆಂಗಳೂರು ಸೇರಿದ್ದರು. ಇದರಿಂದಾಗಿ ಸತೀಶ್‌ಗೆ ಮನೆಯ ಜವಾಬ್ದಾರಿ, ಸೈಕಲ್‌ ಎಂದರೆ ಹುಚ್ಚಿದ್ದ ಕಾರಣ ಕೆಲ ಕಾಲ ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ, ಯಕ್ಷಗಾನ, ಕೋಳಿಪಡೆ ಇವೆಲ್ಲ ಸತೀಶನ ಕಾರ್ಯಕ್ಷೇತ್ರವಾಗಿತ್ತು. ಇದರಿಂದ ತಲೆಗೆ ಹೊಸ ಹೊಸ ಕೆಲಸಗಳೇ ಒಗ್ಗೀತೇ ಹೊರತು ಸರಸ್ವತಿ ಒಲಿಯಲಿಲ್ಲ. ಇದರಿಂದಾಗಿ ಏಳನೇ ತರಗತಿಯಲ್ಲೇ ಏಳ್ಗೆ ಇಲ್ಲವಾಯಿತು.

ಬದುಕನರಸಿ ಬೆಂಗಳೂರಿಗೆ:

“ನನ್ನ ಬದುಕಿನ ಪ್ರಯಾಣದ ಹಿಂದೆ ಹಸಿವಿತ್ತೇ ಹೊರತು ಬೇರೇನೂ ಇರಲಿಲ್ಲ,” ಎನ್ನುವ ಸತೀಶ್‌ ಅವರ ಬೆಂಗಳೂರಿನ ಪ್ರಯಾಣದ ಹಿಂದೆಯೂ ಇದ್ದದ್ದು ಹಸಿವೆಯೇ. ಅದು ಅವರ ಹಸಿವನ್ನೀಗಿಸುವ ಪ್ರಯಾಣವಾಗಿರಲಿಲ್ಲ, ಬದಲಾಗಿ ಮನೆಯಲ್ಲಿರುವ ತಾಯಿ ಮತ್ತು ಅಕ್ಕಂದಿರ ಹಸಿವನ್ನೀಗಿಸುವ ಪ್ರಯಾಣವಾಗಿತ್ತು. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಸತೀಶ್‌ ಅವರ ತಂದೆ ಯಶವಂತ ರಾವ್‌ ಅವರದ್ದು ಚಿಕ್ಕ ಪ್ರಮಾಣದಲ್ಲಿ ಅಡುಗೆ ಗುತ್ತಿಗೆದಾರರ ಕೆಲಸ.  ಬೆಂಗಳೂರು  ಸೇರಿದ ಸತೀಶ್‌ ಮರಾಠೆ ತಮ್ಮದೇ ಪುಟ್ಟ ಕ್ಯಾಂಟೀನ್‌ನಲ್ಲಿ ಲೋಟ-ಪ್ಲೇಟ್‌ಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಸೈಕಲ್‌ ಹುಚ್ಚು ಹೊಂದಿದ್ದ ಸತೀಶ್‌ ಅವರು ತಂದೆಯಲ್ಲಿ ಹಠ ಹಿಡಿದು ಒಂದು ಅಟ್ಲಾಸ್‌ ಸೈಕಲ್‌ ಪಡೆದರು, ಅಲ್ಲಿಂದ ಕರ್ನಾಟಕದಲ್ಲಿ ಹೊಸ ಸೈಕ್ಲಿಂಗ್‌ ಚಾಂಪಿಯನ್‌ ಹುಟ್ಟಿಕೊಂಡ. ಸೈಕ್ಲಿಂಗ್‌ನಲ್ಲಿ ಹೊಸ ಬದುಕು ಕಟ್ಟಿಕೊಂಡ ಸತೀಶ್‌ ಅವರು ತಮ್ಮ ಸೈಕಲ್‌ನಲ್ಲಿ ಬೆಂಗಳೂರಿನ ಸುತ್ತಮುತ್ತ ನಿರಂತರ ಅಭ್ಯಾಸ ನಡೆಸಿದರು. ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್ಷಿಪ್‌ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದರು. ಏಷ್ಯನ್‌ ಗೇಮ್ಸ್‌ಗೆ ಆಯ್ಕೆಯಾದರೂ ಕೊನೆಯ ಕ್ಷಣದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪಿಹೋಯಿತು. ಇದರಿಂದ ಬೇಸತ್ತು ಸೈಕಲ್‌ ಮೂಲಕವೇ ಏನಾದರೂ ಸಾಧನೆ ಮಾಡಬೇಕೆಂದು ಯೋಚಿಸಿದರು.

ಸೈಕಲ್‌ನಲ್ಲೇ ವಿಶ್ವಪರ್ಯಟನೆ:

“ಕ್ರೀಡಾ ಕ್ಷೇತ್ರದಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಸಾಮರ್ಥ್ಯ ಇರಲಿಲ್ಲ. ಸಾಧನೆಯೇ ಬದುಕಿನ ಹಾದಿಯಾಗಬೇಕೆಂದು ನಂಬಿ ಗೆಳೆಯ ಮೋಹನ್‌ ಜತೆ ಸೈಕಲ್‌ನಲ್ಲೇ ವಿಶ್ವಪರ್ಯಟನೆಗೆ ಮುಂದಾದೆವು. ಆದರೆ ನಮ್ಮಲ್ಲಿ ಹಣ ಇರಲಿಲ್ಲ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅಂದಿನ ಪ್ರಮುಖ ರಾಜಕಾರಣಿಗಳು ನಮ್ಮ ನೆರವಿಗೆ ಬಂದಿದ್ದರು,” ಎಂದು ಸತೀಶ್‌ ಮರಾಠೆ ರಾವ್‌ ತಮ್ಮ ವಿಶ್ವಪರ್ಯಟನೆಯ ಆರಂಭವನ್ನು ಮೆಲುಕು ಹಾಕಿದರು.

“ಈ ವಿಶ್ವ ಪರ್ಯಟನೆಯೇ ನನ್ನ ಬದುಕಿನ ಹಾದಿಯನ್ನೇ ಬದಲಾಯಿಸಿತು,” ಎನ್ನುತ್ತಾರೆ ಸತೀಶ್.‌ ಆಫ್ರೀಕಾ ಮತ್ತು ಯೂರೋಪ್‌ ದೇಶಗಳಲ್ಲಿ ಸೈಕಲ್‌ ಮೂಲಕವೇ ಸುತ್ತಿ ಬದುಕಿನ ಅನುಭವ ಪಡೆದರು. ಅಮೆರಿಕಕ್ಕೆ ಬಂದು ಸೈಕಲ್‌ನಲ್ಲೇ ಅನೇಕ ನಗರಗಳನ್ನು ಸುತ್ತಿದರು. ಆಗಲೇ ಮನೆ ಬಿಟ್ಟು ಎರಡೂವರೆ ವರ್ಷ ಕಳೆದಿತ್ತು. ಬದುಕಿಗಾಗಿ ಮತ್ತೆ ಸೈಕಲ್‌ ಯಾನವನ್ನು ಮುಂದುವರಿಸಲಾಗಲಿಲ್ಲ.

ಎಲ್ಲಿಯಾರೂ ಕೆಲಸ ಮಾಡಬೇಕೆಂದು ಬಯಸಿದಿ ಸತೀಶ್‌ ಅವರಿಗೆ ಉದ್ಯೋಗ ನೀಡಿದ್ದು ಉಡುಪಿ ಮೂಲದ ಹೊಟೇಲ್‌ ಉದ್ಯಮಿ ಕಡಂದಲೆ ರವಿರಾಜ್‌ ಶೆಟ್ಟಿಯವರು. ಅದು ನಾನ್‌ವೆಜ್‌ ಹೊಟೇಲ್‌, ಶೆಟ್ಟರು ಸತೀಶ್‌ ಅವರುನ್ನು ಚೆನ್ನಾಗಿ ನೋಡಿಕೊಂಡರು. ಅಲ್ಲಿಯೇ ಕೆಲಸ ಮಾಡಿಕೊಂಡು ಏರೊನಾಟಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಓದಿದರು. ನಂತರ ಓದುತ್ತಿರುವಾಗಲೇ ಕಡಂದಲೆ ಕೃಷ್ಣಭಟ್ಟರು ತಮ್ಮ ಸಸ್ಯಾಹಾರದ ಹೊಟೇಲ್‌ನಲ್ಲಿ ಕೆಲಸ ನೀಡಿದರು. ಅಲ್ಲಿಯೂ ಬಿಡುವು ಮಾಡಿಕೊಂಡು ತನ್ನ ಓದಿಗೂ ಬದುಕಿನ ಹಾದಿಗೂ ಸಂಬಂಧವಿಲ್ಲದ ಕೆಲಸಗಳನ್ನು ಮಾಡುತ್ತ ಶಿಕ್ಷಣ ಮುಗಿಸಿ ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿ ಸೇರಿ ಹೊಸ ಬದುಕು ರೂಪಿಸಿಕೊಂಡರು. ಯುನೈಟೆಡ್‌ ಏರ್‌ಲೈನ್ಸ್‌ನಲ್ಲಿ ಉನ್ನತ ಹುದ್ದೆಯನ್ನೇರಿ ಅಲ್ಲಿ ಸ್ವಯಂ ನಿವೃತ್ತಿ ಪಡೆದು ಹೊಟೇಲ್‌ ಉದ್ಯಕ್ಕೆ ಕೈ ಹಾಕಿದರು. ಚಿಕ್ಕ ಹೊಟೇಲ್‌ಗೆ ಉಡುಪಿ ಕೆಫೆ ಎಂದು ಹೆಸರಿಟ್ಟರು.  “ಏಳು ಹೊಟೇಲ್‌ಗಳನ್ನು ನಡೆಸುತ್ತಿದ್ದೆ, ಈಗ ಕೊರೋನಾದ ಕಾರಣ ಎರಡು ಹೊಟೇಲ್‌ಗಳು ಉಳಿದುಕೊಂಡಿದೆ,” ಎನ್ನುತ್ತಾರೆ ಸಾಧಕ ಸತೀಶ್.‌

ಮಾಜಿ ರಾಷ್ಟ್ರಪತಿ ಡಾ, ಅಬ್ದುಲ್‌ ಕಲಾಂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸತೀಶ್‌ ಅವರ ಭೋಜನವನ್ನು ಸವಿದಿದ್ದಾರೆ. ಶ್ವೇತಭವನಕ್ಕೆ ಗಣ್ಯರು ಬಂದರೆ ಸಸ್ಯಾಹಾರಕ್ಕಾಗಿ ಸತೀಶ್‌ ಅವರಿಗೆ ಈಗಲೂ ಕರೆ ಬರುತ್ತದೆ, ಕೊರೋನಾ ಸಂದರ್ಭದಲ್ಲಿ ಹಸಿದವರಿಗೆ ಅನ್ನ ನೀಡಿದ ಸತೀಶ್‌ ಅವರ ಉದ್ಯೋಗದಲ್ಲಿ ಪತ್ನಿ ಸಂಗೀತ ಮತ್ತು ಮಕ್ಕಳಾದ ಸಾಯಿದೇವ್‌ ಮತ್ತು ಸಾಯಿರಾಜ್‌ ನೆರವಾಗುತ್ತಿದ್ದಾರೆ.

 

ಚಿಕ್ಕ ಸೈಕಲ್‌ನಿಂದ ಬದುಕನ್ನು ಆರಂಭಿಸಿದ ಸತೀಶ್‌ ಅವರಲ್ಲಿ ಈಗ ಜಗತ್ತಿನ ಉನ್ನತ ಬ್ರಾಂಡ್‌ನ ಆರು ಸೈಕಲ್‌ಗಳಿವೆ. ನಿತ್ಯವೂ ಸೈಕ್ಲಿಂಗ್‌ ಮಾಡುತ್ತಾರೆ. ಅಮೆರಿಕದಲ್ಲಿದ್ದರೂ ಊರಿನ ನಂಟನ್ನು ಮರೆತಿಲ್ಲ. ಗೆಳೆಯರೊಂದಿಗಿನ ಸವಿ ನೆನಪು ಅಳಿಸಿಲ್ಲ. “ನಿಮ್ಮ ಊರು ಯಾವುದು ಎಂದಾಗ ಸರ್‌ ನಮ್ಮದು ಕೋಟ ಎಂದೆ,” ಆಗ ಸತೀಶರು, “ಊರಿಗೆ ಬಂದಾಗಲೆಲ್ಲ, ಸಾಲಿಗ್ರಾಮದ ಗಂಪು ಕ್ಯಾಂಟಿನಲ್ಲಿ ಗೋಲಿಬಜೆ ತಿಂದು, ಅನೆಗುಡ್ಡೆ ಸಿದ್ಧಿವಿನಾಯಕನ ದರ್ಶನ ಪಡೆಯದೆ ನಮ್ಮ ಊರ ಪ್ರವಾಸ ಮುಕ್ತಾಯಗೊಳ್ಳುವುದಿಲ್ಲ,” ಎನ್ನುತ್ತಾರೆ. ಚಾಮರಾಜಪೇಟೆಯ ಬಾಟಾ ಶೋರೂಂ ಹತ್ತಿರ ಕಾಫಿ ಕುಡಿದ ದಿನಗಳು, ಗೆಳೆಯ ವೆಂಕಟೇಶ್‌ ಜತೆಗಿನ ಸೈಕ್ಲಿಂಗ್‌ ದಿನಗಳು ಇವೆಲ್ಲವನ್ನೂ ಸ್ಮರಿಸುತ್ತಾರೆ.

“ದೇವರು ನನ್ನನ್ನು ಆರಂಭದಲ್ಲಿ ಪರೀಕ್ಷಿಸಿದ, ಪ್ರತಿಯೊಂದು ಕಷ್ಟದಿಂದಲೂ ಪಾಠ ಕಲಿತೆ, ಈಗ ದೇವರು ಎಲ್ಲವನ್ನೂ ನೀಡಿದ್ದಾನೆ, ಹಸಿವಿನ ಅರಿವು ಈಗಲೂ ಇದೆ. ಇಲ್ಲೆ ಇರಲೋ…ಊರಿಗೆ ಬಂದು ನೆಲೆಸಲೋ ಎಂಬ ಯೋಚನೆಯಲ್ಲಿದ್ದೇನೆ,ʼ ಎಂದು ಸತೀಶ್‌  ಮರಾಠೆ ರಾವ್ ಮಾತು ಮುಗಿಸಿದರು. ಈ ಸಾಧಕನ ಕತೆ ಕೇಳಿ ಕಷ್ಟಗಳು ಮಂಜಿನಂತೆ ಕರಗಿದ ಅನುಭವ. ಕ್ರೀಡೆ ಯಾವ ರೀತಿಯಲ್ಲಿ ಬದುಕಿನ ಗತಿಯನ್ನೇ ಬದಲಾಯಿಸಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

Related Articles