20 ಓವರ್‌ಗಳಲ್ಲಿ 240 ರನ್ ಜತೆಯಾಟ ಟಿ20 ಕ್ರಿಕೆಟ್‌ನಲ್ಲಿ ರಾಜ್ಯದ ನೂತನ ದಾಖಲೆ!

0
226
ಸ್ಪೋರ್ಟ್ಸ್ ಮೇಲ್ ವರದಿ

20 ಓವರ್‌ಗಳು, ಇಬ್ಬರೂ ಆಟಗಾರರಿಂದ ಅಜೇಯ ಶತಕ, ತಂಡದ ಮೊತ್ತ 240*. ಇದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ನೂತನ ದಾಖಲೆ. ಆರಂಭಿಕ ಜತೆಯಾಟದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಇಷ್ಟು ಮೊತ್ತ ದಾಖಲಾಗಿರುವುದು ಅಪೂರ್ವ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಆಯೋಜಿಸಿರುವ ಟಿ20 ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಮಲ್ಲೇಶ್ವರಂ ಯುನೈಟೆಡ್ ಕ್ರಿಕೆಟ್ ಕ್ಲಬ್‌ನ ಭೂಷಣ್ ರಾವ್ (107* ) ಹಾಗೂ ಚೇತನ್ ಆರ್. (127* ) ಅವರು ಚಿಂತಾಮಣಿಯ ರಾಯಲ್ ಕ್ರಿಕೆಟ್ ಕ್ಲಬ್ ವಿರುದ್ಧ ಈ ಹೊಸ ದಾಖಲೆ ಬರೆದಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುತ್ತಿರುವ ಪಂದ್ಯವಾಗಿದ್ದರಿಂದ ಈ ದಾಖಲೆಯನ್ನು ಕನಿಷ್ಠ ರಾಜ್ಯಮಟ್ಟದಲ್ಲಾದರೂ ಪರಿಗಣಿಸಬಹುದು.
ದೇಶೀಯ ಕ್ರಿಕೆಟ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 2016ರಲ್ಲಿ ಗಳಿಸಿರುವ 229 ರನ್ ಮೊದಲ ವಿಕೆಟ್ ಜತೆಯಾಟ ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಕೊಹ್ಲಿ (109) ಹಾಗೂ ಡಿವಿಲಿಯರ್ಸ್ (129) ಶತಕ ಸಿಡಿಸಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಆರರಂಭಿಕ ಆಟಗಾರರಾದ ಆರೋನ್ ಫಿಂಚ್ ಹಾಗೂ ಡಿಆರ್ಸಿ ಶಾರ್ಟ್ 223 ರನ್ ಜತೆಯಾಟವಾಡಿರುವುದು ದಾಖಲೆಯಾಗಿರುತ್ತದೆ. ಫಿಂಚ್ (172) ಶತಕ ಸಿಡಿಸಿದರೆ, ಶಾರ್ಟ್ 46 ರನ್ ಗಳಿಸಿದ್ದರು,
ಬೆಂಗಳೂರರಿನ ಎಂವಿಐಟಿ ಕ್ರೀಡಾಂಗಣದಲ್ಲಿ ಜನವರಿ 19ರಂದು ನಡೆದ ಪಂದ್ಯದಲ್ಲಿ ಮಲ್ಲೇಶ್ವರಂ ಯುನೈಟೆಡ್ ತಂಡದ ಆಟಗಾರ ಮೈಸೂರ ಮೂಲದ ಚೇತನ್ 17 ಬೌಂಡರಿ ಹಾಗೂ 7 ಸಿಕ್ಸರ್ ಮೂಲಕ 127 ರನ್ ಗಳಿಸಿದರೆ, ಭೂಷಣ್ ರಾವ್ 16 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 107 ರನ್ ಗಳಿಸಿದರು. ಆರು ಇತರ ರನ್‌ಗಳ ನೆರವಿನಿಂದ ತಂಡ ಅಜೇಯ 240 ರನ್ ಗಳಿಸಿ ಟಿ20 ದೇಶೀಯ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆಯಿತು.
ಅದೇ ದಿನ ನಡೆದ ಇನ್ನೊಂದ ಪಂದ್ಯದಲ್ಲಿ ವಿಕ್ರಂ ಕ್ರಿಕೆಟ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿ ದಾಖಲೆ ಬರೆಯಿತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ 3 ವಿಕೆಟ್‌ಗೆ 263 ರನ್ ಗಳಿಸಿದ್ದು, ಇದುವರೆಗಿನ ದಾಖಲೆಯಾಗಿದೆ. ಅದೇ ರೀತಿ ದೇಶೀಯ ಕ್ರಿಕೆಟ್‌ನಲ್ಲಿ ಆರ್‌ಸಿಬಿ  ಐಪಿಎಲ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದ್ದು ದಾಖಲೆಯಾಗಿದೆ. ಫ್ರೆಂಡ್ಸ್  ಇಲೆವೆನ್ ವಿರುದ್ಧದ ಪಂದ್ಯದಲ್ಲಿ ವಿಕ್ರಂ ಕ್ರಿಕೆಟ್ ಕ್ಲಬ್ ತಂಡ 264 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಫ್ರೆಂಡ್ಸ್ ಇಲೆವೆನ್ ಕೇವಲ 80 ರನ್‌ಗೆ ಆಲೌಟ್ ಆಯಿತು. ವಿಕ್ರಂ ತಂಡ 184 ರನ್‌ಗಳ ಬೃಹತ್ ಅಂತರದ ಜಯ ಗಳಿಸಿತು.