Friday, April 19, 2024

ಅಜೇಯ ಕರ್ನಾಟಕಕ್ಕೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ

ರೋಹನ್ ಕದಮ್ (60) ಹಾಗೂ ಮಯಾಂಕ್ ಅಗರ್ವಾಲ್ (85*) ಅವರ ಸ್ಫೋಟಕ ಅರ್ಧ  ಶತಕದ ನೆರವಿನಿಂದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ  8 ವಿಕೆಟ್‌ಗಳ ಜಯ ಗಳಿಸಿ, ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದೆ.

ಕರ್ನಾಟಕ ತಂಡ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಎಲ್ಲಿಯೂ ಸೋಲನುಭವಿಸದೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿರುವುದು ವಿಶೇಷ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ತಂಡ ಮಹಾರಾಷ್ಟ್ರವನ್ನು ಕೇವಲ 155 ರನ್‌ಗೆ ಕಟ್ಟಿಹಾಕಿತು. ನೌಶಾದ್ ಶೇಖ್ (69*) ಅವರ ಅ‘ರ್ ಶತಕ ತಂಡದ ಸಾಧಾರಣ ಮೊತ್ತಕ್ಕೆ ನೆರವಾಯಿತು. ಕರ್ನಾಟಕದ ಪರ ಅಭಿಮನ್ಯು ಮಿತುನ್ (24ಕ್ಕೆ 2),  ಜೆ. ಸುಚಿತ್ (20ಕ್ಕೆ 1) ಹಾಗೂ ಕೆ.ಸಿ. ಕಾರಿಯಪ್ಪ (26ಕ್ಕೆ 1) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಸಾಧಾರಣ ಮೊತ್ತವನ್ನು ಬೆಂಬತ್ತಿದ ಕರ್ನಾಟಕದ ಪರ ಆರಂಭಿಕ ಆಟಗಾರ ರೋಹನ್ ಕದಮ್ ಕೇವಲ 30 ಎಸೆತಗಳನ್ನೆದುರಿಸಿ 6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 60 ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ  6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಗಳಿಸುವುದರೊಂದಿಗೆ ರಾಜ್ಯ ತಂಡ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಕೇವಲ 2 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು. ಮಯಾಂಕ್ ಅಗರ್ವಾಲ್ ನಿರೀಕ್ಷೆಯಂತೆ ಪಂದ್ಯಶ್ರೇಷ್ಠರೆನಿಸಿದರು.
ಈ ವರ್ಷ  ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹನ್ ಕದಮ್ ಪ್ರತಿಯೊಂದು ಪಂದ್ಯದಲ್ಲೂ ಮಿಂಚಿ ಒಟ್ಟು 536 ರನ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆನಿಸಿದರು. 5  ಅರ್ಧ ಶತಕ, 64 ಬೌಂಡರಿ ಹಾಗೂ 14 ಸಿಕ್ಸರ್ ಸೇರಿತ್ತು.  ವಿ. ಕೌಶಿಕ್ ಒಟ್ಟು 17 ವಿಕೆಟ್ ಗಳಿಸಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದರು. ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಸತತ 14 ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿತ್ತು, ಈಗ ಕರ್ನಾಟಕ ತಂಡ ಆ ದಾಖಲೆಯನ್ನು ಸರಿಗಟ್ಟಿದೆ.

Related Articles