Sunday, September 8, 2024

ಕ್ರಿಕೆಟ್ ಈಗ ಜಟ್ಲ್‌ಮನ್ ಗೇಮ್ ಆಗಿ ಉಳಿದಿಲ್ಲ-ಸಯ್ಯದ್ ಕಿರ್ಮಾನಿ

ಸ್ಪೋರ್ಟ್ಸ್ ಮೇಲ್ ವರದಿ

ಕ್ರಿಕೆಟ್‌ನಲ್ಲಿ ಆಟಗಾರರು ಅನುಭವಿಸುತ್ತಿರುವ ದಂಡ ಹಾಗೂ ಅಶಿಸ್ತನ್ನು ಗಮನಿಸಿದರೆ ಅದು ಜಂಟ್ಲ್‌ಮನ್ ಗೇಮ್ ಆಗಿ ಉಳಿದಿಲ್ಲ, ಅದು ಜಂಟ್ಲ್‌ಮನ್ ಗೇಮ್ ಆಗಿ ಉಳಿಯುವಂತೆ ಮಾಡಲು ಈಗಿನ ಯುವ ಆಟಗಾರರಿಂದ ಸಾಧ್ಯ , ಕ್ರಿಕೆಟ್ ಶಿಬಿರಗಳಲ್ಲಿ ಮಕ್ಕಳಿಗೆ ಆ ರೀತಿಯ ಪಾಠ ಹೇಳಬೇಕು. ಐಪಿಎಲ್ ನೋಡಿ ಕ್ರಿಕೆಟ್ ಪಾಠ ಕಲಿಯಬೇಡಿ ಬದಲಾಗಿ ಟೆಸ್ಟ್ ಪಂದ್ಯಗಳಂತೆ ಸಾಂಪ್ರದಾಯಿಕ ಕ್ರಿಕೆಟ್ ಕಡೆಗೆ ಹೆಚ್ಚಿನ ಒಲವು ನೀಡಿ ಎಂದು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಅವರು ಹೇಳಿದರು.

ಇಲ್ಲಿನ ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯ ಅಂಗಣದಲ್ಲಿ ಆರಂಭಗೊಂಡ ಬೆಳ್ಳಿಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ವಾರ್ಷಿಕ ತರಬೇತಿ ಶಿಬಿರದಲ್ಲಿ ಅವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಕ್ರಿಕೆಟ್ ಬದುಕಿನ ಕುರಿತು ಮಾಹಿತಿ ನೀಡಿದರು.
1983ರ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿರುವ ಸಯ್ಯದ್ ಕಿರ್ಮಾನಿ ಅವರ ಕ್ರಿಕೆಟ್ ಕೊಡುಗೆ ಅಪಾರವಾದುದು. ‘ನಾವು ಆಡುತ್ತಿರುವಾಗ ಕ್ರಿಕೆಟ್‌ನಲ್ಲಿ ಈ ರೀತಿ ಸಂಭಾವನೆ ಸಿಗುತ್ತಿರಲಿಲ್ಲ. ದೇಶದ ಗೌರವಕ್ಕಾಗಿ ಆಡುತ್ತಿದ್ದೇವು, ಆದರೆ ಇಂದು ಸಾಕಷ್ಚು ಹಣದ ಹೊಳೆ ಹರಿದುಬರುತ್ತಿದೆ. ಕ್ರಿಕೆಟ್ ಸಂರಕ್ಷಿಸಲು, ಆಟಗಾರರ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಇದೆ. ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಕ್ರಿಕೆಟ್ ಆಡಿ ಎಂದು ಯಾರೂ ಪ್ರೋತ್ಸಾಹಿಸುತ್ತಿರಲಿಲ್ಲ. ಬರೇ ಓದು… ಓದು… ಓದು.. ಎನ್ನುತ್ತಿದ್ದರು. ನಾನು ಕ್ರಿಕೆಟ್ ಆಡುವುದು ನಮ್ಮ ತಂದೆಗೂ ಇಷ್ಟ ಇರಲಿಲ್ಲ. ತಲೆಗೆ ಹೊಡೆದು ಹೊಡೆದು ನೋಡಿ ಕೂದಲೆಲ್ಲ ಉದುರಿ ಹೋಗಿದೆ,‘ ಎಂದು ಹೇಳಿದ ಕಿರ್ಮಾನಿ ಅವರ ಮಾತಿನಲ್ಲಿ ಆಪ್ತ ಸಲಹೆ ಅಲ್ಲದೆ ತಮಾಷೆ ಕೂಡ ಇದ್ದಿತ್ತು.
ಅಕಾಡೆಮಿಯ ಪ್ರಧಾನ ಕೋಚ್ ವಿಜಯ್ ಆಳ್ವಾ ಅವರು ಮಾತನಾಡಿ, ‘ಅಕಾಡೆಮಿ ಸ್ಥಾಪಿಸುವಲ್ಲಿ ಬಿಡಿ ಶೆಟ್ಟಿ  ಕಾಲೇಜ್ ಆಫ್  ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ  ಅಧ್ಯಕ್ಷ  ಪ್ರೊ. ಜಿ. ಬಾಲಕೃಷ್ಣ ಶೆಟ್ಟಿ, ಚೇತನಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಪಾತ್ರ ಪ್ರಮುಖವಾಗಿರುತ್ತದೆ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಿಂದ ಕರ್ನಾಟಕ ಹಾಗೂ ಭಾರತ ತಂಡವನ್ನು ಪ್ರತಿನಿಧಿಸುವ ಕ್ರಿಕೆಟಿಗರನ್ನು ಸಿದ್ಧಗೊಳಿಸುವುದು ನಮ್ಮ ಗುರಿ,‘  ಎಂದರು.
ಲೈವ್ ಕ್ಯಾರಿಕೇಚರ್
ಅಂತಾರಾಷ್ಟ್ರೀಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಇದೇ ವೇಳೆ ಚಾಂಪಿಯನ್ ವಿಕೆಟ್ ಕೀಪರ್ ಸಯ್ಯದ್ ಕಿರರ್ಮಾನಿ ಅವರ ಕ್ಯಾರಿಕೇಚರ್ ರಚಿಸಿದರು. ನಂತರ ಕರ್ನಾಟಕದ ಕರಾವಳಿಗೆ ಆಗಮಿಸಿದ ಸವಿ ನೆನಪಿಗಾಗಿ ಪದ್ಮಶ್ರೀ ಕಿರ್ಮಾನಿ ಅವರಿಗೆ ಸಚಿಸ್ ಆಚಾರ್ಯ ರಚಿಸಿದ ಕಲಾಕೃತಿಯೊಂದನ್ನು ಉಡುಗೊರೆಯಾಗಿ ನೀಡಲಾಯಿತು.
ಗ್ರಾಮೀಣ ಪ್ರದೇಶದಲ್ಲಿರುವ ಯುವ ಕ್ರಿಕೆಟಗರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಈ ಶಿಬಿರಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಅವರನ್ನು ವಿಜಯ್ ಆಳ್ವಾ ಈ ಸಂದ‘ರ್ದಲ್ಲಿ ಸ್ಮರಿಸಿದರು.

Related Articles